ಜ್ಯೋತಿಷ್ಯ ಶಾಸ್ತ್ರದಲ್ಲಿ ಹನ್ನೆರಡು ರಾಶಿಗಳಿವೆ. ಆ ರಾಶಿಗಳಿಗೆ ಅಧಿಪತಿಯಾಗಿ ಗ್ರಹಗಳಿವೆ. ರಾಶಿಗಳಿಗೆ ಅನುಗುಣವಾಗಿ ಅಧಿಪತಿಯಾದ ಗ್ರಹವನ್ನು ಪೂಜಿಸಿದಲ್ಲಿ ಗ್ರಹದೋಷವು ನಿವಾರಣೆ ಹೊಂದಿ ಸುಖ-ಸಂತೋಷ, ನೆಮ್ಮದಿ ಲಭಿಸುತ್ತದೆ. ಗ್ರಹಗಳಿಗೆ ಸಂಬಂಧಿಸಿದಂತೆ ಕೆಲವು ಅಂಶಗಳನ್ನು ಇಲ್ಲಿ ಹೇಳಲಾಗಿದೆ. ಅದನ್ನು ಪಾಲಿಸಿದಲ್ಲಿ ಹಣಕ್ಕೆ ಸಂಬಂಧಿಸಿದ ತೊಂದರೆಗಳು ದೂರಾಗುವುದು ಮತ್ತು ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ.

ಮೇಷ ರಾಶಿಗೆ ಮಂಗಳ

ಮೇಷ ರಾಶಿಯ ಅಧಿಪತಿ ಗ್ರಹ ಅಥವಾ ಸ್ವಾಮಿ ಗ್ರಹ ಮಂಗಳ. ಒಂಭತ್ತು ಗ್ರಹಗಳಿಗೆ ಮಂಗಳ ಗ್ರಹವೇ ಸೇನಾಪತಿ ಎಂದು ಹೇಳಲಾಗುತ್ತದೆ. ಮೇಷ ರಾಶಿಯವರು ಮಂಗಳವಾರದಂದು ಶಿವಲಿಂಗಕ್ಕೆ ಕೆಂಪು ಹೂವನ್ನು ಅರ್ಪಿಸಬೇಕು. ಜೊತೆಗೆ ಹನುಮಂತನ ಆರಾಧನೆಯಿಂದ ವಿಶೇಷ ಲಾಭ ಉಂಟಾಗುವುದು.

ವೃಷಭ ರಾಶಿಗೆ ಶುಕ್ರ

ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಅಸುರರ ಗುರು ಶುಕ್ರ ದೇವ. ಶುಕ್ರನನ್ನು ಪ್ರಸನ್ನಗೊಳಿಸಲು ಶುಕ್ರವಾರದಂದು ಶಿವಲಿಂಗಕ್ಕೆ ಹಾಲನ್ನು ಅರ್ಪಿಸಬೇಕು. ಶುಕ್ರದೇವನಿಗೆ ವಿಶೇಷ ಪೂಜೆಯನ್ನು ಶುಕ್ರವಾರದಂದು ಮಾಡಿದರೆ ಒಳಿತಾಗುವುದು.

ಇದನ್ನು ಓದಿ: ದೇವರ ಪ್ರದಕ್ಷಿಣೆ ಹೀಗೆ ಮಾಡಿ, ದೌರ್ಭಾಗ್ಯ ದೂರ ಮಾಡಿಕೊಳ್ಳಿ!

ಮಿಥುನ ರಾಶಿಗೆ ಬುಧ

ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಬುಧನನ್ನು ಪ್ರಸನ್ನಗೊಳಿಸಲು ಬುಧವಾರದಂದು ಹಸುವಿಗೆ ಹಸಿರು ಹುಲ್ಲನ್ನು ನೀಡಬೇಕು. ಅಲ್ಲದೇ ಬುಧವಾರವನ್ನು ಗಣೇಶನ ವಾರವೆಂದು ಕರೆಯಲಾಗುತ್ತದೆ. ಆ ದಿನ ಗಣೇಶನನ್ನು ಆರಾಧಿಸಿದರೆ ಉತ್ತಮ ಫಲ ದೊರೆಯುತ್ತದೆ.

ಕಟಕ ರಾಶಿ ಚಂದ್ರ

ಕಟಕ ರಾಶಿಯ ಅಧಿಪತಿ ಚಂದ್ರ ಗ್ರಹ. ಚಂದ್ರನಿಗೆ ಪ್ರಿಯವಾದ ವಾರ ಸೋಮವಾರ. ಈ ರಾಶಿಯವರು ಸೋಮವಾರದಂದು ಶಿವನಿಗೆ ಜಲವನ್ನು ಅರ್ಪಿಸಬೇಕು. ಇದರಿಂದ ವಿಶೇಷ ಲಾಭ ಉಂಟಾಗುವುದು. ಚಂದ್ರನಿಗೆ ಸಂಬಂಧಿಸಿದ ವಸ್ತುವನ್ನು ಅಂದರೆ ಹಾಲು ಇತ್ಯಾದಿ ದಾನ ಮಾಡಬೇಕು.

ಸಿಂಹ ರಾಶಿಗೆ ಸೂರ್ಯ

ಸಿಂಹ ರಾಶಿಯ ಅಧಿಪತಿ ಸೂರ್ಯ ದೇವ. ಈ ರಾಶಿಯವರು ಸೂರ್ಯನನ್ನು ಆರಾಧಿಸಬೇಕು ಮತ್ತು ಸೂರ್ಯನಿಗೆ ಪ್ರತಿದಿನ ಪ್ರಾತಃಕಾಲದಲ್ಲಿ ಜಲವನ್ನು ಅರ್ಪಿಸಬೇಕು. ಇದರಿಂದ ಮನೋಕಾಮನೆಗಳೆಲ್ಲ ಪೂರ್ಣಗೊಳ್ಳುವುದು.

ಇದನ್ನು ಓದಿ: ಜಾತಕ ಹೇಳುತ್ತೆ ನಿಮ್ಮ ಲವ್ ಮ್ಯಾರೇಜ್ ಭವಿಷ್ಯ!

ಕನ್ಯಾ ರಾಶಿಗೂ ಬುಧ

ಕನ್ಯಾರಾಶಿಯ ಅಧಿಪತಿ ಬುಧಗ್ರಹ. ಈ ರಾಶಿಯವರು ಬುಧವಾರದಂದು ಗಣಪತಿಯನ್ನು ಪೂಜಿಸಬೇಕು. ದೂರ್ವೆಯನ್ನು ಗಣೇಶನಿಗೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರೆ ಕೆಡುಕು ದೂರಾಗುವುದು.

ತುಲಾ ರಾಶಿಗೂ ಶುಕ್ರಾನುಗ್ರಹ

ತುಲಾ ರಾಶಿಯ ಅಧಿಪತಿ ಶುಕ್ರಗ್ರಹ. ಈ ರಾಶಿಯವರು ಶುಕ್ರಗ್ರಹದ ಮಂತ್ರವನ್ನು ಹೆಚ್ಚು ಜಪಿಸಿದರೆ ಉತ್ತಮ ಲಾಭವಾಗುವುದು. ಶುಕ್ರವಾರದಂದು ನಿರ್ಗತಿಕರಿಗೆ ವಸ್ತ್ರವನ್ನು ದಾನ ಮಾಡಬೇಕು.

ವೃಶ್ಚಿಕ ರಾಶಿಗೂ ಮಂಗಳಾಧಿಪತಿ 

ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ಕುಜನನ್ನು ಪ್ರಸನ್ನಗೊಳಿಸಲು ಮಂಗಳವಾರದಂದು ಹನುಮಂತನನ್ನು ಪೂಜಿಸಿ, ಮಲ್ಲಿಗೆ ಎಣ್ಣೆಯನ್ನು ದಾನ ಮಾಡಿದರೆ ಒಳಿತಾಗುವುದು.

ಧನಸ್ಸು ರಾಶಿಗೆ ಗುರು ಬೃಹಸ್ಪತಿ

ಧನು ರಾಶಿಯ ಅಧಿಪತಿ ದೇವತೆಗಳ ಗುರುವಾದ ಗುರು ಬೃಹಸ್ಪತಿ. ಈ ರಾಶಿಯವರು ಪ್ರತಿ ಗುರುವಾರ ದಾನ ಮಾಡುವುದು, ನಿರ್ಗತಿಕರಿಗೆ ಊಟ ನೀಡುವುದರಿಂದ ಗುರುವನ್ನು ಪ್ರಸನ್ನಗೊಳಿಸಬಹುದು. ಶಿವನಿಗೆ ಹಿಟ್ಟಿನ ಉಂಡೆಯನ್ನು ನೈವೇದ್ಯ ಮಾಡಿದರೆ ಒಳಿತಾಗುವುದು.

ಇದನ್ನು ಓದಿ:  ಶನಿ ನಿಮ್ಮ ಜಾತಕದಲ್ಲಿ ಈ ರಾಶಿಯಲ್ಲಿದ್ದಾಗ ನಿಮಗ್ಯಾವ ಫಲ!

ಮಕರ ರಾಶಿ ಶನಿಗ್ರಹ

ಮಕರ ರಾಶಿಯ ಅಧಿಪತಿ ಶನಿ ದೇವರು. ಈ ರಾಶಿಯವರು ಶನಿಯನ್ನು ಆರಾಧಿಸಬೇಕು. ಪ್ರತಿ ಶನಿವಾರ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಬೇಕು ಮತ್ತು ಕಪ್ಪು ಉದ್ದನ್ನು ದಾನ ಮಾಡಬೇಕು.

ಕುಂಭ ರಾಶಿಗೂ ಶನಿಮಹಾತ್ಮೆ

ಕುಂಭ ರಾಶಿಗೆ ಅಧಿಪತಿ ಶನಿದೇವ. ಶನಿದೇವರನ್ನು ಪ್ರಸನ್ನಗೊಳಿಸುವುದು ತುಂಬಾ ಕಠಿಣ. ಪ್ರತಿ ಶನಿವಾರ ಹನುಮಾನ್ ಚಾಲೀಸಾ ಪಠಿಸುವುದು ಉತ್ತಮ. ಬಡವರಿಗೆ ಕೊಡೆಯನ್ನು ದಾನ ಮಾಡುವುದರಿಂದ ಶನಿ ದೇವರ ಕೃಪೆಗೆ ಪಾತ್ರರಾಗಬಹುದು.

ಮೀನರಾಶಿಗೆ ಗುರುಮಹಿಮೆ

ಮೀನ ರಾಶಿ ಹೊಂದಿದವರಿಗೆ ಗುರುವೇ ಗುರು. ಇಲ್ಲಿ ನಿಮಗೆ ಉತ್ತಮ ಫಲಪ್ರಾಪ್ತಿಯಾಗಬೇಕಿದ್ದಲ್ಲಿ ಗುರುರಾಯರ ಆರಾಧನೆ ಮಾಡಬೇಕು. ಜೊತೆಗೆ ಶಿವನಿಗೆ ಹಿಟ್ಟಿನ ಉಂಡೆಯನ್ನು ನೇವೇದ್ಯ ಮಾಡಿದರೂ ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.