Asianet Suvarna News Asianet Suvarna News

ಶನಿ ನಿಮ್ಮ ಜಾತಕದಲ್ಲಿ ಈ ರಾಶಿಯಲ್ಲಿದ್ದಾಗ ನಿಮಗ್ಯಾವ ಫಲ!

ಶನಿಗ್ರಹದ ಪ್ರಭಾವ ಯಾವ ರಾಶಿಯ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ. ಜಾತಕದಲ್ಲಿ ಶನಿಯು ಕೆಲವು ರಾಶಿಗಳಲ್ಲಿ ಇದ್ದಾಗ ಶುಭ ಫಲವನ್ನು ನೀಡುತ್ತಾನೆ. ಕೆಲವರಿಗೆ ಅಶುಭ ಫಲವನ್ನು ನೀಡುವ ಶನಿ, ಅದೇ ರಾಶಿಯವರಿಗೆ ಶನಿದಶೆ ನಡೆಯುತ್ತಿದ್ದಾಗ ಉತ್ತಮ ಫಲಗಳನ್ನು ನೀಡುತ್ತಾನೆ. ಜಾತಕದಲ್ಲಿ ಗ್ರಹಗಳ ಸ್ಥಾನಪಲ್ಲಟದಿಂದ ಉಂಟಾಗುವ ಫಲಗಳನ್ನು ಮತ್ತು ದಶಾಭುಕ್ತಿಗಳನ್ನು ತಿಳಿದುಕೊಳ್ಳುತ್ತಿದ್ದರೆ ಶನಿಯಿಂದಾಗುವ ಪ್ರಭಾವಗಳ ಬಗ್ಗೆ ತಿಳಿದುಕೊಳ್ಳಬಹುದು.

Saturn effects on your Kundalis this Zodiac signs
Author
Bangalore, First Published May 5, 2020, 3:49 PM IST

ಶನಿ ಗ್ರಹವೆಂದರೆ ಅದೊಂದು ತೊಂದರೆ ಕೊಡುವ ಗ್ರಹ ಎಂದೇ ಎಲ್ಲರೂ ಭಾವಿಸಿರುತ್ತಾರೆ. ಶನಿಯು ತಾಮಸ ಗ್ರಹವೆಂಬುದು ನಿಜವೇ ಆದರೂ ಎಲ್ಲರಿಗೂ ತೊಂದರೆ ಕೊಡುವುದಿಲ್ಲ. ಕೆಲವು ಗ್ರಹಗಳಿಗೆ ಹೇಗೆ ಶನಿದೇವ ಶುಭ ಮತ್ತು ಅಶುಭ ಫಲಗಳನ್ನು ಕೊಡುತ್ತಾನೆಯೋ ಹಾಗೇಯೆ ರಾಶಿಗಳ ಮೇಲೂ ಶುಭಾಶುಭ ಫಲಗಳನ್ನು ನೀಡುವ ನ್ಯಾಯದೇವನಾಗಿದ್ದಾನೆ. 

ಅಧರ್ಮ ಮಾರ್ಗದಲ್ಲಿ ನಡೆಯುವವರನ್ನು, ತಪ್ಪು ಮಾಡಿದವರನ್ನು ಶನಿ ಬಿಡದೇ ಕಾಡುತ್ತಾನೆ ಎನ್ನುತ್ತಾರೆ. ಶಿಸ್ತಿನಿಂದ ನಡೆದವರಿಗೆ ಉತ್ತಮ ಫಲ ನೀಡುತ್ತಾನೆ. ಹಾಗಂತ ಶನಿ ಕಾಟ ಹಿಡಿದವರೆಲ್ಲ ಅಧರ್ಮ ಮಾರ್ಗ ತುಳಿದಿದ್ದಾರೆಂದಲ್ಲ. ಕೆಲವು ಗ್ರಹಗತಿಗಳೂ ಇಲ್ಲಿ ಪಾತ್ರವಹಿಸುತ್ತದೆ. ನಿಮ್ಮ ಜಾತಕದಲ್ಲಿ ಶನಿಯು ಯಾವ ರಾಶಿಯಲ್ಲಿದ್ದರೆ, ಯಾವ ರೀತಿಯ ಫಲವನ್ನು ನೀಡುತ್ತಾನೆ ಎಂಬುದನ್ನು ತಿಳಿದುಕೊಳ್ಳಬಹುದು. ಕೆಲವು ರಾಶಿಗಳಿಗೆ ಲಾಭದಾಯಕನಾಗಿದ್ದರೆ, ಇನ್ನು ಕೆಲವು ರಾಶಿಯವರಿಗೆ ಹಾನಿಯನ್ನುಂಟು ಮಾಡುತ್ತಾನೆ. ಹಾಗಿದ್ದರೆ ರಾಶಿಯ ಮೇಲೆ ಶನಿ ಪ್ರಭಾವ ಹೇಗಾಗುತ್ತದೆ? ಯಾವ ರಾಶಿಯಲ್ಲಿದ್ದರೆ ಏನು ಎಂಬುದನ್ನು ನೋಡೋಣ ಬನ್ನಿ.

ಮೇಷರಾಶಿಯಲ್ಲಿ ಶನಿ ಇದ್ದಾಗ
ಮೇಷ ರಾಶಿಯಲ್ಲಿ ಶನಿ ನೀಚ ಸ್ಥಾನದಲ್ಲಿರುತ್ತಾನೆ. ಶನಿ ನೀಚ ಸ್ಥಾನದಲ್ಲಿದ್ದರೆ ಅಶುಭ ಫಲವನ್ನು ನೀಡುತ್ತಾನೆ. ಈ ರಾಶಿಯಲ್ಲಿ ಶನಿ ಇದ್ದಾಗ, ಮೇಷ ರಾಶಿಯವರ ವ್ಯಕ್ತಿತ್ವದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಆತ್ಮವಿಶ್ವಾಸದ ಕೊರತೆಯಾಗುತ್ತದೆ. ಹಟ ಮತ್ತು ಕೋಪಕ್ಕೆ ದಾಸರಾಗುತ್ತಾರೆ. ಕೆಟ್ಟ ಅಭ್ಯಾಸಗಳತ್ತ ಮನಸ್ಸು ವಾಲುತ್ತದೆ. ಮೇಷ ರಾಶಿಯ ವ್ಯಕ್ತಿಗಳಿಗೆ ಶನಿದಶೆ ನಡೆಯುತ್ತಿದ್ದರೆ ಅಂತಹ ಸಮಯದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ಮನಸ್ಥಾಪ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಇದನ್ನು ಓದಿ: ಲಲಿತಾ ಸಹಸ್ರನಾಮ ಪಠಿಸಿ, ದೇವಿ ಕೃಪೆಗೆ ಪಾತ್ರರಾಗಿ, ಇಲ್ಲಿವೆ ಸಹಸ್ರ ಲಾಭ

ವೃಷಭದಲ್ಲಿ ಶನಿ
ಜಾತಕದಲ್ಲಿ ಶನಿಯು ವೃಷಭ ರಾಶಿಯಲ್ಲಿದ್ದಾಗ ಅಸತ್ಯವನ್ನು ನುಡಿಸುತ್ತಾನೆ. ಇಂಥ ವ್ಯಕ್ತಿಗಳು ಚತುರರು ಮತ್ತು ಶಕ್ತಿಶಾಲಿಯಾಗಿರುತ್ತಾರೆ ಆದರೆ ವಿಶ್ವಾಸಕ್ಕೆ ಅರ್ಹರಾಗಿರುವುದಿಲ್ಲ. ಮೋಸ, ವಂಚನೆಗಳನ್ನು ಮಾಡುವ ಮನಃಸ್ಥಿತಿ ಉಳ್ಳವರಾಗಿರುತ್ತಾರೆ. ಜಾತಕದಲ್ಲಿ ಬೇರೆ ಗ್ರಹಗಳು ಶುಭ ಸ್ಥಿತಿಯಲ್ಲಿರದಿದ್ದರೆ ಅನ್ಯ ಸಂಬಂಧವನ್ನು ಮಾಡುವ ಮನಃಸ್ಥಿತಿ ಇವರದ್ದಾಗುತ್ತದೆ.

ಶನಿ ಮಿಥುನ ರಾಶಿಯಲ್ಲಿದ್ದಾಗ 
ಇಲ್ಲಿ ಶನಿಯು ವ್ಯಕ್ತಿಯನ್ನು ಹುಚ್ಚು ಸಾಹಸಕ್ಕೆ ಕೈ ಹಾಕುವಂಥ ಮನಸ್ಸನ್ನು ನೀಡುತ್ತಾನೆ. ಚತುರನಾಗಿದ್ದರೂ ಮೋಸ ಮಾಡುವ ಪ್ರವೃತ್ತಿಯನ್ನು ಹೊಂದುತ್ತಾನೆ. ರಾಜನೀತಿ ಮತ್ತು ಕೂಟನೀತಿಯಂಥ ಕ್ಷೇತ್ರದಲ್ಲಿ ಉತ್ತಮನಾಗಿರುತ್ತಾನೆ. ಮಿಥುನ ರಾಶಿಯಲ್ಲಿ ಶನಿ ಇದ್ದರೆ ಸಂತಾನಕ್ಕೆ ಅಷ್ಟು ಉತ್ತಮವಲ್ಲ. ಸಾಹಿತ್ಯ, ಸಂಗೀತ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಒಲವು ಮೂಡುತ್ತದೆ.

ಕಟಕದಲ್ಲಿದ್ದರೆ ಏನು?
ಜಾತಕದ ನಾಲ್ಕನೇ ಮನೆಯಲ್ಲಿ ಶನಿ ಇದ್ದಾಗ ಹಟ ಮತ್ತು ಈರ್ಷೆಯಂಥ ಸ್ವಭಾವ ಹೆಚ್ಚಾಗುತ್ತದೆ. ತಾಯಿಯಿಂದ ಹೆಚ್ಚು ಪ್ರೇಮ ಲಭಿಸುವುದಿಲ್ಲ. ಈ ರಾಶಿಯವರಿಗೆ ಶನಿದೆಶೆ ನಡೆಯುತ್ತಿದ್ದಾಗ ಹೆಚ್ಚು ಕಷ್ಟವನ್ನು ಪಡಬೇಕಾಗುತ್ತದೆ. ಜೊತೆಗೆ ಸಂಸಾರದಲ್ಲಿ ಮನಸ್ಥಾಪ, ಅಶಾಂತಿ ಉಂಟಾಗುತ್ತದೆ.

ಶನಿಯ ಪ್ರಭಾವದಿಂದ ಸಿಂಹರಾಶಿಗೆ ಶುಭ
ಅಶುಭ ಪ್ರಭಾವವನ್ನೆ ಹೆಚ್ಚು ನೀಡುವ ಶನಿ ಸಿಂಹದಲ್ಲಿದ್ದಾಗ ವ್ಯಕ್ತಿಯನ್ನು ಗಂಭೀರ ಮತ್ತು ಚಿಂತನೆ ಮಾಡುವಂತೆ ಮಾಡುತ್ತಾನೆ. ಕಾರ್ಯದಲ್ಲಿ ನೈಪುಣ್ಯತೆಯನ್ನು ಮತ್ತು ಪರಿಶ್ರಮವನ್ನು ತೋರುತ್ತಾನೆ. ಶನಿಯ ಪ್ರಭಾವಕ್ಕೊಳಪಟ್ಟ ಈ ರಾಶಿಯವರು ಮಾತಿನಂತೆ ನಡೆಯುವವರಾಗುತ್ತಾರೆ. ಶನಿದಶೆ ನಡೆಯುತ್ತಿದ್ದಾಗ ಮಾತ್ರ ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ಹೆಚ್ಚು ಧನ ವ್ಯಯವಾಗುವ ಸಾಧ್ಯತೆ ಇರುತ್ತದೆ. ನಿರಾಶೆಯಂಥ ಮನಃಸ್ಥಿತಿ ಉಂಟಾಗುತ್ತದೆ.

ಕನ್ಯಾರಾಶಿಯಲ್ಲಿ ಶನಿ
ಜಾತಕದಲ್ಲಿ ಕನ್ಯಾರಾಶಿಯಲ್ಲಿ ಶನಿ ಇದ್ದರೆ ಪರೋಪಕಾರಿ ಮತ್ತು ಗುಣವಂತರಾಗಿರುತ್ತಾರೆ. ಈ ರಾಶಿಯಲ್ಲಿ ಶನಿ ಇದ್ದಾಗ ಹಣವಂತ ಮತ್ತು ಶಕ್ತಿಶಾಲಿಯಾಗುತ್ತಾರೆ. ಕಡಿಮೆ ಮಾತನಾಡುವ ಇವರು ಗಂಭೀರ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಈ ರಾಶಿಯವರಿಗೆ ಶನಿದಶೆಯು ಶುಭ, ಲಾಭವನ್ನು ತರುತ್ತದೆ.

ಇದನ್ನು ಓದಿ: ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ತುಲಾರಾಶಿಯಲ್ಲಿ ಶನಿ
ಶನಿ ತುಲಾ ರಾಶಿಯಲ್ಲಿದ್ದರೆ ಈ ರಾಶಿಯವರಿಗೆ ಉತ್ತಮ ಫಲವನ್ನು ನೀಡುತ್ತಾನೆ. ಸ್ವಾಭಿಮಾನಿ ಮತ್ತು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಇಲ್ಲಿ ಶನಿಯು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದಲ್ಲದೇ, ಮಾನಸಿಕ ಸ್ಥಿರತೆಯನ್ನು ನೀಡುತ್ತಾನೆ.

ವೃಶ್ಚಿಕದಲ್ಲಿ ಶನಿ ಇದ್ದಾಗ
ಯಾರ ಜಾತಕದಲ್ಲಿ ವೃಶ್ಚಿಕ ರಾಶಿಯಲ್ಲಿ ಶನಿ ಇರುತ್ತಾನೋ ಅಂಥವರು ಭಾವೋದ್ರೇಕ ಮತ್ತು ಕೋಪಕ್ಕೆ ಬುದ್ಧಿ ಕೊಡುತ್ತಾರೆ. ಜೊತೆಗೆ ನಿರಾಸಕ್ತಿ ಉಂಟಾಗುವುದಲ್ಲದೆ ಅಸೂಯೆಯ ಗುಣ ಹೆಚ್ಚಾಗುತ್ತದೆ. ಈ ರಾಶಿಯವರಿಗೆ ಶನಿದಶೆ ಇದ್ದಾಗ ಆರ್ಥಿಕ ನಷ್ಟ ಮತ್ತು ಮರ್ಯಾದೆಗೆ ದಕ್ಕೆ ಉಂಟಾಗುತ್ತದೆ.

ಧನು ರಾಶಿಯಲ್ಲಿ ಶನಿ
ರಾಶಿಚಕ್ರದಲ್ಲಿ ಶನಿಯದು ನವಮ ಸ್ಥಾನ. ಈ ರಾಶಿಯಲ್ಲಿ ಶನಿ ಇದ್ದಾಗ ವ್ಯಕ್ತಿಗಳು ವ್ಯಾವಹಾರಿಕವಾಗಿ ಚುರುಕಾಗುತ್ತಾರೆ ಮತ್ತು ಜ್ಞಾನವಂತರಾಗುತ್ತಾರೆ. ಪರಿಶ್ರಮವನ್ನು ಪಡುವುದಲ್ಲದೇ, ಉತ್ತಮ ಚಿಂತನೆಗಳನ್ನು ಮಾಡುತ್ತಾರೆ. ಚತುರತೆಯಿಂದ ಕಾರ್ಯ ನಿರ್ವಹಿಸುವುದಲ್ಲದೇ, ಪರರ ಉಪಕಾರವನ್ನು ಸದಾ ನೆನೆಯುತ್ತಾರೆ. ಈ ರಾಶಿಯವರಿಗೆ ಶನಿದಶೆ ಇದ್ದಾಗ ಇವರು ಸುಖ ಮತ್ತು ಉತ್ತಮ ಫಲವನ್ನು ಪಡೆಯುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಫಲತೆಯನ್ನು ಕಾಣುತ್ತಾರೆ.

ಮಕರದಲ್ಲಿ ಶನಿ
ಮಕರ ರಾಶಿಯಲ್ಲಿ ಶನಿ ಇದ್ದರೆ ಇಂತವರು ಪರಿಶ್ರಮಿಗಳಾಗಿರುತ್ತಾರೆ. ದೇವರಲ್ಲಿ ಹೆಚ್ಚು ಭಕ್ತಿಯನ್ನು ಹೊಂದುತ್ತಾರೆ. ವ್ಯವಹಾರದಲ್ಲಿ ಏಳಿಗೆಯನ್ನು ಕಾಣುತ್ತಾರೆ. ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಆಸ್ತಿ-ಭೂಮಿಯ ಲಾಭವನ್ನು ಶನಿ ತಂದುಕೊಡುತ್ತಾನೆ.

ಇದನ್ನು ಓದಿ: ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು

ಕುಂಭರಾಶಿ ಶನಿ ಇದ್ದರೆ
ಯಾರ ಜಾತಕದಲ್ಲಿ ಶನಿ ದಶಮ ಸ್ಥಾನದಲ್ಲಿ ಅಥವಾ ಕುಂಭ ರಾಶಿಯಲ್ಲಿ ಇರುವನೋ ಇಂತವರು ಅಹಂಕಾರಿಗಳಾಗುತ್ತಾರೆ. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ಕೂಟನೀತಿಯಂಥ ಕ್ಷೇತ್ರದಲ್ಲಿ ಸಫಲರಾಗುತ್ತಾರೆ. ಕಣ್ಣಿಗೆ ಸಂಬಂಧ ಪಟ್ಟ ರೋಗದಿಂದ ಬಳಲುತ್ತಾರೆ. ವ್ಯವಹಾರದಲ್ಲಿ ಕುಶಲತೆಯನ್ನು, ಭಾಗ್ಯವನ್ನು ಹೊಂದುತ್ತಾರೆ.

ಮೀನದಲ್ಲಿ ಶನಿ
ಶನಿ ಮೀನರಾಶಿಯಲ್ಲಿದ್ದರೆ ಇಂಥ ವ್ಯಕ್ತಿಯು ಗಂಭೀರನಾಗುತ್ತಾನೆ. ಅಸೂಯೆ ಪಡುವವನಾಗುತ್ತಾನೆ, ಮಹತ್ವಾಕಾಂಕ್ಷಿ ಗುಣವನ್ನು ಹೊಂದಿರುತ್ತಾನೆ. ಈ ರಾಶಿಯಲ್ಲಿ ಶನಿ ಇದ್ದಾಗ ಉದಾರತೆಯ ಗುಣವನ್ನು ಹೊಂದುತ್ತಾನೆ ಮತ್ತು ಸಮಾಜದಲ್ಲಿ ಗೌರವವನ್ನು ಪಡೆಯುತ್ತಾನೆ. ಆರ್ಥಿಕ ಸ್ಥಿತಿಯನ್ನು ಸಾಧಾರಣವಾಗಿಸುತ್ತಾನೆ ಶನಿ.

Follow Us:
Download App:
  • android
  • ios