Asianet Suvarna News Asianet Suvarna News

Pitru Paksha: ಪಿಂಡ ಪ್ರದಾನ ಮಾಡಿದ ಸೀತೆಗೂ, ಆಲದ ಮರದ ದೀರ್ಘಾಯುಷ್ಯಕ್ಕೇನಿದೆ ನಂಟು?

ಪಿತೃ ಪಕ್ಷ ನಡೆಯುತ್ತಿದೆ. ಪಿತೃ ಪಕ್ಷದಲ್ಲಿ ಪೂರ್ವಜರ ಶ್ರಾದ್ಧ, ಪಿಂಡದಾನ ಮಾಡುವುದು ಪದ್ಧತಿ. ಅನೇಕ ಕಡೆ ಗಂಡ್ಮಕ್ಕಳು ಪಿಂಡದಾನ ಮಾಡ್ತಾರೆ. ಆದ್ರೆ ಪುತ್ರರಿಲ್ಲದ ಮನೆಯಲ್ಲಿ ಹೆಣ್ಮಕ್ಕಳು ಕೂಡ ಪಿಂಡದಾನ ಮಾಡಬಹುದು. ಈ ಹಕ್ಕನ್ನು ಶ್ರೀರಾಮನೇ ಮಹಿಳೆಯರಿಗೆ ನೀಡಿದ್ದಾನೆ.
 

Women Also Have Right To Perform Shradha during pitru paksha
Author
First Published Sep 13, 2022, 2:53 PM IST

ಹಿಂದೂ ಧರ್ಮದಲ್ಲಿ ಪಿತೃ ಪಕ್ಷದಲ್ಲಿ ಪಿಂಡ ದಾನಕ್ಕೆ ವಿಶೇಷ ಮಹತ್ವವಿದೆ. ಪಿತೃ ಪಕ್ಷದಲ್ಲಿ  ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವ ಕಾರಣಕ್ಕೆ ಶ್ರಾದ್ಧ ಮತ್ತು ಪಿಂಡ ದಾನವನ್ನು ಮಾಡಲಾಗುತ್ತದೆ. ಪೂರ್ವಜರ ಆಶೀರ್ವಾದವಿದ್ರೆ ಕುಟುಂಬದಲ್ಲಿ ಸುಖ, ಸಂತೋಷ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಪಿಂಡ ದಾನದ ಹಕ್ಕು ಮಗನಿಗೆ ಇದೆ ಎಂದು ಹೇಳಲಾಗುತ್ತದೆ. ಆದ್ರೆ ತಂದೆ ದಶರಥನ ಪಿಂಡ  ದಾನವನ್ನು ಶ್ರೀರಾಮ ಮಾಡಲಿಲ್ಲ. ವಾಲ್ಮೀಕಿ ರಾಮಾಯಣದ ಪ್ರಕಾರ, ರಾಜ ದಶರಥನ ಪಿಂಡ ದಾನವನ್ನು ಸೀತೆ ಮಾಡಿದ್ದಳು. ದಶರಥನಿಗೆ ಮೋಕ್ಷ ಸಿಗಲಿ ಎನ್ನುವ ಕಾರಣಕ್ಕೆ ಸೀತೆ ಪಿಂಡದಾನ ಮಾಡಿದ್ದಳು. 

ರಾಮ (Rama), ಲಕ್ಷ್ಮಣ (Lakshmana) ಹಾಗೂ ಸೀತೆ (Sita) ವನವಾಸದ ಸಮಯದಲ್ಲಿದ್ದರು. ದಶರಥನ ನಿಧನದ ಸುದ್ದಿ ತಿಳಿದ ನಂತ್ರ ಪಿಂಡ ದಾನ ಮಾಡಲು ಮೂವರೂ ಗಯಾಧಾಮಕ್ಕೆ ಬಂದಿದ್ದರು. ಶ್ರಾದ್ಧಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬರಲು ರಾಮ ಹಾಗೂ ಲಕ್ಷ್ಮಣ ಹಳ್ಳಿಗೆ ಹೋಗಿದ್ದರು. ಈ ವೇಳೆ ಅಲ್ಲಿದ್ದ ಸೀತೆಯನ್ನು ಬ್ರಾಹ್ಮಣರು ವಿನಂತಿಸಿಕೊಳ್ತಾರೆ. ಸಮಯ ಮೀರುತ್ತಿದೆ, ಪಿಂಡ ದಾನಕ್ಕೆ ಸಮಯವಾಗ್ತಿದೆ ಎಂದು ಬ್ರಾಹ್ಮಣರು ಹೇಳಿದ್ದರು. ಸಮಯಕ್ಕೆ ಮಹತ್ವ ನೀಡುವುದು ಸೀತೆಗೆ ಮುಖ್ಯವಾಗಿತ್ತು. ಮಾವ ದಶರಥನ ಆತ್ಮಕ್ಕೆ ಶಾಂತಿ ನೀಡಲು ಮುಂದಾದ ಸೀತೆ ಪಿಂಡ ದಾನ ಮಾಡಲು ನಿರ್ಧರಿಸುತ್ತಾಳೆ. ಹಾಗೆಯೇ ಪಿಂಡದಾನ ಮಾಡ್ತಾಳೆ. 

Color Astro: ಮೇಷಕ್ಕೆ ಕಪ್ಪು ಬಣ್ಣ ತರುತ್ತೆ ದುರದೃಷ್ಟ, ದೂರವಿಡಿ!

ತಾಯಿ ಸೀತೆ ಫಲ್ಗು ನದಿಯ ಜೊತೆಗೆ ಅಲ್ಲಿದ್ದ ಆಲದ ಮರ, ಕಾಗೆ, ತುಳಸಿ, ಬ್ರಾಹ್ಮಣ ಮತ್ತು ಹಸುವನ್ನು ಸಾಕ್ಷಿಯಾಗಿ ಸ್ವೀಕರಿಸಿದಳು. ಸಂಪೂರ್ಣ ಆಚರಣೆಗಳೊಂದಿಗೆ ಮಾವ, ದಿವಂಗತ ರಾಜ ದಶರಥನ ಪಿಂಡದಾನವನ್ನು ಮಾಡಿದರು. ಎಲ್ಲ ಕ್ರಿಯೆ ಮುಗಿಸಿ ಕೈಮುಗಿದು ಸೀತೆ ಪ್ರಾರ್ಥಿಸಿದಾಗ ರಾಜ ದಶರಥ, ತಾಯಿ ಸೀತೆಯ ಪಿಂಡ ದಾನವನ್ನು ಸ್ವೀಕರಿಸಿದನಂತೆ. ದಶರಥ ಪಿಂಡದಾನವನ್ನು ಸ್ವೀಕರಿಸಿದ್ದಾನೆ ಎಂಬುದು ಸೀತೆಗೆ ಖುಷಿ ನೀಡಿತ್ತಂತೆ. ಆದ್ರೆ ಶ್ರೀರಾಮ ಇದನ್ನು ಸ್ವೀಕರಿಸುವುದಿಲ್ಲ ಎನ್ನುವ ಸತ್ಯ ಕೂಡ ಆಕೆಗೆ ಗೊತ್ತಿತ್ತಂತೆ.  

ಸ್ವಲ್ಪ ಸಮಯದ ನಂತ್ರ ಶ್ರೀರಾಮ ಹಾಗೂ ಲಕ್ಷ್ಮಣ ವಸ್ತುಗಳನ್ನು ತೆಗೆದುಕೊಂಡು ಸ್ಥಳಕ್ಕೆ ಬಂದರಂತೆ. ಪಿಂಡದಾನದ ಬಗ್ಗೆ ಕೇಳಿದ್ದರಂತೆ. ಸಮಯ ಮುಗಿಯುತ್ತಿದ್ದ ಕಾರಣ ನಾನೇ ಪಿಂಡದಾನ ಮಾಡಿದೆ ಎಂದು ಸೀತೆ ಹೇಳಿದ್ದಳಂತೆ. ಇದು ರಾಮನಿಗೆ ಅಚ್ಚರಿಯನ್ನುಂಟು ಮಾಡಿತ್ತು. ಪುತ್ರರಿಲ್ಲದೆ ಹಾಗೂ ವಸ್ತುಗಳಿಲ್ಲದೆ ಹೇಗೆ ಪಿಂಡದಾನ ಮಾಡಲು ಸಾಧ್ಯ ಹಾಗೆ ಅದನ್ನು ಹೇಗೆ ಸ್ವೀಕರಿಸಲು ಸಾಧ್ಯವೆಂದು ಶ್ರೀರಾಮನಿಗೆ ಆಶ್ಚರ್ಯವಾಗಿತ್ತಂತೆ. 

ಫಲ್ಗು ನದಿ, ತುಳಸಿ, ಕಾಗೆ, ಹಸು, ಆಲದ ಮರ ಮತ್ತು ಅಲ್ಲಿರುವ ಬ್ರಾಹ್ಮಣರು ನಾನು ಮಾಡಿದ ಶ್ರಾದ್ಧ ಆಚರಣೆಗಳಿಗೆ ಸಾಕ್ಷಿಯಾದರು ಎಂದು ಸೀತೆ ಹೇಳಿದ್ದಳು. ಇದ್ರಿಂದ ಕೋಪಗೊಂಡ ರಾಮ, ಎಲ್ಲರನ್ನೂ ಪ್ರಶ್ನೆ ಮಾಡ್ತಾನೆ. ಶ್ರೀರಾಮನ ಕೋಪ ನೋಡಿದ ಫಲ್ಗು ನದಿ, ತುಳಸಿ, ಕಾಗೆ ಹಾಗೂ ಹಸು, ಬ್ರಾಹ್ಮಣ ಸುಳ್ಳು ಹೇಳುತ್ತಾರೆ. ಸೀತೆ ಯಾವುದೇ ಪಿಂಡ ದಾನ ಮಾಡಲಿಲ್ಲ ಎಂದು ಸುಳ್ಳು ಹೇಳುತ್ತಾರೆ. ಆದ್ರೆ ಆಲದ ಮರ ಮಾತ್ರ ಸೀತೆ ಪಿಂಡ ದಾನ ಮಾಡಿದ್ದಾಳೆ ಎಂದು ಹೇಳುತ್ತದೆ. ಐದು ಸಾಕ್ಷಿಗಳು ಸುಳ್ಳು ಹೇಳಿದಾಗ, ತಾಯಿ ಸೀತೆ ಕೋಪಗೊಂಡು ಅವರಿಗೆ ಶಾಪ (Curse) ನೀಡ್ತಾಳೆ. ಆದ್ರೆ ಆಲದ ಮರವನ್ನು ಸೀತೆ ಆಶೀರ್ವದಿಸುತ್ತಾಳೆ. ಆಲದ ಮರಕ್ಕೆ ದೀರ್ಘಾಯುಷ್ಯವನ್ನು ನೀಡುತ್ತಾಳೆ. ಇತರರಿಗೆ ನೆರಳು ನೀಡುವ ಮತ್ತು  ಪತಿಯ ದೀರ್ಘ ಆಯಸ್ಸಿಗಾಗಿ ಪತಿವೃತೆಯರು ಆಲದ ಮರವನ್ನು ಪ್ರಾರ್ಥಿಸುವ ವರವನ್ನು ನೀಡ್ತಾಳೆ. 

Numerology: ಈ ಸಂಖ್ಯೆಗಿಂದು ಸಂಬಂಧಿಕರೊಂದಿಗೆ ಜಗಳ, ಮುನಿಸು

ಸೀತೆ ಪಿಂಡ ದಾನ ಮಾಡಿ, ತಂದೆಯ ಆಶೀರ್ವಾದ ಪಡೆದಿದ್ದನ್ನು ತಿಳಿದ ಶ್ರೀರಾಮ, ಸೀತೆಗೆ ವರವನ್ನು ನೀಡ್ತಾನೆ. ಇನ್ಮುಂದೆ ಯಾವುದೇ ಮಹಿಳೆ, ಪುರುಷರ ಅನುಪಸ್ಥಿತಿಯಲ್ಲಿ ಪಿಂಡ ದಾನ ಮಾಡಬಹುದು ಎಂದು ಶ್ರೀರಾಮ ಆಶೀರ್ವಾದ (Blessing) ನೀಡ್ತಾನೆ. ಶ್ರೀರಾಮನ ಆಶೀರ್ವಾದ ಪಡೆದ ನಂತರವೇ ಮಹಿಳೆಯರಿಗೆ ಪಿಂಡದಾನದ ಬಲ ಸಿಕ್ಕಿತು ಎಂದು ಹೇಳಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಶ್ರಾದ್ಧದ ಮೊದಲ ಹಕ್ಕನ್ನು ಪುತ್ರನಿಗೆ ನೀಡಲಾಗಿದೆ. ಪುತ್ರರಿಲ್ಲದ ಕುಟುಂಬದಲ್ಲಿ ಆ ಕುಟುಂಬದ ಮಗಳು ಶ್ರಾದ್ಧವನ್ನು ಮಾಡಿ, ಪಿಂಡದಾನ ಮಾಡಬಹುದು. ಮಗನಿಲ್ಲದ ಸಂದರ್ಭದಲ್ಲಿ ಸೊಸೆ ಕೂಡ ಶ್ರಾದ್ಧ ಮಾಡಬಹುದು.

Follow Us:
Download App:
  • android
  • ios