Asianet Suvarna News Asianet Suvarna News

ಸಂಜೆ ದೀಪ ಹಚ್ಚಿದ ಮೇಲೆ ಉಗುರು ತೆಗೀಬಾರ್ದು ಅನ್ನೋದೇಕೆ?

ಮುಸ್ಸಂಜೆ ಆದ್ಮೇಲೆ ಉಗುರು ತೆಗ್ಯೋಕ್ ಹೋದ್ರೆ ಭಾರತೀಯ ಮನೆಗಳಲ್ಲಿ ಬೈಗುಳ ಕಟ್ಟಿಟ್ಟ ಬುತ್ತಿ. ಲಕ್ಷ್ಮೀ ಬರೋ ಟೈಮಲ್ಲಿ ಉಗುರು ತೆಗೀಬಾರ್ದು, ಸೂರ್ಯಾಸ್ತ ಆದ್ಮೇಲೆ ಉಗುರು ತೆಗೀಬಾರ್ದು ಇತ್ಯಾದಿ ಇತ್ಯಾದಿ ಮಾತು ಕೇಳಿ ಬರುತ್ತಲೇ ಇರುತ್ತದೆ. ಇಷ್ಟಕ್ಕೂ ಯಾಕ್ ತೆಗೀಬಾರ್ದು ಅಂತ ಕೇಳಿದ್ರೆ ಅವ್ರ ಬಳಿ ಉತ್ತರವಿಲ್ಲ. ನಾವ್ ಹೇಳ್ತೀವಿ ಕೇಳಿ..

Why is it considered problematic to cut nails post sunset skr
Author
Bangalore, First Published May 16, 2022, 3:15 PM IST

ಭಾರತೀಯ ಮನೆಗಳಲ್ಲಿ ಸಂಜೆ 6 ಗಂಟೆ ಬಳಿಕ ಉಗುರು ತೆಗ್ಯೋಕೆ ಹೋದರೆ ಮನೆ ಹಿರಿಯರು ಕ್ಲಾಸ್ ತೆಗೆದುಕೊಳ್ಳದೇ ಬಿಡುವುದಿಲ್ಲ. ಸೂರ್ಯಾಸ್ತದ ವೇಳೆ ಉಗುರು ತೆಗೀಬಾರ್ದು, ಮುಸ್ಸಂಜೆ ಸಮಯದಲ್ಲಿ ಉಗುರು ತೆಗೀಬಾರ್ದು, ಲಕ್ಷ್ಮೀ ಮನೆಗೆ ಬರೋ ಹೊತ್ತಲ್ಲಿ ಉಗುರು ತಗೆಯೋದು ಶುಭವಲ್ಲ.. ಹೀಗೆ ಒಂದಿಲ್ಲೊಂದು ಮಾತು ಕೇಳಬೇಕಾಗುತ್ತದೆ. ಅವರ ಬಳಿಯೇ ಕಾರಣವೇನೆಂದು ಕೇಳಿದರೆ ಸರಿಯಾಗಿ ಗೊತ್ತಿರುವುದಿಲ್ಲ. ನಮ್ಮ ಹಿರಿಯರು ಹೇಳಿದ್ದು ಅಂದರೆ ಅದರ ಹಿಂದೆ ಏನೋ ಗಹನವಾದ ವಿಷಯವಿರುತ್ತೆ, ಅದೆಲ್ಲ ಕೇಳಬಾರ್ದು ಅಂತ ಸಾಗಹಾಕ್ತಾರೆ. ಇದನ್ನು ಕೇಳಿದ ಇಂದಿನ ತಲೆಮಾರಿನ ಕೆಲವರು ಇದ್ದರೂ ಇರಬಹುದು ಎಂದು ಸುಮ್ಮನಾದರೆ, ಮತ್ತೆ ಕೆಲವರು ಇದನ್ನು ಮೂಢನಂಬಿಕೆ ಎಂದು ಜರಿಯುತ್ತಾರೆ. 

ಇಷ್ಟಕ್ಕೂ ಸಂಜೆಯ ಬಳಿಕ ಉಗುರು ತೆಗೆಯಬಾರದೆಂಬ ಮಾತು ಭಾರತಕ್ಕೆ ಮಾತ್ರ ಮೀಸಲಾಗಿಲ್ಲ. ಜಗತ್ತಿನ ಹಲವು ಜನಾಂಗಗಳು ಇದನ್ನೇ ನಂಬಿವೆ. ಈ ಹಳೆಯ ಅಭ್ಯಾಸವು ಅಸಮಂಜಸ ಎಂದು ನಿಮಗನಿಸಬಹುದು. ಅವರು ದೆವ್ವಕ್ಕೋ, ದುಷ್ಟಾತ್ಮಕ್ಕೋ ಹೆದರಿ ಹೀಗೆ ಮಾಡುತ್ತಾರೆನಿಸಬಹುದು. ಆದರೆ ಈ ನಂಬಿಕೆಗಳ ಹಿಂದೆ ಯಾವುದಾದರೂ ವೈಜ್ಞಾನಿಕ ತಾರ್ಕಿಕತೆ ಇದೆಯೇ? ಅವು ಸಾಂಪ್ರದಾಯಿಕತೆಯನ್ನು ಮಾತ್ರ ಪ್ರತಿಬಿಂಬಿಸುತ್ತವೆಯೇ? ಇದರ ಹಿಂದೆ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚೇನಾದರೂ ಇದೆಯೇ?

ಒಂದು ರೀತಿಯಲ್ಲಿ ನೋಡಿದರೆ ಈ ನಂಬಿಕೆ ಹುಟ್ಟಲು ಒಂದು ಉತ್ತಮ ಕಾರಣವಿದೆ. ಆದರೆ, ಇಂದಿಗೂ ಅದನ್ನು ಮುಂದುವರೆಸುವುದು ಮೂಢನಂಬಿಕೆಯಾಗುತ್ತದೆ. ಯಾಕೆ ವಿವರಿಸುತ್ತೇವೆ ಬನ್ನಿ. 

ಈ ನಾಲ್ಕು ರಾಶಿಗಳದು ಪ್ರೇಮವಿವಾಹವಾಗುವುದೇ ಹೆಚ್ಚು!

ಹಿಂದಿನ ಕಾಲದಲ್ಲಿ ಈಗಿನಂತೆ ಎಲ್ಲೆಡೆ ಝಗಮಗಿಸುವ ಬೆಳಕಿರಲಿಲ್ಲ. ವಿದ್ಯುತ್ ಇರಲಿಲ್ಲ. ಆಗ ಸೂರ್ಯಾಸ್ತದ ಬಳಿಕ ಕೇವಲ ಚಿಮಣಿ, ಬುಡ್ಡಿ ದೀಪಗಳನ್ನು ಬಳಸುತ್ತಿದ್ದರು. ಅದೂ ಅಲ್ಲದೆ, ಈಗಿನಂತೆ ನೇಲ್ ಕಟರ್‌ಗಳು ಕೂಡಾ ಇರಲಿಲ್ಲ. ಚಾಕು, ಕತ್ತಿ, ಬ್ಲೇಡ್ ಬಳಸಿ ಉಗುರನ್ನು ತೆಗೆಯುತ್ತಿದ್ದರು. ಸೂರ್ಯಾಸ್ತದ ಬಳಿಕ ಕತ್ತಲಲ್ಲಿ ಈ ಚೂಪಾದ ವಸ್ತುಗಳನ್ನು ಬಳಸಿ ಉಗುರನ್ನು ತೆಗೆದುಕೊಳ್ಳುವುದು ಬಹಳ ಅಪಾಯಕಾರಿ ವಿಧಾನವಾಗಿತ್ತು. ಕೆಲಸ ಆಗುವುದಕ್ಕಿಂತ ತೊಂದರೆಯಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತಿತ್ತು. 

ಅಂಥ ಸಂದರ್ಭದಲ್ಲಿ ಉಗುರು ತೆಗೆಯಬೇಡಿ ಎಂದರೆ ಕೆಲ ಮೊಂಡರು ಕೇಳುವುದಿಲ್ಲ. ಅವರಿಗೆ ದೇವರು ಇಲ್ಲವೇ ದೆವ್ವದ ಹೆಸರು ಹೇಳಿ ಶಾಸ್ತ್ರವೆಂದಾಗ ಮಾತ್ರ ಭಯ ಭಕ್ತಿಯಲ್ಲಿ ನಿಯಮವನ್ನು ಆಚರಿಸುತ್ತಾರೆ. ಹೀಗಾಗಿ, ಸೂರ್ಯಾಸ್ತದ ಬಳಿಕ ಉಗುರು ತೆಗೆಯಬಾರದು ಎಂಬ ನಿಯಮ ಮಾಡಲಾಯಿತು. 

ಮನೆಯೊಳಗೆ ತೆಗೆಯಬಾರದು
ಇಷ್ಟಕ್ಕೂ ಹಗಲಿನಲ್ಲೂ ಈ ಚೂಪಾದ ವಸ್ತುಗಳ ಬಳಕೆ ಅಪಾಯಕಾರಿಯೇ ಆದರೂ ಕತ್ತಲಿನಲ್ಲಿದ್ದಷ್ಟು ಅಪಾಯವಾಗಿರಲಿಲ್ಲ. ಉಗುರನ್ನು ಸಂಜೆ ತೆಗೆಯಬಾರದು, ಯಾವ ಹೊತ್ತಿನಲ್ಲೂ ಮನೆಯೊಳಗೆ ತೆಗೆಯಬಾರದು ಎಂಬುದಕ್ಕೆ ಮತ್ತೊಂದು ಮುಖ್ಯ ಕಾರಣವೂ ಇದೆ.

ಮೂಲ ನಕ್ಷತ್ರ ಕೆಟ್ಟದ್ದೇ? ಈ ನಕ್ಷತ್ರದಲ್ಲಿ ಜನಿಸಿದವರು ಹೇಗಿರುತ್ತಾರೆ?

ಚರ್ಮದ ಆಚೆಗೆ ವಿಸ್ತರಿಸುವ ಉಗುರುಗಳು ಸತ್ತ ಜೀವಕೋಶಗಳಾಗಿವೆ. ಆದ್ದರಿಂದ, ಬೆಳಕಿನ ಅನುಪಸ್ಥಿತಿಯಲ್ಲಿ, ಮನೆಯೊಳಗೆ ಬೆರಳುಗಳು ಮತ್ತು ಕಾಲ್ಬೆರಳುಗಳಿಂದ ಕತ್ತರಿಸಿದ ಈ ಅನೈರ್ಮಲ್ಯ ಸತ್ತ ಚರ್ಮದ ಜೀವಕೋಶಗಳು ಮನೆಯ ಅಲ್ಲಲ್ಲಿ ಬೀಳಬಹುದು. ಅವು ಆಕಸ್ಮಿಕವಾಗಿ ಆಹಾರವನ್ನು ಕಲುಷಿತಗೊಳಿಸಬಹುದು ಅಥವಾ ಬಟ್ಟೆಗೆ ಅಂಟಿಕೊಳ್ಳಬಹುದು. ಇದರ ಜೊತೆಯಲ್ಲಿ, ಈ ಸತ್ತ ಚರ್ಮದ ಕೋಶಗಳು ಅನಾರೋಗ್ಯ ಮತ್ತು ಸೋಂಕನ್ನು ಉಂಟುಮಾಡುವ ಸೂಕ್ಷ್ಮಜೀವಿಗಳ ಮನೆಯಾಗಿ ಬದಲಾಗಬಹುದು. ಇಲ್ಲದಿದ್ದರೆ ಮನೆಯಲ್ಲಿ ಅಂಬೆ ಹರಿಯುವ ಮಕ್ಕಳಿಗೆ ಕೈಗೆ ಸಿಕ್ಕಿದ್ದೆಲ್ಲ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸವಿರುತ್ತದೆ. ಅದರಲ್ಲೂ ಅತಿ ಸಣ್ಣ ಕಸಗಳೇ ಅವುಗಳ ಕಣ್ಣಿಗೆ ಬೀಳುವುದು. ಮನೆಯೊಳಗೆ ಉಗುರು ತೆಗೆದು ಅದು ಎಲ್ಲಾದರೂ ಬಿದ್ದಿದ್ದಾಗ ಅದನ್ನು ಮಗು ಬಾಯಿಗೆ ಹಾಕಿಕೊಳ್ಳುವ ಅಪಾಯವಿರುತ್ತದೆ ಎಂಬುದೂ ಉಗುರು ಮನೆಯೊಳಗೆ ತೆಗೆಯಬಾರದು, ಸಂಜೆಯ ಹೊತ್ತಲ್ಲಂತೂ ತೆಗೆಯಲೇಬಾರದು ಎನ್ನಲು ಇದು ಪ್ರಮುಖ ಕಾರಣ.

ಆದ್ದರಿಂದ, ಗಾಯ, ಸೋಂಕನ್ನು ತಡೆಗಟ್ಟಲು, ಶಿಸ್ತನ್ನು ಕಲಿಸಲು, ಜನರು ಸೂರ್ಯಾಸ್ತದ ನಂತರ ತಮ್ಮ ಉಗುರುಗಳನ್ನು ಕತ್ತರಿಸದಿರಲು ನಿರ್ಧರಿಸಿದರು, ಆದರೆ ಇದೊಂದು ಮೂಢನಂಬಿಕೆ ಎಂದು ತಪ್ಪಾಗಿ ಗ್ರಹಿಸಲ್ಪಟ್ಟಿತು.

Follow Us:
Download App:
  • android
  • ios