ಮುಟ್ಟಾದ ಮಹಿಳೆಯರೇಕೆ ಮೂಲೆಯಲ್ಲಿ ಕೂರಬೇಕು?
ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರಿಗೆ ಸಾಕಷ್ಟು ನಿರ್ಬಂಧಗಳಿರುತ್ತವೆ. ಮೊದಲೇ ದೈಹಿಕವಾಗಿ, ಮಾನಸಿಕವಾಗಿ ಸುಸ್ತಾದ ಆಕೆ ಈ ನಿರ್ಬಂಧಗಳಿಂದಲೂ ಹೈರಾಣಾಗಿ ಹೋಗುತ್ತಾಳೆ. ಆದರೆ, ಈ ನಿರ್ಬಂಧಗಳು ಶುರುವಾಗಿದ್ದೇ ಆಕೆಯ ಒಳಿತಿಗಾಗಿ ಎಂಬುದು ನಿಮಗೆ ಗೊತ್ತೇ?
ಮುಟ್ಟಾದ ಮಹಿಳೆ ಎಂದರೆ ಆಕೆಯನ್ನು ಮುಟ್ಟಬಾರದು, ಆಕೆ ಅಡುಗೆ ಮಾಡಿದರೆ ಉಳಿದವರು ಸೇವಿಸುವುದಿಲ್ಲ, ಮನೆಯ ಎಲ್ಲ ಭಾಗದಲ್ಲಿ ಆಕೆ ಓಡಾಡುವಂತಿಲ್ಲ. ಆಕೆ ಮುಟ್ಟಿದರೆ ಸ್ನಾನ ಮಾಡಿಕೊಂಡು ಬರಬೇಕು, ಮುಟ್ಟಾದ ಮಹಿಳೆ ದೇವಸ್ಥಾನ ಪ್ರವೇಶಿಸುವಂತಿಲ್ಲ, ದೇವರ ಪೂಜೆ ಮಾಡುವಂತಿಲ್ಲ, ಮುಟ್ಟಾದ ಮಹಿಳೆ ಪ್ರತ್ಯೇಕವಾದ ಹಾಸಿಗೆ ಬೆಡ್‌ಶೀಟ್ ಬಳಸಬೇಕು... ಹೀಗೆ ಪೀರಿಯಡ್ಸ್(Periods) ಎಂದರೆ ಶಾಪವೆನಿಸುವಷ್ಟು ನಿರ್ಬಂಧಗಳು ಹೆಣ್ಣುಮಕ್ಕಳಿಗೆ.
ಮಹಿಳೆಯರು ಇಂದು ಬಾಹ್ಯಾಕಾಶಕ್ಕೆ ಕಾಲಿಟ್ಟಿದ್ದಾರೆ, ಆರ್ಥಿಕವಾಗಿ ಸಬಲರಾಗಿದ್ದಾರೆ. ಹಾಗಿದ್ದೂ ಮುಟ್ಟಿನ ವಿಷಯಕ್ಕೆ ಬಂದಾಗ ಸಾಕಷ್ಟು ನಿರ್ಬಂಧಗಳು ಅವರನ್ನು ಕಾಡುತ್ತವೆ. ಇಷ್ಟಕ್ಕೂ ಈ ನಿಮಯಗಳನ್ನು ಮಾಡಿದ್ದೇಕೆ? ಇವೆಲ್ಲ ಮಹಿಳಾ ವಿರೋಧಿಯೇ?
ಖಂಡಿತಾ ಅಲ್ಲ, ಇವೆಲ್ಲ ಹೆಣ್ಣನ್ನು ಕೀಳಾಗಿ ಕಾಣಲು ಮಾಡಿದ ನಿಯಮಗಳಲ್ಲ. ಬದಲಿಗೆ ಆಕೆಯ ಒಳಿತಿಗಾಗಿಯೇ ಮಾಡಿದ ನಿರ್ಬಂಧಗಳು(restrictions).
ಹೌದು, ಪ್ರಾಚೀನ ಕಾಲದಲ್ಲಿ, ಮಹಿಳೆಯರು ಭಾರವಾದ ಮಡಕೆಗಳನ್ನು ಒಯ್ಯುವುದು, ಸ್ವಚ್ಛಗೊಳಿಸುವುದು, ಏನೂ ವ್ಯವಸ್ಥೆ ಇಲ್ಲದೆ, ಕಲ್ಲಿನ ಒಲೆಯಲ್ಲಿ ಅಡುಗೆ ಮಾಡುವುದು, ಕಟ್ಟಿಗೆ ತರುವುದು, ಕೃಷಿ ಮುಂತಾದ ದೈಹಿಕ ಕೆಲಸಗಳನ್ನು ಮಾಡುತ್ತಿದ್ದರು. ಮನೆಯ ಕೆಲಸವೊಂದಕ್ಕೂ ಗಂಡಸರು ಕೈ ಹಾಕುತ್ತಿರಲಿಲ್ಲ. ಗಂಡ ಜೊತೆಗೆ ಮನೆಯ ತುಂಬ ತುಂಬಿರುವ ಮಕ್ಕಳನ್ನು ನೋಡಿಕೊಳ್ಳುವುದೆಂದರೆ ಸಾಕೋ ಸಾಕಾಗುತ್ತಿತ್ತು. ಮೊದಲೇ ಕಷ್ಟ ಕಷ್ಟ. ಅದರಲ್ಲೂ ಮುಟ್ಟೆಂದರೆ ಹೊಟ್ಟೆನೋವು, ಕೈ ಕಾಲು ಸೆಳೆತ, ಬೆನ್ನು ನೋವು, ರಕ್ತಸ್ರಾವದ ಕಿರಿಕಿರಿ. ಜೊತೆಗೆ, ಬದಲಾದ ಹಾರ್ಮೋನ್ಗಳ ಪರಿಣಾಮವಾಗಿ ಬದಲಾಗುವ ಮನಸ್ಥಿತಿ. ಎಷ್ಟೇ ಕೋಪ ಬಂದರೂ, ಅಳು ಬಂದರೂ ಗಂಡನೆದುರು ತೋರಿಸಿಕೊಳ್ಳಬಾರದೆಂಬ ಕಟ್ಟುಪಾಡಿದ್ದ ಸಂದರ್ಭ.
ಹಠಮಾರಿ, ಕೋಪಿಷ್ಠ ಎನಿಸಿದರೂ ಈ ನಾಲ್ಕು ರಾಶಿಗಳ ಮನಸ್ಸು ಮಾತ್ರ ಮಕ್ಕಳಂತೆ!
ಇವಿಷ್ಟು ಸಾಲದೆಂಬಂದೆ ಆಗ ಯಾವ ಸ್ಯಾನಿಟರಿ ಪ್ಯಾಡ್(Sanitary pad)ಗಳೂ ಇರಲಿಲ್ಲ. ಬಟ್ಟೆಯನ್ನೇ ಬಳಸುತ್ತಿದ್ದ ಕಾಲ. ವರ್ಷಕ್ಕೆ ತರುತ್ತಿದ್ದುದೇ ಒಂದು ಸೀರೆ. ಮತ್ತಿನ್ನು ಮುಟ್ಟಿಗಾಗಿ ಹೊಸ ಸೀರೆಯನ್ನು ಬಳಸುವುದಂತೂ ದೂರದ ಮಾತು. ಹಳೆಯ ಚಿಂದಿ ಬಟ್ಟೆಗಳನ್ನೇ ಧರಿಸುತ್ತಿದ್ದುದರಿಂದ ಅವು ಹೆಚ್ಚು ಸ್ರಾವ ಹೀರಿಡುತ್ತಿರಲಿಲ್ಲ. ಆಗೆಲ್ಲ ಎಲ್ಲ ಮನೆಗಳಲ್ಲಿ ಬಾತ್ರೂಂ ಕೂಡಾ ಇರಲಿಲ್ಲ. ಈ ಬಟ್ಟೆಗಳನ್ನು ಒಗೆಯುವುದರಿಂದ ಹಿಡಿದು ಸ್ನಾನಕ್ಕೂ ಹೊಳೆಗೋ, ಕೆರೆಗೋ ಹೋಗಬೇಕಿತ್ತು. ಅಲ್ಲದೆ ಬೇರೆ ಒಳಬಟ್ಟೆಗಳೂ(innerware) ಇರುತ್ತಿರಲಿಲ್ಲವಾದ್ದರಿಂದ ರಕ್ತಸ್ರಾವ ಮುಜುಗರ ತರುತ್ತಿತ್ತು.
ಮೊದಲೇ ಬಟ್ಟೆಯ ಕಾರಣದಿಂದ ಸ್ವಚ್ಛತೆ(cleanliness) ನಿಭಾಯಿಸಲಾಗದೆ ಒದ್ದಾಡುತ್ತಿದ್ದರು. ಅಂಥದರಲ್ಲಿ ಅವರು ಮನೆಯೆಲ್ಲ ಓಡಾಡಿಕೊಂಡಿದ್ದರೆ, ಅಡುಗೆ ಮಾಡಿದರೆ ಬ್ಯಾಕ್ಟೀರಿಯಾ(bacteria) ಅವರು ಮಾತ್ರವಲ್ಲ, ಕೂಡು ಕುಟುಂಬವಿರುತ್ತಿದ್ದುದರಿಂದ ಮಕ್ಕಳು ಮರಿಗೆಲ್ಲ ತಾಕಿ ಆರೋಗ್ಯ ಸಮಸ್ಯೆಗಳಾಗುತ್ತಿತ್ತು. ಜೊತೆಗೆ, ಅವರು ಸ್ನಾನ ಮಾಡಿದಾಗ ಹೊಳೆಯ ನೀರು ಕೂಡಾ ಕಲುಶಿತವಾಗಿ ಬ್ಯಾಕ್ಟೀರಿಯಾ ಹರಡುತ್ತಿತ್ತು. ಈ ಸ್ವಚ್ಛತೆಯ ಸಮಸ್ಯೆಯಿಂದಾಗಯೇ ಅವರಿಗೆ ಕಾರ್ಯಕ್ರಮಗಳಿಗೆ, ದೇವಾಲಯಕ್ಕೆ ಹೋಗುವುದನ್ನು ನಿರ್ಬಂಧಿಸಲಾಯಿತು.
ಸ್ವಚ್ಛತೆಯದೊಂದು ಕಾರಣವಾದರೆ, ಸಿಕ್ಕಾಪಟ್ಟೆ ಹೈರಾಣಾಗುತ್ತಿದ್ದ ಮಹಿಳೆಗೆ ವಿಶ್ರಾಂತಿ(rest) ನೀಡಬೇಕೆಂಬುದು ಮತ್ತೊಂದು ಕಾರಣವಾಗಿ ಆಕೆಗೆ ಮುಟ್ಟಿನ ದಿನಗಳಲ್ಲಿ ದೂರ ಕೂರುವ, ಯಾವ ಕೆಲಸವನ್ನೂ ಮಾಡದೆ ವಿಶ್ರಾಂತಿ ನೀಡುವ ಸಂಪ್ರದಾಯ ಬೆಳೆದು ಬಂದಿತು. ಜೊತೆಗೆ ಸ್ವಚ್ಛತೆಯ ಕಾರಣಕ್ಕಾಗಿ ಆಕೆಗೆ ಪ್ರತ್ಯೇಕ ಪಾತ್ರೆಪಡಗ ಬಳಸಲು ಹೇಳಲಾಗುತ್ತಿತ್ತು. ಮಕ್ಕಳು ಮರಿ ಎಂದು ಏಳೆಂಟು ಜನರು ಇರುತ್ತಿದ್ದ ಸಂದರ್ಭದಲ್ಲಿ ತಾಯಿಗೆ ವಿಶ್ರಾಂತಿ ಸಿಗುವುದು ಕಷ್ಟದ ಮಾತಾಗಿತ್ತು. ಹಾಗಾಗಿ, ಆಕೆಯನ್ನು ಮುಟ್ಟಲೇಬಾರದೆಂಬ ನಿಯಮ ರೂಪಿಸಿದರು. ಸಂಪ್ರದಾಯ ಎಂದಾಗ ಮಾತ್ರ ಎಲ್ಲರೂ ಮಾತು ಕೇಳುತ್ತಾರೆ ಎಂಬುದು ಇದರ ಹಿಂದಿನ ಗುಟ್ಟು.
64 ದಿನಗಳ ಬಳಿಕ ಮತ್ತೆ ಮಕರ ರಾಶಿಗೆ ಶನಿ ಪ್ರವೇಶ, ಈ 2 ರಾಶಿಯ ಕಥೆ ಏನು?
ಆದರೆ ಈಗ ಕಾಲ ಬದಲಾಗಿದೆ. ಮುಟ್ಟಿನ ದಿನಗಳಲ್ಲಿ ಆಕೆಗೆ ವಿಶ್ರಾಂತಿ ಬೇಕೆಂಬುದು ನಿಜವಾದರೂ, ಮುಂಚೆಯಂಥ ಹೈರಾಣಾಗಿಸುವ ದೈಹಿಕ ಕೆಲಸಗಳು ಈಗಿಲ್ಲ. ಗುಣಮಟ್ಟದ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಲಭ್ಯತೆಯು ಇಂದು ಶಾಲೆಗೆ ಹಾಜರಾಗಲು ಅಥವಾ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಸ್ವಚ್ಛತೆಯನ್ನು ಸಂಪೂರ್ಣ ನಿಭಾಯಿಸುವ ಛಾತಿ, ಅವಕಾಶಗಳು ಈಗಿನ ಹೆಣ್ಣುಮಕ್ಕಳಿಗಿವೆ. ಮುಟ್ಟೆಂಬುದು ಪ್ರಾಕೃತಿಕವಾದುದಾದ್ದರಿಂದ ಅದು ದೇವರಿಗೆ ಮೈಲಿಗೆಯಾಗಿರಲು ಕೂಡಾ ಸಾಧ್ಯವಿಲ್ಲ. ಹಾಗಾಗಿ, ಈಗಿನ ಹೆಣ್ಣುಮಕ್ಕಳು ಮುಟ್ಟಿನ ನಿರ್ಬಂಧಗಳನ್ನೆಲ್ಲ ಎದುರಿಸುವ ಅಗತ್ಯವಿಲ್ಲ. ಅವರವರ ದೈಹಿಕ ಸ್ಥಿತಿಗೆ ತಕ್ಕ ಹಾಗೆ ತಾವೇನು ಮಾಡಬೇಕು ಎಂಬುದನ್ನು ಹೆಣ್ಣುಮಕ್ಕಳೇ ನಿರ್ಧರಿಸಬಹುದು. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ.