ಕನಸುಗಳಲ್ಲಿ ಬಿಳಿ ಬಣ್ಣದ ಪ್ರಾಣಿ ಪಕ್ಷಿಗಳು ಕಾಣಿಸಿಕೊಳ್ಳುವುದು ಅಪರೂಪ. ಇಂಥವು ಕನಸಲ್ಲಿ ಕಾಣಲು ಅದೃಷ್ಟ ಇರಬೇಕು. ಯಾಕೆ ನೋಡಿ.

ಕನಸುಗಳು ಪ್ರತಿಯೊಬ್ಬರಿಗೂ ಪ್ರತಿ ದಿನ ಬೀಳುತ್ತವೆ. ಕೆಲವು ನೆನಪಿನಲ್ಲಿ ಉಳಿಯುತ್ತವೆ, ಮತ್ತೆ ಕೆಲವು ಉಳಿಯುವುದಿಲ್ಲ. ಈ ಕನಸುಗಳು ನಮ್ಮ ಭವಿಷ್ಯದ ಬಗ್ಗೆ ಕೆಲ ಸೂಚನೆಗಳನ್ನು ಕೊಡುತ್ತವೆ ಎಂಬ ನಂಬಿಕೆ ಇದೆ. ಕನಸಲ್ಲಿ ಪ್ರಾಣಿಪಕ್ಷಿಗಳು ಕಾಣಿಸಿಕೊಂಡಾಗ ಪ್ರತಿಯೊಂದು ಪ್ರಾಣಿ ಪಕ್ಷಿಯನ್ನು ಶುಭ, ಅಶುಭವೆಂದು ಗುರುತಿಸಲಾಗುತ್ತದೆ. ಹಾಗೆಯೇ ಬಿಳಿ ಬಣ್ಣದ ಪ್ರಾಣಿ ಇಲ್ಲವೇ ಪಕ್ಷಿ ಕನಸಲ್ಲಿ ಕಾಣಿಸಿಕೊಂಡರೆ ಏನರ್ಥ ಎಂದು ನೋಡೋಣ. 

ಶ್ವೇತ ವರ್ಣದ ಪ್ರಾಣಿಪಕ್ಷಿಗಳು ಕನಸಲ್ಲಿ ಕಾಣಿಸಿಕೊಳ್ಳುವುದು ಅಪರೂಪದಲ್ಲಿ ಅಪರೂಪ. ಹಾಗೊಂದು ವೇಳೆ ಕಾಣಿಸಿಕೊಂಡವೆಂದರೆ ಖಂಡಿತವಾಗಿಯೂ ಶುಭದ ಸೂಚನೆ ಎಂದು ಭಾವಿಸಬಹುದು. ಕನಸಿನಲ್ಲಿ ಈ ಬಿಳಿಯ ಪ್ರಾಣಿಗಳು ಕಾಣಿಸಿಕೊಂಡರೆ ಅದರರ್ಥ ಏನೆಂದು ನೋಡೋಣ. 

ಬಿಳಿ ನವಿಲು (White Peacock)
ಕನಸಿನಲ್ಲಿ ಬಿಳಿ ಬಣ್ಣದ ನವಿಲು ಕಾಣಿಸಿಕೊಂಡರೆ ಅದು ಬಹಳ ಶುಭ ಶಕುನವಾಗಿದೆ. ಹಿಂದೂ ಧರ್ಮದಲ್ಲಿ ಬಿಳಿ ನವಿಲು ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಶನಿದೇವನು ನವಿಲಿನ ಮೇಲೆ ಕುಳಿತಿರುವುದನ್ನು ನೋಡಿದರೆ ಸಮೃದ್ಧಿ ಹೆಚ್ಚುತ್ತದೆ. ಅದೇ ರೀತಿ, ನಿಮ್ಮ ಕನಸಿನಲ್ಲಿ ಬಿಳಿ ನವಿಲನ್ನು ನೀವು ನೋಡಿದರೆ ಸಧ್ಯದಲ್ಲೇ ನೀವು ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಲಿದ್ದೀರಿ ಎಂದರ್ಥ. ನಿಮ್ಮ ಪರಿಶ್ರಮ(hard work)ಕ್ಕೆ ಅತ್ಯುತ್ತಮ ಫಲಿತಾಂಶ ಕಾದಿದೆ ಎಂದರ್ಥ. 

ಬಿಳಿ ಸಿಂಹ(White Lion)
ಕನಸಲ್ಲಿ ಬಿಳಿ ಸಿಂಹ ಕಾಣಿಸಿಕೊಂಡರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯಿತೆಂದೇ ತಿಳಿಯಿರಿ. ಹೀಗೆ ಕಾಣಿಸಿಕೊಂಡರೆ ನಿಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಲಿದ್ದೀರಿ ಎಂದರ್ಥ. ಅದೂ ಅಲ್ಲದೆ, ಮನೆಯಲ್ಲಿ ಹದಗೆಟ್ಟಿರುವ ಸಂಬಂಧಗಳು ಸರಿಯಾಗಿ ಸಂತೋಷ ನೆಲೆಸುವ ಸೂಚನೆಯೂ ಇದಾಗಿದೆ. ಬಿಳಿ ಸಿಂಹ ಕಾಣಿಸಿಕೊಂಡರೆ ಅಂಥವರ ಆತ್ಮವಿಶ್ವಾಸ ಭರ್ಜರಿ ಹೆಚ್ಚಾಗುತ್ತದೆ. 

ಚಪ್ಪಲಿ ಕಳುವಾದ್ರೆ ಖುಷಿ ಪಡಿ, ಕಾರಣ ಇಲ್ನೋಡಿ!

ಬಿಳಿ ಹಾವು(White Snake)
ಕನಸಿನಲ್ಲಿ ಹಾವನ್ನು ನೋಡುವುದೇ ಬಹಳ ಶುಭವಾಗಿದೆ. ಅದರಲ್ಲೂ ಬಿಳಿಯಾದ ಹಾವನ್ನು ನೀವು ನೋಡಿದಿರಾದರೆ, ಶಿವನ ಆಶೀರ್ವಾದ ನಿಮ್ಮ ಮೇಲಿದೆ ಎಂದರ್ಥ. ನೀವು ಕೈ ಇಟ್ಟಿದ್ದೆಲ್ಲ ಚಿನ್ನವಾಗುವ ಸಮಯ ಹತ್ತಿರ ಬಂದಿದೆ ಎಂದು ತಿಳಿಯಿರಿ. ಈ ಬಿಳಿ ಹಾವು ನಿಮ್ಮ ಪಿತೃಗಳ ಆಶೀರ್ವಾದ ಸೂಚಕವೂ ಹೌದು. 

ಬಿಳಿ ಆನೆ(White elephant)
ಜ್ಯೋತಿಷ್ಯದಲ್ಲಿ ಕನಸಿನ ವಿಶ್ಲೇಷಣೆ ಮಾಡಿದ ಪ್ರಕಾರ, ಬಿಳಿ ಆನೆ ನಿಮ್ಮ ಕನಸಿನಲ್ಲಿ ಬಂದರೆ ಬಹಳ ಶುಭ. ದೇವತೆಗಳ ರಾಜನಾದ ಇಂದ್ರನ ವಾಹನ ಬಿಳಿ ಐರಾವತ. ಅಂಥ ಬಿಳಿ ಆನೆ ವ್ಯಕ್ತಿಯ ಕನಸಿನಲ್ಲಿ ಕಂಡರೆ ಆತನಿಗೆ ರಾಜಯೋಗ ಶುರುವಾಗುತ್ತಿದೆ ಎಂದರ್ಥ. ಹೀಗೆ ಬಿಳಿ ಆನೆ ಕಾಣಿಸಿಕೊಂಡರೆ, ತಕ್ಷಣದಲ್ಲೇ ಬದುಕಲ್ಲಾಗುವ ಸಕಾರಾತ್ಮಕ ಬದಲಾವಣೆಗಳು ಗೋಚರವಾಗುತ್ತಾ ಹೋಗುತ್ತವೆ. ಮನೆಯಲ್ಲಿ ಆರ್ಥಿಕ ಸಮೃದ್ಧಿ ಕಾಣಬಹುದು. 

ಬಿಳಿ ಕುದುರೆ(White Horse)
ಕನಸಿನಲ್ಲಿ ಬಿಳಿ ಕುದುರೆ ಕಂಡು ಬಂದರೆ ರಾಜಪದವಿಯೊಂದು ನಿಮಗಾಗಿ ಕಾಯುತ್ತಿದೆ ಎಂದು ತಿಳಿಯಿರಿ. ಉದ್ಯೋಗಿಗಳಾದರೆ ಇದ್ದಕ್ಕಿದ್ದಂತೆ ದೊಡ್ಡ ಸ್ಥಾನಕ್ಕೆ ಹೋಗುವಿರಿ, ವ್ಯಾಪಾರಿಗಳು ಜೀವನದ ಅತಿ ಲಾಭದ ದಿನಗಳನ್ನು ನೋಡಲಿರುವಿರಿ ಎಂದರ್ಥ. 

ಈ ನಾಲ್ಕು ರಾಶಿಯವರು ಅತ್ಯುತ್ತಮ ಪ್ರೇಮಿಯಾಗಬಲ್ಲರು!

ಬಿಳಿ ಮೊಲ(White Rabbit)
ಕನಸಿನಲ್ಲಿ ಬಿಳಿ ಮೊಲ ಜಿಗಿಯುವುದನ್ನು ನೋಡಿದರೆ, ನಿಮ್ಮ ಅದೃಷ್ಟವೂ ಹಾಗೆಯೇ ಜಿಗಿದಾಡಲಿದೆ. ಬಿಳಿ ಮೊಲ ಕಾಣಿಸಿಕೊಂಡರೆ, ವೃತ್ತಿ ಅಥವಾ ವಿದ್ಯಾಭ್ಯಾಸ ಏನೇ ಇರಲಿ- ಅದರಲ್ಲಿ ಬಹಳ ಮುಂದೆ ಸಣ್ಣ ವಯಸ್ಸಿನಲ್ಲೇ ಸಾಗಲಿರುವಿರಿ ಎಂದರ್ಥ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.