ನಿಮ್ಮ ರಾಶಿಗೆ ಇವರು ಆರೋಗ್ಯ ದೇವತೆ!
ಭಾಗ್ಯದೇವತೆ ಎಂದು ಲಕ್ಷ್ಮಿಯನ್ನು ಕರೆಯುತ್ತಾರೆ. ಹಾಗೇ ಪ್ರತಿಯೊಬ್ಬನನ್ನೂ ಕಾಯುವ ಆರೋಗ್ಯ ದೇವತೆಯೂ ಒಬ್ಬರಿರುತ್ತಾರೆ. ಈ ದೇವತೆಗಳನ್ನು ಪ್ರಸನ್ನೀಕರಿಸುವುದರೊದಿಗೆ ನೀವು ಜೀವನಪೂರ್ತಿ ಆರೋಗ್ಯವಂತರಾಗಿರಬಹುದು. ಯಾವ ರಾಶಿಗೆ ಯಾವ ದೇವರು?
ಮೇಷ, ಮಿಥುನ, ಕನ್ಯಾ
ನಿಮಗೆ ಆರೋಗ್ಯಾದಿಗಳನ್ನು ಅಭಿಷ್ಟವನ್ನು ಸಮೃದ್ಧವಾಗಿ ಕೊಡುವ ದೇವರು ಎಂದರೆ ಕೈಲಾಸವಾಸಿಯಾದ ಈಶ್ವರ. ಇವನೊಂದಿಗೆ ಗಣಪತಿ, ಪಾರ್ವತಿ, ಭೈರವೇಶ್ವರ ಆರಾಧನೆಯನ್ನು ಮಾಡುವುದರಿಂದಲೂ ಪ್ರಯೋಜನವಿದೆ. ಇವನು ಭಕ್ತರಿಗೆ ತನ್ನನ್ನೇ ಅರ್ಪಿಸಿಕೊಳ್ಳುವ ದೇವರು. ಆದ್ದರಿಂಧ ನೀವು ಈತನಿಗೆ ಒಂದು ಲೋಟ ಹಾಲಿನ ಅಭಿಷೇಕ ಮಾಡಿದರೆ, ಒಂದು ಎಲೆ ಬಿಲ್ವಪತ್ರ ಅರ್ಪಿಸಿದರೂ ಸಾಕು ತೃಪ್ತನಾಗುತ್ತಾನೆ. ತಿಂಗಳಿಗೊಮ್ಮೆ ಶಿವಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ತುಂಬಿ ತುಳುಕುವಷ್ಟು ಐಶ್ವರ್ಯವನ್ನು ನೀಡುತ್ತಾನೆ. ಆರೋಗ್ಯ ಕೆಟ್ಟರೆ ನಿಮ್ಮದೇವರು ಚಂದ್ರಮೌಳಿ ಯಾಕೋ ಮುನಿಸಿಕೊಂಡಿದ್ದಾನೆ ಎಂದರ್ಥ. ಆದರೆ ಕಾಯುವ ದೇವರೂ ಅವನೇ ಆದುದರಿಂದ ಮೃತ್ಯುಂಜಯ ಜಪ, ಶಿವಾಷ್ಟಕ, ಶಿವಪಂಚಾಕ್ಷರಿ ಪಠಿಸಿದರೆ ಸಂತೃಪ್ತನಾಗುತ್ತಾನೆ.
ವೃಶ್ಚಿಕ, ಕಟಕ, ವೃಷಭ
ನೀವು ಆದಿಶಕ್ತಿಯನ್ನು ಪೂಜಿಸಬೇಕು. ಈಕೆ ಬಹುತೇಕ ಎಲ್ಲರ ಮನೆಯಲ್ಲಿ ನಾನಾ ರೀತಿಯಲ್ಲಿ ನೆಲೆಸಿರುತ್ತಾಳೆ. ಕೆಲವರಲ್ಲಿ ಅನ್ನಪೂರ್ಣೆಯಾಗಿ, ಕೆಲವು ಮನೆಯಲ್ಲಿ ದುರ್ಗೆಯಾಗಿ, ಕೆಲವು ಕಡೆ ಲಕ್ಷ್ಮೀದೇವಿಯಾಗಿ- ಹೀಗೆ. ಇವು ಎಲ್ಲವೂ ಆದಿ ಪರಾಶಕ್ತಿಯ ಅವತಾರವೇ ಆಗಿವೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಅಮ್ಮನಿಗೆ ಕೋಪ ಬಂದಿದೆ ಎಂದರ್ಥ. ಅಮ್ಮ ಎಷ್ಟೆಂದರೂ ಅಮ್ಮನೇ ಅಲ್ಲವೇ. ಆಕೆ ಶಾಶ್ವತವಾಗಿ ಮುನಿಸಿಕೊಂಡಿರಲು ಸಾಧ್ಯವೇ ಇಲ್ಲ. ಆಕೆಯನ್ನು ಒಲಿಸಿಕೊಳ್ಳಲು ಲಲಿತಾ ಸಸಹ್ರನಾಮ, ಪರಾಶಕ್ತಿ ಸ್ತೋತ್ರ, ಸೌಂದರ್ಯಲಹರಿ, ದೇವ್ಯಪರಾಧ ಕ್ಷಮಾಪಣ ಸ್ತೋತ್ರ ಮುಂತಾದವನ್ನು ಭಕ್ತಿಯಿಂದಿ ಓದಿ ಅರ್ಚನೆ ಮಾಡಬೇಕು. ಇಲ್ಲವಾದರೆ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ಅರ್ಚನೆ ಮಾಡಿಸಿದರೂ ಸಾಕು.
ಶುಕ್ರವಾರದ ವ್ರತ ವಿಧಾನ ಪಾಲಿಸಿ, ಈ ಲಾಭ ಪಡೆಯಿರಿ!
ಮೀನ, ಕುಂಭ
ಮಹಾವಿಷ್ಣುವಿನ ನಾನಾ ರೂಪಗಳಲ್ಲಿ ಯಾವುದನ್ನು ನೀವು ಪೂಜಿಸಿದರೂ ಅರ್ಚಿಸಿದರೂ ಅದರಿಂದ ಲಾಭ, ಆರೋಗ್ಯ, ಶುಭಫಲ ಉಂಟು. ನಿಮ್ಮಲ್ಲಿ ಆಗುವ ಯಾವುದೇ ಆರೋಗ್ಯ- ಕೌಟುಂಬಿಕ ಏರುಪೇರುಗಳಿಗೆ ಕಾರಣ ಈತನೇ. ಕೈಕಾಲುಗಳ ನೋವು, ಸಂದುನೋವು ಉಂಟಾದರೆ ನರಸಿಂಹನ ಕೋಪ ಉಂಟಾಗಿದೆ ಎಂದು ತಿಳಿದು ಆತನನ್ನು ನೆನೆಯಬೇಕು. ಆರೋಗ್ಯದ ಜೊತೆಗೆ ಐಶ್ವರ್ಯವೂ ಬೇಕು ಎಂದರೆ ಶ್ರೀದೇವಿ ಭೂದೇವಿ ಸಹಿತನಾದ ಶ್ರೀಕೃಷ್ಣ ಅಥವಾ ನಾರಸಿಂಹನನ್ನು ಪೂಜಿಸಬೇಕು. ಶ್ರೀರಾಮನನ್ನು ಆಗಾಗ ನೆನೆಯುತ್ತಾ ಇದ್ದರೆ ಮನದಲ್ಲಿರುವ ಕ್ಲೇಶ, ಮಾನಸಿಕ ಸಂಕಷ್ಟಗಳು ದೂರವಾಗುತ್ತವೆ. ಶ್ರೀರಾಮನ ಒಂದು ಫೋಟೋ ಮನೆಯಲ್ಲಿಟ್ಟುಕೊಂಡರೂ ಸಾಕು ಅದು ಮ್ಯಾಜಿಕ್ಕೇ ಉಂಟುಮಾಡುತ್ತದೆ, ತಿಳಿಯಿರಿ.
ಈ ರಾಶಿಗಳಿಗೆ ಜೀವನಪೂರ್ತಿ ಶನಿದೇವರ ಕೃಪೆ ಇರುತ್ತದೆ!
ಸಿಂಹ, ತುಲಾ
ಸುಬ್ರಹ್ಮಣ್ಯ ದೇವರಿಂದ ನಿಮಗೆ ಶುಭಫಲ. ವರ್ಷದಲ್ಲಿ ಒಮ್ಮೆಯಾದರೂ ಕುಕ್ಕೆ ಸುಬ್ರಹ್ಮಣ್ಯ ಅಥವಾ ಘಾಟಿ ಸುಬ್ರಹ್ಮಣ್ಯ ದೇವರಲ್ಲಿಗೆ ಭೇಟಿ ನೀಡಿ ಸಣ್ಣದೊಂದು ಸೇವೆ ಮಾಡಿಸುವುದರಿಂದ ನಿಮಗೆ ಸದಾ ಆರೋಗ್ಯಭಾಗ್ಯ ಪ್ರಾಪ್ತಿಯಾಗುತ್ತದೆ. ಇಲ್ಲೆಲ್ಲ ಹೋಗಲು ಸಾಧ್ಯವಿಲ್ಲವಾದರೆ, ಸನಿಹದಲ್ಲೇ ಇರುವ ಯಾವುದಾದರೂ ಕ್ಷೇತ್ರದಲ್ಲಿ ಇರುವ ನಾಗನಕಲ್ಲಿಗೆ ಪೂಜೆ, ಅರ್ಚನೆ ಮಾಡಿಸಿದರೂ ಸತ್ಫಲವುಂಟಾಗುತ್ತದೆ. ಸುಬ್ರಹ್ಮಣ್ಯ ದೇವರು ಕಷ್ಟ ಕೊಡುವ ದೇವರಲ್ಲ. ಆದರೆ ಆತನನ್ನು ತಂಪಾಗಿ ನೀವು ನೋಡಿಕೊಳ್ಳದೆ ಹೋದಾಗ ಅದರಿಂದಾಗಿ ನಿಮಗೆ ಚರ್ಮದ ಸಮಸ್ಯೆಗಳು, ಚರ್ಮದ ಕಾಯಿಲೆ, ಕಿರಿಕಿರಿ ಉಂಟಾಗಬಹುದು. ಆದರೆ ಸುಬ್ರಹ್ಮಣ್ಯನು ಎಷ್ಟು ಉಗ್ರನೋ, ಸಂಪ್ರೀತನಾದರೆ ಅಷ್ಟೇ ಒಳ್ಳೆಯ ಫಲಗಳನ್ನು ಕೊಡುವ ದೇವನು.
ಧನು, ಮಕರ
ಮಹಾಗಣಪತಿಯನ್ನು ಆರಾಧಿಸುವುದರಿಂದ ನೀವು ಬಯಸುವ ಎಲ್ಲ ಫಲಗಳೂ ಸಿಗುತ್ತವೆ. ನಿಮ್ಮ ಆರೋಗ್ಯವನ್ನು ಚೆನ್ನಾಗಿಡುವುದಕ್ಕೂ ಈತನೇ ಕಾರಕನು. ಪ್ರತಿಯೊಂದು ಕೆಲಸವನ್ನೂ ಈತನನ್ನು ಆರಾಧಿಸುವ ಮುಖೇನವೇ ಆರಂಭಿಸುವ ಒಳ್ಳೆಯ ರೂಢಿ ಮಾಡಿಕೊಳ್ಳಿ. ಇದರ ಸತ್ಫಲ ನಿಮಗೂ ನಿಮ್ಮ ಕುಟುಂಬಕ್ಕೂ ಬೇಗನೇ ತಿಳಿಯುವುದು. ಆಗಾಗ ಗಣೇಶನ ದೇವಾಲಯಕ್ಕೆ ಹೋಗುವುದು, ಒಂದು ತುಳಸಿಯನ್ನೋ ಗರಿಕೆಯನ್ನೋ ಸಮರ್ಪಿಸುವುದರಿಂದ ಆತನು ಸಂತುಷ್ಟನಾಗುತ್ತಾನೆ. ಮನೆಯಲ್ಲಿ ದೇವರ ಕೋಣೆ ಇಲ್ಲವಾದರೆ, ಶೋಕೇಸ್‌ನಲ್ಲಾದರೂ ಒಂದು ಗಣಪತಿಯ ಮೂರ್ತಿಯನ್ನಿಟ್ಟು ದಿನವೂ ಕೈ ಮುಗಿದರೂ ಸಾಕು, ನಿಮಗೆ ಆತನು ಒಲಿಯುವನು.