ಶುಕ್ರವಾರದ ವ್ರತ ವಿಧಾನ ಪಾಲಿಸಿ, ಈ ಲಾಭ ಪಡೆಯಿರಿ!
ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳಿಗೆ ಅದರದ್ದೇ ಆದ ಮಹತ್ವವಿದೆ. ಬಯಸಿದ್ದನ್ನು ಪಡೆಯಲು ಭಗವಂತನ ಮೊರೆ ಹೋಗುತ್ತೇವೆ. ವ್ರತ, ಪೂಜೆ, ಉಪಾಸನೆಗಳನ್ನು ಶ್ರದ್ಧಾ-ಭಕ್ತಿಯಿಂದ ಮಾಡಿದರೆ ಮಾತ್ರ ಮನೋಕಾಮನೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಹಿಂದೂ ಧರ್ಮದಲ್ಲಿ ಪ್ರತಿ ದಿನವೂ ವಿಶೇಷವೇ, ಸೋಮವಾರ ಶಿವನನ್ನು ಆರಾಧಿಸಿದರೆ ಉತ್ತಮ, ಹಾಗೆಯೇ ಶುಕ್ರವಾರ ಲಕ್ಷ್ಮೀಯನ್ನು ಪೂಜಿಸಿದರೆ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನುತ್ತದೆ ಶಾಸ್ತ್ರ. ಹಾಗಾಗಿ ಶುಕ್ರವಾರದ ವ್ರತದ ವಿಧಾನ ಮತ್ತು ಲಾಭದ ಬಗ್ಗೆ ತಿಳಿಯೋಣ.
ಸನಾತನ ಸಂಸ್ಕೃತಿಯಲ್ಲಿ ಹಿಂದೂ ಧರ್ಮದಲ್ಲಿ ಹಲವಾರು ರೀತಿಯ ಹಬ್ಬ ಹರಿದಿನಗಳ ಆಚರಣೆಗಳಿವೆ. ಹಾಗೇಯೆ ಪ್ರತಿ ದಿನಕ್ಕೂ ಒಂದೊಂದು ವಿಶೇಷತೆ ಇರುತ್ತದೆ. ಕೆಲವು ಮಾಸದಲ್ಲಿ ಅದಕ್ಕಿರುವ ವಿಶೇಷತೆ ಅಧಿಕವಾಗುತ್ತದೆ. ಸೋಮವಾರ ಶಿವನನ್ನು ಪೂಜಿಸಬೇಕು, ಗುರುವಾರ ಗುರುರಾಯರನ್ನು ಆರಾಧಿಸಬೇಕು, ಆದಿತ್ಯವಾರ ಸೂರ್ಯನಿಗೆ ಜಲ ಅರ್ಪಿಸಬೇಕು, ಶುಕ್ರವಾರ ಲಕ್ಷ್ಮೀಯನ್ನು ಪ್ರಾರ್ಥಿಸಿ ವ್ರತಾನುಷ್ಟಾನ ಮಾಡಬೇಕು ಹೀಗೆ ಪ್ರತಿ ಕ್ಷಣವನ್ನೂ ಭಗವಂತನ ಆರಾಧನೆಗೆ ಮೀಸಲಾಗಿಟ್ಟಿದ್ದಾರೆ.
ಆಷಾಢ, ಶ್ರಾವಣ, ಕಾರ್ತಿಕ ಹೀಗೆ ಎಲ್ಲ ಮಾಸಗಳಿಗೂ ಅದರದ್ದೇ ಆದ ವಿಶೇಷತೆ ಇದೆ. ಹಾಗೆಯೇ ಆಯಾ ಮಾಸದಲ್ಲಿ ಬರುವ ಹಬ್ಬ ಹರಿದಿನಗಳಂತೆಯೇ, ಕೆಲವು ವಾರಗಳಲ್ಲಿ ಮಾಡುವ ವ್ರತ, ಉಪಾಸನೆಯಿಂದ ಶೀಘ್ರ ಫಲಪ್ರಾಪ್ತಿ ಸಾಧ್ಯವಿದೆ ಎನ್ನುತ್ತದೆ ಶಾಸ್ತ್ರ. ಸೋಮವಾರ ಶಿವನನ್ನು ಆರಾಧಿಸಿ ವ್ರತ ಕೈಗೊಂಡರೆ ಒಳಿತಾಗುತ್ತದೆ, ಹಾಗೆಯೇ ಶುಕ್ರವಾರ ಲಕ್ಷ್ಮೀದೇವಿಯ ವ್ರತವನ್ನು ಮಾಡಿದರೆ ಶ್ರೇಷ್ಠವೆಂದು ಪುರಾಣಗಳಲ್ಲಿ ಹೇಳಲಾಗಿದೆ. ಶುಕ್ರವಾರದ ವೈಭವಲಕ್ಷ್ಮೀ ವ್ರತ ಉತ್ತಮವೆಂದು, ನಿಯಮಬದ್ಧವಾಗಿ ವ್ರತಾಚರಣೆ ಮಾಡಿದಲ್ಲಿ ಬಯಸಿದ ಫಲ ಸಿಗುವುದು ಸಿದ್ಧವೆಂದು ಹೇಳುವುದಕ್ಕೆ ಪುರಾಣದ ವೈಭವಲಕ್ಷ್ಮೀ ವ್ರತ ಕಥೆ ಸಾಕ್ಷಿಯಾಗಿದೆ.
ಇದನ್ನು ಓದಿ: ಭಾಗ್ಯಶಾಲಿ ಹುಡುಗಿಯರಲ್ಲಿ ಇರುತ್ತೆ ಈ ಚಿಹ್ನೆಗಳು!
ಶುಕ್ರ ಗ್ರಹವನ್ನು ಬಲವಾಗಿಸುತ್ತದೆ
ಶುಕ್ರವಾರ ಶುಕ್ರಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಲಕ್ಷ್ಮೀದೇವಿಯನ್ನು ಪ್ರಸನ್ನಗೊಳಿಸುವುದರ ಜೊತೆಗೆ ಜಾತಕದಲ್ಲಿ ಶುಕ್ರ ಗ್ರಹವನ್ನು ಬಲಗೊಳಿಸಲು, ಅಶುಭ ಪ್ರಭಾವವಿದ್ದಲ್ಲಿ ಅದನ್ನು ತಗ್ಗಿಸಲು ಪೂಜೆ, ವ್ರತಾಧಿಗಳನ್ನು ಮಾಡಲಾಗುತ್ತದೆ.
ಸಂಪತ್ತು ಮತ್ತು ಸಮೃದ್ಧಿಗೆ ಲಕ್ಷ್ಮೀ ಉಪಾಸನೆ
ಸಂಪತ್ತಿಗೆ ಅಧಿದೇವತೆಯಾದ ಲಕ್ಷ್ಮೀಯ ಉಪಾಸನೆ ಶ್ರೇಷ್ಠವಾದ ದಿನ ಶುಕ್ರವಾರ. ಅಂದು ಲಕ್ಷ್ಮೀದೇವಿಯು ಪ್ರಸನ್ನಗೊಳ್ಳಲೆಂದು ವ್ರತವನ್ನೂ ಆಚರಿಸುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶುಕ್ರವಾರದಂದು ವ್ರತವನ್ನು ಆಚರಿಸುವವರಿಗೆ ಲಕ್ಷ್ಮೀ ಕೃಪೆಯಿಂದಾಗಿ ಸುಖ-ಸೌಭಾಗ್ಯಗಳನ್ನು ಹೊಂದುತ್ತಾರೆ. ಹಾಗೆಯೇ ಮುಖ್ಯವಾಗಿ ಈ ವ್ರತವನ್ನು ನಿಯಮಬದ್ಧವಾಗಿ ಪಾಲಿಸಿದಲ್ಲಿ ಮಾತ್ರ ಫಲಪ್ರಾಪ್ತಿಯಾಗುವುದಾಗಿ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿ: ಕನಸಿನಲ್ಲಿ ಹಣ್ಣುಗಳ ಕಂಡರೆ ನಿಮಗೆಂಥ ಅದೃಷ್ಟ ಗೊತ್ತಾ..!?
ಫಲಪ್ರಾಪ್ತಿಗೆ ವ್ರತದ ವಿಧಾನ
ಮುಖ್ಯವಾಗಿ ಈ ವ್ರತವನ್ನು ಆರಂಭಿಸುವ ಮೊದಲು ಹಿರಿಯರಿಂದ ಅಥವಾ ಪುರೋಹಿತರಿಂದ ಪೂಜಾ ವಿಧಿ-ವಿಧಾನವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಮತ್ತು ಸಂಕಲ್ಪವನ್ನು ಮಾಡಿಸಬೇಕು. ವ್ರತದ ನಿಯಮವನ್ನು ಸರಿಯಾಗಿ ಅರ್ಥೈಸಿಕೊಂಡ ನಂತರವಷ್ಟೇ ಈ ವ್ರತವನ್ನು ಆರಂಭಿಸಬೇಕು. ಶ್ರದ್ಧೆಯಿಂದ ಶಾಸ್ತ್ರೋಕ್ತವಾಗಿ ವ್ರತವನ್ನು ಪಾಲಿಸಿದರೆ ಮಾತ್ರ ಬಯಸಿದ ಫಲದೊರಕುವುದಾಗಿ ಶಾಸ್ತ್ರ ಹೇಳುತ್ತದೆ.
ಹಾಗಾದರೆ ನೀವು ಏನು ಮಾಡಬೇಕು..?
-ಸೂರ್ಯೋದಯಕ್ಕೂ ಮೊದಲು ಎದ್ದು, ಸ್ನಾನಾದಿಗಳನ್ನು ಮುಗಿಸಿ, ಶುಚಿಯಾದ ವಸ್ತ್ರವನ್ನು ಧರಿಸಿ ಲಕ್ಷ್ಮೀದೇವಿಯ ಧ್ಯಾನ ಮಾಡಬೇಕು.
- ವ್ರತ ಮಾಡುವವರು ಶುಚಿಯಾದ ಆಸನದ ಮೇಲೆ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು.
- ಪೀಠದ ಶುಭ್ರವಾದ ಕೆಂಪು ವಸ್ತ್ರವನ್ನು ಹಾಸಿ ಅದರ ಮೇಲೆ ಲಕ್ಷ್ಮೀಯನ್ನು ಕೂರಿಸಬೇಕು. ಅದರ ಮುಂದೆ ಅಕ್ಕಿಯನ್ನಿಟ್ಟು ಮೇಲೆ ನೀರಿನಿಂದ ತುಂಬಿದ ಕಲಶವನ್ನು ಸ್ಥಾಪಿಸಬೇಕು.
-ಲಕ್ಷ್ಮೀ ಮಂತ್ರವನ್ನು ಜಪಿಸಿ ಪೂಜಾ ವಿಧಿ-ವಿಧಾನಗಳು ಮುಗಿಯುವ ಹಂತದಲ್ಲಿ ಶುಕ್ರವಾರದ ವ್ರತ ಕಥೆಯನ್ನು ಹೇಳಬೇಕು, ನಂತರ ಮಂಗಳಾರತಿ ಮಾಡಬೇಕು.
- ನಂತರ ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆದು, ಎಲ್ಲರಿಗೂ ಪ್ರಸಾದವನ್ನು ಹಂಚಿದ ನಂತರ ಭೋಜನವನ್ನು ಮಾಡಬೇಕು.
ಇದನ್ನು ಓದಿ: ಈ ರಾಶಿಗಳಿಗೆ ಜೀವನಪೂರ್ತಿ ಶನಿದೇವರ ಕೃಪೆ ಇರುತ್ತದೆ!
ವ್ರತ ಮಾಡುವುದರಿಂದಾಗುವ ಲಾಭಗಳು
ಅವಿವಾಹಿತೆಯರು ಈ ವ್ರತವನ್ನು ಪೂರ್ಣ ಶ್ರದ್ಧೆಯಿಂದ ಮಾಡಿದಲ್ಲಿ ಯೋಗ್ಯನಾದ ವರ ದೊರಕುತ್ತಾನೆ. ವಿವಾಹಿತ ಮಹಿಳೆಯರು ಭಕ್ತಿಯಿಂದ ವ್ರತದಲ್ಲಿ ತೊಡಗಿಕೊಂಡರೆ ಮನೆಯಲ್ಲಿ ಸುಖ-ಸಮೃದ್ಧಿ ವೃದ್ಧಿಯಾಗುತ್ತದೆ. ಈ ವ್ರತದ ಶುಭ ಪ್ರಭಾವದಿಂದ ಆರ್ಥಿಕ ಸಂಕಷ್ಟಗಳು ನಿವಾರಣೆಯಾಗಿ ಧನಲಾಭವಾಗುತ್ತದೆ. ಬಯಸಿದ ಕ್ಷೇತ್ರದಲ್ಲಿ, ಕಾರ್ಯದಲ್ಲಿ ವಿಜಯ ಪ್ರಾಪ್ತಿಯಾಗುತ್ತದೆ. ನ್ಯಾಯ ವಿವಾದಗಳಲ್ಲಿ ಸಿಲುಕಿಕೊಂಡಿದ್ದಲ್ಲಿ ಜಯ ದೊರಕುತ್ತದೆ.
ಈ ವ್ರತದಿಂದ ಸಂತಾನಫಲ ಪ್ರಾಪ್ತಿ
ಸಂತಾನ ಸುಖವನ್ನು ಬಯಸುವ ಮಹಿಳೆಯರು ಈ ವ್ರತವನ್ನು ಶ್ರದ್ಧೆಯಿಂದ ಪೂರೈಸಿದಲ್ಲಿ ಲಕ್ಷ್ಮೀದೇವಿಯ ಕೃಪೆಯಿಂದ ಸಂತಾನ ಪ್ರಾಪ್ತಿಯಾಗುವುದಾಗಿ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.