Vaikunta Ekadashi: ವೈಕುಂಠ ಏಕಾದಶಿಯ ದಿನ ಗರಿಷ್ಠ ಪುಣ್ಯ ಗಳಿಸಲು ಹೀಗೆ ಮಾಡಿ!
ಪುಣ್ಯದಿನವಾದ ವೈಕುಂಠ ಏಕಾದಶಿಯಂದು ಮಹಾವಿಷ್ಣುವಿನ ಆರಾಧನೆಗೆ ಮಹತ್ವ. ಅದರ ಜೊತೆಗೆ ಇನ್ನೂ ಕೆಲವು ಉತ್ತಮ ಕೆಲಸಗಳನ್ನು ಮಾಡಬೇಕು. ಆಗ ಗರಿಷ್ಠ ಪುಣ್ಯ ನಿಮ್ಮದಾಗುತ್ತದೆ. ಅವು ಈ ಕೆಳಗಿನಂತಿವೆ.
ಭಾರತೀಯ ಹಬ್ಬಗಳು ದೇವರ ಆರಾಧನೆಯ ಜೊತೆಗೆ ಪುಣ್ಯಕಾರ್ಯ, ದಾನಧರ್ಮ, ಆಹಾರ- ಆರೋಗ್ಯದಲ್ಲಿ ನೈರ್ಮಲ್ಯ, ಬಂಧುಗಳ ಭೇಟಿ ಇತ್ಯಾದಿಗಳಿಗೂ ಒದಗಿಬರುತ್ತವೆ. ವೈಕುಂಠ ಏಕಾದಶಿ ಅಂಥ ಒಂದು ಹಬ್ಬ. ವಿಷ್ಣುವಿನ ಆರಾಧನೆ ಹಾಗೂ ಉಪವಾಸಕ್ಕೆ ಪ್ರಸಿದ್ಧಿಯಾಗಿರುವ ವೈಕುಂಠ ಏಕಾದಶಿಯು ಹೊಸ ವರ್ಷದ ಆರಂಭದಲ್ಲೇ ಬರುತ್ತದೆ. ಈ ದಿನ ವಿಷ್ಣುವನ್ನು ಬಹಳ ಶ್ರದ್ಧೆ ಹಾಗೂ ಭಕ್ತಿಯಿಂದ ನೆರವೇರಿಸಿದರೆ, ಮನಸ್ಸಿನ ಇಷ್ಟಾರ್ಥಗಳೆಲ್ಲವೂ ಈಡೇರುತ್ತದೆ ಎಂಬ ನಂಬಿಕೆಯಿದೆ. ಇಂದು ವಿಷ್ಣುವಿನ ಕೃಪೆಗೆ ಪಾತ್ರರಾಗಲು ಹಾಗೂ ಗರಿಷ್ಠ ಪುಣ್ಯಸಂಚಯ ಮಾಡಲು ಮಾಡಲೇಬೇಕಾದ ಕೆಲಸಗಳು ಯಾವುವು ಎಂಬುದನ್ನು ನೋಡೋಣ.
ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ: ನಿಮ್ಮ ನೆರೆಹೊರೆಯಲ್ಲಿರುವ ವಿಷ್ಣುವಿನ ಅಥವಾ ಅವನ ಯಾವುದೇ ಅವತಾರಗಳ ದೇವಾಲಯಕ್ಕೆ ಭೇಟಿ ನೀಡಿ, ವೈಕುಂಠ ಏಕಾದಶಿ ಆಚರಣೆಗಳಲ್ಲಿ ಭಾಗವಹಿಸಿ. ಹೆಚ್ಚಿನ ವಿಷ್ಣು ದೇವಾಲಯಗಳಲ್ಲಿ ವೈಕುಂಠ ದ್ವಾರ ಎಂಬ ವಿಶೇಷ ಪ್ರವೇಶವನ್ನು ಈ ದಿನದಂದು ನಿರ್ಮಿಸಲಾಗುತ್ತದೆ. ಈ ಮಂಗಳಕರ ದಿನದಂದು ಈ ದ್ವಾರವನ್ನು ಹಾದು ಹೋಗುವವರು ವೈಕುಂಠವನ್ನು ತಲುಪುತ್ತಾರೆ ಎಂದು ಹೇಳಲಾಗುತ್ತದೆ. ಒಂದು ವೇಳೆ, ನೀವು ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ನಿಮ್ಮ ಮನೆಯಲ್ಲಿ ವಿಷ್ಣು, ಶ್ರೀಕೃಷ್ಣ ಅಥವಾ ಅವರ ಯಾವುದೇ ಅವತಾರಗಳ ದೇವರುಗಳಿದ್ದರೆ, ಅವುಗಳನ್ನು ಸಹ ಅಲಂಕರಿಸಿ, ವಿಶೇಷ ಪೂಜೆಯನ್ನು ಮಾಡಬಹುದು.
ವಿಷ್ಣು ಸಹಸ್ರನಾಮ ಪಠಿಸಿ: ವೈಕುಂಠ ಏಕಾದಶಿಯ ದಿನದಂದು ದೇವಸ್ಥಾನಕ್ಕೆ ತೆರಳಿ ಅಥವಾ ಮನೆಯಲ್ಲಿಯೇ ವಿಷ್ಣು ಸಹಸ್ರನಾಮ ಪಠಿಸಿ. ಜೊತೆಗೆ ಹರೇ ಕೃಷ್ಣ ಮಹಾಮಂತ್ರವನ್ನು ಪಠಿಸಬಹುದು. ಇವುಗಳನ್ನು ಪಠಿಸುವುದರಿಂದ ನಮ್ಮ ಹೃದಯ ಶುದ್ಧೀಕರವಾಗಿ, ನಮ್ಮ ಜೀವನದಲ್ಲಿನ ಎಲ್ಲಾ ದುಃಖಗಳು ನಿವಾರಣೆಯಾಗುತ್ತದೆ.
ಭಗವದ್ಗೀತೆಯನ್ನು ಓದಿ: ಗೀತಾ ಜಯಂತಿಯು ಸಾಮಾನ್ಯವಾಗಿ ವೈಕುಂಠ ಏಕಾದಶಿಯ ಮಾಸದಲ್ಲಿ ಬರುತ್ತದೆ. ಶ್ರೀಕೃಷ್ಣನು ಅರ್ಜುನನಿಗೆ ಆಧ್ಯಾತ್ಮಿಕ ಜ್ಞಾನದ ಸಾರವನ್ನು ಬೋಧಿಸಿದ ದಿನವೇ ಗೀತಾ ಜಯಂತಿ. ಆದ್ದರಿಂದ, ಭಗವದ್ಗೀತೆಯನ್ನು ಓದುವುದು ಈ ದಿನದಂದು ಹೆಚ್ಚು ಶಿಫಾರಸು ಮಾಡಲಾದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಒಂದಾಗಿದೆ. ಭಗವದ್ಘೀತೆಯ ಶ್ಲೋಕಗಳನ್ನು ಪಠಿಸಲು ಮತ್ತು ಅವುಗಳ ಅರ್ಥವನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ಕಳೆಯಿರಿ.
ಉಪವಾಸ ಮಾಡಿ: ಇದು ಏಕಾದಶಿ ದಿನವಾಗಿರುವುದರಿಂದ ಉಪವಾಸವನ್ನು ಆಚರಿಸಲು ಪ್ರಯತ್ನಿಸಿ. ಉಪವಾಸವು ನಮ್ಮ ದೇಹ ಮತ್ತು ಮನಸ್ಸಿಗೆ ಮಾತ್ರ ಪ್ರಯೋಜನಕಾರಿಯಲ್ಲ, ಇದು ಬಹಳಷ್ಟು ಆಧ್ಯಾತ್ಮಿಕ ಪ್ರಯೋಜನಗಳನ್ನು ಹೊಂದಿದೆ. ಉಪವಾಸವನ್ನು ಆಚರಿಸಲು ವಿವಿಧ ಹಂತಗಳಿದ್ದು, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಆಯ್ಕೆ ಮಾಡಬಹುದು. ಯಾವುದೇ ಆಹಾರ ಸೇವಿಸದೇ,ಉಪವಾಸವಿದ್ದು, ಮರುದಿನ ದ್ವಾದಶಿಯಂದು ತುಳಸಿ ನೀರನ್ನು ಸೇವಿಸುವ ಮೂಲಕ ಉಪವಾಸವನ್ನು ಕೈಬಿಡಬೇಕು. ಉಪವಾಸ ತ್ಯಜಿಸಿದ ನಂತರ ಉದ್ದಿನ ಬೇಳೆ, ಅಗಸೆ ಸೊಪ್ಪು, ನೆಲ್ಲಿಕಾಯಿ, ಮೊಸರು ಬೆರೆಸಿ ಮಾಡಿದಂತಹ ರಾಯತವನ್ನು ಸೇವಿಸಬೇಕು. ಕೆಲವರು ಏಕಾದಶಿಯಂದು ಮೌನವ್ರತವನ್ನೂ ಆಚರಿಸುತ್ತಾರೆ.
ದಾನ ಮತ್ತು ಸೇವೆ ಮಾಡಿ: ಈ ಮಂಗಳಕರ ದಿನದಂದು ದೇವಸ್ಥಾನಕ್ಕೆ ಹೋಗಿ, ಈ ಕೆಳಗಿನ ಸೇವೆಗಳನ್ನು ಸಲ್ಲಿಸಬಹುದು. ಇದರಿಂದ ಗೋವಿಂದನ ಆಶೀರ್ವಾದವನ್ನು ಪಡೆಯಬಹುದು. ಪ್ರಸಾದವನ್ನು ವಿತರಿಸುವುದು, ಪುಸ್ತಕಗಳನ್ನು ವಿತರಿಸುವುದು, ಸಂದರ್ಶಕರಿಗೆ ಮಾರ್ಗದರ್ಶನ ನೀಡುವುದು ಮುಂತಾದ ವಿವಿಧ ಸೇವೆಗಳಿಗೆ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು. ಜೊತೆಗೆ ನಿರ್ಗತಿಕರಿಗೆ, ಬಡವರಿಗೆ ದಾನವನ್ನೂ ನೀಡಬಹುದು.
ಹಳದಿ ಬಣ್ಣದ ಬಟ್ಟೆ ಧರಿಸಿ: ವೈಕುಂಠ ಏಕಾದಶಿಯಂದು ಮುಂಜಾನೆ ಸ್ನಾನದ ಬಳಿಕ ಹಳದಿ ಬಣ್ಣದ ಬಟ್ಟೆಯನ್ನು ಧರಿಸಬೇಕೆಂದು ಹೇಳಲಾಗುತ್ತದೆ. ಏಕೆಂದರೆ ವಿಷ್ಣುವಿನ ನೆಚ್ಚಿನ ಬಣ್ಣ ಹಳದಿ. ಹೀಗಾಗಿ ಹಳದಿ ಬಟ್ಟೆ ತೊಟ್ಟು ಹಳದಿ ಹೂವುಗಳು, ಹಣ್ಣುಗಳನ್ನು ಅರ್ಪಿಸಬೇಕು. ಜೊತೆಗೆ ಈ ದಿನ ಭಗವಾನ್ ವಿಷ್ಣುವಿಗೆ ಪಂಚಾಮೃತದಿಂದ ಅಭಿಷೇಕ ಮಾಡಿ ತುಳಸಿ ಎಲೆಗಳನ್ನು ಅರ್ಪಿಸಬೇಕು. ಶಾಸ್ತ್ರಗಳ ಪ್ರಕಾರ ಏಕಾದಶಿಯಂದು ವಿಷ್ಣು ಮಂತ್ರಗಳನ್ನು ಪಠಿಸುವುದು ಮಂಗಳಕರ. ಇದರಿಂದ ಶ್ರೀಹರಿಯ ಕೃಪೆಗೆ ಪಾತ್ರರಾಗಿ ಭಕ್ತರ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುವ ನಂಬಿಕೆಯಿದೆ.
ವೈಕುಂಠ ಏಕಾದಶಿ ದಿನ ಈ 5 ರಾಶಿಗಳಿಗೆ ಸೂಪರ್ ಲಕ್!
ಅರಳಿ ಮರ ಪೂಜೆ: ವೈಕುಂಠ ಏಕಾದಶಿಯಂದು ಅರಳಿ ಮರದ ಬೇರಿಗೆ ನೀರನ್ನು ಅರ್ಪಿಸಿಬೇಕು. ಈ ರೀತಿ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಏಕೆಂದರೆ ಶ್ರೀಹರಿಯು ಅರಳಿ ಮರದ ಮೂಲದಲ್ಲಿ ನೆಲೆಸಿದ್ದಾನೆ ಎನ್ನುವ ನಂಬಿಕೆ ಇದೆ. ಜೊತೆಗೆ ಈ ದಿನ ಭಗವಾನ್ ವಿಷ್ಣುವಿನ ಜೊತೆಗೆ ಲಕ್ಷ್ಮೀ ದೇವಿಯನ್ನೂ ಸಹ ಪೂಜಿಸಬಹುದು. ಹೀಗೆ ಮಾಡುವುದರಿಂದ ಇಬ್ಬರ ಕೃಪೆಗೂ ಪಾತ್ರರಾಗುತ್ತಿರಿ.
ವೈಕುಂಠ ಏಕಾದಶಿಯಂದು ಉಪವಾಸವಿದ್ದರೆ, ಯಾವುದೇ ಆಹಾರವನ್ನೂ ಸೇವಿಸಬಾರದು. ಧೂಮಪಾನ, ಮದ್ಯಪಾನ ಮಾಡುವಂತಿಲ್ಲ. ಮನಸ್ಸಲ್ಲಿ ಕೆಟ್ಟ ಯೋಚನೆ ಮಾಡಬಾರದು. ಮಾಂಸಾಹಾರಗಳಿಂದ ದೂರವಿರಿ.
ವೈಕುಂಠ ಏಕಾದಶಿಯಂದು ಅನ್ನ ತಿನ್ನಬಾರದೇಕೆ?