ದೀಪಾವಳಿ ಹಿಂದೂಗಳಿಗೆ ದೊಡ್ಡ ಹಬ್ಬ. ಇಂದೇ ಒಂದು ರೀತಿಯಲ್ಲಿ ಹೊಸ ವರ್ಷದ ಆರಂಭ ಕೂಡ. ಇಂದೇ ನೂತನ ವರ್ಷದ ಭವಿಷ್ಯ ತಿಳಿಯುವುದು ವಾಡಿಕೆ. ದೀಪಾವಳಿಯ ಶುಭ ದಿನದಂದು ಕೆಲವು ಸಂಕಲ್ಪಗಳನ್ನು ಮಾಡಿಕೊಂಡರೆ ಮುಂದಿನ ವರ್ಷವಿಡೀ ಸುಖದಿಂದ ಉಲ್ಲಾಸದಿಂದ ನೀವು ಇರಬಹುದು.

ಮೇಷ ರಾಶಿ: ಆರೋಗ್ಯವನ್ನು ಕಡೆಗಣಿಸುವುದಿಲ್ಲ ಎಂಬ ಸಂಕಲ್ಪವನ್ನು ಮಾಡಿ. ಈ ಹಿಂದೆ ಆರೋಗ್ಯದ ಕಡೆಗೆ ಗಮನ ಕೊಡದೆ ನಾನಾ ಸಮಸ್ಯೆಗಳಿಗೆ ತುತ್ತಾಗಿದ್ದೀರಿ. ಮುಂದೆ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳನ್ನು ಚೆನ್ನಾಗಿ ಕಾಪಾಡಿಕೊಳ್ಳಿ. ಅಪರಾತ್ರಿಯಲ್ಲಿ ಊಟ, ಹಸಿವಾದಾಗ ಊಟ ಮಾಡದಿರುವುದು, ದೇಹಕ್ಕೆ ಒಗ್ಗದ ಆಹಾರ ಬೇಡ.

ವೃಷಭ ರಾಶಿ: ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಏನೇ ಸಂಕಷ್ಟ, ಆರೋಗ್ಯ ಸಮಸ್ಯೆ ಎದುರಾದರೂ ನಿಮ್ಮ ಜೊತೆಯಲ್ಲಿ ನಿಲ್ಲುವವರು ಬೇರ್ಯಾರೋ ಅಲ್ಲ, ನಿಮ್ಮ ಮನೆಯವರೇ. ಹೊಸ ಬಟ್ಟೆ ಸಿಹಿತಿಂಡಿ ಉಡುಗೊರೆಗಳಿಂದ ಅವರನ್ನು ಖುಷಿ ಖುಷಿಯಾಗಿಡಿ.

ಮಿಥುನ ರಾಶಿ: ಕಟುವಾದ ಮಾತುಗಳನ್ನು ಆಡಬೇಡಿ. ನೀವು ಕೆಲವೊಮ್ಮೆ ಎದುರಿಗೆ ಯಾರಿದ್ದಾರೆ ಯಾರಿಲ್ಲ ಎಂಬುದನ್ನೂ ಪರಗಣಿಸಿದೆ ಕಟುವಾಗಿ ಮಾತಾಡಿಬಿಡುತ್ತೀರಿ. ಇದು ನಿಮಗೆ ನಿಮ್ಮ ಮನಸ್ಸಿನ ಒತ್ತಡವನ್ನು ಹೊರಹಾಕಲು ಸಹಾಯ ಮಾಡುತ್ತದಾದರೂ ಅದರಿಂದ ಮುಂದೆ ಕೆಡುಕೇ ಆಗುತ್ತದೆ.

ಕಟಕ ರಾಶಿ: ಚಂದ್ರ ನಿಮ್ಮ ರಾಶಿಯ ಅಧಿಪತಿ. ಸದಾ ಕೂಲ್‌ ಕೂಲ್‌ ಆಗಿಯೇ ಇರುತ್ತೀರಿ. ಹಾಗೇ ಇರಿ. ನಿಮ್ಮ ಸ್ವಭಾವ ಅಲ್ಲದ ದರ್ಪ ತೋರಿಸಲು ಹೋಗಬೇಡಿ. ತಾಳ್ಮೆ ಸಹನೆ ಹಾಗೂ ಸಿಹಿಮಾತುಗಳು ನಿಮ್ಮ ಆಸ್ತಿ. ಅದನ್ನು ಕಳೆದುಕೊಳ್ಳಬೇಡಿ. ಕಚೇರಿಯಲ್ಲೂ ಅವುಗಳ ಮೂಲಕವೇ ಕೆಲಸ ಮಾಡಿಸಿಕೊಳ್ಳಿ.

ಸಿಂಹ ರಾಶಿ: ನಿಮ್ಮ ರಾಶಿಯ ಅಧಿಪತಿ ಸೂರ್ಯ. ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ ಎಂಬ ಸಂಕಲ್ಪ ಮಾಡಿ. ಒಂದು ಗುರಿಯನ್ನು ಹಿಡಿದು ಹೊರಟವನಿಗೆ ದಾರಿಯಲ್ಲಿ ಹತ್ತು ಹಲವು ಟೀಕೆಗಳು ಎದುರಾಗುವುದು ಸ್ವಾಭಾವಿಕ. ಅವುಗಳಿಂದ ಧನಾತ್ಮಕ ಅಂಶಗಳನ್ನು ಪಡೆದುಕೊಳ್ಳುತ್ತೇನೆ ಎಂದು ಗಟ್ಟಿ ಮಾಡಿಕೊಳ್ಳಿ.

ಕನ್ಯಾ ರಾಶಿ: ಬುಧ ನಿಮ್ಮ ಅಧಿಪತಿ. ನೀವು ಲೆಕ್ಕಾಚಾರದ ವ್ಯಕ್ತಿ. ಎಲ್ಲವನ್ನೂ ಅಳೆದು ತೂಗಿ ನೋಡುವ ನಿಮ್ಮ ಸ್ವಭಾವ ಒಳ್ಳೆಯದೇ. ಆದರೆ ಈ ವರ್ಷ ಕೆಲವು ಕಡೆ ಕೈಬಿಟ್ಚಿ ಕೊಡುತ್ತೇನೆ ಎಂದು ಸಂಕಲ್ಪ ಮಾಡಿ. ಉದಾಹರಣೆಗೆ ನಿಮ್ಮ ಮಕ್ಕಳಿಗೆ, ಹೆಂಡತಿಗೆ, ಗಂಡನಿಗೆ ಮತ್ತು ಗುಣವಂತ ಸಹೋದ್ಯೋಗಿಗಳಿಗೆ ಕೊಟ್ಟದ್ದು ಎಂದೂ ವ್ಯರ್ಥ ಆಗುವುದಿಲ್ಲ.

ತುಲಾ ರಾಶಿ: ನೀವು ಸಂಕೋಚವನ್ನು ಬಿಟ್ಟು ಮಾತನಾಡುವುದನ್ನು ರೂಢಿಸಿಕೊಳ್ಳುತ್ತೇನೆ ಎಂಬ ಸಂಕಲ್ಪ ಮಾಡುವುದು ಉತ್ತಮ. ನಿಮ್ಮ ಮನದ ಆಸೆಯನ್ನು ಸರಿಯಾಗಿ ಹೇಳದೆ ಇರುವುದರಿಂದಾಗಿಯೇ ಹಲವು ಉತ್ತಮ ಅವಕಾಶಗಳನ್ನು ಕಳೆದುಕೊಂಡಿದ್ದೀರಿ. ಈ ಬಾರಿ ನೇರವಾಗಿ ಮಾತನಾಡಿ, ಚೆನ್ನಾಗಿ ಮಾತನಾಡಿ.

ಗೋವಿನಲ್ಲೇಕೆ ಮೂವತ್ತಮೂರು ಕೋಟಿ ದೇವತೆಗಳು? ...

ವೃಶ್ಚಿಕ ರಾಶಿ: ನಂಬಿಕೆ ನಿಮ್ಮ ಗೆಳಯನೂ ಹೌದು, ಶತ್ರುವೂ ಹೌದು. ಅನೇಕ ಸಲ ನಂಬಿ ಮೋಸ ಹೋಗಿದ್ದೀರಿ. ಈ ವರ್ಷವಾದರೂ ದುಷ್ಟರನ್ನು ನಂಬಿ ಮೋಸ ಹೋಗುವುದಿಲ್ಲ ಎಂಬ ಸಂಕಲ್ಪ ಮಾಡಿ. ಚೆನ್ನಾಗಿ ಮಾತನಾಡುವವರೆಲ್ಲರೂ ಒಳ್ಳೆಯವರಲ್ಲ. ಒಳ್ಳೆಯತನ ಅಳೆಯಲು ನಿಮ್ಮದೇ ಮಾನದಂಡ ರೂಪಿಸಿಕೊಳ್ಳಿ.

ಧನು ರಾಶಿ: ಸಾಹಸಗಳನ್ನು ಬೆನ್ನಟ್ಟಿ ಹೋಗುವ ಗುಣ ರೂಪಿಸಿಕೊಳ್ಳಿ. ಇದ್ದಲ್ಲೇ ಇದ್ದು ಜಡ್ಡು ಕಟ್ಟಿದ್ದೀರಿ. ಇನ್ನಾದರೂ ಹೊಸ ಸಾಹಸಗಳನ್ನು ಮಾಡುತ್ತೇನೆ, ಹೊಸ ದಿಕ್ಕುಗಳತ್ತ ಪ್ರಯಾಣ ಹೋಗುತ್ತೇನೆ ಎಂಬ ಸಂಕಲ್ಪ ಮಾಡಿ. ಯಾಕೆಂದರೆ ಹೊಸ ದಿಕ್ಕಿಗೆ ಹೋದಾಗಲೇ ಹೊಸ ಅನುಭವ ಆಗುವುದಲ್ಲವೇ?

ಮಕರ ರಾಶಿ: ಇದುವರೆಗೂ ಯಾವುದೇ ಗೊತ್ತು ಗುರಿ ಇಲ್ಲದೆ ಜೀವನದಲ್ಲಿ ನಡೆದು ಬಂದಿದ್ದೀರಿ. ಈಗಲಾದರೂ ಒಂದು ದಿಟ್ಟವಾದ ಸ್ಪಷ್ಟವಾದ ಗುರಿಯನ್ನು ರೂಪಿಸಿಕೊಳ್ಳಿ. ಗುರಿ ಇಲ್ಲದ ಬದುಕು ಪ್ರಾಣಿಯ ಬದುಕಿಗೆ ಸಮಾನ ಎಂಬುದು ನಿಮಗೆ ನೆನಪಿರಲಿ. ಹೊಸ ಗುರಿ ಸೃಷ್ಟಿಸಿಕೊಳ್ಳಿ.

ಎಲ್ಲರೂ ಪೂಜಿಸುವ ದೇವಿ ಲಕ್ಷ್ಮಿಗೆ ಗೂಬೆಯನ್ನೇಕೆ ವಾಹನ ಮಾಡಿಕೊಂಡಳು? ...

ಕುಂಭ ರಾಶಿ: ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳೂವ ನಿಮ್ಮ ಗುಣಕ್ಕೆ ಈಗಾಗಲೇ ಕೆಲವು ಪೆಟ್ಟು ಬಿದ್ದಿರಬಹುದು. ಇನ್ನು ಮುಂದಾದರೂ ಕೆಲವು ವಿಷಯಗಳನ್ನು ಸೀರಿಯಸ್ಸಾಗಿ ನೋಡುತ್ತೇನೆ ಎಂಬ ಸಂಕಲ್ಪ ಮಾಡಿ. ಉದಾಹರಣೆಗೆ ನಿಮ್ಮ ವೃತ್ತಿ, ಕೆರಿಯರ್, ಕುಟುಂಬ ಇತ್ಯಾದಿ.

ಮೀನ ರಾಶಿ: ವ್ಯಸನಗಳನ್ನು ಬಿಟ್ಟುಬಿಡುತ್ತೇನೆ ಎಂಬ ಸಂಕಲ್ಪ ಮಾಡಿ. ಕೆಲವರಲ್ಲಿ ಕುಡಿತ, ಧೂಮಪಾನದಂಥ ದೊಡ್ಡ ಚಟಗಳಿರಬಹುದು. ಇನ್ನು ಕೆಲವರಲ್ಲಿ ನಶ್ಯ, ಟೀ ಕಾಫಿಯಂಥ ಸಣ್ಣ ಚಟಗಳಿರಬಹುದು. ಆದರೆ ವ್ಯಸನವಾದಾಗ ಯಾವುದೂ ಒಳ್ಳೆಯದಲ್ಲ. ಅದನ್ನು ಬಿಟ್ಟು ಹೊಸ ಬದುಕು ಕಟ್ಟುವ ನಿರ್ಣಯ ಮಾಡಿ.

ಕೊರೋನಾ ವ್ಯಾಧಿ ರೂಪದಲ್ಲಿ ಒಕ್ಕರಿಸಿದ ಕೊರೋನಾ ಓಡಿಸಲು ಲಕ್ಷ್ಮಿ ಪೂಜೆ ...