ಹಿಮಾಲಯದ ಯಾವುದೋ ಒಂದು ಶ್ರೇಣಿಯದು. ನಮ್ಮ ವೀರ ಯೋಧರು ಚಳಿ ಮಳೆ ಲೆಕ್ಕಿಸದೇ ಅಲ್ಲಿ ಗಡಿ ಕಾಯುತ್ತಾ ಇರುತ್ತಾರೆ. ದೇಶಭಕ್ತಿ ಅನ್ನುವ ಕಿಚ್ಚು ಅವರನ್ನು ಆ ಚಳಿಯಲ್ಲೂ ಬೆಚ್ಚಗಿಡುತ್ತೆ. ಹಿಮಾಲಯದ ಒಂದು ಶ್ರೇಣಿಯಲ್ಲಿ ಆಗ ಮೈನಸ್ ನಲವತ್ತು ಡಿಗ್ರಿಯಷ್ಟು ತಾಪಮಾನವಿತ್ತು. ಸೈನಿಕರು ಎಂದಿನಂತೆ ಚಳಿಯಲ್ಲೂ ಮಾನಸಿಕ, ದೈಹಿಕ ಧೃಢತೆ ಕಾಯ್ದುಕೊಂಡು ಹಿಮ ಶಿಖರಗಳಲ್ಲಿ ಸಂಚರಿಸುತ್ತಿದ್ದರು. ಆಗ ಒಬ್ಬ ಸೈನಿಕನಿಗೆ ತನ್ನ ಎದುರಿಗೆ ಕಂಡ ಒಂದು ದೃಶ್ಯ ನೋಡಿ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅವನೆದುರಿಗೆ ನದಿಯೋ, ನೆಲವೋ ಹಿಮಗಟ್ಟಿತ್ತು. ಒಬ್ಬ ಸಾಧು ಆ ನೆಲವನ್ನು ತನ್ನ ಬಳಿಯಿದ್ದ ಹತ್ಯಾರಗಳಿಂದ ಅಗೆಯುತ್ತಿದ್ದ. ಕಲ್ಲಿನಂತೆ ಗಟ್ಟಿಯಾಗಿದ್ದ ನೆಲದ ಅಡಿಯಿಂದ ನೀರು ತೆಗೆಯಲು ಪ್ರಯತ್ನಿಸುತ್ತಿದ್ದ. ಒಂದಿಷ್ಟು ಹೊಡೆತ ಬಿದ್ದ ಮೇಲೆ ಹಿಮದ ಪದರ ಒಡೆಯಿತು. ಒಳಗಿಂದ ಹಿಮ ಮಿಶ್ರಿತ ಕೊರೆಯುವ ಚಳಿಯ ತಣ್ಣನೆಯ ನೀರು ಕಾಣಿಸಿತು.

ತನ್ನ ಮೈ ಮೇಲೆ ತುಂಡು ಟವೆಲ್ ಬಿಟ್ಟರೆ ಮತ್ತೇನೋ ಇರದ ಆ ಸಾಧು ಒಂದಿಷ್ಟು ಚೊಂಬು ನೀರನ್ನು ಎತ್ತಿ ಆಚೆ ಹಾಕಿದ. ಆಮೇಲೆ ಜಡೆಗಟ್ಟಿದ ತನ್ನ ತಲೆಗೆ ನೀರು ಹುಯ್ದುಕೊಂಡ. ಆ ಬಳಿಕ ಮೈ ಮೇಲೆಲ್ಲ ನೀರು ಸುರಿದುಕೊಂಡು ಸ್ನಾನ ಮುಗಿಸಿದ. ಒಬ್ಬ ಸಾಮಾನ್ಯ ಮನುಷ್ಯನಾಗಿದ್ದರೆ ನೀರು ಹೊಯ್ದುಕೊಳ್ಳೋದು ಬಿಡಿ, ಮೈಮೇಲೆ ಒರೀ ತುಂಡು ಟವೆಲ್ ಸುತ್ತಿಕೊಂಡು ಆ ನೆಲಕ್ಕೆ ಕಾಲಿಟ್ಟರೇ ಶೀತ ತಡೆಯಲಾರದೇ ಸಾಯುತ್ತಿದ್ದನೇನೋ. ಆದರೆ ಆ ಸಾಧುವಿಗೆ ಚಳಿಯ ಲವಲೇಶವೂ ಆದ ಹಾಗಿರಲಿಲ್ಲ.

 

ನರಮಾಂಸ ತಿನ್ನುವ ಅಘೋರಿಗಳು ಈಗಲೂ ಇರುತ್ತಾರಾ? 

 

ಇನ್ನೊಂದು ವೀಡಿಯೋ ಇದಕ್ಕಿಂತ ಹಾರಿಬಲ್ ಅನಿಸುವಂಥಾದ್ದು. ಅದರಲ್ಲಿ ಬರೀ ಕೌಪೀನ ಧರಿಸಿದ ಸಾಧುವೊಬ್ಬ ತನ್ನ ನಾಯಿ ಜೊತೆಗೆ ಹಿಮದಲ್ಲಿ ಪಲ್ಟಿ ಹೊಡೆಯುತ್ತಾ ಸಾಗುತ್ತಾನೆ.

 

ಇಂಥಾ ವೀಡಿಯೋಗಳನ್ನು ಕಂಡಾಕ್ಷಣ ಹಲವರ ಮನಸ್ಸಲ್ಲಿ ಬರುವ ಯೋಚನೆ, ಛೇ, ಖಂಡಿತಾ ಇದು ಸಾಧ್ಯವಿಲ್ಲ. ಇಂದಿನ ಮಾಡರ್ನ್ ಟೆಕ್ನಾಲಜಿಯಲ್ಲಿ ಇಂಥಾ ವೀಡಿಯೋ ಸೃಷ್ಟಿಸೋದು ಕಷ್ಟದ ಕೆಲಸವೇನಲ್ಲ. ಹಾಗಾಗಿ ಇದು ಯಾರೋ ವೀಡಿಯೋ ಎಡಿಟರ್ ಒಬ್ಬನ ಕೈ ಚಳಕವಾಗಿರುತ್ತೆ ಅಂತ. ಸೋಷಲ್ ಮೀಡಿಯಾದಲ್ಲಿ ಕೆಲವು ದಿನಗಳ ಹಿಂದೆಯೇ ಈ ವೀಡಿಯೋ ವೈರಲ್ ಆಗಿದೆ. ಇದು ಸುಳ್ಳು, 40 ಡಿಗ್ರಿಯಲ್ಲಿ ಮನುಷ್ಯ ಹಾಗಿರಲು ಸಾಧ್ಯವೇ ಇಲ್ಲ. ಸೈನಿಕರೂ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಅನ್ನುವ ಮಾತು ಹೇಳಿದ್ದಾರೆ. ಆದರೆ ಇದು ಅವರ ಜ್ಞಾನದ ಕೊರತೆಯಷ್ಟೇ. ಈ ಜನ ಪಾಶ್ಚಾತ್ಯ ಶಿಕ್ಷಣ ಪಡೆದು ಇದನ್ನು ನಿರಾಕರಿಸುತ್ತಾರೆ. ಭಾರತದಲ್ಲಿ ಹಿಮಾಲಯದ ಯೋಗಿಗಳಿಗೆ ಇದೊಂದು ದಿನಚರಿಯ ಭಾಗ ಅಂತ ಒಂದಿಷ್ಟು ಜನ ಹೇಳಿದ್ದಾರೆ.
 

ಈ ವೀಡಿಯೋ ಸತ್ಯವೋ, ಸುಳ್ಳೋ ಆಮೇಲಿನ ಮಾತು. ಆದರೆ ಹಿಮಾಲಯದ ಸಾಧಕರ ಬಗ್ಗೆ ನಮ್ಮಲ್ಲಿ ಹಲವು ಪುಸ್ತಕಗಳು ಬಂದಿವೆ. ಕೆಲವೊಂದು ಪುಸ್ತಕವನ್ನು ಯೋಗಿಗಳೇ ಬರೆದಿದ್ದಾರೆ. ಆ ಪ್ರಕಾರ ನೋಡಿದರೆ ಮೇಲಿನ ವೀಡಿಯೋದಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಏಕೆಂದರೆ ಒಂದು ಹಂತದ ಸಾಧನೆಯ ಬಳಿಕ ಹಿಮಾಲಯದ ಸಾಧುಗಳು ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುವ ಹಂತಕ್ಕೆ ಬರುತ್ತಾರೆ. ನಿದ್ದೆ, ದೈಹಿಕ ಆಮಿಷಗಳನ್ನು ಮೀರಿ ಬದುಕುತ್ತಾರೆ. ಅವರಿಗೆ ದೇಹ ಆತ್ಮವನ್ನು ಕಾಪಿಟ್ಟುಕೊಳ್ಳುವ ಒಂದು ಸಾಧನ ಅಷ್ಟೇ. ಹಾಗಾಗಿ ದೇಹದ ಬಗ್ಗೆ ಸಂಪೂರ್ಣ ನಿಯಂತ್ರಣ ಅವರಿಗಿರುತ್ತದೆ. ಒಂದು ಹಂತದ ಬಳಿಕ ಹಿಮಾಲಯದ ಉಷ್ಣಾಂಶ ಮೈನಸ್ 40 ಡಿಗ್ರಿಗೆ ಇಳಿಯುವುದು ತೀರಾ ಸಾಮಾನ್ಯ. ಈ ಸಂದರ್ಭ ಕೆಲವು ಮಂದಿ ಸಾಧಕರು ಬೆಟ್ಟದ ಕೆಳಗಿಳಿದು ಊರಿಗೆ ಸಮೀಪ ಗುಡಾರ ಹಾಕಿಕೊಂಡು ವಾಸಿಸುತ್ತಾರೆ. ಆದರೆ ಕೆಲವೊಬ್ಬ ಸಾಧಕರು ಆ ಸಮಯದಲ್ಲೂ ಅಲ್ಲೇ ಇರುತ್ತಾರೆ.

ಹಿಮಾಲಯದ ಗುಹೆಗಳಲ್ಲಿ ಕೂತು ರಾತ್ರಿಯೆಲ್ಲ ಧ್ಯಾನ ಮಾಡಿ ಅರುಣೋದಯಕ್ಕೂ ಮೊದಲೇ ಅಂದರೆ ಮಧ್ಯರಾತ್ರಿ ಎರಡು ಗಂಟೆಯ ಸುಮಾರಿಗೆ ಗುಹೆಯಿಂದ ಆಚೆ ಬರುತ್ತಾರೆ. ಹಿಮಕಲ್ಲನ್ನು ಒಡೆದು ಒಳಗಿನಿಂದ ಒಸರುವ ನೀರಲ್ಲಿ ಸ್ನಾನ ಮಾಡುತ್ತಾರೆ. ಒದ್ದೆ ಬಟ್ಟೆಯಲ್ಲೇ ವಾಪಾಸ್ ಬಂದು ಧುನಿ ಎಂದು ಕರೆಯುವ ಅಗ್ನಿ ಕುಂಡದ ಎದುರು ಕುಳಿತು ಮತ್ತೆ ಧ್ಯಾನದಲ್ಲಿ ಮುಳುಗುತ್ತಾರೆ. ಯಾವುದೋ ಒಂದು ಹೊತ್ತಲ್ಲಿ ಧ್ಯಾನದಿಂದ ಎಚ್ಚರಾಗಿ ಗುಹೆಯಲ್ಲಿ ಶೇಖರಿಸಿಟ್ಟ ಒಂದು ಆಲೂಗಡ್ಡೆ ಬೇಯಿಸಿ ತಿನ್ನುತ್ತಾರೆ. ರಾತ್ರಿ ಇನ್ನೊಂದು ಆಲೂಗಡ್ಡೆ ತಿಂದರೆ ಅವರ ಆಹಾರ ಇಷ್ಟೇ. ಬಿಟ್ಟರೆ ಹಿಮವನ್ನು ಕರಗಿಸಿದ ನೀರು. ಹತ್ತಿರದ ಹಳ್ಳಿಯ ಜನ ಕೆಲವೊಮ್ಮೆ ಗುಹೆಯ ಹೊರಗೆ ಹಾಲು ಹಣ್ಣು ತಂದಿಟ್ಟರೆ ಕೆಲವೊಮ್ಮೆ ಸೇವಿಸುತ್ತಾರೆ. ಎಷ್ಟೋ ಸಲ ಅವರು ಮತ್ತೊಮ್ಮೆ ಹಾಲಿಡಲು ಬಂದಾಗಲೂ ಪಾತ್ರೆಯಲ್ಲಿ ಹಿಂದೆ ತಂದಿಟ್ಟ ಹಾಲೂ ಹಾಗೇ ಇರುತ್ತದೆ.

 

ರಜನೀಕಾಂತ್ ಹಿಮಾಲಯದಲ್ಲಿ ರಹಸ್ಯವಾಗಿ ಭೇಟಿ ಮಾಡುವ ಆ ವ್ಯಕ್ತಿ ಯಾರು?

 

ಹೀಗಾಗಿ ಹಿಮಾಲಯದ ಸಾಧಕರ ಸಾಧನೆಯನ್ನು ನಮ್ಮ ಸಾಮಾನ್ಯ ಜ್ಞಾನದಿಂದ ಅಳೆಯುವುದು ಸಾಧ್ಯವಿಲ್ಲ. ನಮ್ಮ ಊಹೆಯನ್ನೂ ಮೀರಿದ ಶಕ್ತಿ ಅವರಲ್ಲಿರುವುದಂತೂ ಸತ್ಯ. ಹೀಗಾಗಿ ಮೇಲಿನ ವೀಡಿಯೋ ನಿಜ ಇದ್ದರೂ ಇರಬಹುದು.