Asianet Suvarna News Asianet Suvarna News

ಜೀವ ಹೋಗುವಾಗ ಪೀರಿಯಡ್ಸ್ ಆಗಿರೋ ನರ್ಸ್ ಡ್ರಿಪ್ ಹಾಕಿದ್ರೆ ಬೇಡ ಅಂತೀರಾ?; ಮಡಿವಂತರಿಗೆ ವಿನಯ್ ಗುರೂಜಿ ಕ್ಲಾಸ್

ಮನೇಲಿರೋ ಹೆಣ್ಣುಮಗಳು ಮುಟ್ಟಾದಳು ಅಂದಾಕ್ಷಣ ಅವಳನ್ನು ಅಪವಿತ್ರ ದೃಷ್ಟಿಯಿಂದ ನೋಡೋರು ಮುಠಾಳರು ಅಂತಾರೆ ವಿನಯ್ ಗುರೂಜಿ.

 

Vinay guruji talks about periods of women and lifestye thoughts bni
Author
First Published Jun 29, 2023, 2:44 PM IST | Last Updated Jun 29, 2023, 2:44 PM IST

ಅವರು ರಜಾ ಅಂದಾಕ್ಷಣ ಅಪವಿತ್ರ ಅಂತ ಹೇಳೋದು ಮೂರ್ಖತನದ ಪರಮಾವಧಿ ಅನ್ನೋದು ವಿನಯ್ ಗುರೂಜಿ ಮಾತು. ಹೆತ್ತ ತಾಯಿ ಹೆಣ್ಣು, ಹೊತ್ತ ಭೂಮಿ ಹೆಣ್ಣು, ಹಾಲು ಕೊಡ್ತಿರೋ ಗೋಮಾತೆ ಹೆಣ್ಣು. ಒಬ್ಬಳು ಪೀರಿಯೆಡ್ಸ್ ಆದ ಹೆಣ್ಣುಮಗಳು ಓಪನ್ ಹಾರ್ಟ್ ಸರ್ಜರಿ ಮಾಡ್ತಾಳೆ, ಮಾಡಿಸಿಕೊಳ್ತೀರಾ ಇಲ್ವಾ, ಮೈಲಿಗೆ ಅಂತ ಬಿಟ್ಟು ಬಿಡ್ತೀರ? ಜೀವ ಹೋಗೋ ಟೈಮಲ್ಲಿ ಪೀರಿಯೆಡ್ಸ್‌ ಆಗಿರೋ ನರ್ಸ್ ಕೈಗೆ ಡ್ರಿಪ್ ಹಾಕ್ತಾಳೆ, ಬೇಡ ಅಂತೀರ? ಇನ್ನೊಬ್ಬಳು ಈಸಿಜಿ ಮಾಡ್ತಾಳೆ.. ಅದೆಲ್ಲ ಬೇಡ, ಮನೆಗೆ ತರಕಾರಿ ಕೊಡೋ ಹೆಣ್ಣುಮಗಳು ಪೀರಿಯೆಡ್ಸ್‌ ಆಗಿರಲೇ ಬೇಕಲ್ವಾ, ಗ್ರಂದಿಗೆ ಅಂಗಡೀಲಿ ಸಮಿತ್ತು ಕೊಡೋ ಹೆಣ್ಣುಮಗಳೂ ರಜಾ ಆಗ್ತಾಳಲ್ವಾ?

.. ಹೀಗೆ ಹೇಳೋದು ಮತ್ಯಾರೂ ಅಲ್ಲ ಅವಧೂತ ವಿನಯ್ ಗುರೂಜಿ. ಇವರಿಗೆ ಸಾಕಷ್ಟು ಮಂದಿ ಫಾಲೋವರ್ಸ್ ಇದ್ದಾರೆ. ಅನೇಕ ರಾಜಕಾರಣಿಗಳು ಇವರನ್ನು ಎಡತಾಕುತ್ತಾ ಇರುತ್ತಾರೆ. ಈ ವ್ಯಕ್ತಿ ತನ್ನ ನೇರ ನುಡಿಗಳಿಗೆ ಫೇಮಸ್. ಅನಿಸಿದ್ದನ್ನು ನಿರ್ದಾಕ್ಷಿಣ್ಯವಾಗಿ ಹೇಳೋ ಇವರ ಮಾತು ಎಲ್ಲ ರಂಗದಲ್ಲೂ ಫೇಮಸ್. ನಂಬಿಕೆಗಳು ಯಾವುವು, ಮೂಢನಂಬಿಕೆಗಳು ಯಾವುವು? ಶ್ರದ್ಧೆ ಯಾವುದು, ಅಂಧ ಶ್ರದ್ಧೆ ಯಾವುದು ಅನ್ನೋದನ್ನೆಲ್ಲ ಇವರು ವಿವರಿಸೋ ರೀತಿ ಇಂಟರೆಸ್ಟಿಂಗ್ ಅನಿಸುತ್ತವೆ. ಇವರು ಅನೇಕ ವಿವಾದಗಳಿಂದಲೂ ಸುದ್ದಿಯಲ್ಲಿದ್ದರು. ಇವರು ಪೀರಿಯೆಡ್ಸ್ ಬಗ್ಗೆ ಅಪವಿತ್ರ ಅಂತ ಹೇಳೋ ಮಂದ ಬುದ್ಧಿಯವರ ಬಗ್ಗೆ ಆಡಿರೋ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇವರು 'ವೈರಿ'ಗಳಿಗಿಂತ ಡೇಂಜರ್: ಇಂತವರಿಂದ ದೂರ ಇರಿ ಅಂತಾರೆ ಚಾಣಕ್ಯರು..!

ವಿನಯ್ ಗುರೂಜಿ ಕಾಮನ್ ಹೆಣ್ಮಕ್ಕಳನ್ನು ಪೀರಿಯೆಡ್ಸ್ (periods) ಟೈಮಲ್ಲಿ ಅಪವಿತ್ರತೆಯ ಹೆಸರಿನಲ್ಲಿ ದೂರವಿಡೋ ಪ್ರಭೃತಿಗಳ ಬಗ್ಗೆ ಮಾತಾಡುತ್ತಲೇ ದೈವಿಕ ನೆಲೆಯಲ್ಲೂ ಋತುಚಕ್ರಕ್ಕಿರುವ ಮಹತ್ವದ ಬಗ್ಗೆ ಹೇಳ್ತಾರೆ.

'ಕಾಮಾಕ್ಯದಲ್ಲಿರುವ ಅಮ್ಮನವರು ಮುಟ್ಟಾಗ್ತಾರೆ. ಅವರ ಮಹಾಯೋನಿಯಿಂದ ವಿಶಿಷ್ಟ ದಿನದಂದು ರಕ್ತ (blood) ಸುರಿಯುತ್ತದೆ. ಕುಬೇರ ತೀರ್ಥದಲ್ಲಿ ಹರಿಯುವ ಆ ಕೆಂಬಣ್ಣದ ದ್ರವವನ್ನು ಮಹಾನ್ ಮಹಾನ್ ಯೋಗಿಗಳೆಲ್ಲ ಪ್ರಸಾದ ಅಂತ ತಗೊಳ್ತಾರೆ. ಅವಳು ಮಹಾನ್ ಹೆಣ್ಣು. ಮಹತ್ತಲ್ಲಿರುವ ಹೆಣ್ಣವಳು. ಅದು ಅಖಂಡ, ಇದು ಖಂಡ. ಆದರೆ ಅವಳು ಪವಿತ್ರ ಆದರೆ ನಮ್ಮ ಅಮ್ಮ ಅಪವಿತ್ರ ಆಗೋದು ಹೇಗೆ? ಇದು ನನ್ನ ಪ್ರಶ್ನೆ' ಎನ್ನುವ ವಿನಯ್ ಗುರೂಜಿ, 'ವೇದವನ್ನು ಹೇಳಿಕೊಟ್ಟ ಸರಸ್ವತಿ ಹೆಣ್ಣು, ಪ್ರಣವವನ್ನು ಉಪದೇಶ ಮಾಡಿದ ಗಾಯತ್ರಿ ಹೆಣ್ಣು, ಲಲಿತಾ ಸಹಸ್ರನಾಮ ಹೇಳಿಕೊಟ್ಟ ಅಗಸ್ತ್ಯರ ಮಡದಿ ಹೆಣ್ಣು, ಪ್ರಕೃತಿ ಹೆಣ್ಣು, ಕನ್ನಡ ತಾಯಿ ಹೆಣ್ಣು, ಭಾರತ ಮಾತೆ ಹೆಣ್ಣು, ಗಂಗೆ ಹೆಣ್ಣು, ತುಂಗೆ ಹೆಣ್ಣು.. ಇವರೆಲ್ಲ ಮೆನ್ಸಸ್ ಆದ್ರು ಅಂದ್ರೆ ಅವರನ್ನು ಅಪವಿತ್ರ ಅಂತೀರಾ?' ಎಂಬ ಗುರೂಜಿ ಅವರ ಮಾತುಗಳು ಎಂಥಾ ಸಂಪ್ರದಾಯಸ್ಥರೂ ಯೋಚಿಸುವ ಹಾಗೆ ಮಾಡುತ್ತದೆ.

ಈದ್ ಉಲ್ ಫಿತ್ರ್: ದೇವರ ಮೇಲಿನ ಭಯ, ಭಕ್ತಿ, ವಿಶ್ವಾಸ ಸಾರುವ ಹಬ್ಬ

'ಪೀರಿಯೆಡ್ಸ್‌ ಅನ್ನು ಮೈಲಿಗೆ ಅಂತ ಒಂದಿಷ್ಟು ಮಂದಿ ಅತಿ ಬುದ್ಧಿವಂತರು (Intellectuals) ಸೇರಿ ನಿರ್ಧರಿಸಿದ್ದಾರೆ. ನಿಜದಲ್ಲಿ ಪ್ರಕೃತಿಯ(nature) ಒಂದು ವಿಶಿಷ್ಟ ಗುಣ ಅದು. ಆ ವಿಶಿಷ್ಟತೆಯನ್ನು ಒಪ್ಪಿಕೊಳ್ಳೋಣ' ಅನ್ನೋ ಇವರ ಮಾತನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಬೆಂಬಲಿಸಿದ್ದಾರೆ. ಇನ್ನುಳಿದ ಕೆಲವರು ಎಂದಿನಂತೆ ಹುಳುಕಿನ ಕೆಟ್ಟ ಮಾತುಗಳನ್ನು ಆಡಿದ್ದಾರೆ. ಕೆಲವರು, 'ಬೇಗ ಪ್ರಚಾರ ಸಿಗಬೇಕಾದರೆ ಸಂಪ್ರದಾಯಕ್ಕೆ ವಿರೋಧವಾಗಿ ಮಾತನಾಡಬೇಕು' ಎಂಬ ವ್ಯಂಗ್ಯದ ಮಾತು ಹೇಳಿದ್ದಾರೆ.

ಒಟ್ಟಾರೆ ಆಧುನಿಕ ಚಿಂತನೆಯ ವಿನಯ್ ಗುರೂಜಿ ಮಾತಿಗೆ ನೆಟ್ಟಿಗರಿಂದ ಸಪೋರ್ಟ್ ಅಂತೂ ಸಿಕ್ಕಿದೆ. ಅಷ್ಟರಮಟ್ಟಿಗೆ ನಮ್ಮ ಜನ ಬದಲಾಗಿದ್ದಾರೆ ಅಂತ ಆಶಿಸಬಹುದೇನೋ.

Latest Videos
Follow Us:
Download App:
  • android
  • ios