Vijayapura; ಮತ್ತೈದೆಯರಂತೆ ಮಂಗಳಮುಖಿಯರಿಗೂ ಗೌರವ ಸಲ್ಲಿಸಿದ ದುರ್ಗಾದೇವಿ ಅರ್ಚಕ!
ವಿಜಯಪುರದ ಮುದ್ದೇಬಿಹಾಳ ತಾಲೂಕಿನ ತಂಗಡಿಯಲ್ಲಿ ಉಡಿ ತುಂಬುವ ಕಾರ್ಯಕ್ರಮ ಇತಿಹಾಸ ಬರೆದಿದೆ. ಗ್ರಾಮದ ದುರ್ಗಾ ದೇವಿ ಜಾತ್ರೆಯ ಅಂಗವಾಗಿ 900ಕ್ಕೂ ಅಧಿಕ ಮಂಗಳಮುಖಿಯರು ಹಾಗೂ ಜೋಗುತಿಯರಿಗೆ ಉಡಿ ತುಂಬಲಾಗಿದೆ.
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಸೆ.26) : ನವರಾತ್ರಿ ಹಬ್ಬ ಶುರುವಾಗಿದ್ದು ವಿಜಯಪುರ ಜಿಲ್ಲೆಯಲ್ಲಿ ಸಾಲು-ಸಾಲು ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತಿವೆ. ಅದ್ರಲ್ಲು ದುರ್ಗಾದೇವಿ ದೇಗುಲಗಳಲ್ಲಿ ಜಾತ್ರೆಗಳು ನಡೆಯುತ್ತಿವೆ. ನವರಾತ್ರಿಯ ಮೊದಲ ದಿನ ಮುದ್ದೇಬಿಹಾಳ ತಾಲೂಕಿನ ತಂಗಡಿಯಲ್ಲಿ ನಡೆದ ದುರ್ಗಾ ದೇವಿ ಜಾತ್ರೆ ಇತಿಹಾಸ ಬರೆದಿದೆ. ಇದೆ ಮೊದಲ ಬಾರಿಗೆ 900 ಕ್ಕು ಅಧಿಕ ಮಂಗಳಮುಖಿಯರು, ಜೋಗತಿಯರಿಗೆ ಮುತ್ತೈದೆಯರಿಗೆ ಗೌರವಿಸುವಂತೆ ಉಡಿತುಂಬಿ ಗೌರವಿಸಲಾಗಿದೆ. ಶುಭ ಕಾರ್ಯಕ್ರಮಗಳಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ಬಾಗೀನ ನೀಡುವುದು ಕಾಮನ್. ಹಳ್ಳಿಗಳಲ್ಲು ಮುತ್ತೈದೆಯರಿಗೆ ಉಡಿ ತುಂಬಿ ಗೌರವಿಸಲಾಗುತ್ತೆ. ಆದ್ರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಿಯಲ್ಲಿ ನಡೆದ ಅದೊಂದು ವಿಶೇಷ ಉಡಿ ತುಂಬುವ ಕಾರ್ಯಕ್ರಮಕ್ಕೆ ಇತಿಹಾಸ ಬರೆದಿದೆ. ಗ್ರಾಮದ ದುರ್ಗಾ ದೇವಿ ಜಾತ್ರೆಯ ಅಂಗವಾಗಿ 900ಕ್ಕು ಅಧಿಕ ಮಂಗಳಮುಖಿಯರು ಹಾಗೂ ಜೋಗುತಿಯರಿಗೆ ಉಡಿ ತುಂಬಲಾಗಿದೆ. ಮುತ್ತೈದೆಯರಿಗೆ ನೀಡುವಂತೆ ಮಂಗಳಮುಖಿಯರಿಗು ಗೌರವಿಸಲಾಗಿದೆ. ಮಂಗಳಮುಖಿಯರಿಗೆ, ಜೋಗತಿಯರಿಗೆ ಇದೆ ಮೊದಲ ಬಾರಿಗೆ ಮುತ್ತೈದೆಯರಂತೆ ಉಡಿ ತುಂಬುವ ಕಾರ್ಯಕ್ರಮ ತಂಗಡಗಿ ಗ್ರಾಮದಲ್ಲಾಗಿದೆ. ಇದೆ ಗ್ರಾಮದಲ್ಲಿ ಮೊದಲು ಮಹಿಳೆಯರಿಗೆ ಜಾತ್ರೆಯ ದಿನ ಉಡಿ ತುಂಬಲಾಗ್ತಿತ್ತು. 5 ಮಹಿಳೆಯರು, 25 ಮಹಿಳೆಯರು ಹೀಗೆ ಪ್ರತಿ ವರ್ಷ ಜಾತ್ರೆಯಲ್ಲಿ ಮುತ್ತೈದೆ ಹೆಣ್ಣುಮಕ್ಕಳಿಗೆ ಉಡಿ ತುಂಬುವ ಕಾರ್ಯ ಮಾಡಲಾಗ್ತಿತ್ತು. ಆದ್ರೆ ಇದೆ ಮೊದಲ ಬಾರಿಗೆ ದುರ್ಗಾ ದೇವಿ ಅರ್ಚಕರಾದ ಶಾಂತಪ್ಪ ಪೂಜಾರಿಗಳು ಮಂಗಳಮುಖಿಯರಿಗೆ, ಜೋಗತಿಯರಿಗೆ ಉಡಿ ತುಂಬುವ ಕಾರ್ಯ ಮಾಡಿದ್ದಾರೆ.
ಮುತ್ತೈದೆ ಸ್ಥಾನ ಪಡೆಯಲು ಓಡೋಡಿ ಬಂದ ಮಂಗಳಮುಖಿಯರು!
ಆರಂಭದಲ್ಲಿ ನಾಲ್ಕು ಜನ ಮಂಗಳಮುಖಿಯರನ್ನ ಕರೆದು ಉಡಿ ಉಂಬುವ ಕಾರ್ಯದ ಬಗ್ಗೆ ಶಾಂತಪ್ಪ ಪೂಜಾರಿಗಳು ಮಾತನಾಡಿದ್ರು. ಐದರಿಂದ 25 ಮಂಗಳಮುಖಿಯರು ಸೇರಿದ್ರೆ ಸಾಕು ಉಡಿ ತುಂಬುವ ಕಾರ್ಯ ಮಾಡಿ ಬಿಡೋಣ ಎನ್ನುವ ಲೆಕ್ಕಾಚಾರಕ್ಕೆ ಬಂದಿದ್ರು. ಈ ಸಂಖ್ಯೆ 501 ತಲುಪಿತ್ತು. ಆದ್ರೆ ಮಂಗಳಮುಖಿಯರಿಗೆ ದುರ್ಗಾದೇವಿ ದೇಗುಲದಿಂದ ಉಡಿ ತುಂಬುವ ಗೌರವ ಸಿಗ್ತಿರೋ ವಿಚಾರ ತಿಳಿದು 900ಕ್ಕು ಅಧಿಕ ಸಂಖ್ಯೆಯಲ್ಲಿ ಮಂಗಳಮುಖಿಯರು ಮುತ್ತೈದೆಯ ಸ್ಥಾನಮಾನ ಪಡೆಯಲು ಓಡೋಡಿ ಬಂದಿದ್ದಾರೆ. ಕರ್ನಾಟಕ-ಮಹಾರಾಷ್ಟ್ರದ ಮೂಲೆ ಮೂಲೆಗಳಿಂದಲು ಮಂಗಳಮುಖಿಯರು, ತೃತೀಯ ಲಿಂಗಿಗಳು, ಜೋಗತಿ-ಜೋಗಪ್ಪಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ಪಡೆದುಕೊಂಡಿದ್ದಾರೆ.
Navaratri Tips: ನವರಾತ್ರಿ ಸಮಯದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ
ಉಡಿ ತುಂಬಿಸಿಕೊಂಡ ಮುಸ್ಲಿಂ ಮಂಗಳಮುಖಿ!
ವಿಶೇಷ ಅಂದ್ರೆ ಇದೆ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ತೃತೀಯ ಲಿಂಗಿಯು ಸಹ ಪಾಲ್ಗೊಂಡಿದ್ದಳು. ಹಡಲಗಿ ಗ್ರಾಮದ ದಾದಾಪೀರ್ ಎನ್ನುವ ತೃತೀಯಲಿಂಗಿ ಉಡಿತುಂಬಿಕೊಳ್ಳುವ ಮೂಲಕ ಮತ್ತೈದೆ ಗೌರವ ಭಾಗ್ಯ ಪಡೆದಿದ್ದಾಳೆ. ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ asianetsuvarnanews.com ಜೊತೆಗೆ ಮಾತನಾಡಿದ ದಾದಾಪೀರ್, ದುರ್ಗಾದೇವಿ ಅರ್ಚಕರು ಉಡಿತುಂಬುವ ಕಾರ್ಯ ಮಾಡುವ ವಿಚಾರ ತಿಳಿಸಿದ್ರು, ಇಂಥಹ ಪಕೃತಿಯ ಆಟದಿಂದಾಗಿ ಅಕಸ್ಮಾತ್ ಹೆಣ್ಣಾದ ನಮಗೆ ಈ ಗೌರವ ಸಿಗ್ತಿರೋದು ತಿಳಿದು ಸಂತಸವಾಯ್ತು. ದುರ್ಗಾದೇವಿ ಆಶೀರ್ವಾದ ಪಡೆಯಲು ನಾನು ಸಹ ಪಾಲ್ಗೊಂಡು ಉಡಿತುಂಬಿಸಿಕೊಂಡಿದ್ದೇನೆ ಎಂದಿದ್ದಾಳೆ.
VIJAYAPURA; ಗುಮ್ಮಟನಗರಿಯಲ್ಲಿ ಸಂಭ್ರಮದ ನವರಾತ್ರಿ ಹಬ್ಬ
ಹಾಡಿ ಕುಣಿದು ದುರ್ಗಾದೇವಿ ಸೇವೆ!
ದುರ್ಗಾದೇವಿ ಜಾತ್ರೆ ಅಂಗವಾಗಿ ಪಾಲ್ಗೊಂಡಿದ್ದ ಎಲ್ಲ ಮಂಗಳಮುಖಿಯರು, ಜೋಗಪ್ಪಗಳು ಚೌಡಕಿ ಪದಗಳನ್ನ ಹಾಡುವ ಮೂಲಕ ಸೇವೆ ಸಲ್ಲಿಸಿದ್ರು. ಈ ವೇಳೆ ಕೆಲ ಮಂಗಳಮುಖಿಯರು ಹೆಜ್ಜೆ ಹಾಕಿ ದೇವಿಗೆ ತಮ್ಮ ಸೇವೆ ಒಪ್ಪಿಸಿದರು. ಈ ಕಾರ್ಯಕ್ರಮದಲ್ಲಿ ತಂಗಡಗಿ ಸುತ್ತಮುತ್ತಲ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು..