ವರವ ಕೊಡು ಮಹಾಲಕ್ಷ್ಮೀ ಎಂದು ಶ್ರಾವಣ ಮಾಸ ಶುಕ್ಲಪಕ್ಷದಲ್ಲಿ ಮಾಡುವ ವರಮಹಾಲಕ್ಷ್ಮೀ ಪೂಜೆಗೆ ಆದರದ್ದೇ ಆದ ಮಹತ್ವವಿದೆ. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವ ಸಲುವಾಗಿ ಶುಕ್ರವಾರದಂದು ಕೈಗೊಳ್ಳುವ ವರಮಹಾಲಕ್ಷ್ಮೀ ವ್ರತದಿಂದ ಮನೆಯಲ್ಲಿ ಧನಸಮೃದ್ಧಿ ಜೊತೆಗೆ ನೆಮ್ಮದಿ, ಸುಖಶಾಂತಿಯೂ ನೆಲೆಸುತ್ತದೆ. ಹೀಗಾಗಿ ಇದೇ ಶುಕ್ರವಾರ (31-07-2020) ರಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲು ಸಿದ್ಧತೆಗಳೂ ಈಗಾಗಲೇ ನಡೆಯುತ್ತಿವೆ. 

ಶ್ರದ್ಧೆ ಹಾಗೂ ಭಕ್ತಿಯಿಂದ ವರಮಹಾಲಕ್ಷ್ಮೀ ವ್ರತವನ್ನು ಕೈಗೊಂಡರೆ ಆರೋಗ್ಯ, ಸಂಪತ್ತು, ಸಂತೋಷ, ದೀರ್ಘಾಯಸ್ಸು, ಘನತೆ, ಯಶಸ್ಸುಗಳನ್ನು ಗಳಿಸಲು ಸಾಧ್ಯವಾಗುತ್ತದೆ. ವರಮಹಾಲಕ್ಷ್ಮೀ ವ್ರತವನ್ನು ಮಾಡುವುದೆಂದರೆ ಅಷ್ಟ ಲಕ್ಷ್ಮೀಯರ ಆರಾಧನೆ ಮಾಡಿದಂತೆ ಎಂದು ಹೇಳಲಾಗುತ್ತದೆ. ದೇವಿ ವರಲಕ್ಷ್ಮೀಯು ಮಹಾಲಕ್ಷ್ಮೀಯ ಒಂದು ರೂಪವಾಗಿದ್ದು, ಈಕೆ ಕ್ಷೀರಸಾಗರದಿಂದ ಎದ್ದು ಬಂದವಳೂ, ಬಣ್ಣ ಬಣ್ಣದ ವಸ್ತ್ರಗಳಿಂದ ಸುಂದರವಾಗಿ ಅಲಂಕೃತವಾಗಿರುವವಳು ಆಗಿದ್ದಾಳೆ. 

ಇದನ್ನು ಓದಿ: ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ವರಮಹಾಲಕ್ಷ್ಮೀ ವ್ರತದ ಕಥೆ ಏನು?
ಚಾರುಮತಿ ಎಂಬ ಮಹಿಳೆಯೊಬ್ಬರು ಲಕ್ಷ್ಮೀಯ ಭಕ್ತೆಯಾಗಿದ್ದಳು. ಈಕೆ ಪ್ರತಿ ಶುಕ್ರವಾರವೂ ತಪ್ಪದೇ ಲಕ್ಷ್ಮೀ ಪೂಜೆ ಮಾಡುತ್ತಿದ್ದಳು. ಹೀಗೆ ಒಂದು ದಿನ ಲಕ್ಷ್ಮೀದೇವಿಯು ಈಕೆಯ ಕನಸಿನಲ್ಲಿ ಬಂದು ವರಮಹಾಲಕ್ಷ್ಮೀ ವ್ರತದ ಬಗ್ಗೆ ಸವಿಸ್ತಾರವಾಗಿ ಹೇಳಿದಳು. ಅದನ್ನು ಕೇಳಿಸಿಕೊಂಡ ಚಾರುಮತಿ ನಿಯಮಬದ್ಧವಾಗಿ ಮಾಡತೊಡಗಿದ್ದಲ್ಲದೆ, ಗೆಳತಿಯರಿಗೂ ಅದರ ಮಹತ್ವ ಹಾಗೂ ಆಚರಣೆ ಬಗ್ಗೆ ವಿವರಿಸಿದಳು. ವಿಧಿವತ್ತಾಗಿ ಕಳಶದ ಸ್ಥಾಪನೆ ಮಾಡಿ ಪ್ರದಕ್ಷಿಣೆ ಮಾಡಿ ವ್ರತವನ್ನು ಪೂರೈಸುತ್ತಾಳೆ. ಹೀಗೆ ವ್ರತ ಮುಗಿಸಿದ ನಂತರ ಮಾಡಿದ ಎಲ್ಲರಿಗೂ ಅಂದುಕೊಂಡಿದ್ದು ಸಿದ್ಧಸಿದೆ ಎಂದು ಹೇಳಲಾಗಿದೆ. ಪೂಜೆಯ ವಿಧಿ ವಿಧಾನ
ಬೆಳಗ್ಗೆ ಬೇಗನೆ ಎದ್ದು ಮನೆಯ ಸ್ವಚ್ಛತೆಯನ್ನು ಮಾಡಿ ಸ್ನಾನಮಾಡಬೇಕು. ಬಳಿಕ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು, ಆಮೇಲೆ ವ್ರತದ ಸಂಕಲ್ಪ ಮಾಡಬೇಕು. ವರಮಹಾಲಕ್ಷ್ಮೀಗೆ ಹೊಸ ವಸ್ತ್ರ ಹಾಗೂ ಆಭರಣ ತೊಡಿಸುವುದು, ಕುಂಕುಮ ಲೇಪಿಸಬೇಕು. ಲಕ್ಷ್ಮೀ ದೇವಿಯ ಮೂರ್ತಿಯ ಜೊತೆಗೆ ಗಣೇಶನ ಮೂರ್ತಿಯನ್ನೂ ಪೂರ್ವಾಭಿಮುಖವಾಗಿ ಇಡಬೇಕು. ಇದರ ನಂತರ ಕಳಶವನ್ನು ಪ್ರತಿಷ್ಠಾಪಿಸಬೇಕು. ಮೊದಲಿಗೆ ಬಾಳೆ ಎಲೆ ಮೇಲೆ ಅಕ್ಕಿ ಇಟ್ಟು, ಅದರ ಮೇಲೆ ಕಳಶವನ್ನು ಇಡಬೇಕು. ಹೂವು ಮತ್ತು ಧಾನ್ಯಗಳನ್ನು ಪೂಜೆಗೆ ಬಳಸಲಾಗುತ್ತದೆ. ದೇವಿಯ ಮುಂದೆ 9 ಗಂಟು ಹಾಕಿರುವ ದಾರವನ್ನೂ ಇಡಲಾಗುತ್ತದೆ. ವ್ರತದ ನಂತರ ಆರತಿ ಬೆಳಗಿ ಪೂಜೆ ನೆರವೇರಿಸಲಾಗುತ್ತದೆ. ನಂತರ ದಾರವನ್ನು ಎಲ್ಲರ ಕೈಗಳಿಗೂ ಕಟ್ಟಲಾಗುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ಪ್ರಸನ್ನಳಾಗುತ್ತಾಳೆ.

ಇದನ್ನು ಓದಿ: ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ!

ವ್ರತ ಮಾಡಿದವರು ಪ್ರಸಾದವನ್ನು ಹೊರತುಪಡಿಸಿ ಸಂಜೆವರೆಗೆ ಬೇರೆ ಯಾವುದೇ ಆಹಾರವನ್ನು ಸೇವಿಸುವಂತಿಲ್ಲ. ಸಂಜೆ ಪೂಜೆ ಬಳಿಕ ಆರತಿ ಬೆಳಗಿ ಮುತ್ತೈದೆಯರಿಗೆ ಕುಂಕುಮ ಹಾಗೂ ಉಡುಗೊರೆ ಕೊಟ್ಟು ವ್ರತವನ್ನು ಸಮಾಪ್ತಿಗೊಳಿಸುವುದು. ಇದರಿಂದ ಬೇಡಿದ್ದು ಲಭಿಸುವುದಲ್ಲದೆ, ಸಂತಾನ ಪ್ರಾಪ್ತಿಗೂ ಆಶೀರ್ವಾದ ಸಿಗಲಿದೆ ಎಂದು ಪುರಾಣದಲ್ಲಿ ಹೇಳಲಾಗಿದೆ. 

ಏನೇನು ಅಡುಗೆ ಇರುತ್ತದೆ?
ವರಮಹಾಲಕ್ಷ್ಮೀ ವ್ರತದಲ್ಲಿ ಲಕ್ಷ್ಮೀದೇವಿಗೆ ನೈವೇದ್ಯಕ್ಕೆ ವಿವಿಧ ಪದಾರ್ಥಗಳೂ ಬೇಕಿದ್ದು, ಕೋಸಂಬರಿ, ಪಾಯಸ ಸೇರಿದಂತೆ ಸಿಹಿ ತಿಂಡಿಗಳನ್ನೂ ಇಡಲಾಗುವುದು. ನೈವೇದ್ಯದ ಬಳಿಕ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಗುತ್ತದೆ. 

ಇದನ್ನು ಓದಿ: ಪರಶಿವನ ಕೃಪೆ ಪಡೆವ ಶ್ರಾವಣ ಮಾಸ ಮಹತ್ವ, ಆಚರಣೆ!

ವ್ರತದ ಬಗ್ಗೆ ಭಗವಾನ್ ಶಿವನ ಮಾತು…
ಈ ವ್ರತ ಬಹಳ ಶಕ್ತಿಯುತವಾಗಿದ್ದು, ಭಗವಾನ್ ಶಿವ ಸಹ ಮಾತನಾಡಿದ್ದಾನೆ. ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು. ಹೀಗೆ ಆಚರಣೆ ಮಾಡುವುದರಿಂದ ಎಲ್ಲ ರೀತಿಯ ಸಂಕಷ್ಟಗಳಿಂದ ಮುಕ್ತಿಯನ್ನು ಪಡೆಯಬಹುದಾಗಿದೆ. ಅಲ್ಲದೆ, ಆರ್ಥಿಕ ಸಂಕಷ್ಟ ಎದುರಾದಾಗಲೂ ಸಹ ಈ ವ್ರತ ಮಾಡುವುದರಿಂದ ಚೈತನ್ಯ ಲಭಿಸುವುದಲ್ಲದೆ, ಆರ್ಥಿಕ ಸ್ಥಿತಿ ಸುಧಾರಿಸಿ ಯಶಸ್ಸು ಲಭಿಸುತ್ತದೆ. ಜೊತೆಗೆ ಮನೆಯಲ್ಲಿ ಶಾಂತಿ-ಸಾಮರಸ್ಯ ಮೂಡುವುದಲ್ಲದೆ, ಸುಖ-ಸಮೃದ್ಧಿಯನ್ನೂ ಕಾಣಬಹುದಾಗಿದೆ. ಹೀಗಾಗಿ ಎಲ್ಲರೂ ಈ ಶ್ರಾವಣ ಮಾಸದಲ್ಲಿ ಬರುವ ಈ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಬೇಕು. ಇದರಿಂದ ಬಹಳ ಒಳ್ಳೆಯದಾಗುವುದಲ್ಲದೆ, ಲಕ್ಷ್ಮೀ ಮಾತೆಯ ಕೃಪೆಯಾಗಲಿದೆ ಎಂದು ಪರಮಶಿವನು ಹೇಳಿದ್ದಾಗಿ ಪುರಾಣ ಹೇಳುತ್ತದೆ.