Varamahalakshmi Festival 2025 Date: ಶ್ರಾವಣಮಾಸದಲ್ಲಿ ವರಮಹಾಲಕ್ಷ್ಮೀ ಹಬ್ಬ ತುಂಬ ವಿಶೇಷವಾದುದು. ಆದರೆ ಈ ಹಬ್ಬದಲ್ಲಿ ಒಂದಷ್ಟು ಕ್ರಮ ಅನುಸರಿಸಬೇಕು. ಅವು ಯಾವುವು?
ಶ್ರಾವಣ ಮಾಸ ಬಂತೆಂದರೆ ಹಿಂದುಗಳಿಗೆ ಹಬ್ಬಗಳು ಶುರು ಎನ್ನಬಹುದು. 2025 ರಲ್ಲಿ ಅಂದ್ರೆ ಈ ವರ್ಷ ವರಮಹಾಲಕ್ಷ್ಮಿ ಹಬ್ಬವು ( Varamahalakshmi Festival 2025 ) ಆಗಸ್ಟ್ 8 ರಂದು ಬಂದಿದೆ. ಇದು ಶ್ರಾವಣ ಮಾಸದ ಮೂರನೇ ಶುಕ್ರವಾರವಾಗಿದೆ. ಮಹಿಳೆಯರೆಲ್ಲರೂ ಹೊಸ ಸೀರೆ ಉಟ್ಟು, ದುಬಾರಿ ಸೀರೆ ತಂದು ದೇವಿಗೆ ಉಡಿಸಿ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ, ಇನ್ನು ಬೇರೆ ಹೆಣ್ಣು ಮಕ್ಕಳಿಗೆ ಕುಂಕುಮ ಕೂಡ ಕೊಡುತ್ತಾರೆ. ಆದರೆ ಕೆಲವು ತಪ್ಪುಗಳನ್ನು ಮಾಡಿದ್ರೆ ಬದುಕು ಬೀದಿಗೆ ಬರುತ್ತದೆ ಎಂದು ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಶ್ರೀ ಶಂಕರಾನಂದ ಯುಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಅವರು ಮಾತನಾಡಿದ್ದು, “ವರಮಹಾಲಕ್ಷ್ಮೀ ಪೂಜೆ ಹೇಗೆ ಮಾಡಬೇಕು? ಯಾವ ಕ್ರಮ ಅನುಸರಿಸಬಾರದು?” ಎಂದು ಅವರು ಹೇಳಿದ್ದಾರೆ.
“ವರಮಹಾಲಕ್ಷ್ಮೀ ವ್ರತ ಈಗ ವ್ರತವಾಗಿಲ್ಲ, ಹಬ್ಬವಾಗಿ ಪರಿಣಮಿಸಿದೆ. ಯಾವುದೇ ಜಾತಿ, ಧರ್ಮದವರಾದರೂ ಕೂಡ ಈ ವ್ರತವನ್ನು ಮಾಡಬಹುದು. ಆದರೆ ಮಾಡುವಂಥ ಪೂಜೆಯಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ವ್ರತದಿಂದ ವರದ ಬದಲು ಬದುಕು ಬೀದಿಗೆ ಬರುತ್ತದೆ. ಈ ಹಬ್ಬ ಮಾಡಿದ ಸಾಕಷ್ಟು ಜನರ ಜೀವನ ಸುಧಾರಿಸಿದೆ, ಬೇರೆಯವರ ಎದುರು ತಲೆ ಎತ್ತಿ ನಿಲ್ಲುವ ಹಾಗೆ ಮಾಡಿದೆ” ಎಂದು ಶ್ರೀ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ ಹೇಳಿದ್ದಾರೆ.
ಯಾವುದು ಮಾಡಬಾರದು?
“ವರಮಹಾಲಕ್ಷ್ಮೀ ಹಬ್ಬ ಶೋಕಿಗೆ ಅಲ್ಲ, ಆಡಂಬರ ತೋರಿಸೋಕೆ ಅಲ್ಲ. ಬಾಡಿಗೆಗೆ ಒಡವೆ ತರಬಾರದು, ಮುಖಗಳನ್ನು ವಿಚಿತ್ರವಾಗಿ ಸಿಂಗರಿಸಬಾರದು, ಕೋಡುಗಳನ್ನು ಕಟ್ಟಿ ಸಿಂಗಾರ ಮಾಡಬಾರದು. ಡಬ್ಬಗಳ ಮೇಲೆ ಡಬ್ಬ ಇಟ್ಟು ಟ್ವಿನ್ ದಾರ ಇಡಬಾರದು. ದೇವಿ ಕೈ ಕೂರಿಸಿಕೊಂಡಿರಬೇಕು, ಕೂತಿರಬೇಕು, ಇಲ್ಲದಿದ್ರೆ ಮನೆಯಿಂದ ಹೊರಗಡೆ ಹೋಗ್ತಾಳೆ ಎನ್ನೋದು ತಪ್ಪು. ಕಂತೆ ಕಂತೆ ನೋಟು ಇಡೋದು ಸರಿಯಲ್ಲ. ಲಕ್ಷ್ಮೀ ಮುಂದೆ ದುಡ್ಡು ಇಡಿ ಎಂದು ಎಲ್ಲಿಯೂ ಹೇಳಿಲ್ಲ. ಈ ರೀತಿ ಮಾಡಿದ್ರೆ ರಾಹು ದೋಷ ಆಗುತ್ತದೆ, ದೃಷ್ಟಿ ಆಗುತ್ತದೆ. ಶ್ರೀಮಂತರು ನೋಟು ಇಟ್ಟರೆ ದೃಷ್ಟಿ ಆಗಲ್ವಾ ಅಂತ ಕೆಲವರಿಗೆ ಡೌಟ್ ಬರಬಹುದು, ಆದರೆ ಅವರ ಬಳಿ ಸಾಲ ಇರುವುದು. ಆಡಂಬರದ ಆಚರಣೆ ಬೇಕಾಗಿಲ್ಲ” ಎಂದು ಶ್ರೀ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ ಹೇಳಿದ್ದಾರೆ.
“ಗೋಧೂಳಿ ಸಮಯದಲ್ಲಿ, ಸೂರ್ಯಾಸ್ತದ ಸಮಯದಲ್ಲಿ ಲಕ್ಷ್ಮೀ ಪೂಜೆ ಮಾಡಬೇಕು. ರಾತ್ರಿ ಪೂರ್ತಿ ಒಬ್ಬಟ್ಟು ತಟ್ಟಿ, ಬೆಳಗ್ಗೆ ಮೂರು ಗಂಟೆಗೆ ಪೂಜೆ ಮಾಡೋದು ಸರಿ ಅಲ್ಲ. ವ್ರತ ಮಾಡುವವರು, ದೇಹದಲ್ಲಿ ಶಕ್ತಿ ಇರುವವರು ಬೆಳಗ್ಗೆಯಿಂದ ಉಪವಾಸ ಇದ್ದು, ಸಂಜೆ ವಿವಿಧ ಖಾದ್ಯ ತಯಾರಿಸಿ, ಅದನ್ನು ನೈವೇದ್ಯ ಮಾಡಬೇಕು. ಸಂಜೆಯೇ ಪೂಜೆ ಮಾಡಬೇಕು” ಎಂದು ಗುರೂಜಿ ಹೇಳಿದ್ದಾರೆ.
ಏನು ಮಾಡಬೇಕು?
“ಎಷ್ಟೇ ಆಡಂಬರ ಮಾಡಿದ್ರೂ ಕೂಡ ಒಂದು ಕಳಶ ಇಡ್ತೀರಿ. ಹೀಗಾಗಿ ತಾಮ್ರದ ಕೊಡದಲ್ಲಿ ದೇವಿ ಮಾಡಬೇಕು. ಇದರಿಂದ ದೇವಿ ಆಕರ್ಷಿತಳಾಗುತ್ತಾಳೆ, ಆಹ್ವಾನ ಆಗುವುದು. ಅಮ್ಮಾ ಮಹಾಲಕ್ಷ್ಮೀ ದೇವಿ, ಕಮಲವಾಸಿನಿ, ನನ್ನ ಕಷ್ಟಗಳನ್ನು ಪರಿಹಾರ ಮಾಡು ಎಂದು ಸಾತ್ವಿಕ ಪ್ರಾರ್ಥನೆಯಿಂದ ಅಮ್ಮನವರನ್ನು ನೀವು ಮೆಚ್ಚಿಸಬಹುದು. ಬೆಳ್ಳಿ ಬಂಗಾರದಿಂದ ದೇವಿ ರೆಡಿ ಮಾಡಿದ್ರೆ ಪ್ರಯೋಜನ ಇಲ್ಲ” ಎಂದು ಶ್ರೀ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ ಹೇಳಿದ್ದಾರೆ.

