ಉಡುಪಿಯಲ್ಲಿ 2 ದಿನ ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ರಥಬೀದಿಯಲ್ಲಿ ಮುದ್ದು ಕೃಷ್ಣರ ಕಲರವ

ದೇವಾಲಯಗಳ ನಗರಿ, ಉಡುಪಿಯಲ್ಲಿ ಅಷ್ಟಮಿಯ ಸಂಭ್ರಮ ಮುಗಿಲು ಮುಟ್ಟಿದೆ. ಅಷ್ಟಮಠಗಳ ರಥ ಬೀದಿ ಮಾತ್ರವಲ್ಲದೆ ಉಡುಪಿಯ ಮನೆ ಮನೆಗಳಲ್ಲೂ ಕೃಷ್ಣ ಜಪ ಆನುರಣಿಸುತ್ತಿದೆ.

Udupi to celebrate Janmashtami  Vitla Pindi tomorrow gow

ಉಡುಪಿ (ಆ.19): ದೇವಾಲಯಗಳ ನಗರಿ, ಉಡುಪಿಯಲ್ಲಿ ಅಷ್ಟಮಿಯ ಸಂಭ್ರಮ ಮುಗಿಲು ಮುಟ್ಟಿದೆ. ಅಷ್ಟಮಠಗಳ ರಥ ಬೀದಿ ಮಾತ್ರವಲ್ಲದೆ ಉಡುಪಿಯ ಮನೆ ಮನೆಗಳಲ್ಲೂ ಕೃಷ್ಣ ಜಪ ಆನುರಣಿಸುತ್ತಿದೆ. ಹಗಲಿಡೀ ಉಪವಾಸವಿರುವ ಭಕ್ತರು ನಡುರಾತ್ರಿ ನಡೆಯುವ ಅರ್ಘ್ಯಯಪ್ರದಾನಕ್ಕೆ ಭಕ್ತಿಯಿಂದ ಕಾಯುತ್ತಿದ್ದಾರೆ. ಉಡುಪಿಯ ಕೃಷ್ಣಮಠದಲ್ಲಿ ಅಷ್ಟಮಿಯ ಸಂಭ್ರಮ ಮನೆ ಮಾಡಿದೆ. ಬೆಳಗಿನಿಂದಲೇ ಸಾವಿರಾರು ಭಕ್ತರು ಕಡಗೋಲು ಕೃಷ್ಣನ ದರ್ಶನ ಕೈಗೊಳ್ಳುತ್ತಿದ್ದಾರೆ ಶೋಡಶೋಪಚಾರ ಪೂಜೆಗಳೊಂದಿಗೆ ಉಡುಪಿಯ ಕೃಷ್ಣನನ್ನು ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರು ಆರಾಧಿಸುತ್ತಿದ್ದಾರೆ. ರಥಬೀದಿಯಲ್ಲಿ ಕೃಷ್ಣ ಪೂಜೆಗೆ ಬಗೆ ಬಗೆಯ ತಯಾರಿಗಳು ನಡೆದಿದೆ. ಇಂದು ಹಗಲಡಿ ಉಪವಾಸವಿರುವ ಭಕ್ತರು ಕೃಷ್ಣಜಪ ಮಾಡುತ್ತಿದ್ದಾರೆ ನಡುರಾತ್ರಿ 11:54ಕ್ಕೆ ಅರ್ಘ್ಯ ಪ್ರದಾನ ನಡೆಯಲಿದ್ದು ಈ ವೇಳೆ ದೇವರಿಗೆ ಅರ್ಪಿಸಲು ಬೇಕಾದ ಉಂಡೆ ಚಕ್ಕುಲಿಗಳ ತಯಾರಿ ಬರದಿಂದ ಸಾಗಿದೆ. ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಸ್ವತಹ ದೇವರ ಸಮರ್ಪಣೆಗೆ ಉಂಡೆ- ಚಕ್ಕುಲಿ ತಯಾರಿಸಿದ್ದಾರೆ. ಇಂದು ಕೃಷ್ಣ ಜನ್ಮಾಷ್ಟಮಿ ನಡೆದರೆ ನಾಳೆ ವಿಟ್ಲಪಿಂಡಿ ಮಹೋತ್ಸವ ಜರುಗಲಿದೆ. ಶ್ರೀ ಕೃಷ್ಣನ ಹುಟ್ಟನ್ನು ಸಂಭ್ರಮಿಸುವ ಶ್ರೀ ಕೃಷ್ಣ ಲೀಲೋತ್ಸವದಲ್ಲಿ ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. 50,000ಕ್ಕೂ ಅಧಿಕ ಜನರಿಗೆ ಮಠದಲ್ಲಿ ಭೋಜನ ಪ್ರಸಾದಕ್ಕೆ ತಯಾರಿ ನಡೆಯುತ್ತಿದೆ. ಬಗೆ ಬಗೆಯ ವೇಷಗಳನ್ನು ಧರಿಸುವುದು ಉಡುಪಿ ಅಷ್ಟಮಯ ವಿಶೇಷ. ಇಂದು ರಥ ಬೀದಿಯ ತುಂಬೆಲ್ಲ ಮುದ್ದು ಕೃಷ್ಣರ ಕಲರವ ಜೋರಾಗಿತ್ತು. 

ಜೀವನದಲ್ಲಿ ಒಮ್ಮೆಯಾದರೂ ತಮ್ಮ ಮಕ್ಕಳನ್ನು ಮುದ್ದುಕೃಷ್ಣರ ವೇಷದಲ್ಲಿ ಕಾಣಬೇಕೆಂಬುದು ಪ್ರತಿಯೊಬ್ಬ ಹೆತ್ತವರ ಆಸೆಯಾಗಿರುತ್ತೆ. ಇಂದು ಸಾವಿರಾರು ಜನ ತಮ್ಮ ಮಕ್ಕಳಿಗೆ ಮುದ್ದುಕೃಷ್ಣ ವೇಷ ಧರಿಸಿ ಕೃಷ್ಣ ಮಠಕ್ಕೆ ಕರೆದುಕೊಂಡು ಬಂದಿದ್ದರು. ಉಡುಪಿಯ ತುಂಬೆಲ್ಲ ನಾನಾ ಬಗೆಯ ವೇಷದಾರಿಗಳು ಗಮನ ಸೆಳೆದರು. ಉಡುಪಿಯ ಮಣಿಪಾಲ ದಲ್ಲಿರುವ ಮಾಹೆ ವಿಶ್ವವಿದ್ಯಾಲಯದ ಆವರಣದಲ್ಲಂತೂ ಹುಲಿ ವೇಷದಾರಿಗಳೊಂದಿಗೆ ದೇಶ ವಿದೇಶದ ವಿದ್ಯಾರ್ಥಿಗಳನ್ನು ಕುಣಿದು ಕುಪ್ಪಳಿಸಿದರು.

ಅಷ್ಟಮಠಗಳ ಉಡುಪಿ ಕೃಷ್ಣ ಭಕ್ತಿಯಲ್ಲಿ ಮಿಂದೇಳುತ್ತಿದೆ. ನಾಳೆ ವಿಟ್ಲಪಂಡಿಯ ಸಂದರ್ಭದಲ್ಲಿ ಸಾಂಪ್ರದಾಯಿಕ ವೇಷದಾರಿ ಗೊಲ್ಲರು ಮೊಸರು ಕುಡಿಕೆಗಳನ್ನು ಒಡೆಯುವ ಮೂಲಕ ಹಬ್ಬ ಆಚರಿಸುತ್ತಾರೆ.

ಉಡುಪಿಯಲ್ಲಿ ಈ ಬಾರಿ 2 ದಿನ ಕೃಷ್ಣ ಜನ್ಮಾಷ್ಟಮಿ
ದಕ್ಷಿಣ ಭಾರತದಲ್ಲಿಯೇ ಅತಿ ವಿಜೃಂಭಣೆಯಿಂದ ನಡೆಯುವ ಉಡುಪಿ ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿಗೆ ನಡೆಯುತ್ತಿದೆ. ಆದರೆ ಉಡುಪಿಯಲ್ಲಿ ಈ ಬಾರಿ 2 ದಿನ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಪೇಜಾವರ ಮಠ, ಪಲಿಮಾರು ಮಠ, ಅದಮಾರು ಮಠಗಳಲ್ಲಿ ಆ.18ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ, ಕೃಷ್ಣಾಪುರ ಮಠ, ಕಾಣಿಯೂರು ಮಠ, ಶಿರೂರು ಮಠ, ಸೋದೆ ಮಠ, ಪುತ್ತಿಗೆ ಮಠಗಳಲ್ಲಿ ಆ.19ರಂದು ಆಚರಿಸಲಾಗುತ್ತಿದೆ.

ಉಡುಪಿ ಕೃಷ್ಣಮಠದಲ್ಲಿ ಅಷ್ಟಮಿಗೆ ಭರದ ಸಿದ್ಧತೆ: ಭಕ್ತರಿಗೆ ಹಂಚಲು ಲಕ್ಷಾಂತರ ಚಕ್ಕುಲಿ ತಯಾರಿ

ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಅದರಂತೆ ಆ.18ರಂದು ಕೃಷ್ಣ ಉಡುಪಿಯ 3 ಮಠಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಆದರೆ ಕೃಷ್ಣನ ಅವತಾರದ ದಿನ ರೋಹಣಿ ನಕ್ಷತ್ರವೂ ಇತ್ತು. ಆದ್ದರಿಂದ ಜನ್ಮಾಷ್ಟಮಿಗೆ ರೋಹಣಿ ನಕ್ಷತ್ರ ಬೇಕು ಎನ್ನುವ ಸಂಪ್ರದಾಯದ ಇತರ 5 ಮಠಗಳು ಆ.19ರಂದು ಮುಂಜಾನೆ ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿವೆ.

Panchanga: ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ಕೃಷ್ಣನ ಅವತಾರ ಹೇಗಾಯಿತು?

ಮರುದಿನ ವಿಠಲಪಿಂಡಿ: ಮರುದಿನ ಸಾರ್ವಜನಿಕರಿಗಾಗಿ ವೈಭವದ ಶ್ರೀ ಕೃಷ್ಣ ಲೀಲೋತ್ಸವ, ವಿಟ್ಲಪಿಂಡಿ ಆಚರಣೆಗಳು ನಡೆಯುತ್ತವೆ. ಈ ಬಾರಿ ಎಲ್ಲ 8 ಮಠಗಳು ಈ ಆಚರಣೆಗಳನ್ನು ಆ.20ರಂದು ಆಚರಿಸಲು ನಿರ್ಧರಿಸಿವೆ. ಒಟ್ಟಿನಲ್ಲಿ ಈ ಬಾರಿ 3 ದಿನಗಳ ಕಾಲ ಕೃಷ್ಣಾಷ್ಟಮಿ-ಲೀಲೋತ್ಸವ ಆಚರಣೆಗಳು ನಡೆಯಲಿವೆ.

Latest Videos
Follow Us:
Download App:
  • android
  • ios