ಉಡುಪಿ ಕೃಷ್ಣಮಠದಲ್ಲಿ ಅಷ್ಟಮಿಗೆ ಭರದ ಸಿದ್ಧತೆ: ಭಕ್ತರಿಗೆ ಹಂಚಲು ಲಕ್ಷಾಂತರ ಚಕ್ಕುಲಿ ತಯಾರಿ
ಉಡುಪಿ ಮಠದಲ್ಲಿ ಶ್ರೀಕೃಷ್ಣ ಜನ್ಮಷ್ಟಮಿಗೆ ಭರದ ಸಿದ್ಧತೆ ನಡೆದಿದ್ದು, ಭಕ್ತರಿಗೆ ಹಂಚಲು ಲಕ್ಷಾಂತರ ಚಕ್ಕುಲಿ ಸಿದ್ಧ ಮಾಡಲಾಗುತ್ತಿದೆ.
ಉಡುಪಿ: ದೇವಾಲಯಗಳ ನಗರಿ ಉಡುಪಿ ಕೃಷ್ಣ ಜನ್ಮಾಷ್ಟಮಿಗೆ ಸಿದ್ದಗೊಳ್ಳುತ್ತಿದೆ. ಈ ಬಾರಿ ಎರಡು ಅಷ್ಟಮಿಗಳ ಗೊಂದಲವಿದ್ದರೂ, ಜನರು ಪರ್ಯಾಯ ಕೃಷ್ಣಾಪುರ ಮಠವನ್ನು ಅನುಸರಿಸುವುದರಿಂದ, ಶುಕ್ರವಾರ ಮತ್ತು ಶನಿವಾರ ಶ್ರೀ ಕೃಷ್ಣ ಜಯಂತಿ ಉತ್ಸವ ಸಂಭ್ರಮದಿಂದ ಜರುಗಲಿದೆ. ಆಗಸ್ಟ್ 19 ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ನಡೆದರೆ, ಆಗಸ್ಟ್ 20 ಶನಿವಾರ ವಿಟ್ಲಪಿಂಡಿ ಮಹೋತ್ಸವ ಜರುಗಲಿದೆ. ಸಂಪೂರ್ಣ ನಗರವೇ ಈ ಹಬ್ಬದ ಆಚರಣೆಗೆ ತೆರೆದುಕೊಳ್ಳುತ್ತಿದೆ. ಕೋವಿಡ್ ನಿಂದಾಗಿ ಕಳೆದ ಎರಡು ವರ್ಷಗಳ ಕಾಲ ವೈಭವದ ಅಷ್ಟಮಿ ನಡೆದಿರಲಿಲ್ಲ. ಹಾಗಾಗಿ ಈ ಬಾರಿ ವೈಭವದ ಹಬ್ಬ ಆಚರಿಸಲು ಜನ ತುದಿಗಾಲಲ್ಲಿ ಕಾಯುತ್ತಿದ್ದಾರೆ.
ಅಷ್ಟಮಠಗಳ ಪೈಕಿ ಪೇಜಾವರ, ಪಲಿಮಾರು ಹಾಗೂ ಅದಮಾರು ಮಠದವರು ಗುರುವಾರವೇ ಅಷ್ಟಮಿ ಆಚರಿಸಿದ್ದಾರೆ. ಉಳಿದಂತೆ ಪರ್ಯಾಯ ಕೃಷ್ಣಾಪುರ ಮಠ,ಕಾಣೆಯೂರು ಮಠ, ಸೋದೆ ಮಠ ,ಶಿರೂರು ಮಠ ಹಾಗೂ ಪುತ್ತಿಗೆ ಮಠದವರು ಶುಕ್ರವಾರ ಅಷ್ಟಮಿ ಆಚರಿಸುತ್ತಾರೆ. ಭಕ್ತರು ದಿನವಿಡೀ ಉಪವಾಸವಿದ್ದು ಕೃಷ್ಣ ಜಪ ಮಾಡಲಿದ್ದಾರೆ. ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಕಡಗೋಲು ಕೃಷ್ಣನಿಗೆ ಹಲವು ಬಗೆಯ ಪೂಜೆ ಸಲ್ಲಿಸಲಿದ್ದಾರೆ. ಶುಕ್ರವಾರ ನಡುರಾತ್ರಿ 11:54ಕ್ಕೆ ಶ್ರೀ ಕೃಷ್ಣದೇವರಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ದಿನವಿಡೀ ಉಪವಾಸವಿರುವ ಭಕ್ತರು ಬಗೆ ಬಗೆಯ ನೈವೇದ್ಯಗಳನ್ನು ಕೃಷ್ಣದೇವರಿಗೆ ಈ ವೇಳೆ ಅರ್ಪಿಸಿ ಮರುದಿನ ಶ್ರೀ ಕೃಷ್ಣ ಲೀಲೋತ್ಸವದಲ್ಲಿ ಭಾಗಿಯಾಗುತ್ತಾರೆ.
Janmashtami 2022: ಕೃಷ್ಣಾಷ್ಟಮಿಗೆ ಉಪವಾಸ ಮಾಡ್ತಿದ್ದೀರಾ? ಈ ಟಿಪ್ಸ್ ನಿಮಗಾಗಿ
ಉಡುಪಿಯ ಅಷ್ಟಮಿಗೆ ವೇಷಗಳ ಅಬ್ಬರ ಹೊಸ ಕಳೆಕಟ್ಟುತ್ತದೆ ಈ ಬಾರಿಯೂ ಹುಲಿ ವೇಷ ಸೇರಿದಂತೆ ನೂರಾರು ವೇಷದಾರಿಗಳು ಹಬ್ಬದ ಸಂಭ್ರಮ ಹೆಚ್ಚಿಸಲು ತಯಾರಿ ನಡೆಸಿದ್ದಾರೆ. ಮಲ್ಪೆ, ಕುಂಜಿಬೆಟ್ಟು ಸೇರಿದಂತೆ ಹಲವು ಕಡೆ ಹುಲಿವೇಷ ಸ್ಪರ್ಧೆ ಏರ್ಪಡಿಸಲಾಗಿದೆ. ಶುಕ್ರವಾರ ಬೆಳಗ್ಗೆ ಶ್ರೀಕೃಷ್ಣ ಮಠದಲ್ಲಿ ಮುದ್ದುಕೃಷ್ಣರ ಕಲರವ ಏರ್ಪಡಲಿದೆ. ಸಾವಿರಾರು ಮಕ್ಕಳು ಮುದ್ದುಕೃಷ್ಣ ವೇಷ ಧರಿಸಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ರಥಬೀದಿಯ ಸುತ್ತಲೂ ಹೂವಿನ ಮಾರುಕಟ್ಟೆ ತೆರೆದುಕೊಂಡಿದೆ. ಶ್ರೀ ಕೃಷ್ಣದೇವರ ಪೂಜೆಗೆ ಬಳಸುವ ಬಗೆ ಬಗೆಯ ಹೂವುಗಳು ಮಾರುಕಟ್ಟೆಯಲ್ಲಿವೆ. ವಿಟ್ಲಪಿಂಡಿ ಉತ್ಸವದ ವೇಳೆ ಭಕ್ತರಿಗೆ ಹಂಚಲು ಲಕ್ಷಾಂತರ ಉಂಡೆ ಚಕ್ಕುಲಿಗಳ ತಯಾರಿ ನಡೆಯುತ್ತಿದೆ. ಕಡಗೋಲು ಕೃಷ್ಣನ ದರ್ಶನಕ್ಕೆ ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಲಿದ್ದು, ರಥ ಬೀದಿಯಲ್ಲಿ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.
ಕೃಷ್ಣನಿಗೆ ಇಷ್ಟವಾಗುವ ಈ ಖಾದ್ಯಗಳು ಜನ್ಮಾಷ್ಟಮಿಯಲ್ಲಿ ಇರಲಿ!