ವಿಶ್ವಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತರಿಗೆ ಇನ್ನು ಮುಂದೆ ಅನ್ನ ಪ್ರಸಾದದ ಜೊತೆ ಮಸಾಲೆ ವಡೆಯನ್ನು ಕೂಡ ನೀಡುವುದಕ್ಕೆ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ತೀರ್ಮಾನಿಸಿದೆ.

ವಿಶ್ವಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತರಿಗೆ ಇನ್ನು ಮುಂದೆ ಅನ್ನ ಪ್ರಸಾದದ ಜೊತೆ ಮಸಾಲೆ ವಡೆಯನ್ನು ಕೂಡ ನೀಡುವುದಕ್ಕೆ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ತೀರ್ಮಾನಿಸಿದೆ. ಮಸಾಲೆ ವಡೆಯನ್ನು ಮೆನುವಿನಲ್ಲಿ ಸೇರಿಸಲು ಟಿಟಿಡಿ ನಿರ್ಧರಿಸಿದ ಹಿನ್ನೆಲೆ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕೇಂದ್ರವು ಮಸಾಲೆ ವಡೆಯನ್ನು ತನ್ನ ಮೆನುವಿನಲ್ಲಿ ಸೇರಿಸಿದ್ದು, ಸೋಮವಾರದಿಂದಲೇ ಭಕ್ತರಿಗೆ ಮಸಾಲೆ ವಡೆ ಬಡಿಸಲು ಆರಂಭಿಸಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ತಯಾರಿಸಲಾಗುತ್ತಿರುವ ಮಸಾಲ ವಡೆಗಳನ್ನು ಭೋಜನದೊಂದಿಗೆ ಸೇರಿಸುವ ಮೂಲಕ ಭಕ್ತರಿಗೆ ರುಚಿಕರವಾದ ಅನುಭವವನ್ನು ನೀಡಲು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.

ಇದರ ಪ್ರಯುಕ್ತ ಪ್ರಾಯೋಗಿಕವಾಗಿ ನಿನ್ನೆ 5,000 ಮಸಾಲ ವಡೆಗಳನ್ನು ಭಕ್ತರಿಗೆ ಬಡಿಸಲಾಗಿದೆ. ಮೆನು ಬದಲಾವಣೆಗಳನ್ನು ಅಂತಿಮಗೊಳಿಸುವ ಮೊದಲು ಯಾವುದೇ ನ್ಯೂನತೆಗಳಿದ್ದರೆ ಸರಿಪಡಿಸಲಿದ್ದಾರೆ. ಇನ್ನೊಂದು ವಾರ ಪ್ರಾಯೋಗಿಕವಾಗಿ ಮಸಾಲೆ ವಡೆಗಳನ್ನು ನೀಡಿದ ನಂತರ ಮುಂದಿನ ದಿನಗಳಲ್ಲಿ ಇದು ಸಂಪೂರ್ಣವಾಗಿ ಜಾರಿಯಾಗಲಿದೆ. ಟಿಟಿಟಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುವ ಔಪಚಾರಿಕ ಕಾರ್ಯಕ್ರಮದ ಸಂದರ್ಭದಲ್ಲಿ ಮಸಾಲ ವಡೆಗಳು ಸೇರಿದಂತೆ ನವೀಕರಿಸಿದ ಮೆನುವನ್ನು ಬಿಡುಗಡೆ ಮಾಡಲು ಟಿಟಿಡಿ ಯೋಜಿಸಿದೆ.

ಇತ್ತ ವಡೆ ಜೊತೆ ಅನ್ನ ಪ್ರಸಾದ ಸೇವಿಸಿದ ಭಕ್ತರು ಅನ್ನಪ್ರಸಾದದ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಜನವರಿ 10ರಿಂದ 19ರವರೆಗೆ ತಿರುಪತಿಯಲ್ಲಿ 6.83 ಲಕ್ಷ ಜನ ದರ್ಶನ ಪಡೆದಿದ್ದಾರೆ. 1,13,132 ಜನ ಮುಡಿ ಅರ್ಪಿಸಿದ್ದು, ಈ ದಿನಗಳಲ್ಲಿ ಒಟ್ಟು, 34.43 ಕೋಟಿ ಹುಂಡಿ ಹಣ ಸಂಗ್ರಹವಾಗಿದೆ.