ಇವರು ಹಣ ವ್ಯಯಿಸಿದರೆ, ಅವರು ಉಳಿಸುತ್ತಾರೆ, ನಿಮ್ಮ ರಾಶಿ ತತ್ವ ಯಾವುದು?
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ರಾಶಿಯನ್ನು ಅಗ್ನಿ, ಪೃಥ್ವಿ, ಜಲ ಮತ್ತು ವಾಯು ತತ್ತ್ವಗಳಾಗಿ ವಿಂಗಡಿಸಲಾಗಿದೆ. ಅಗ್ನಿ ತತ್ತ್ವದವರು ಹಣವನ್ನು ಖರ್ಚು ಮಾಡುವವರಾದರೂ,ಯೋಚಿಸಿಯೇ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುತ್ತಾರೆ. ಹಾಗೆಯೇ ಪ್ರತ್ಯೇಕ ತತ್ತ್ವದಡಿಯಲ್ಲಿ ಬರುವ ರಾಶಿಯವರು ಹಣವನ್ನು ಖರ್ಚು ಮಾಡುವ ವಿಚಾರದಲ್ಲಿ ಭಿನ್ನತೆಯನ್ನು ಹೊಂದಿರುತ್ತಾರೆ. ಯಾವ್ಯಾವ ರಾಶಿಯವರ ಸ್ವಭಾವ ಹಣದ ವಿಚಾರದಲ್ಲಿ ಹೇಗಿರುತ್ತದೆ ಎಂಬುದನ್ನು ನೋಡೋಣ..
ವ್ಯಕ್ತಿತ್ವದಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಭಿನ್ನ. ರಾಶಿಯಲ್ಲೂ ಅಷ್ಟೇ ಒಂದು ರಾಶಿಯ ಗುಣ ಸ್ವಭಾವಗಳು ಬೇರೆ ರಾಶಿಗಿಂತ ಭಿನ್ನವಾಗಿರುತ್ತದೆ. ಕೆಲವು ರಾಶಿಯವರು ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದರೆ, ಮತ್ತೆ ಕೆಲವು ರಾಶಿಯವರು ಹಣವನ್ನು ಧಾರಾಳವಾಗಿ ಖರ್ಚು ಮಾಡುತ್ತಾರೆ. ಆರ್ಥಿಕ ಸ್ಥಿತಿಯು ಚೆನ್ನಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಕೆಲವರು ಇದ್ದುದರಲ್ಲೇ ತೃಪ್ತಿಪಟ್ಟುಕೊಂಡು, ಯಾವುದಕ್ಕೂ ಕಡಿಮೆ ಮಾಡಿಕೊಳ್ಳದೇ ಯೋಜನೆಯ ಅನುಸಾರ ಜೀವನ ನಡೆಸುತ್ತಾರೆ. ಬೇರೆ ಬೇರೆ ರಾಶಿಯ ವ್ಯಕ್ತಿಗಳು ಹಣವನ್ನು ವ್ಯಯಿಸುವುದರಲ್ಲಾಗಲಿ, ಕೂಡಿಡುವುದರಲ್ಲಾಗಲಿ ವ್ಯತ್ಯಾಸವಿರುತ್ತದೆ.
ಕೆಲವರು ದುಡಿಮೆಯಿಂದ ಗಳಿಸಿದ್ದರಲ್ಲಿ ಸ್ವಲ್ಪ ಹಣವನ್ನು ದಾನವಾಗಿ ನೀಡುತ್ತಾರೆ, ಮತ್ತೆ ಕೆಲವರು ಎಷ್ಟೇ ದುಡಿದರೂ ಖರ್ಚು ಮಾಡದೇ ಹಾಗೆಯೇ ಕೂಡಿಡುತ್ತಾರೆ. ಹಣದ ವಿಷಯದಲ್ಲಿ ಯಾವ್ಯಾವ ರಾಶಿಯವರ ಸ್ವಭಾವ ಹೇಗೆ ಎಂಬುದನ್ನು ತಿಳಿಯಬಹುದು. ಹನ್ನೆರಡು ರಾಶಿಗಳನ್ನು ನಾಲ್ಕು ಭಾಗವಾಗಿ ಅಂದರೆ ಅಗ್ನಿ, ಪೃಥ್ವಿ, ವಾಯು ಮತ್ತು ಜಲತತ್ತ್ವ ರಾಶಿಗಳಾಗಿ ವಿಂಗಡಿಸುತ್ತಾರೆ.
ಇದನ್ನು ಓದಿ: ಉದ್ಯೋಗದಲ್ಲಿ ಪ್ರಮೋಶನ್‌ಗೆ ಹೀಗೆ ಮಾಡಿ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ..!
ಹಣ ವ್ಯಯ ಮಾಡುವ ಅಗ್ನಿ ತತ್ತ್ವ ರಾಶಿಯವರು ಇವರು
ಮೇಷ, ಸಿಂಹ ಮತ್ತು ಧನು ರಾಶಿಗಳು ಅಗ್ನಿ ತತ್ತ್ವ ರಾಶಿಗಳಾಗಿವೆ. ಈ ಅಗ್ನಿ ತತ್ತ್ವ ರಾಶಿಯವರು ಹಣ ವ್ಯಯ ಮಾಡುವುದರಲ್ಲಿ ನಿಸ್ಸೀಮರು. ಹಾಗಂತ ಯೋಚಿಸದೇ ಖರ್ಚು ಮಾಡುವವರಲ್ಲ. ಯೋಜನೆ ಹಾಕಿಕೊಂಡು ಹಣವನ್ನು ಎಲ್ಲಿ, ಎಷ್ಟು, ಹೇಗೆ ಹೂಡಿಕೆ ಮಾಡಿದರೆ ಲಾಭ ಬರುವುದೆಂಬ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಅದರಂತೆಯೇ ನಡೆಯುವವರು. ಹಣ ನಿರ್ವಹಣೆಯಲ್ಲಿ ಹೆಚ್ಚು ಕೌಶಲ್ಯವನ್ನು ಹೊಂದಿರುತ್ತಾರೆ ಈ ಅಗ್ನಿತತ್ತ್ವ ರಾಶಿಯವರು. ಈ ಮೂರು ರಾಶಿಯವರಿಗೆ ಅವರ ರಾಶಿತತ್ತ್ವವಾದ ಅಗ್ನಿಯು ಮತ್ತಷ್ಟು ಹೆಚ್ಚೆಚ್ಚು ಹಣವನ್ನು ಗಳಿಸುವಲ್ಲಿ ಉತ್ತೇಜಿಸುತ್ತದೆ. ಹಣದ ವಿಚಾರವಾಗಿ ಯಾವುದೇ ನಿರ್ಣಯವನ್ನು ಯೋಚಿಸಿ ತೆಗೆದುಕೊಳ್ಳುತ್ತಾರೆ.
ಇದನ್ನು ಓದಿ: ವಾಸ್ತು ದೋಷ ನಿವಾರಣೆಗೆ ಹೀಗೆ ಗಣಪತಿ ಪೂಜೆ ಮಾಡಿ..
ಹಣ ಕೂಡಿಡುವ ಪೃಥ್ವಿ ತತ್ತ್ವ ರಾಶಿಯವರು ಇವರು
ವೃಷಭ, ಕನ್ಯಾ ಮತ್ತು ಮಕರ ರಾಶಿಯವರು ಪೃಥ್ವಿ ತತ್ತ್ವದಡಿಯಲ್ಲಿ ಬರುವ ರಾಶಿಗಳು. ಈ ರಾಶಿಯವರು ಹಣವನ್ನು ವ್ಯಯ ಮಾಡದೇ ಉಳಿಸುವ ಪ್ರವೃತ್ತಿಯವರು. ವೆಚ್ಚದ ಬಗ್ಗೆ ಯೋಚಿಸಿ, ಯಾವುದಕ್ಕೆ ಎಷ್ಟು ಎಂಬ ಬಗ್ಗೆ ನಿರ್ಧರಿಸಿ ಖರ್ಚು ಮಾಡುವುದಲ್ಲದೇ, ಹಣ ನಿರ್ವಹಣೆಯನ್ನು ಚೆನ್ನಾಗಿ ನಿಭಾಯಿಸಬಲ್ಲವರಾಗಿರುತ್ತಾರೆ.
ಭವಿಷ್ಯಕ್ಕಾಗಿ ಹಣವನ್ನು ಕೂಡಿಡುತ್ತಾರೆ, ತುರ್ತು ಖರ್ಚುಗಳ ನಿರ್ವಹಣೆಗೆಂದೇ ಒಂದಷ್ಟು ಹಣವನ್ನು ತೆಗೆದಿಡುವ ಸ್ವಭಾವ ಈ ರಾಶಿಯವರದ್ದಾಗಿರುತ್ತದೆ. ವಸ್ತುಗಳನ್ನು ಖರೀದಿಸುವಾಗ ಅಳೆದು ತೂಗಿ ಹಣದ ಮೌಲ್ಯಕ್ಕೆ ಸರಿಹೊಂದುತ್ತದೆಯೇ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳುತ್ತಾರೆ. ಸರಿಯಾದ ರೀತಿಯಲ್ಲಿ ಹಣವನ್ನು ಉಪಯೋಗಿಸಿಕೊಳ್ಳುತ್ತಾರೆ.
ಭವಿಷ್ಯಕ್ಕಾಗಿ ಹಣ ಉಳಿಸುವವರು ಈ ವಾಯು ತತ್ತ್ವ ರಾಶಿಯವರು
ಮಿಥುನ, ತುಲಾ ಮತ್ತು ಕುಂಭ ರಾಶಿಯವರು ವಾಯು ತತ್ತ್ವ ರಾಶಿಯವರು. ಹಣದ ವಿಚಾರದಲ್ಲಿ ಭಾವನೆ ಮತ್ತು ಹಠ ಎರಡೂ ಗುಣವನ್ನು ವ್ಯಕ್ತಪಡಿಸುತ್ತಾರೆ. ಮಿಥುನ ಮತ್ತು ಕುಂಭ ರಾಶಿಯವರು ಹಣದ ವಿಚಾರದಲ್ಲಿ ಸ್ವಂತವಾಗಿ ನಿರ್ಧಾರವನ್ನು ತೆಗೆದುಕೊಳ್ಳುವ ಸಂಗಾತಿಯನ್ನು ಇಷ್ಟಪಡುತ್ತಾರೆ. ತುಲಾ ರಾಶಿಯವರು ಅವರದೇ ನಿರ್ಧಾರದಿಂದ ಹಣವನ್ನು ವ್ಯಯ ಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ.ಈ ತತ್ತ್ವದವರು ಕೆಲವು ಬಾರಿ ಹಣದ ಬಗ್ಗೆ ಅಜಾಗರೂಕತೆಯನ್ನು ಪ್ರದರ್ಶಿಸಿದರೂ ಭವಿಷ್ಯದ ವಿಚಾರದಲ್ಲಿ ಹೆಚ್ಚು ಗಂಭೀರತೆಯಿಂದ ಹಣವನ್ನು ಕೂಡಿಡುವ ಬಗ್ಗೆ ಚಿಂತಿಸುತ್ತಾರೆ.
ಇದನ್ನು ಓದಿ: ಆಗಸ್ಟ್‌ನಲ್ಲಿ ಜನಿಸಿದವರ ಗುಣ ಸ್ವಭಾವಗಳು ಹೀಗಿರುತ್ತವೆ..!
ಹಣದ ಬಗ್ಗೆ ಹೆಚ್ಚು ಜಾಗರೂಕರು ಈ ಜಲ ತತ್ತ್ವ ರಾಶಿಯವರು
ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಯವರು ಜಲ ತತ್ತ್ವದವರು. ಹಣದ ವಿಚಾರದಲ್ಲಿ ಹೆಚ್ಚು ಜಾಗೃತ ಸ್ವಭಾವವನ್ನು ಹೊಂದಿರುತ್ತಾರೆ. ಈ ವಿಚಾರದಲ್ಲಿ ಅಜಾಗರೂಕತೆಯನ್ನು ಎಂದೂ ಪ್ರದರ್ಶಿಸುವುದಿಲ್ಲ. ಜಲತತ್ತ್ವವಾದ ಕಾರಣ ಕಷ್ಟಕಾಲಕ್ಕೆಂದು ಹಣವನ್ನು ಉಳಿಸುವ ಗುಣವನ್ನು ಹೊಂದಿರುತ್ತಾರೆ. ಕರ್ಕಾಟಕ ರಾಶಿಯವರು ಹಣದ ಬಗ್ಗೆ ಒಮ್ಮೊಮ್ಮೆ ಅಜಾಗರೂಕತೆ ತೋರಿದರೂ ಸತ್ಯಸಂಗತಿ ತಿಳಿದು ಜಾಗ್ರತೆ ವಹಿಸುತ್ತಾರೆ. ಹಠಾತ್ ಪ್ರವೃತ್ತಿಯನ್ನು ಹೊಂದಿರುವ ವೃಶ್ಚಿಕ ರಾಶಿಯವರು ಹಣವನ್ನು ಗಳಿಸುತ್ತಾರೆ ಮತ್ತು ಕೂಡಿಡುತ್ತಾರೆ. ಹಣದ ವಿಚಾರದಲ್ಲಿ ಮೀನ ರಾಶಿಯವರು ಅದೃಷ್ಟವಂತರಾಗಿರುತ್ತಾರೆ.