ಸಾವಿನ ನಂತರ ಏನಾಗುತ್ತದೆ ಎಂಬ ಪ್ರಶ್ನೆಗೆ ವಿವಿಧ ಧರ್ಮಗಳಲ್ಲಿ ವಿವಿಧವಾದ ಉತ್ತರಗಳು ಸಿಗುತ್ತವೆ. ಹಿಂದೂ ಧರ್ಮದ ಪ್ರಕಾರ ಸಾವಿನ ಬಳಿಕ ದೇಹದಿಂದ ಆತ್ಮ ಹೊರಹೋಗಿ ಬೇರೊಂದು ಶರೀರವನ್ನು ಪ್ರವೇಶಿಸುತ್ತದೆ. ಆದ್ದರಿಂದ ದೇಹಕ್ಕೆ ಸಾವೇ ಹೊರತು ಆತ್ಮಕ್ಕೆ ಸಾವಿಲ್ಲ ಎನ್ನುತ್ತದೆ. ಇದನ್ನೇ ಪುನರ್ಜನ್ಮ ಎನ್ನುತ್ತೇವೆ. ಆದ್ದರಿಂದಲೇ ಹೆಚ್ಚಿನವರು ತಮ್ಮ ಆತ್ಮೀಯತೆ ಮತ್ತು ಪ್ರೀತಿಯನ್ನು ತೋರ್ಪಡಿಸಲು ಮುಂದಿನ ಜನ್ಮದಲ್ಲೂ ನಿನ್ನ ಹೊಟ್ಟೆಯಲ್ಲಿಯೇ ಮತ್ತೊಮ್ಮೆ ಹುಟ್ಟಿ ಬರುವೆ, ಏಳೇಳು ಜನ್ಮಕ್ಕೂ ನೀವೇ ನನಗೆ ಗಂಡನಾಗಬೇಕು ಎಂಬ ಮಾತುಗಳನ್ನು ಬಳಸುತ್ತಾರೆ. ಈ ಕೆಳಗಿನ ಕೆಲವು ಮೈ ನವಿರೇಳಿಸುವ ಘಟನೆಗಳನ್ನು ನೋಡಿದರೆ, ಪುನರ್ಜನ್ಮದ ಬಗ್ಗೆ ನಿಮ್ಮ ನಂಬಿಕೆ ಬದಲಾಗಬಹುದು.

ನಿರ್ಮಲ್ ಪ್ರಕಾಶನಾಗಿ ಜನ್ಮತಾಳಿದ ಕಥೆ
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಕೋಸಿಕಾಲಾ ಗ್ರಾಮ, ಇಸವಿ 1950. ಈ ಗ್ರಾಮದ ನಿವಾಸಿ ಭೋಲೆನಾಥ ಜೈನ್‌ರ ಮಗ ನಿರ್ಮಲ್ ಎಂಬವನು ಸಿಡುಬು ರೋಗದಿಂದ ಪ್ರಾಣ ತ್ಯಜಿಸಿದ್ದ. ಇದರ ಸರಿಯಾಗಿ ಒಂದು ವರ್ಷದ ಬಳಿಕ, ಅಂದರೆ 1951ರಲ್ಲಿ ಸಮೀಪದ ಛಾಟಾ ಗ್ರಾಮದ ಬಿ.ಎಲ್ ವಾಶರ್ನೆ ಎಂಬುವರ ಮನೆಯಲ್ಲಿ ಗಂಡು ಮಗುವಿನ ಜನ್ಮವಾಯಿತು. ಆ ಮಗುವಿಗೆ ಅವರು ಪ್ರಕಾಶ್ ಎಂದು ನಾಮಕರಣ ಮಾಡಿದರು. ಮಗುವಾಗಿದ್ದಾಗ ಏನೂ ವಿಶೇಷ ಕಂಡುಬರದ ಪ್ರಕಾಶ ಸುಮಾರು ನಾಲ್ಕುವರೆ ವರ್ಷವಾಗುತ್ತಲೂ ತನ್ನ ವಯಸ್ಸಿಗೂ ಮೀರಿದ ಮಾತನಾಡಲು ತೊಡಗಿದ. ತಾನು ಸಮೀಪದ ಕೋಸಿಕಾಲಾ ಗ್ರಾಮದವನು, ತನ್ನ ಹೆಸರು ನಿರ್ಮಲ್, ನನಗೆ ಹಳೆಯ ಮನೆಗೆ ಹೋಗಬೇಕು ಎಂದೆಲ್ಲಾ ಹಠಹಿಡಿಯತೊಡಗಿದ. ಇದು ದಿನೇ ದಿನೇ ಹೆಚ್ಚುತ್ತಾ ಹೋಯ್ತು. ಸುಮಾರು ಐದು ವರ್ಷದವನಾದಾಗ ಇವನ ಉಪಟಳ ತಾಳಲಾಗದೇ ಒಂದು ಬಾರಿ ಆ ಗ್ರಾಮಕ್ಕೆ ಕೊಂಡೊಯ್ದು ಬಂದರೆ ಸುಮ್ಮನಾಗಬಹುದು ಎಂದೆಣಿಸಿ ಮಗುವಿನ ಚಿಕ್ಕಪ್ಪ ಆತನನ್ನು ಒಂದು ದಿನ ಕೋಸಿಕಾಲಾ ಗ್ರಾಮಕ್ಕೆ ಕರೆದೊಯ್ದರು. ಅದು ಇಸವಿ 1956, ಪ್ರಕಾಶ ಗ್ರಾಮದೊಳಕ್ಕೆ ಬಂದೊಡನೆಯೇ ತನ್ನದೇ ಗ್ರಾಮದಂತೆ ಒಂದೊಂದು ವಸ್ತುವನ್ನೂ ಗುರುತಿಸುತ್ತಾ ಹೋದ. ಆದರೆ ತನ್ನ ಹಳೆಯ ಮನೆಗೆ ಬಂದಾಗ ಮನೆಯನ್ನು ಗುರುತಿಸಿದರೂ ಭೋಲೆನಾಥ ಜೈನ್ ಮನೆಯಲ್ಲಿರದ ಕಾರಣ ಸುಮ್ಮನೇ ವಾಪಸಾಗಬೇಕಾಯ್ತು. ಅವಕ್ಕಾದ ಪ್ರಕಾಶನ ಚಿಕ್ಕಪ್ಪ ಇನ್ನೂ ಹೆಚ್ಚಿನ ಹೊತ್ತು ಕಳೆದರೆ ಎಡವಟ್ಟಾಗಬಹುದೆಂದು ಮಗುವನ್ನು ಎತ್ತಿಕೊಂಡು ಮನೆಗೆ ಹಿಂದಿರುಗಿ ಎಲ್ಲರಿಗೂ ವಿಷಯ ತಿಳಿಸಿದ. ಪ್ರಕಾಶ ಹಳೆಯದೆಲ್ಲವನ್ನೂ ಮರೆಯುವಂತೆ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಪ್ರಕಾಶನ ಪೂರ್ವಜನ್ಮದ ನೆನಪುಗಳು ದಿನೇದಿನೇ ಹೆಚ್ಚುತ್ತಾ ಹೋಯ್ತು. 1961ರಲ್ಲಿ ಪ್ರಕಾಶ ಹತ್ತು ವರ್ಷದ ಬಾಲಕನಾಗಿದ್ದಾಗ ಯಾವುದೋ ಕೆಲಸಕ್ಕೆ ಭೋಲೆನಾಥ ಜೈನ್ ಛಾಟಾ ಗ್ರಾಮಕ್ಕೆ ಆಗಮಿಸಿದ್ದ. ಯಾವುದೋ ಸಾರ್ವಜನಿಕ ಸ್ಥಳದಲ್ಲಿ ಜನರು ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ಹೀಗೊಂದು ಬಾಲಕನಿಗೆ ಹಳೆಯ ಜನ್ಮದ ನೆನಪುಗಳು ಬಂದಿವೆ, ಹಿಂದಿನ ಜನ್ಮದಲ್ಲಿ ತಾನು ನಿರ್ಮಲ್ ಆಗಿದ್ದೆ ಎಂದೆಲ್ಲಾ ಹೇಳುತ್ತಾನೆ ಎಂಬ ಮಾತುಗಳನ್ನು ಸುಮ್ಮನೇ ಕೇಳುತ್ತಿದ್ದ ಭೋಲೆನಾಥನಿಗೆ ನಿರ್ಮಲ್ ಎಂಬ ಪದ ಕಿವಿಯ ಮೇಲೆ ಬಿದ್ದಿದ್ದೇ ತಡ, ಮೈರೋಮಗಳೆಲ್ಲ ಸೆಟೆದವು. ನೇರವಾಗಿ ವಾಶರ್ನೆಯವರ ಮನೆಗೆ ಬಂದ. ಮನೆಗೆ ಅಡಿಯಿಟ್ಟನೋ ಇಲ್ಲವೋ ಹತ್ತು ವರ್ಷದ ಬಾಲಕ ಪ್ರಕಾಶ ತನ್ನ ಹಿಂದಿನ ಜನ್ಮದ ತಂದೆಯನ್ನು ಗುರುತಿಸಿ ನೇರವಾಗಿ ಹೋಗಿ ಅಪ್ಪಿಕೊಂಡ. ಎಲ್ಲರಿಗೂ ತನ್ನ ಹಿಂದಿನ ಜನ್ಮದ ಬಗ್ಗೆ ಪುರಾವೆ ನೀಡಲು ಭೋಲೆನಾಥ ಮತ್ತು ನಿರ್ಮಲ್ ರಿಗೆ ಮಾತ್ರ ಗೊತ್ತಿದ್ದ ಹಲವು ಖಾಸಗಿ ಸಂಗತಿಗಳನ್ನು ತಿಳಿಸಿ ತಾನು ಹಿಂದಿನ ಜನ್ಮದ ನಿರ್ಮಲ್ ಹೌದು ಎಂದು ಅನ್ನಿಸಿಕೊಂಡ.

ಶರೀರದ ಈ ಭಾಗಗಳಲ್ಲಿರುವ ಮಚ್ಚೆ ತರುತ್ತೆ ಅದೃಷ್ಟ..! ...

 


ಆಗ್ರಾದ ಮಂಜುವಿಗೆ ಎರಡು ಮನೆಗಳು
ಈ ಘಟನೆ ನಡೆದದ್ದು ಆಗ್ರಾ ನಗರದಲ್ಲಿ. ಹಿಂದೊಮ್ಮೆ ಆಗ್ರಾದ ಬಡಾವಣೆಯೊಂದರ ಅಂಚೆ ವಿತರಕನಾಗಿದ್ದ ಪಿ.ಎನ್. ಭಾರ್ಗವನಿಗೆ ಮಂಜು ಎಂಬ ಹೆಸರಿನ ಮಗಳೊಬ್ಬಳಿದ್ದಳು. ಆಕೆಗೆ ಎರಡು ವರ್ಷವಾಗುತ್ತಿದ್ದಂತೆಯೇ ತನಗೆ ಎರಡು ಮನೆಗಳಿವೆ ಎಂಬ ಮಾತುಗಳನ್ನು ಆಡತೊಡಗಿದಳು. ಮಗುವಿನ ಮಾತುಗಳಿಗೆ ಹೆಚ್ಚಿನ ಮನ್ನಣೆ ನೀಡದ ಹಿರಿಯರು ಯಾವಾಗ ಆಗ್ರಾ ನಗರದಲ್ಲಿ ಪಯಣಿಸುವಾಗ ಧುಲಿಯಾಗಂಜ್ ಎಂಬ ಭವ್ಯ ಬಂಗಲೆಯ ಎದುರಿಗೆ ಬಂದಾಗ ಈ ಬಂಗಲೆ ತನ್ನದು ಎಂದು ಹೇಳತೊಡಗಿದಳೋ, ಆಗಿನಿಂದ ಕೊಂಚ ಅಪ್ರತಿಭರಾಗತೊಡಗಿದರು. ಬರಿ ಒಂದು ಬಾರಿ ಹೇಳಿದ್ದರೆ ಮಗು ತಮಾಷೆ ಮಾಡುತ್ತಿದೆ ಎನ್ನಬಹುದಿತ್ತು. ಆದರೆ ಪ್ರತಿಬಾರಿಯೂ ಮಗು ಈ ಮನೆ ತನ್ನದೇ ಎಂದು ಎದೆ ತಟ್ಟಿ ಹೇಳುತ್ತಿರುವುದು ವಿಸ್ಮಯಕ್ಕಿಂತಲೂ ಹೆಚ್ಚಾಗಿ ಆತಂಕ ಮೂಡಿಸಿತು. ಒಂದು ದಿನ ಯಾವುದಕ್ಕೂ ಇರಲಿ ಎಂದು ಹಿರಿಯರು ಮಗುವನ್ನು ಈ ಬಂಗಲೆಯ ಒಳಗೆ ಕರೆದುಕೊಂಡು ಹೋದರು. ಆ ಬಂಗಲೆಯ ಮಾಲಿಕರಾಗಿದ್ದ ಪ್ರಕಾಶ್ ಸಿಂಗ್ ಚತುರ್ವೇದಿಯವರು ಆಗಂತುಕರನ್ನು ಬರಮಾಡಿಕೊಂಡು ವಿಷಯ ತಿಳಿಯಲು ಪ್ರಯತ್ನಿಸಿದರು. ಆಗ ಬಾಲಕಿ ಮಂಜು ಆ ಮನೆಯ ಮಾಲಿಕರಿಗೆ ಮತ್ತು ಸದಸ್ಯರಿಗೆ ಮಾತ್ರ ತಿಳಿದಿದ್ದ ಹಲವಾರು ಖಾಸಗಿ ಮತ್ತು ಗುಟ್ಟಿನ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಿದಳು. ಅವಕ್ಕಾದ ಚತುರ್ವೇದಿಯವರಿಗೆ ಈ ವಿಷಯಗಳು 1952 ರಲ್ಲಿ ಗತಿಸಿದ್ದ ಅವರ ಚಿಕ್ಕಮ್ಮರಿಗೆ ಮಾತ್ರ ಗೊತ್ತಿದ್ದು ಈಗ ಮಂಜುವಿನ ದೇಹದಲ್ಲಿ ಮತ್ತೊಮ್ಮೆ ಬಂದಿದ್ದಾರೆ ಎಂದು ಖಾತರಿಯಾಯಿತು.

ಹಸ್ತಮೈಥುನ ಮಾಡುವುದು ಸರೀನಾ? ಸದ್ಗುರು ಏನ್ ಹೇಳ್ತಾರೆ? ...

ರಜೂಲ್ ಮತ್ತು ಜುನಾಗಢದ ಗೀತಾ
ಇಸವಿ 1960, ಪ್ರವೀಣ್ ಚಂದ್ರ ದಂಪತಿಗಳಿಗೆ ಹೆಣ್ಣು ಮಗುವೊಂದು ಹುಟ್ಟಿತು. ಆಕೆಯನ್ನು ರಜೂಲ್ ಎಂದು ನಾಮಕರಣ ಮಾಡಿ ಅಕ್ಕರೆಯಿಂದ ಸಾಕುತ್ತಿದ್ದರು. ಮೂರು ವರ್ಷದವರೆಗೂ ಏನೂ ತೊಂದರೆಯಿರಲಿಲ್ಲ. ಆದರೆ ಮೂರು ವರ್ಷವಾದ ಬಳಿಕ ಆಕೆ ನಾನು ಜುನಾಗಢ ಜಿಲ್ಲೆಯವಳೆಂದೂ ತನ್ನ ಹೆಸರು ಗೀತಾ ಎಂದೂ ಹೇಳತೊಡಗಿದಳು. ಮಗುವಿನ ಮುಗ್ಧ ಮಾತುಗಳು ಎಂದು ಪಾಲಕರು ನಿರ್ಲಕ್ಷಿಸಿದರೂ ಆಕೆಯ ಅಜ್ಜ ವಜುಭಾಯಿ ಶಾರಿಗೆ ಏನೋ ಅನುಮಾನವುಂಟಾಯಿತು. ಆಕೆಯ ಮಾತುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಂಡು ಈ ಮಾತುಗಳಲ್ಲಿ ಎಷ್ಟು ಸತ್ಯವಿದೆ ಎಂದು ಅರಿಯಲು ಸ್ವತಃ ಜುನಾಗಢಕ್ಕೆ ಹೊರಟೇ ಬಿಟ್ಟರು. ಜುನಾಗಢದಲ್ಲಿ ಹಲವಾರು ಕಡೆ ವಿಚಾರಿಸಿದ ಬಳಿಕ ಕೆಲವರು ಜುನಾಗಢದ ಗೋಕುಲದಾಸ ಠಕ್ಕರ್ ಎಂಬುವರ ಹೆಸರು ಸೂಚಿಸಿದರು. ಅವರನ್ನು ಭೇಟಿಯಾದ ಬಳಿಕ ನಿಜಕ್ಕೂ ಗೋಕುಲದಾಸರಿಗೆ ಗೀತಾ ಎಂಬ ಮಗಳಿದ್ದು ಆಕೆ ಎರಡೂವರೆ ವರ್ಷವಾಗಿದ್ದಾಗ 1959ರಲ್ಲಿ ವಿಧಿವಶಳಾಗಿದ್ದಳು ಎಂಬ ಸತ್ಯ ತಿಳಿಯಿತು. ಮನೆಗೆ ಹಿಂದಿರುಗಿದ ವಜುಭಾಯಿ ತಕ್ಷಣ ಯಾವುದೇ ಕ್ರಮ ಕೈಗೊಳ್ಳದೇ 1965ರವರೆಗೂ, ಅಂದರೆ ರಜೂಲ್‌ಗೆ ಐದು ವರ್ಷವಾಗುವವರೆಗೂ ಕಾದರು. ಬಳಿಕ ಒಂದು ದಿನ ಆಕೆಯನ್ನು ಠಕ್ಕರ್ ಕುಟುಂಬದವರೊಡನೆ ಭೇಟಿ ಮಾಡಿಸಿದರು. ಅವರನ್ನೆಲ್ಲಾ ಕಂಡ ತಕ್ಷಣ ನಿನ್ನೆ ಮೊನ್ನೆ ಬೀಳ್ಕೊಟ್ಟವರಂತೆ ಪ್ರತಿಯೊಬ್ಬರನ್ನೂ ಗುರುತಿಸಿದ ರಜೂಲ್ ಎಲ್ಲರನ್ನೂ ಅವಕ್ಕಾಗಿಸಿದಳು. ಅಷ್ಟೇ ಅಲ್ಲ, ಹಿಂದಿನ ಜನ್ಮದಲ್ಲಿ ತಾನು ಯಾವ ದೇವಸ್ಥಾನಕ್ಕೆ ತನ್ನ ತಾಯಿ ಕರೆದುಕೊಂಡು ಹೋಗುತ್ತಿದ್ದಳು ಎಂಬುದನ್ನೂ ಗುರುತಿಸಿ ತೋರಿಸಿದಳು.

ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯ ಗಿಫ್ಟ್ ಕೊಡುವುದು ಒಳ್ಳೆಯದು...! ...