Asianet Suvarna News Asianet Suvarna News

ಶೃಂಗೇರಿ ಶ್ರೀಗಳಿಂದ ಪ್ರತಿಷ್ಠಾಪನೆಗೆ ಶಂಕರಾಚಾರ್ಯ ದೇವಾಲಯ ಸಜ್ಜು

ಬೆಂಗಳೂರಿನ ಶಿವಗಂಗೆ ಸಮೀಪವಿರುವ ಶಂಕರಾಚಾರ್ಯ ದೇವಾಲಯವು ಪ್ರತಿಷ್ಠಾಪನೆಗೆ ಸಜ್ಜಾಗಿದ್ದು, ಕೇವಲ 45 ದಿನಗಳಲ್ಲಿ ಈ ಶಿಲಾಮಯ ದೇವಾಲಯವನ್ನು ಕಟ್ಟಲಾಗಿದೆ. 

the Shankaracharya Temple in Shivagange is ready for installation skr
Author
Bangalore, First Published Jun 18, 2022, 5:27 PM IST

ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠ(Sringeri Sharada peeta)ದ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಸ್ವಾಮಿಗಳು ವಿಜಯಯಾತ್ರೆಯ ಅಂಗವಾಗಿ ಬೆಂಗಳೂರಿಗೆ ಆಗಮಿಸಿದ್ದು, ಹಲವು ದೇವಾಲಯಗಳಿಗೆ ಆಗಮಿಸಿ, ಕುಂಭಾಭಿಷೇಕಗಳನ್ನು ನೆರವೇರಿಸುತ್ತಿದ್ದಾರೆ. ಈ ಪೈಕಿ ಗಮನ ಸೆಳೆಯುತ್ತಿರುವ ವಿಶೇಷವಾದ ದೇವಾಲಯವೆಂದರೆ ಅದು ಬೆಂಗಳೂರಿ(Bengaluru)ನ ಸಮೀಪ ಇರುವ ಶಿವಗಂಗೆಯಲ್ಲಿರುವ ಶೃಂಗೇರಿ ಶಾಖಾ ಮಠದಲ್ಲಿನ ಆದಿ ಶಂಕರಾಚಾರ್ಯರ ದೇವಾಲಯ(Adi Shankaracharya Temple).

ಈ ದೇವಾಲಯ ನಿರ್ಮಾಣ ಆರಂಭಗೊಂಡಿದ್ದೇ, ಶೃಂಗೇರಿ ಜಗದ್ಗುರುಗಳು ವಿಜಯಯಾತ್ರೆಗೆಂದು ಬೆಂಗಳೂರಿಗೆ ಹೊರಟ ದಿನ ಎಂಬುದು ಒಂದು ವಿಶೇಷ ಅಂಶವಾಗಿದ್ದರೆ, ಶ್ರೀಗಳವರು ವಿಜಯಯಾತ್ರೆ ಮುಕ್ತಾಯಗೊಳಿಸಿ ಮರಳಿ ಶೃಂಗೇರಿಗೆ ತೆರಳುವುದಕ್ಕೂ ಮುನ್ನ ದೇವಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಸ್ವತಃ ಶ್ರೀಗಳೇ ಪ್ರತಿಷ್ಠಾಪನೆ ಕುಂಭಾಭಿಷೇಕ(Kumbhabhisheka)ಗಳನ್ನು ನೆರವೇರಿಸುತ್ತಿರುವುದು ಮತ್ತೊಂದು ವಿಶೇಷ!

ಶೃಂಗೇರಿ ಶಿವಗಂಗಾ ಪೀಠಾಧಿಪತಿಗಳಾದ ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳ ಸಂಕಲ್ಪದಂತೆ ಕೇವಲ 45 ದಿನಗಳ ಅವಧಿಯಲ್ಲಿ ಶಂಕರಾಚಾರ್ಯರ ಸಂಪೂರ್ಣ ಶಿಲಾಮಯ ದೇವಾಲಯ ನಿರ್ಮಾಣಗೊಂಡಿದ್ದು 22-06-2022 ರಂದು ಶಿವಗಂಗೆಗೆ ಆಗಮಿಸಲಿರುವ ವಿಧುಶೇಖರ ಭಾರತೀ ಸ್ವಾಮಿಗಳವರು 23-06-2022 ರಂದು ಆಚಾರ್ಯ ಶಂಕರರ ಪಂಚಲೋಹದ ವಿಗ್ರಹವನ್ನು ಪ್ರತಿಷ್ಠಾಪಿಸಿ, ಕುಂಭಾಭಿಷೇಕ ನೆರವೇರಿಸಲಿದ್ದಾರೆ.

ಶೃಂಗೇರಿಯಿಂದ ಪಂಚಲೋಹದ ವಿಗ್ರಹ ಶಿವಗಂಗೆಗೆ ಆಗಮಿಸಿದ್ದು, ಶಿಲಾಮಯ ದೇವಾಲಯ ಪುರುಷೋತ್ತಮ ಭಾರತೀ ಸ್ವಾಮಿಗಳ ಸಂಕಲ್ಪದಂತೆ 5 ಶೈಲಿ-(ಹೊಯ್ಸಳ, ಚೇರ, ಚೊಳ, ಪಲ್ಲವ, ಪಾಂಡ್ಯ) ಗಳಲ್ಲಿ ನಿರ್ಮಿಸಲಾಗಿದೆ. 

ಜಗದ್ಗುರುಗಳಿಂದಲೇ ಆದಿ ಶಂಕರರ ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ ನೆರವೇರಿಸಬೇಕೆಂದುಕೊಂಡಾಗ ಎದುರಿಗಿದ್ದ ಪ್ರಶ್ನೆ ಕೇವಲ 1.5 ತಿಂಗಳಲ್ಲಿ ದೇವಾಲಯ ನಿರ್ಮಿಸುವುದು ಹೇಗೆ ಎಂಬುದಾಗಿತ್ತು. ಶೃಂಗೇರಿ ಶಿವಗಂಗಾ ಮಠದ ಶ್ರೀಗಳ ಸೂಚನೆ ಪಡೆದ ಆಡಳಿತಾಧಿಕಾರಿಗಳು ಅತ್ಯಂತ ಕಡಿಮೆ ಅವಧಿಯಲ್ಲಿ ದೇವಾಲಯ ನಿರ್ಮಾಣ ಕಾಮಗಾರಿ ಮಾಡುವ ನುರಿತ ಶಿಲ್ಪಿಗಳಿಗಾಗಿ ದಕ್ಷಿಣ ಭಾರತದಾದ್ಯಂತ ಹುಡುಕಿದರೂ, ಕಡಿಮೆ ಅವಧಿಯಲ್ಲಿ ನಿರ್ಮಿಸಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಅಪಾರ ಅನುಭವವುಳ್ಳ ತಿರುಪ್ಪೂರಿನ ರಾಧಾಕೃಷ್ಣ ಎಂಬುವವರು ಈ ದೇವಾಲಯ ನಿರ್ಮಾಣ ಕಾರ್ಯವನ್ನು ಮೇ.8 ರಂದು ಪ್ರಾರಂಭಿಸಿ ದಾಖಲೆಯ 45 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 70 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಂಡಿದೆ. 

ಶಂಖ ಊದಿದರೆ ಆರೋಗ್ಯ ವೃದ್ಧಿ! ಮನೆಯಲ್ಲಿದ್ದರೆ ಸಮೃದ್ಧಿ!

ಇಶಾ ಫೌಂಡೇಶನ್ ಗೆ ಆದಿಯೋಗಿಯ ಮುಖಚಿತ್ರ ನೀಡಿದ್ದ, ಲಿಂಗಭೈರವಿ ದೇವಾಲಯ ನಿರ್ಮಿಸಿಕೊಟ್ಟಿದ್ದ, ರಾಧಾಕೃಷ್ಣ  ತಮಿಳುನಾಡಿನಲ್ಲಿ 250ಕ್ಕೂ ಹೆಚ್ಚಿನ ದೇವಾಲಯವನ್ನು ನಿರ್ಮಿಸಿರುವ ಅನುಭವ ಹೊಂದಿದ್ದಾರೆ. 

ನಿರ್ಮಾಣಕ್ಕೆ ಬಳಸಿರುವುದು ಸ್ತ್ರೀ ಶಿಲೆ (ಸಮುದ್ರದ ಕಲ್ಲು) 
ತಮಿಳುನಾಡಿನ ಕನ್ಯಾಕುಮಾರಿಯಿಂದ ಸುಮಾರು 300 ಟನ್ ನಷ್ಟು ಸ್ತ್ರೀ ಶಿಲೆ (ಸಮುದ್ರದಲ್ಲಿ ದೊರೆಯುವ ಒಂದು ರೀತಿಯ ವಿಶಿಷ್ಟ ಕಲ್ಲು) ನ್ನು ಶೃಂಗೇರಿ ಶಿವಗಂಗಾ ಮಠದಲ್ಲಿನ ಆದಿ ಶಂಕರರ ನೂತನ ದೇವಾಲಯಕ್ಕೆ ಬಳಕೆ ಮಾಡಲಾಗಿದೆ ಎಂಬುದು ಮತ್ತೊಂದು ವಿಶೇಷ. ದೇವಾಲಯದಲ್ಲಿ ಶಂಕರಾಚಾರ್ಯರ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕದ ಅಂಗವಾಗಿ ಶಾರದಾಂಬ ದೇವಾಲಯದಲ್ಲಿ ಮಹಾರುದ್ರಯಾಗ ನೆರವೇರಲಿದೆ. 

ಶೃಂಗೇರಿ ಶಿವಗಂಗೆ ಶಾರದಾ ಪೀಠದ ಹಿನ್ನೆಲೆ 
16 ನೇ ಶತಮಾನದ ಕಾಲ, ಇದ್ದದ್ದು ಟಾರು ಕಾಣದ ರಸ್ತೆಗಳು, ಗಂಟೆಗಳ ಲೆಕ್ಕದಲ್ಲಿ ನೂರಾರು ಕಿ.ಮೀ ದೂರ ಸಂಚರಿಸಲು ವಾಹನಗಳ ಸೌಕರ್ಯವಂತೂ ದೂರದ ಮಾತು.  ಶೃಂಗೇರಿಗೆ ಸಂಚರಿಸುವ ಅನುಕೂಲ ಇರುವ ಪ್ರದೇಶಗಳ ಜನರನ್ನು ಹೊರತುಪಡಿಸಿದರೆ ಶೃಂಗೇರಿ ಜಗದ್ಗುರುಗಳನ್ನು ದರ್ಶಿಸುವುದು ಕೊಂಚ ಪ್ರಯಾಸದ ಮಾತೇ ಆಗಿತ್ತು. ಶೃಂಗೇರಿ ಗುರುಗಳು ವಿಜಯಯಾತ್ರೆ ಕೈಗೊಂಡಾಗ ಭೇಟಿ ನೀಡುವ ಪ್ರದೇಶಗಳ ಜನರಿಗೆ ಸುಲಭವಾಗಿ ದರ್ಶನ ಭಾಗ್ಯ  ಇಲ್ಲದೇ ಇದ್ದರೆ ತಾವಾಗಿಯೇ ದೂರದ ಶೃಂಗೇರಿಗೆ ಹೋಗುವುದು ದಿನಗಟ್ಟಲೆಯ ಮಾತಾಗಿತ್ತು.

ಮೈಸೂರು, ಬೆಂಗಳೂರು, ತುಮಕೂರು ಹೀಗೆ ಶೃಂಗೇರಿಗೆ ಸಂಚರಿಸಲು ಸ್ವಲ್ಪ ದೂರವಿದ್ದ ಪ್ರದೇಶಗಳ ಜನರ ಜಿಗ್ನಾಸೆಗಳನ್ನು ಬಗೆಹರಿಸಿ, ಧರ್ಮಮಾರ್ಗದಲ್ಲಿ ಮುನ್ನಡೆಸಿ ಆಶೀರ್ವದಿಸುವ ಯತಿಗಳಿಗಾಗಿ ಆ ಪ್ರದೇಶದ ಜನರು ಕಾದಿದ್ದರು. ಇತ್ತ ಶೃಂಗೇರಿಯ 24ನೇ ಜಗದ್ಗುರುಗಳಾಗಿದ್ದ ಅಭಿನವ ನೃಸಿಂಹ ಭಾರತೀ ಸ್ವಾಮಿಗಳು ಸಹ ವಿಜಯ ಯಾತ್ರೆ ಕೈಗೊಂಡು  1615ರಲ್ಲಿ ಮೈಸೂರಿಗೆ ಭೇಟಿ ನೀಡಿದ್ದರು. ಸ್ಥಳೀಯವಾಗಿ ಶೃಂಗೇರಿ ಶಾಖಾಮಠ ಸ್ಥಾಪಿಸಿ ಯತಿಗಳನ್ನು ನಿಯೋಜಿಸಬೇಕೆಂದು  ಮೈಸೂರು ಅರಸರಾಗಿದ್ದ ರಾಜ ಒಡೆಯರು  ಜಗದ್ಗುರುಗಳಲ್ಲಿ ಪ್ರಾರ್ಥಿಸಿದ್ದರು.  ಒಪ್ಪಿದ ಗುರುಗಳು ತಮ್ಮ ಶಿಷ್ಯ ಪರಿವಾರದಲ್ಲಿದ್ದ ಶಂಕರ ಭಾರತಿಗಳೆಂಬ ಸಂನ್ಯಾಸಿಗಳನ್ನು ರಾಜರೊಂದಿಗೆ ಕಳಿಸಿ ಶಾಖಾಮಠವನ್ನು ಅನುಗ್ರಹಿಸಿದರು, ಜಗದ್ಗುರುಗಳ ಅಪ್ಪಣೆ ಪಡೆದು ಶಂಕರ ಭಾರತೀ ಸ್ವಾಮಿಗಳು ಶೃಂಗೇರಿ ಶಿವಗಂಗಾ ಪೀಠದ ಪ್ರಥಮ ಪೀಠಾಧಿಪತಿಗಳಾಗಿ ನಿಯೋಜನೆಗೊಂಡರು. 

Astro Tips : ಪೂಜಿಸುವಾಗ ಕೈನಿಂದ ಈ ವಸ್ತು ಬಿದ್ದರೆ ಅಶುಭ

ಹೆಸರೇ ಹೇಳುವಂತೆ ಬೆಂಗಳೂರಿನ ನೆಲೆಮಂಗಲದ ಬಳಿಯ ಶೃಂಗೇರಿ ಶಿವಗಂಗೆಯ ಶಾರದಾ ಪೀಠಕ್ಕೆ ಶೃಂಗೇರಿ ಶಾರದಾ ಪೀಠವೇ ಮಾತೃ ಪೀಠ. ಶಂಕರ ಭಾರತೀ ಸ್ವಾಮಿಗಳಿಂದ ಪ್ರಾರಂಭವಾಗಿ ಈಗಿನ ಪೀಠಾಧಿಪತಿಗಳವರೆಗೂ ಎಲ್ಲರೂ ನಿಯುಕ್ತಿಗೊಂಡಿರುವುದು ಶೃಂಗೇರಿ ಜಗದ್ಗುರುಗಳಿಂದಲೇ. ಆದ್ದರಿಂದಲೇ ಶೃಂಗೇರಿ ಪರಂಪರೆಯಲ್ಲಿ ಶೃಂಗೇರಿ ಶಿವಗಂಗಾ ಪೀಠಕ್ಕೂ ವಿಶೇಷ ಸ್ಥಾನಮಾನಗಳಿವೆ. 1799ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರು ಅಪ್ರಾಪ್ತರಾದುದರಿಂದ ಪೂರ್ಣಯ್ಯನವರು ರಾಜಪ್ರತಿನಿಧಿಯಾಗಿ ರಾಜ್ಯದ ಚುಕ್ಕಾಣಿಯನ್ನು ಹಿಡಿದರು. ಶೃಂಗೇರಿ ಮಠಕ್ಕೆ ಗೌರವಾದರಗಳಿಂದ ನಡೆದುಕೊಳ್ಳುತ್ತಿದ್ದ ಪೂರ್ಣಯ್ಯನವರು, ಮೈಸೂರು ಸಂಸ್ಥಾನದಲ್ಲಿ ನಡೆಯುತ್ತಿದ್ದ, ಶುಭ-ಸಮಾರಂಭಗಳಲ್ಲಿ ಅಗ್ರ ತಾಂಬೂಲವನ್ನು ಮುಂಚಿತವಾಗಿ ಶೃಂಗೇರಿ ಮಠಕ್ಕೂ ತರುವಾಯ ಶೃಂಗೇರಿ ಶಿವಗಂಗೆ ಮಠಕ್ಕೂ ಕೊಡುವಂತೆ ಆಜ್ಞಾಪಿಸಿದ್ದರ ಬಗ್ಗೆ ಉಲ್ಲೇಖಗಳಿವೆ. 

ಮೀನ ರಾಶಿಯವರ ಸ್ವಭಾವ ಹೇಗಿರುತ್ತೆ ಗೊತ್ತಾ?

ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ಒಡಲಲ್ಲಿಟ್ಟುಕೊಂಡತಹ ಶಿವಗಂಗೆ ಕ್ಷೇತ್ರ ಶೃಂಗೇರಿಯ ಶಾಖಾ ಮಠ ಸ್ಥಾಪನೆಯಾಗುವುಕ್ಕೂ ಮುನ್ನವೇ ದಕ್ಷಿಣ ಕಾಶಿ ಎಂದು ಸುಪ್ರಸಿದ್ಧ. ಅಗಸ್ತ್ಯರು ತಪಸ್ಸು ಮಾಡಿದ, ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಳಿರುವ ಈ ಕ್ಷೇತ್ರದ ಪ್ರತಿಯೊಂದು ಚರಾಚರಗಳಲ್ಲೂ ಅದ್ವೈತವೇ ಗೋಚರಿಸುತ್ತದೆ. ಆಧ್ಯಾತ್ಮ ಸಾಧನೆಗೆ ಪ್ರಶಸ್ತವೆಂಬಂತಿರುವ ಶೃಂಗೇರಿ ಶಿವಗಂಗಾ ಪೀಠ, ಶಂಕರ ಭಾರತೀ ಸ್ವಾಮಿಗಳಿಂದ, ಈಗಿನ ಪೀಠಾಧಿಪತಿಗಳಾದ ಪುರುಷೋತ್ತಮ ಭಾರತೀ ಸ್ವಾಮಿಗಳವರೆಗೆ ಸವಿಶೇಷ ಗುರು ಪರಂಪರೆಯನ್ನು ಹೊಂದಿದೆ. ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಸಚ್ಚಿದಾನಂದ ಭಾರತೀ ಸ್ವಾಮಿಗಳವರು ಶೃಂಗೇರಿಯ ಭಾರತೀ ತೀರ್ಥ ಸ್ವಾಮಿಗಳಿಂದ ತಪಶ್ಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದರು.

Follow Us:
Download App:
  • android
  • ios