ಭಾರತ ನೆಲ ಕಂಡ ಅಪರೂಪದ ದಾರ್ಶನಿಕ ಆದಿ ಶಂಕರಾಚಾರ್ಯರು
ಅದಿ ಶಂಕರಾಚಾರ್ಯರು ಬದುಕಿದ್ದು ಕೇವಲ 32 ವರ್ಷ. ಆದರೆ, ಅವರು ಸಾಧಿಸಿದ್ದು, ಈ ಜಗತ್ತಿಗೆ ಕೊಡುಗೆ ಕೊಟ್ಟಿದ್ದು ಅಪರಿಮಿತ. ಆದಿ ಶಂಕರಾಚಾರ್ಯರ ವಿಚಾರಗಳು, ಪೀಠಗಳು ಇಂದಿಗೂ ಜೀವಂತವಾಗಿದ್ದು ಮೇರು ಮಟ್ಟದಲ್ಲಿವೆ. ಅವರ ಬದುಕಿನ ಆಸಕ್ತಿರಕ ಘಟನೆಗಳ ಕುರಿತ ವಿಚಾರಗಳು ಇಲ್ಲಿವೆ.
ಜಗದೀಶ್ ಬಳಂಜ, ಎಸ್‌ಡಿಎಂ ಕಾಲೇಜು, ಉಜಿರೆ
"ಎಷ್ಟು ದಿನ ಬದುಕುತ್ತೇವೆ ಎನ್ನುವುದು ಮುಖ್ಯವಲ್ಲ, ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ" ಎಂಬ ಮಾತಿಗೆ ಪೂರಕವಾಗಿ ಪುಣ್ಯಭೂಮಿ ಭಾರತದಲ್ಲಿ ಹಲವಾರು ದಾರ್ಶನಿಕರು ಪುಣ್ಯಪುರುಷರು ತಮ್ಮ ಶ್ರೇಷ್ಠ ಬದುಕನ್ನು ನಡೆಸಿದ್ದಾರೆ. ಅಂಥವರ ಸಾಲಿನಲ್ಲಿ ಆಗ್ರಮಾನ್ಯರಾಗಿ ಕಾಣುವವರು, 32 ವರ್ಷಗಳ ಜೀವಿತಾವಧಿಯಲ್ಲಿ ಆದಿಗುರುವಾಗಿ ಪ್ರಜ್ವಲಿಸಿದ ಶಂಕರಾಚಾರ್ಯರು.
ಪ್ರಸ್ತುತ ಕಾಲಘಟ್ಟದಲ್ಲಿ ಶಂಕರಾಚಾರ್ಯ ಅವರ ಒಂದಿಷ್ಟು ವಿಚಾರಗಳನ್ನು ತಿಳಿಯಬೇಕಾದ ಅಗತ್ಯ ಇದೆ. ಅದ್ವೈತದ ಮೂಲಕ ಸೃಷ್ಟಿಯನ್ನು ಮರು ಕಟ್ಟಿದ ಪುಣ್ಯಪುರುಷ ಹಿಂದೂ ಧರ್ಮ ಪುನರೋತ್ಥಾನದ ಮೂಲ ಪುರುಷರು ಆಗಿದ್ದರು.
ಶಂಕರಾಚಾರ್ಯರ ಜೀವನದಲ್ಲಿ ಆದ ಪ್ರಮುಖ ಘಟನೆಗಳೇ ಮಹತ್ತರ ಸಂದೇಶವಾಗಿ ಜಗತ್ತಿಗೆ ದಾರಿ ತೋರಿಸುತ್ತವೆ. ಹುಟ್ಟು ಜ್ಞಾನಿಯಾಗಿದ್ದ ಶಂಕರರಿಗೆ ವಿದ್ಯಾಭ್ಯಾಸದ ಹಂಗಿರಲಿಲ್ಲ. ಆದರೂ ವೇದಶಾಸ್ತ್ರದ ಅಧ್ಯಯನಕ್ಕೆ ಗುರುಕುಲಕ್ಕೆ ಹೋಗುತ್ತಿದ್ದರು. ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದ ದಾರಿಯ ಪಕ್ಕದ ಗುಡಿಸಲಿನಲ್ಲಿದ್ದ ಅಜ್ಜಿ ಪ್ರತಿದಿನ ಶಂಕರರಿಗೆ ಏನಾದರೂ ತಿನ್ನಲು ಕೊಡುತ್ತಿದ್ದಳು. ಒಂದು ದಿನ ನನ್ನಲ್ಲಿ ಕೊಡಲು ಏನಿಲ್ಲವೆಂದು ಅಜ್ಜಿ ಬೇಸರಿಸಿದಾಗ ಶಂಕರನು ಸ್ಥಳದಲ್ಲಿ 'ಶ್ರೀ ಕನಕಧಾರಾ ಸ್ತೋತ್ರ'ವನ್ನು ಪಠಿಸಿ ಲಕ್ಷ್ಮೀದೇವಿಯೇ ಧರೆಗಿಳಿಯುವಂತೆ ಮಾಡಿದರು. ಇದು ಅವರ ಅಧ್ಯಾತ್ಮ ಶಕ್ತಿಗೆ ಸಾಕ್ಷಿ.
ಅದೇ ಕಾಲದಲ್ಲಿ ಬಾಲಕ ಶಂಕರನ ಜ್ಞಾನದ ಮಹತ್ವ ಲೋಕಕ್ಕೆ ತಿಳಿಯುವ ಸನ್ನಿವೇಶ ಉಂಟಾಯಿತು. ಆ ಸಮಯದಲ್ಲಿ ಕೇರಳವನ್ನಾಳುತ್ತಿದ್ದ ರಾಜಾ ರಾಜಶೇಖರನು , ಶಂಕರನನ್ನು ಆಸ್ಥಾನಕ್ಕೆ ಕರೆತರಲು ಆದೇಶಿಸಿ, ಬಾಲಕನ ಅಗಾಧವಾದ ಪಾಂಡಿತ್ಯವನ್ನು ಪರೀಕ್ಷಿಸಲು ಬಯಸಿದನು. ಶಂಕರನನ್ನು ಆಸ್ಥಾನಕ್ಕೆ ಕರೆದು ತರಲು ತನ್ನ ಮಂತ್ರಿ ಮತ್ತು ಆನೆಯ ಜೊತೆಗೆ ಆಮಂತ್ರಣವನ್ನು ಕಳುಹಿಸಿದನು. ಆಮಂತ್ರಣವನ್ನು ನೋಡಿದ ಬಾಲಕ ಶಂಕರನು "ಜೀವನ ಮಾಡಲು ಭಿಕ್ಷೆಯೇ ಯಾರ ಸಾಧನೆಯಾಗಿದೆಯೋ, ತ್ರಿಕಾಲ ಸಂಧ್ಯಾ ಈಶ್ವರ ಚಿಂತನ, ಪೂಜೆ-ಅರ್ಚನೆ ಮತ್ತು ಗುರುಸೇವೆಯೇ ಯಾರ ಜೀವನದ ನಿತ್ಯ ವ್ರತವಾಗಿದೆಯೋ ಅವರಿಗೆ ಈ ಆನೆಯ ಸವಾರಿ ಯಾಕೆ? ನಾಲ್ಕು ವರ್ಣದ ಸರ್ವ ಕರ್ತವ್ಯಗಳ ಪಾಲನೆ ಮಾಡಿ ಬ್ರಾಹ್ಮಣಾದಿ ಧರ್ಮಮಯ ಜೀವನ ಜೀವಿಸಲು ವ್ಯವಸ್ಥೆ ಮಾಡುವುದು ರಾಜನ ಕರ್ತವ್ಯವಾಗಿದೆ. ನನ್ನ ಈ ಸಂದೇಶವನ್ನು ನಿನ್ನ ಸ್ವಾಮಿಗೆ ಹೇಳು", ಎನ್ನುವ ಮೂಲಕ ಆಮಂತ್ರಣವನ್ನು ನಿರಾಕರಿಸಿದರು.
Lunar Eclipse 2022: ಗ್ರಹಣ ಸಂದರ್ಭದಲ್ಲಿ ನೀವೇನು ಮಾಡಬೇಕು? ಏನು ಮಾಡಕೂಡದು?
ಇದಾದ ನಂತರ ರಾಜನು ತಾನೇ ಸ್ವತಃ ಶಂಕರರನ್ನು ಭೇಟಿಯಾಗಲು ನಿರ್ಧರಿಸಿ ಹೊರಟನು. ಹಾಗೆ ಆದಂಥ ಭೇಟಿ ಮತ್ತು ಆ ವೇಳೆಯಲ್ಲಿ ನಡೆಸಿದ ಧಾರ್ಮಿಕ ಚರ್ಚೆಗಳಿಂದ ಮಹಾರಾಜನಲ್ಲಿ ವಿಶೇಷವಾದ ವಿಚಾರ ಶಕ್ತಿಯ ಅನುಭವವಾಯಿತು. ರಾಜನು ತನ್ನ ಭೇಟಿಯ ಅಂತ್ಯದಲ್ಲಿ ರತ್ನದ ಮುದ್ರೆಗಳನ್ನು ಶಂಕರರಿಗೆ ಕೊಡುಗೆ ನೀಡಲು ಮುಂದಾದಾಗ ಬಾಲಕನು ಅವುಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾ- "ಮಹಾರಾಜರೇ, ನಾನು ಬ್ರಾಹ್ಮಣ ಮತ್ತು ಬ್ರಹ್ಮಚಾರಿಯಾಗಿದ್ದೇನೆ, ಇದರಿಂದ ನನಗೇನು ಉಪಯೋಗವಿದೆ? ನೀವು ದೇವರ ಪೂಜೆಗೆ ಕೊಟ್ಟಿರುವ ಭೂಮಿ, ನನಗೆ ಮತ್ತು ನನ್ನ ತಾಯಿಗೆ ಸಾಕು. ನಿಮ್ಮ ಕೃಪೆಯಿಂದ ನನಗೆ ಯಾವ ಪ್ರಕಾರದ ಅಭಾವವಾಗಿಲ್ಲ" ಎಂದುತ್ತರಿಸಿದರು. ಶಂಕರರ ಉತ್ತರ ರಾಜನಿಗೆ ತಿಳಿಯಲಿಲ್ಲ. ಕೊನೆಗೆ ರಾಜನು ಶಂಕರರಿಗೆ ಕೈಮುಗಿದು "ನಿಮ್ಮ ದರ್ಶನದಿಂದ ನಾನು ಧನ್ಯನಾದೆ", ಎಂದು ಹೇಳಿ ಅವರಿಗೆ ದುಡ್ಡನ್ನು ಅರ್ಪಣೆ ಮಾಡಿ, "ಒಂದು ಸಲ ಅರ್ಪಣೆ ನೀಡಿ ಅದನ್ನು ಮತ್ತೆ ನಾನು ತೆಗೆದುಕೊಳ್ಳುವುದು ಸರಿಯಲ್ಲ, ಅದಕ್ಕೆ ನೀವೇ ಆ ಹಣವನ್ನು ಯೋಗ್ಯ ವ್ಯಕ್ತಿಗೆ ಕೊಡಿರಿ", ಎಂದನು. ಮುಗುಳ್ನಗುತ್ತಾ ಶಂಕರರು "ಮಹಾರಾಜರೆ, ನೀವು ರಾಜರಾಗಿದ್ದು, ಯಾರು ಸುಪಾತ್ರರು, ಯಾರು ಯೋಗ್ಯರಂದು ನಿಮಗೆ ತಿಳಿದಿರಬೇಕು, ನನ್ನಂಥ ಬ್ರಹ್ಮಚಾರಿಗೇನು ಇಂಥಹ ಜ್ಞಾನ ಇರಬಹುದು? ವಿದ್ಯಾದಾನವೇ ಬ್ರಾಹ್ಮಣನ ಧರ್ಮ ಮತ್ತು ಸತ್ಪಾತ್ರ ದಾನವೇ ರಾಜಧರ್ಮವಾಗಿದೆ. ನೀವೆ ಯೋಗ್ಯ ಸತ್ಪಾತ್ರನಿಗೆ ಈ ಧನವನ್ನು ನೀಡಿ", ಎಂದರು. ರಾಜನು ನಿರುತ್ತರನಾಗಿ ಶಂಕರನಿಗೆ ವಂದಿಸಿ ಅಲ್ಲಿರುವ ಬ್ರಾಹ್ಮಣರಿಗೆ ಆ ಧನವನ್ನು ಹಂಚಿದನು.
ಇದಾಗಿ ಶಂಕರರು ತಾನು ವಿದ್ಯಾಭ್ಯಾಸಗಳನ್ನೆಲ್ಲಾ ಪೂರೈಸುತ್ತಲೂ ತಾನು ಸನ್ಯಾಸ ಸ್ವೀಕರಿಸುವುದಾಗಿ ತಾಯಿಯಲ್ಲಿ ಅಪ್ಪಣೆ ಬೇಡಿದರು. ಆದರೆ ತಾಯಿಗೆ ಮಗನು ಸನ್ಯಾಸಿಯಾಗುವುದು ಇಷ್ಟವಿರಲಿಲ್ಲ. 'ಇದ್ದ ಒಬ್ಬನೇ ಮಗನು ಸನ್ಯಾಸಿಯಾದರೆ ನಮ್ಮ ವಂಶದ ಗತಿಯೇನು, ನಾನು ತೀರಿ ಹೋದಲ್ಲಿ ನನಗೆ ಮೋಕ್ಷ ಕೊಡಿಸುವವರಾರು?' ಎಂಬ ಚಿಂತೆ ಅವಳ ಮನವನ್ನು ಕೊರೆಯುತ್ತಿರಲು ತಾಯಿಯು ಮಗನ ಸನ್ಯಾಸ ದೀಕ್ಷೆಯ ಅಭಿಲಾಷೆಯನ್ನು ಮುಂದೂಡುತ್ತಾ ಬಂದಳು.
ಅಮ್ಮನನ್ನು ಅವರ ರಾಶಿ ಆಧಾರದಲ್ಲಿ ಅರಿಯಿರಿ..
ಶಂಕರರು ತಾವು ಸನ್ಯಾಸಿಯಾಗುವುದಾಗಿ ನಿರ್ಧರಿಸಿಯಾಗಿತ್ತು. ಅದಕ್ಕಾಗಿ ತಾಯಿಯ ಮನವೊಲಿಸಲು ಪರಿಪರಿಯಾಗಿ ಪ್ರಯತ್ನಿಸಿದರೂ ಸಾಧ್ಯವಾಗದಿರಲು ಅದೊಂದು ದಿನ ತಾವು ನದಿಯಲ್ಲಿ ಸ್ನಾನಕ್ಕಾಗಿ ಇಳಿದಿರಲು ಅಲ್ಲಿದ್ದ ಒಂದು ಮೊಸಳೆಯು ಶಂಕರರ ಕಾಲನ್ನು ಬಲವಾಗಿ ಹಿಡಿದುಕೊಂಡಿತು. ಅದಾಗ ರಕ್ಷಣೆಗಾಗಿ ಎಂಬಂತೆ ತಾಯಿಯನ್ನು ಕೂಗಿದ ಶಂಕರರು ತಾಯಿಗೆ- 'ಅಮ್ಮಾ ಈ ಮೊಸಳೆಯು ನನ್ನನ್ನು ನುಂಗಿ ಹಾಕುವುದರಲ್ಲಿದೆ, ನೀನೇನಾದರೂ ನಾನು ಸನ್ಯಾಸಿಯಾಗುವುದಕ್ಕೆ ಒಪ್ಪಿಕೊಳ್ಳುವುದಾದಲ್ಲಿ ಮಾತ್ರವೇ ನಾನು ಈ ಮೊಸಳೆಯ ಹಿಡಿತದಿಂದ ಪಾರಾಗಬಲ್ಲೆ, ಇಲ್ಲವಾದಲ್ಲಿ ನಿನ್ನ ಮಗ ಇದೇ ಕ್ಷಣ ಮೊಸಳೆಯ ಪಾಲಾಗುತ್ತಾನೆ', ಎಂದಾಗ ಮಾತೆ ಆರ್ಯಾಂಬಾ ತಾನು ವಿಧಿಯಿಲ್ಲದೆ ಮಗನ ಸನ್ಯಾಸಕ್ಕೆ ಅಪ್ಪಣೆ ಕೊಡಬೇಕಾಯಿತು. ತಕ್ಷಣವೇ ಮೊಸಳೆಯು ಶಂಕರರ ಕಾಲನ್ನು ಬಿಟ್ಟಿತು. ಶಂಕರರು ತಾಯಿಯ ಆಶೀರ್ವಾದವನ್ನು ಪಡೆದು ಸನ್ಯಾಸಿಯಾಗಿ ದೇಶಪರ್ಯಟನೆಗೆ ಹೊರಟರು. ಹಾಗೆ ಹೊರಡುವ ಮುನ್ನ ತಾಯಿಗೆ- 'ನಾನೆಲ್ಲೇ ಇದ್ದರೂ ನಿನ್ನ ಅಂತಿಮ ಕ್ಷಣಗಳಲ್ಲಿ ನಿನ್ನೊಂದಿಗಿರುತ್ತೇನೆ' ಎನ್ನುವ ವಚನವನ್ನಿತ್ತರು. ಮತ್ತು ಮುಂದೊಂದು ದಿನ ಮಾತೆ ಆರ್ಯಾಂಬಾರವರು ಸಾವಿನ ನಿರೀಕ್ಷೆಯಲ್ಲಿದ್ದಾಗ ಅಲ್ಲಿಗಾಗಮಿಸಿದ ಶಂಕರರು ತಾವು ತಾಯಿಯವರ ಅಂತಿಮ ಕ್ಷಣಗಳಲ್ಲಿ ಅವರೊಡನಿದ್ದುದಲ್ಲದೆ ಅವರ ಅಂತಿಮ ವಿಧಿಗಳನ್ನೂ ಸಹ ನೆರವೇರಿಸಿ ಅವರ ಶಾಶ್ವತ ಮೋಕ್ಷಕ್ಕೆ ಕಾರಣರಾದರು.
ಶ್ರೀ ಶಂಕರರು ಸನ್ಯಾಸ ಸ್ವೀಕರಿಸುವುದರೊಡನೆ ಅವರ ಜೀವನವು ನೂತನ ತಿರುವನ್ನು ಪಡೆಯಿತು. ಶಂಕರರು ದೇಶ ದೇಶಗಳನ್ನು ತಿರುಗುತ್ತಾ ನರ್ಮದಾ ನದಿ ತೀರಕ್ಕೆ ಬಂದರು. ಅಲ್ಲಿ ನೆಲೆಯಾಗಿದ್ದ ಶ್ರೀ ಗೋವಿಂದ ಭಗವತ್ಪಾದರನ್ನು ತಮ್ಮ ಗುರುವಾಗಿ ಸ್ವೀಕರಿಸಿದ ಶಂಕರರು ಅವರಲ್ಲಿ ಯೋಗ, ವೇದ, ಉಪನಿಷತ್, ವೇದಾಂತ ಶಾಸ್ತ್ರಗಳನ್ನು ಅಭ್ಯಾಸ ನಡೆಸಿದರು. ನರ್ಮದೆ ತಟದಲ್ಲಿನ ಗುಹೆಯೊಂದರಲ್ಲಿ ಧ್ಯಾನದಲ್ಲಿದ್ದಾಗಲೇ ಶಂಕರರು ತಮ್ಮ `ಅದ್ವೈತ' ತತ್ವ ಸ್ವರೂಪದ ಜ್ಞಾನವನ್ನು ಕಂಡುಕೊಂಡರು. ಮತ್ತು ಅದನ್ನು ದೇಶದಾದ್ಯಂತ ಪ್ರಚುರಪಡಿಸಲಿಕ್ಕಾಗಿ ದೇಶ ಯಾತ್ರೆಗೈಯ್ಯಲು ನಿರ್ಧರಿಸಿದರು. ಶಂಕರರು ಗುರುಗಳ ಆಶೀರ್ವಾದ ಪಡೆದು ಕಾಶಿಗೆ ಹೊರಟರು. ಅಲ್ಲಿ ಸನಂದನನೆಂಬ ತಮಿಳು ದೇಶದ ಯುವ ಸಂನ್ಯಾಸಿ ಇವರ ಶ್ಯಿಷ್ಯನಾದನು. ಕಾಶಿಗೆ ತೆರಳಿದ ಶ್ರೀ ಶಂಕರರು ಅಲ್ಲಿ ಕೆಲ ಶಿಷ್ಯರನ್ನು ಸೇರಿಸಿಕೊಂಡು ಅವರಿಗೆ ವೇದ ಶಾಸ್ತ್ರಗಳ ಪಾಠವನ್ನು ಬೋಧಿಸಿದರು.
ಯಾರು ಈ Laughing Buddha? ಮನೆಯಲ್ಲಿಡುವ ಲಾಭಗಳೇನು?
ಶ್ರೀ ಶಂಕರಾಚಾರ್ಯರಿಗೆ ಹದಿನಾರರ ವಯಸ್ಸಿನಲ್ಲಿರುವಾಗ, ಅವರಿಗೆ ವೇದವ್ಯಾಸರ ಅನುಗ್ರಹವಾಯಿತು. ಅದೊಂದು ದಿನ ಒಬ್ಬ ಹಳೆಯ ವೃದ್ದರೋರ್ವರು ಶಂಕರರು ರಚಿಸಿದ್ದ 'ಬ್ರಹ್ಮಸೂತ್ರ ಭಾಷ್ಯ'ದ ಕುರಿತಾಗಿ ವಿಮರ್ಶಾತ್ಮಕ ಚರ್ಚೆಗೆ ತೊಡಗಿದರು. ಶಂಕರ ಹಾಗೂ ಆ ವಯೋವೃದ್ದ್ರ ನಡುವಿನ ಚರ್ಚೆಯು ದಿನಗಳನ್ನು ಪೂರೈಸಿತು. ಹೀಗಿರಲು ಶಂಕರಾಚಾರ್ಯರಿಗೆ ಒಮ್ಮೆಲೇ ತಾನು ವಾದ ಹೂಡಿರುವುದು ಸ್ವತಃ ಬ್ರಹ್ಮಸೂತ್ರದ ಕತೃವಾದ ವೇದವ್ಯಾಸ ಮಹರ್ಷಿಗಳೊಡನೆ ಎನ್ನುವುದು ಅರಿವಿಗೆ ಬಂದಿತು. ತಕ್ಷಣವೇ ತನ್ನಿಂದಾದ ತಪ್ಪಿಗಾಗಿ ವ್ಯಾಸಮಹರ್ಷಿಗಳ ಚರಣಗಳಿಗೆರಗಿದ ಶಂಕರರು ಅವರಲ್ಲಿ ಕ್ಷಮೆಯನ್ನು ಯಾಚಿಸಿದರು. ಇದಕ್ಕೆ ಪ್ರತಿಕ್ರಯಿಸಿದ ವ್ಯಾಸರು ಶಂಕರರಿಗೆ ಮತ್ತೆ 16 ವರ್ಷಗಳ ಆಯಸ್ಸನ್ನು ವರವಾಗಿ ನೀಡಿ 'ನೀನು ನಿನ್ನಲ್ಲಿರುವ ಜ್ಞಾನವನ್ನು ಇಡೀ ದೇಶಕ್ಕೆ ಪಸರಿಸು. ಇದರಿಂದ ಒಳಿತಾಗುತ್ತದೆ. ನೀನು ರಚಿಸಿದ ಈ ಬ್ರಹ್ಮಸೂತ್ರ ಭಾಷ್ಯಕ್ಕೆ ನನ್ನ ಸಂಪೂರ್ಣ ಸಹಮತವಿದೆ' ಎನ್ನುವುದಾಗಿ ಅನುಗ್ರಹಿಸಿದರು.
ಮುಂದೆ ಶ್ರೀ ಶಂಕರಾಚಾರ್ಯರು ದೇಶದ ನಾನಾ ಮೂಲೆಗಳನ್ನು ತಿರುಗಿ ವಿವಿಧ ಪಂಗಡಗಳ ಮುಖಂಡರನ್ನೂ ವಿವಿಧ ಧಾರ್ಮಿಕ ವಿಚಾರವಾದಿಗಳನ್ನೂ ಸಂಧಿಸಿದ್ದಲ್ಲದೆ ಹಲವಾರು ಜನರನ್ನು ಆಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿದರು. ಕುಮಾರಿಲ ಭಟ್ಟ, ಮಂಡನ ಮಿಶ್ರರಾದಿಯಾಗಿ ನಾನಾ ವಿದ್ವಾಂಸರನ್ನು ವಾದದಲ್ಲಿ ಮಣಿಸಿದ ಶಂಕರರು ತಾವು ಸರ್ವಜ್ಞಪೀಠವನ್ನೇರಿದರು. ಹಾಗೆಯೇ ಮುಂದೆ ಹಿಂದೂ ಧರ್ಮ ಜಾಗೃತಿ ಮೂಡಿಸುವ ಸಲುವಾಗಿ, ತಾವು ಕಂಡುಕೊಂಡ 'ಅದ್ವೈತ' ತತ್ವದ ಪ್ರಚಾರಕ್ಕಾಗಿ ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಆಮ್ನಾಯ ಪೀಠ (ಉತ್ತರದಲ್ಲಿ ಬದರಿ ಉತ್ತರಾಮ್ನಾಯ ಜ್ಯೋತಿರ್ಪೀಠ, ದಕ್ಷಿಣದಲ್ಲಿ ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠ, ಪೂರ್ವದಲ್ಲಿ ಪುರಿ ಪೂರ್ವಾಮ್ನಾಯ ಪೀಠ ಹಾಗೂ ಪಶ್ಚಿಮದಲ್ಲಿ ದ್ವಾರಕೆ ಪಶ್ಚಿಮಾಮ್ನಾಯ ಪೀಠ)ಗಳನ್ನು ಸ್ಥಾಪಿಸಿದರು. ಆ ನಾಲ್ಕೂ ಮಠಗಳು ಇಂದಿಗೂ ತಮ್ಮ ಪರಂಪರೆಯನ್ನು ಮುಂದುವರಿಸಿದ್ದು ಅಸಂಖ್ಯಾತ ಶಿಷ್ಯವರ್ಗವನ್ನು ಹೊಂದಿವೆ. ಮುಂದೆ ಶ್ರೀ ಶಂಕರಾಚಾರ್ಯರು ತಾವು ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆಗಳಿಗೆ ಭಾಷ್ಯಗಳನ್ನು ಬರೆದರು. ಇವರು ರಚಿಸಿದ 'ಭಜಗೋವಿಂದಂ', 'ಸೌಂದರ್ಯ ಲಹರಿ', 'ಕನಕಧಾರಾ ಸ್ತೋತ್ರ'ಗಳು ಬಹು ಪ್ರಸಿದ್ದವಾಗಿವೆ.
Chandra Grahan 2022: ಈ ವರ್ಷ ಎರಡೆರಡು ಚಂದ್ರಗ್ರಹಣ
ಹೀಗೆ ಹಿಂದೂ ಧರ್ಮದ ಉದ್ದಾರಕರಾಗಿ, ಧರ್ಮ ಸಂಸ್ಥಾಪನೆಗಾಗಿ ಮಠಗಳ ಮೂಲಕ ಧಾರ್ಮಿಕ ಜಾಗೃತಿಯನ್ನುಂಟುಮಾಡಿದ ದಿವ್ಯ ಚೇತನ ಶ್ರೀ ಶಂಕರಾಚಾರ್ಯರು ತಮ್ಮ 32 ನೇ ವಯಸ್ಸಿನಲ್ಲಿ ಶ್ರೀ ಬದರೀ ಕ್ಷೇತ್ರದಲ್ಲಿ ಮಹಾಸಮಾಧಿಯನ್ನು ಹೊಂದಿದರು.
ಅದ್ವೈತ ಚಿಂತನೆಯ ಮೂಲಕ ಲೋಕ ಬೆಳಗಿದ ಮಹಾನ್ ಶಕ್ತಿಯ ಹೆಸರು ಇಂದಿಗೂ ಭಾರತದ ಗಾಳಿ, ನೀರು ಮತ್ತು ಮಣ್ಣಿನ ಕಣ ಕಣದಲ್ಲಿಯೂ ಜೀವಂತವಾಗಿದೆ.