GOOD LUCK superstitions: ಹಿಂಗೆಲ್ಲ ಆದ್ರೆ ಅದೃಷ್ಟ ಅಂತಾರಲ್ಲಾ.. ನೀವೇನಂತೀರಿ?
ಕೆಲವೊಂದು ವಿಷಯಗಳು ಘಟಿಸಿದಾಗ ಕೆಟ್ಟದಾಗುತ್ತದೆ, ಮತ್ತೆ ಕೆಲವು ಆಕಸ್ಮಿಕಗಳಿಂದ ಒಳಿತಾಗುತ್ತದೆ ಎಂಬ ನಂಬಿಕೆ ಎಲ್ಲ ಕಡೆ ಇದೆ. ಹಾಗೆ ಅದೃಷ್ಟ ತರುತ್ತದೆಂದು ನಂಬಿರುವ ನಂಬಿಕೆಗಳು ಯಾವುವು ಗೊತ್ತಾ?
ಎಲ್ಲರೂ ಅಷ್ಟೇ, ಬದುಕಿನಲ್ಲಿ ತಮಗಾದ ಅನುಭವಗಳ ಆಧಾರದ ಮೇಲೆ ಒಂದಿಷ್ಟು ನಂಬಿಕೆಗಳನ್ನು ಬೆಳೆಸಿಕೊಂಡಿರುತ್ತಾರೆ. ಮತ್ತಷ್ಟು ನಂಬಿಕೆಗಳು ಅವರಿವರ ಮಾತುಗಳಿಂದ ಸೇರಿಕೊಂಡಿರುತ್ತವೆ. ಒಟ್ಟಿನಲ್ಲಿ ಒಂದಿಷ್ಟು ಜನರಿಗೆ ಮೂಢನಂಬಿಕೆ ಎನಿಸೋ, ನಮಗೆ ಮಾತ್ರ ಸತ್ಯ ಎನಿಸುವಂಥ ಒಂದಿಷ್ಟು ನಂಬಿಕೆಗಳು ನಮ್ಮೆಲ್ಲರಲ್ಲೂ ಇರುತ್ತವೆ. ಬೆಕ್ಕು ಅಡ್ಡ ಹೋದ್ರೆ ಕೆಲಸ ಕೆಡ್ತು ಅನ್ನೋರಿದ್ದಾರೆ, ಬೆಕ್ಕಿಗೂ ಏನೋ ಕೆಲಸ ಇತ್ತು, ಹೋಯ್ತಷ್ಟೇ ಅನ್ನೋರೂ ಇದ್ದಾರೆ. ಇಂಥ ಹಲವಾರು ಮೂಢನಂಬಿಕೆಗಳು ನಮ್ಮ ದೈನಂದಿನ ಬದುಕಿನಲ್ಲಿ ಹಾಸು ಹೊಕ್ಕಾಗಿವೆ. ಹಾಗೆಯೇ ಅದೃಷ್ಟ(good luck)ದ ಬಗೆಗೊಂದಿಷ್ಟು ಮೂಢನಂಬಿಕೆಗಳಿವೆ. ಅವು ಬಹಳ ಕುತೂಹಲಕಾರಿಯಾಗಿವೆ. ಅವೇನೆಂದು ಹೇಳ್ತೀವಿ, ನಂಬೋದು ಬಿಡೋದು ನಿಮಗೆ ಬಿಟ್ಟಿದ್ದು.
ಉಪ್ಪು ನೀರು(salt water)
ಯುವತಿ ತಾನು ಮಲಗುವ ಮುನ್ನ ಉಪ್ಪು ನೀರನ್ನು ಕುಡಿದರೆ, ರಾತ್ರಿ ಕನಸಿನಲ್ಲಿ ಅವಳ ಭವಿಷ್ಯದ ಸಂಗಾತಿ ಬರುತ್ತಾನೆ ಎನ್ನುತ್ತಾರೆ.
ನೆರಳು(shadow)
ನಾವು ನೀವು ನಡೆಯುವಾಗ ನೆರಳೊಂದು ನಮ್ಮನ್ನು ಹಿಂಬಾಲಿಸುವುದೋ, ಇಲ್ಲವೇ ನಾವೇ ನೆರಳನ್ನು ಹಿಂಬಾಲಿಸುವುದೋ ಆಗುತ್ತಲೇ ಇರುತ್ತದೆ. ಅದೇನು ಅಂಥ ವಿಶೇಷವಲ್ಲ. ಆದರೆ, ನಮಗೆ ತಿಳಿಯದೆಯೇ ನಮ್ಮದೇ ನೆರಳ ಮೇಲೆ ನಾವು ಕಾಲಿಟ್ಟರೆ ಮಾತ್ರ ಅದರಿಂದ ಅದೃಷ್ಟ ಒದ್ದುಕೊಂಡು ನಮ್ಮ ಬಳಿ ಬರುತ್ತದಂತೆ!
ಬಿಳಿ ಚಿಟ್ಟೆ(butterfly)
ಹೊಸ ವರ್ಷವೊಂದು ಆರಂಭವಾದ ದಿನ ಬಿಳಿಯ ಚಿಟ್ಟೆಯೊಂದು ನಿಮ್ಮೆದುರು ಹಾರಿ ಬಂದರೆ, ಆ ಇಡೀ ವರ್ಷ ನಿಮ್ಮ ಪಾಲಿಗೆ ಸುಖಮಯವಾಗಿ, ಸಂತೋಷವಾಗಿ ಸಾಗಲಿದೆ ಎಂಬ ನಂಬಿಕೆಯಿದೆ.
ಕನ್ನಡಿ(mirror)
ಮನೆಯ ಮುಖ್ಯದ್ವಾರ ದಾಟುವಾಗ ಎದುರಿನಲ್ಲಿ ಕನ್ನಡಿ ಇಟ್ಟರೆ, ಒಳಗೆ ಕಾಲಿಡುವಾಗ ನಮ್ಮನ್ನು ನಾವು ನೋಡಿಕೊಂಡು ದಾಟಿದರೆ ಅದರಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ.
ಮೇಣದ ದೀಪ(candles)
ಹುಟ್ಟುಹಬ್ಬವೆಂದರೆ ಸಾಮಾನ್ಯವಾಗಿ ನಮ್ಮ ಆಯಸ್ಸಿನಷ್ಟೇ ಕ್ಯಾಂಡಲ್‌ಗಳನ್ನು ಕೇಕ್ ಮೇಲಿಟ್ಟು ಅದನ್ನು ಉಫ್ ಎಂದು ಆರಿಸುವ ಪದ್ಧತಿ ಗೊತ್ತೇ ಇದೆ. ಒಂದು ವೇಳೆ ನೀವು ದೊಡ್ಡದಾಗಿ ಉಸಿರೆಳೆದುಕೊಂಡು, ಒಂದೇ ಉಸಿರಿನಲ್ಲಿ ಅಷ್ಟೂ ಕ್ಯಾಂಡಲ್‌ಗಳನ್ನು ಆರಿಸಿದರೆ, ನಿಮ್ಮ ಪಾಲಿಗೆ ಮುಂದಿನ ದಿನಗಳು ಬಹಳ ಅದೃಷ್ಟ ತರುತ್ತವೆ.
ಬೆಳ್ಳುಳ್ಳಿ(garlic)
ಕೆಲವರು ತಮ್ಮ ಮನೆಯ ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ನೇತು ಹಾಕಿರುವುದನ್ನು ನೀವೂ ನೋಡಿರಬಹುದು. ಹೀಗೆ ಅಡುಗೆ ಕೋಣೆಯಲ್ಲಿ ಬೆಳ್ಳುಳ್ಳಿ ನೇತು ಹಾಕುವುದರಿಂದ ಅದೃಷ್ಟ ನೆಟ್ಟಗಾಗುತ್ತದಂತೆ.
ಕ್ಲೋವರ್(clover)
ಕ್ಲೋವರ್ ಎಂಬ ಕಂದು ಹಾಗೂ ಬಿಳಿ ಬಣ್ಣಗಳ ಹೂ ಬಿಡುವ ಸಸ್ಯವೊಂದಿದೆ. ಅದರಲ್ಲಿ ನಾಲ್ಕು ಎಲೆಗಳ ಗುಚ್ಛ ಅಪರೂಪಕ್ಕೆ ಕಾಣಿಸುತ್ತದೆ. ಹಾಗಾಗಿಯೇ, ಅದನ್ನು ನೋಡಿದರೆ ಅಂದು ಅದೃಷ್ಟ ಖುಲಾಯಿಸಲಿದೆ ಎಂಬ ನಂಬಿಕೆಯಿದೆ.
ಬಲಗೈ ತುರಿಕೆ(itching)
ಸಾಮಾನ್ಯವಾಗಿ ಯಾರಾದರೂ ಜಗಳಕ್ಕಿಳಿದರೆ ಯಾಕೋ ಕೈ ತುರಿಸ್ತಾ ಇದೆ ಎಂದು ಹೆದರಿಸೋದು ಕೇಳಿರುತ್ತೇವೆ. ಅಂದರೆ ಹೊಡೆಯಬೇಕು ಅನ್ನಿಸ್ತಿದೆ ಎಂದರ್ಥ. ಆದರೆ ಹೀಗೆ ಬಲಗೈ ತುರಿಸಿದರೆ ಅದಕ್ಕೆ ಮತ್ತೊಂದು ನಂಬಿಕೆಯೂ ಇದೆ. ಹೌದು, ಇದ್ದಕ್ಕಿದ್ದಂತೆ ಬಲಗೈಯ ಅಂಗೈ ತುರಿಸಲಾರಂಭಿಸಿದರೆ ನಿಮ್ಮ ಹಣದ ಚೀಲ ಭಾರವಾಗುವ ಸೂಚನೆ ಅದು.
ಸಕ್ಕರೆ(sugar)
ಕೆಲವೊಮ್ಮೆ ಯಾವುದೋ ಯೋಚನೆಯಲ್ಲಿ ಟೀ ಮಾಡುವಾಗ ಸಕ್ಕರೆಯನ್ನು ಕೈ ಪಾತ್ರೆಗೆ ಹಾಕುವ ಬದಲು ಲೋಟಕ್ಕೆ ಹಾಕಿಟ್ಟುಕೊಳ್ಳುತ್ತೀರೆಂದುಕೊಳ್ಳಿ. ಆಮೇಲೆ ಯಾಕೆ ಹೀಗ್ ಮಾಡ್ದೆ ಎನಿಸೋದಿದೆ. ಹೀಗಾದರೆ ಖುಷಿ ಪಡಿ, ಹೀಗೆ ಲೋಟಕ್ಕೆ ಮೊದಲೇ ಸಕ್ಕರೆ ಹಾಕಿ ಆಮೇಲೆ ಟೀ ಹಾಕುವುದು ಆಕಸ್ಮಿಕವಾಗಿ ನಡೆದರೆ ಅದರಿಂದ ಒಳಿತಾಗುತ್ತದೆಯಂತೆ.
ಹಕ್ಕಿ ಪಿಕ್ಕೆ(bird poops)
ಹಾದಿಯಲ್ಲಿ ನಡೆಯುವಾಗ ಇದ್ದಕ್ಕಿದ್ದಂತೆ ಮೈ ಮೇಲೆ ಹಕ್ಕಿ ಪಿಕ್ಕೆ ಹಾಕಿದರೆ ಅದು ಅದೃಷ್ಟವೆಂಬ ನಂಬಿಕೆ ನೀವೂ ಕೇ್ಳಿರಬಹುದು. ಈ ನಂಬಿಕೆ ಕೇವಲ ಭಾರತದಲ್ಲಿಲ್ಲ, ರಷ್ಯಾದವರು ಕೂಡಾ ಹಕ್ಕಿ ಪಿಕ್ಕೆ ಮೈ ಮೇಲೆ ಬಿದ್ದರೆ ಹಣ ತಮ್ಮ ಹಾದಿಯಲ್ಲಿದೆ ಎಂದು ನಂಬುತ್ತಾರೆ. ಏನೋ ಕಿರಿಕಿರಿಯಾದರೆ ಅದರ ಹಿಂದೆಯೇ ಸಂತೋಷದ ವಿಷಯವೂ ಇರುತ್ತದೆ ಎಂಬ ನಂಬಿಕೆ ಇದು.
ಒಂದು ರುಪಾಯಿ(1 rupee)
ಮದುವೆ, ಹುಟ್ಟುಹಬ್ಬ, ಸೀಮಂತ, ಉಪನಯನ- ಯಾವುದೇ ಶುಭ ಕಾರ್ಯಗಳಲ್ಲಿ ಮನೆಯವರಿಗೆ ಹಣವನ್ನು ಉಡುಗೊರೆಯಾಗಿ ಕೊಡುವ ಸಂಪ್ರದಾಯ ಭಾರತದೆಲ್ಲೆಡೆ ಇದೆ. ಹೀಗೆ ಹಣವನ್ನು ಕೊಡುವವರು 10 ರುಪಾಯಿಯಿಂದ 10,000 ರುಪಾಯಿಯವರೆಗೆ ಎಷ್ಟೇ ಹಣ ನೀಡಿದ್ದರೂ ಅದರ ಜೊತೆ 1 ರುಪಾಯಿ ಸೇರಿಸಿ ಕೊಡುವ ಪದ್ಧತಿ ನೀವೂ ಗಮನಿಸಿರಬಹುದು. ಹಾಗೆ ತೆಗೆದುಕೊಂಡವರ ಪಾಲಿಗೆ ಹಣ ಮುಕ್ತಾಯವಾಗಬಾರದು, ಮುಂದುವರಿಯಬೇಕು, ಅವರು ಹಣವಂತರಾಗಬೇಕು ಎಂಬ ಆಶಯ ಈ ಪದ್ಧತಿಯದು.