Hindu Traditions: ಹಿಂದೂ ಆಚರಣೆಗಳ ಹಿಂದಿನ ವೈಜ್ಞಾನಿಕ ಕಾರಣಗಳಿವು
ಹಿಂದೂ ಧರ್ಮದ ಬಹುತೇಕ ಆಚರಣೆಗಳು ಉತ್ತಮ ಕಾರಣಕ್ಕಾಗಿಯೇ ಆರಂಭವಾಗಿವೆ. ಆದರೆ, ಕಾಲಾಂತರದಲ್ಲಿ ಜನರು ಆ ಕಾರಣಗಳನ್ನು ಮರೆತಿದ್ದಾರೆ. ಇಂದಿನ ತಲೆಮಾರಿನವರಂತೂ ಅವನ್ನು ಆಚರಣೆ ಮಾಡಲು ಹೇಳಿದರೆ ಪ್ರಶ್ನಿಸಲು ತೊಡಗುತ್ತಾರೆ. ಆ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೆ ಹಿರಿಯರು ತಡವರಿಸುವುದುಂಟು. ಅದಕ್ಕಾಗಿಯೇ ಹಿಂದೂ ಆಚರಣೆಗಳ ಹಿಂದಿನ ಕೆಲ ವೈಜ್ಞಾನಿಕ ಕಾರಣಗಳನ್ನಿಲ್ಲಿ ಕೊಡಲಾಗಿದೆ.
ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಒಂದಿಷ್ಟು ಆಚರಣೆಗಳನ್ನು ಏಕೆ ಮಾಡುತ್ತೇವೆಂಬುದೇ ನಮಗೆ ಗೊತ್ತಿರುವುದಿಲ್ಲ. ಆದರೆ, ನಮ್ಮ ಹಿರಿಯರು ಅವನ್ನು ರೂಢಿಗೆ ತರುವಾಗ ಆರೋಗ್ಯದ ಒಳಿತನ್ನೇ ಮನಸ್ಸಲ್ಲಿಟ್ಟುಕೊಂಡಿದ್ದರು ಎಂಬುದು ಕಾರಣಗಳನ್ನು ಅರಿತಾಗ ತಿಳಿಯುತ್ತದೆ.
ಮದರಂಗಿ(henna)
ಮದರಂಗಿ ಔಷಧೀಯ ಗುಣಗಳನ್ನು ಹೊಂದಿದ್ದು, ಅದನ್ನು ಕೈಗಳು ಹಾಗೂ ಕಾಲಿಗೆ ಹಚ್ಚುವುದರಿಂದ ವಿವಾಹದ ಸಮಯದಲ್ಲಿ ಮಧುಮಕ್ಕಳಲ್ಲಿ ಹೆಚ್ಚುವ ಸ್ಟ್ರೆಸ್ ಕಡಿಮೆ ಮಾಡುತ್ತದೆ. ದೇಹವನ್ನು ತಂಪಾಗಿಸಿ, ನರಗಳನ್ನು ಶಾಂತಗೊಳಿಸುತ್ತದೆ.
ಕಾಲುಂಗುರ(toe rings)
ಭಾರತೀಯ ಯುವತಿಯರು ವಿವಾಹದ ಬಳಿಕ ಕಾಲಿನ ಎರಡನೇ ಬೆರಳಿಗೆ ಉಂಗುರ ಧರಿಸುವ ಸಂಪ್ರದಾಯವಿದೆ. ಈ ಬೆರಳಿನಲ್ಲಿರುವ ನರವು ಗರ್ಭಕೋಶಕ್ಕೆ ಸಂಪರ್ಕ ಹೊಂದಿ, ಅಲ್ಲಿಂದ ಹೃದಯಕ್ಕೆ ಮುಟ್ಟುತ್ತದೆ. ಹಾಗಾಗಿ, ಕಾಲುಂಗುರವು ಗರ್ಭಕೋಶಕ್ಕೆ ಚೆನ್ನಾಗಿ ರಕ್ತ ಸಂಚಲನವಾಗುವಂತೆ ನೋಡಿಕೊಂಡು ಅದನ್ನು ಬಲವಾಗಿಸುತ್ತದೆ. ಅಲ್ಲದೆ, ಮಹಿಳೆಯ ಮುಟ್ಟು(periods) ಕೂಡಾ ನಿಯಮಿತವಾಗಿ ಆಗುವಂತೆ ನೋಡಿಕೊಳ್ಳುತ್ತದೆ.
ನೀರಿಗೆ ನಾಣ್ಯ ಹಾಕುವುದು
ಹಿಂದೆಲ್ಲ ತಾಮ್ರದ ನಾಣ್ಯಗಳು ಮಾತ್ರ ಬಳಸಲ್ಪಡುತ್ತಿತ್ತು. ಆ ತಾಮ್ರ(copper)ದ ಅಗತ್ಯ ಮನುಷ್ಯನ ದೇಹಕ್ಕಿದೆ. ನದಿಗಳೇ ಕುಡಿಯುವ ನೀರಿನ ಮೂಲವಾದ್ದರಿಂದ ಅವು ಹುಟ್ಟುವ ಜಾಗಗಳಲ್ಲಿ, ಇತರೆ ನೀರಿನ ಮೂಲಗಳಲ್ಲಿ ತಾಮ್ರದ ನಾಣ್ಯ ಹಾಕಲಾಗುತ್ತಿತ್ತು. ಇದರಿಂದ ತಾಮ್ರದ ಅಂಶವು ಕುಡಿಯುವವರ ದೇಹ ಸೇರುತ್ತಿತ್ತು.
Daily Horoscope: ಕನ್ಯಾ ರಾಶಿಯವರು ತಾಳ್ಮೆಗೆಟ್ಟರೆ ಕೆಲಸ ಕೆಟ್ಟೀತು ಎಚ್ಚರ
ನಮಸ್ತೆ(namaste)
ನಾವು ವ್ಯಕ್ತಿಯೊಬ್ಬರು ಎದುರಾದಾಗ ಎರಡೂ ಕೈಗಳನ್ನು ಜೋಡಿಸಿ ನಮಸ್ತೆ ಹೇಳುತ್ತೇವೆ. ಈ ಅಭ್ಯಾಸದ ಹಿಂದೆ ಕೂಡಾ ವೈಜ್ಞಾನಿಕ ಕಾರಣ ಇದೆ ಎಂದು ನಿಮಗೆ ಗೊತ್ತೇ? ಎರಡೂ ಕೈಗಳನ್ನು ಜೋಡಿಸಿದಾಗ ಎಲ್ಲ ಬೆರಳ ತುದಿಗಳು ಒಂದಕ್ಕೊಂದು ಒತ್ತುತ್ತವೆ. ಈ ಬೆರಳ ತುದಿಗಳು ಕಣ್ಣು, ಕಿವಿ ಹಾಗೂ ಎಚ್ಚರಾವಸ್ಥೆಯ ಪ್ರೆಶರ್ ಪಾಯಿಂಟ್(pressure point) ಹೊಂದಿವೆ. ಯಾರನ್ನಾದರೂ ನೋಡಿದಾಗ ಕೈ ಮುಗಿಯುವುದರಿಂದ ಈ ಪ್ರೆಶರ್ ಪಾಯಿಂಟ್‌ಗಳು ಆ್ಯಕ್ಟಿವೇಟ್(activate) ಆಗುವುದರಿಂದ ಆ ಭೇಟಿಯನ್ನು, ವ್ಯಕ್ತಿಯನ್ನು ಸುಲಭವಾಗಿ ಮರೆಯಲಾರೆವು.
ತಿಲಕ
ಮನುಷ್ಯನ ದೇಹದಲ್ಲಿ ಭ್ರೂಮಧ್ಯೆ ಭಾಗವು ಪ್ರಮುಖ ನರಕೇಂದ್ರ ಹೊಂದಿದೆ. ಎರಡು ಹುಬ್ಬುಗಳ ನಡುವೆ ತಿಲಕ ಇಡುವುದರಿಂದ ಆ ಭಾಗ ಆ್ಯಕ್ಟಿವೇಟ್ ಆಗುತ್ತದೆ. ಸುಮ್ಮನೆ ಸ್ಟಿಕ್ಕರ್ ಇಡುವಂಥಲ್ಲ, ಕುಂಕುಮ ಅಥವಾ ಗಂಧವನ್ನು ಹಚ್ಚಿ ವೃತ್ತಾಕಾರದಲ್ಲಿ ತಿಕ್ಕುತ್ತಾ ತಿಲಕವಿಡುವುದರಿಂದ ಅದರ ಪ್ರಯೋಜನ ಪಡೆಯಬಹುದು. ಇದರಿಂದ ವ್ಯಕ್ತಿಯ ಏಕಾಗ್ರತೆ ಹೆಚ್ಚುವ ಜೊತೆಗೆ ಎನರ್ಜಿ ಪೋಲಾಗುವುದು ತಪ್ಪುತ್ತದೆ.
ದೇಗುಲದ ಗಂಟೆ(temple bell)
ದೇವಾಲಯಕ್ಕೆ ಕಾಲಿಡುತ್ತಿದ್ದಂತೆಯೇ ಗಂಟೆ ಬಡಿಯುವುದು ಹಿಂದೂಗಳ ಅಭ್ಯಾಸ. ಆ ಢಣ್ ಎಂಬ ಸದ್ದಿನಲ್ಲಿರುವ ವೈಬ್ರೇಶನ್(vibration), ನಮ್ಮ ಗಮನ ಸಂಪೂರ್ಣ ಸೆಳೆದು, ಮನಸ್ಸನ್ನು ಶಾರ್ಪ್ ಆಗಿಸುತ್ತದೆ. ಆಗ ಏಕಾಗ್ರ ಚಿತ್ತದಿಂದ ದೇವರಿಗೆ ನಮಸ್ಕರಿಸಲು ಸಾಧ್ಯವಾಗುತ್ತದೆ. ಈ ಗಂಟೆಗಳನ್ನು ಹೇಗೆ ತಯಾರಿಸಲಾಗಿರುತ್ತದೆ ಎಂದರೆ, ಅವನ್ನು ಬಡಿದಾಗ ನಮ್ಮ ಮೆದುಳಿದ ಬಲ ಹಾಗೂ ಎಡ ಭಾಗಗಳೆರಡರಲ್ಲೂ ಶಬ್ದವು ಏಕಾಗ್ರ ಚಿತ್ತ ತರುತ್ತದೆ. ಆ ಶಬ್ದದ ಪ್ರತಿಧ್ವನಿ ಆಗುವ ಸಮಯವು ನಮ್ಮೆಲ್ಲ ಏಳು ಚಕ್ರಗಳನ್ನು ಎಚ್ಚರಿಸಬಲ್ಲವಾಗಿವೆ.
ಉತ್ತರ(north)ಕ್ಕೆ ತಲೆ ಹಾಕದಿರುವುದು
ಮನುಷ್ಯನ ದೇಹಕ್ಕೆ ಅದರದೇ ಆದ ಮ್ಯಾಗ್ನೆಟಿಕ್ ಫೀಲ್ಡ್(magnetic field) ಇರುತ್ತದೆ. ಭೂಮಿ(earth) ಕೂಡಾ ಬೃಹತ್ ಮ್ಯಾಗ್ನೆಟ್ ಆಗಿದೆ. ಹಾಗಾಗಿ, ಉತ್ತರಕ್ಕೆ ತಲೆ ಹಾಕಿ ಮಲಗಿದಾಗ ದೇಹದ ಮ್ಯಾಗ್ನೆಟಿಕ್ ಫೀಲ್ಡ್ಗೂ ಭೂಮಿಯದಕ್ಕೂ ವಿರೋಧ ಉಂಟಾಗುತ್ತದೆ. ಇದರಿಂದ ರಕ್ತದೊತ್ತಡದಂತ ಸಮಸ್ಯೆಗಳಾಗಬಹುದು.
ಉಪವಾಸ(fasting)
ಜೀರ್ಣವ್ಯವಸ್ಥೆಯಲ್ಲಿ ವಿಷಕಾರಿ ವಸ್ತುಗಳು ಹೆಚ್ಚಾಗಿ ತುಂಬುವುದರಿಂದ ಕಾಯಿಲೆಗಳುಂಟಾಗುತ್ತವೆ ಎನ್ನುತ್ತದೆ ಆಯುರ್ವೇದ. ಆಗಾಗ ದೇಹದೊಳಗನ್ನು ಕ್ಲೆನ್ಸಿಂಗ್ ಮಾಡುವುದರಿಂದ ಆರೋಗ್ಯವಾಗಿರಬಹುದು. ತಿಂಗಳಿಗೊಮ್ಮೆ ಉಪವಾಸ ಮಾಡುವುದರಿಂದ ಜೀರ್ಣಾಂಗಗಳಿಗೆ ಕೊಂಚ ರೆಸ್ಟ್ ಸಿಗುತ್ತದೆ. ಇದರಿಂದ ದೇಹದೊಳಗು ಸ್ವಚ್ಛವಾಗುತ್ತದೆ.
ಮೂರ್ತಿ ಪೂಜೆ(Idol worship)
ಸೈಕಾಲಜಿ(psychology)ಯ ಪ್ರಕಾರ, ಮನುಷ್ಯನ ಕಣ್ಣಿಗೇನು ಕಾಣುತ್ತದೆಯೋ ಅದಕ್ಕೆ ಸರಿಯಾಗಿ ಯೋಚನೆಗಳು ರೂಪುಗೊಳ್ಳುತ್ತವೆ. ಹಾಗಾಗಿ, ಮೂರ್ತಿ ಎದುರಿದ್ದಾಗ ಹೆಚ್ಚು ಏಕಾಗ್ರತೆಯಿಂದ ಪ್ರಾರ್ಥನೆ ಮಾಡಲು ಸಾಧ್ಯ. ಇದೇ ಕಾರಣಕ್ಕೆ ಹಿಂದೂ ಧರ್ಮದಲ್ಲಿ ಮೂರ್ತಿ ಪೂಜೆ ಆರಂಭವಾಗಿದೆ.