ರಾಯಚೂರು: ರಾಯರ ಮಠದಲ್ಲಿ ಸುದರ್ಶನ ಹೋಮ, ತಪ್ತ ಮುದ್ರಾಧಾರಣೆ
ಏಕಾದಶಿ ಹಿನ್ನೆಲೆಯಲ್ಲಿ ಶ್ರೀಮಠದ ಪ್ರಾಕಾರದಲ್ಲಿ ಸುದರ್ಶನ ಹೋಮವನ್ನು ಮಾಡಲಾಯಿತು. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಸುದರ್ಶನ ಹೋಮದಲ್ಲಿ ಪಾಲ್ಗೊಂಡು ಪೂರ್ಣಾಹುತಿ ಕಾರ್ಯವನ್ನು ನಡೆಸಿಕೊಟ್ಟರು. ನಂತರ ಶಿಷ್ಯವೃಂದಕ್ಕೆ, ಭಕ್ತರಿಗೆ ಶ್ರೀಗಳು ತಪ್ತ ಮುದ್ರಾಧಾರಣೆ ಮಾಡಿ ಆಶೀರ್ವದಿಸಿದರು.
ರಾಯಚೂರು(ಜು.14): ಇಲ್ಲಿನ ಜವಾಹರನಗರದಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಶಾಖಾ ಮಠದಲ್ಲಿ ಆಶಾಡ ಏಕಾದಶಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಗುರುವಾರ ನಡೆಸಲಾಯಿತು. ಏಕಾದಶಿ ಹಿನ್ನೆಲೆಯಲ್ಲಿ ಶ್ರೀಮಠದ ಪ್ರಾಕಾರದಲ್ಲಿ ಸುದರ್ಶನ ಹೋಮವನ್ನು ಮಾಡಲಾಯಿತು. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಸುದರ್ಶನ ಹೋಮದಲ್ಲಿ ಪಾಲ್ಗೊಂಡು ಪೂರ್ಣಾಹುತಿ ಕಾರ್ಯವನ್ನು ನಡೆಸಿಕೊಟ್ಟರು. ನಂತರ ಶಿಷ್ಯವೃಂದಕ್ಕೆ, ಭಕ್ತರಿಗೆ ಶ್ರೀಗಳು ತಪ್ತ ಮುದ್ರಾಧಾರಣೆ ಮಾಡಿ ಆಶೀರ್ವದಿಸಿದರು.
ಈ ವೇಳೆ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಭಗವಂತನ ಚಿಹ್ನೆಗಳುಳ್ಳ ತಪ್ತ ಮುದ್ರಾಧಾರಣೆಯಿಂದ ಪರಮಾತ್ಮನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಎಂದು ಹಲವಾರು ಯತಿಗಳು, ವಿದ್ವಾಂಸರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಭಗವಂತನಾದ ಶ್ರೀವಿಷ್ಣುವಿನ ಚಿಹ್ನೆಗಳಾದ ಶಂಖ, ಚಕ್ರ, ಗಧಾ, ಪದ್ಮ ಮುಂತಾದ ಪಂಚ ಮುದ್ರೆಗಳಿದ್ದು ಅದರಲ್ಲಿ ಕೆಲವು ಮಠಗಳ ಶಿಷ್ಯರು ಐದು ಮುದ್ರೆ ಧಾರಣೆ ಮಾಡುತ್ತಾರೆ. ಕೆಲವು ಮಠಗಳ ಶಿಷ್ಯರು ಎರೆಡು ಮುದ್ರೆ ಧರಿಸುತ್ತಾರೆ. ಅದು ಅವರವರ ಆಚರಣೆ ಪದ್ಧತಿ ಒಟ್ಟಾರೆ ವೈಷ್ಣವರು ಆದವರು ಭಗವಂತನ ಚಿಹ್ನೆಗಳನ್ನು ದಿನ ನಿತ್ಯ ಸಂಧ್ಯಾವಂದನೆ ವೇಳೆ ಗೋಪಿಚಂದನ ನಿಂದ ಮುಖದಲ್ಲಿ ಮುದ್ರೆ ಧರಿಸುತ್ತಾರೆ ಎಂದರು.
ಚಿತ್ತಾಪುರ: ಕೋಳಿ ಎಸೆದು ಹರಕೆ ತೀರಿಸಿದ್ದ ಭಕ್ತರು..!
ಮುದ್ರಾಧಾರಣೆಯಿಂದ ಸಕಲ ಶ್ರೇಯಸ್ಸು ಲಭಿಸುತ್ತದೆ. ಆರೋಗ್ಯ ವೃದ್ಧಿ ಆಗುತ್ತದೆ. ದುಶ್ಚಟ ದೂರವಾಗುತ್ತವೆ. ದುಷ್ಟಶಕ್ತಿಗಳ ಉಪಟಳ ನಿವಾರಣೆಯಾಗುತ್ತದೆ. ಹೀಗೆ ಅನೇಕ ಪ್ರಯೋಜನವಿದ್ದು ಶಾಸ್ತ್ರದಲ್ಲಿ ಮುದ್ರಾಧಾರಣೆಗೆ ವಿಶೇಷ ಮಹತ್ವವಿದೆ ಎಂದು ನುಡಿದ ಅವರು, ಚಾತುರ್ಮಾಸದಲ್ಲಿ ಮೇಲಾಗಿ ಏಕಾದಶಿಯಂದು ಮುದ್ರಾಧಾರಣೆಗೆ ಹೆಚ್ಚಿನ ಪ್ರಾಮುಖ್ಯತೆಯಿದೆ ಎಂದು ರಾಯರ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ನುಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ವಿದ್ವಾನ್ ವಾದಿರಾಜಾಚಾರ್, ಕಿನ್ನಾಳ ನಾರಾಯಣಾಚಾರ್, ವ್ಯವಸ್ಥಾಪಕ ದ್ವಾರಕಾನಾಥ್ ಆಚಾರ್, ಪವನ ಆಚಾರ್ ಕುರ್ಡಿ ಸೇರಿ ಮಠದ ಪಂಡಿತರು, ವಿದ್ವಾಂಸರು, ಶಿಷ್ಯರು, ಮಹಿಳೆಯರು, ಭಕ್ತರು ಭಾಗವಹಿಸಿದ್ದರು.