Asianet Suvarna News Asianet Suvarna News

ಬಳ್ಳಾರಿ: ಆಂಧ್ರ ಗಡಿ ಭಾಗದಲ್ಲಿ ಬಡಿದಾಟದ ಹಬ್ಬ, ಲಕ್ಷಾಂತರ ಭಕ್ತರು ಭಾಗಿ..!

ಬಡಿದಾಟ ಹಬ್ಬದಲ್ಲಿ 80ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಈ ಪೈಕಿ 16 ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು 

Stick Festival Celebrate Andhra Border in Ballari grg
Author
First Published Oct 7, 2022, 10:00 PM IST | Last Updated Oct 7, 2022, 10:00 PM IST

ಬಳ್ಳಾರಿ(ಅ.07):  ಆಂಧ್ರ ಪ್ರದೇಶದ ಗಡಿ ಭಾಗವಾದ ದೇವರಗುಡ್ಡದಲ್ಲಿ ವಿಜಯದಶಮಿ ನಿಮಿತ್ತ ಬುಧವಾರ ರಾತ್ರಿ ಪ್ರತಿ ವರ್ಷದಂತೆ ನಡೆದ ‘ಬಡಿದಾಟ ಹಬ್ಬ’ದಲ್ಲಿ 80ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಈ ಪೈಕಿ 16 ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಂಧ್ರಪ್ರದೇಶದ ನೆರಣಿಕೆ ಗ್ರಾಮ ಬಳಿಯ ಅರಣ್ಯ ಪ್ರದೇಶದ ದೇವರಗುಡ್ಡದಲ್ಲಿ ವಿಜಯದಶಮಿ ದಿನದಂದು ಮಾಳ ಮಲ್ಲೇಶ್ವರಸ್ವಾಮಿಯ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಪಾಲ್ಗೊಳ್ಳುವ ನೆರಣಿಕೆ, ಎಳ್ಳಾರ್ತಿ ಸೇರಿದಂತೆ ಹತ್ತಾರು ಹಳ್ಳಿಯ ಜನರು ಬಡಿಗೆಗಳೊಂದಿಗೆ ಪಾಲ್ಗೊಂಡು ಕಾಳಗ ನಡೆಸುತ್ತಾರೆ. ಈ ವಿಶಿಷ್ಠ ಆಚರಣೆ ಸಂಪ್ರದಾಯದಂತೆ ನಡೆದುಕೊಂಡು ಬಂದಿದ್ದು ಈ ಕಾಳಗ ನೋಡಲು ಲಕ್ಷಾಂತರ ಜನರು ಜಮಾಯಿಸುತ್ತಾರೆ. ಬಳ್ಳಾರಿ ತಾಲೂಕಿನಿಂದಲೂ ಸಾವಿರಾರು ಭಕ್ತರು ತೆರಳುತ್ತಾರೆ.

ಚಿಕ್ಕಮಗಳೂರು: ಚುನಾವಣೆ ಸಮಿಪಿಸುತ್ತಿದೆ, ಅಧಿಕಾರಕ್ಕಾಗಿ ಕಿತ್ತಾಟ ಹೆಚ್ಚಾಗಲಿವೆ: ಕಾರ್ಣಿಕದ ಭವಿಷ್ಯ ನುಡಿ..!

ವಿಜಯದಶಮಿಯ ದಿನದಂದು ರಾತ್ರಿಯಿಂದಲೇ ಬಡಿದಾಟ ಶುರುಗೊಂಡು ಬೆಳಗಿನ ಜಾವದವರೆಗೆ ಮುಂದುವರಿಯುತ್ತದೆ. ಒಂದೆಡೆ ಮಾಳ ಮಲ್ಲೇಶ್ವರ ಸ್ವಾಮಿಯ ಪಲ್ಲಕ್ಕಿ ನಡೆಯುತ್ತಿದ್ದರೆ ಮತ್ತೊಂದೆಡೆ ಭಕ್ತರ ಬಡಿದಾಟ ಸಾಗಿರುತ್ತದೆ. ಕೊನೆಯಲ್ಲಿ ಪಲ್ಲಕ್ಕಿ ದೇವಸ್ಥಾನ ತಲುಪಿ ಕಲ್ಯಾಣೋತ್ಸವ ನಡೆದ ಬಳಿಕ ಹಬ್ಬ ಸಂಪನ್ನಗೊಳ್ಳುತ್ತದೆ. ಈ ಹಿಂದೆ ದೇವರಗುಡ್ಡದಲ್ಲಿ ನಡೆದ ಬಡಿದಾಟದಲ್ಲಿ ಅನೇಕರು ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಹೀಗಾಗಿ ಈ ಉತ್ಸವದಲ್ಲಿ ಬಡಿದಾಡುವುದನ್ನು ನಿಷೇಧಿಸಲಾಗಿದೆ. ಆದರೆ, ಇದ್ಯಾವುದನ್ನು ಲೆಕ್ಕಿಸದ ಸಾವಿರಾರು ಭಕ್ತರು ಬಡಿಗೆಗಳೊಂದಿಗೆ ಪರಸ್ಪರ ಕಾಳಗ ನಡೆಸುತ್ತಾರೆ. ಮಾಳ ಮಲ್ಲೇಶ್ವರ ಸ್ವಾಮಿ ಉತ್ಸವವನ್ನು ತಮ್ಮೂರಿಗೆ ತೆಗೆದುಕೊಂಡು ಹೋಗಬೇಕು ಎಂಬ ಜಿದ್ದಿನ ಬಡಿದಾಟ ಹಬ್ಬದಲ್ಲಿ ಅನೇಕ ಜನರಿಗೆ ಗಂಭೀರ ಗಾಯ, ನೋವು, ರಕ್ತದ ಚೆಲ್ಲಾಟ ಕಂಡು ಬರುತ್ತದೆ. ಇದನ್ನು ನೋಡಿ ಸಂಭ್ರಮಿಸಲು ಕರ್ನಾಟಕ ಗಡಿ ಭಾಗ ಹಾಗೂ ಆಂಧ್ರಪ್ರದೇಶದ ಲಕ್ಷಾಂತರ ಜನರು ಪ್ರತಿ ವರ್ಷ ಸೇರುತ್ತಿರುವುದು ಅಚ್ಚರಿ.

ಮಾಳ ಮಲ್ಲೇಶ್ವರ ಕಾರಣಿಕ

ಆಂಧ್ರಪ್ರದೇಶದ ಮಾಳ ಮಲ್ಲೇಶ್ವರಸ್ವಾಮಿ ಕಾರಣಿಕ ನುಡಿದಿದೆ. ‘ಪಾರ್ವತಿ ಪರಮೇಶ್ವರನ ಧ್ಯಾನ ಮಾಡ್ತಾಳ. ಗಂಗೆ ಹೊಳೆ ದಂಡಿಗೆ ನಿಂತಾಳ. ತೂರ್ಪು ಉತ್ತರಕ್ಕೆ ಸವಾರಿ ಮಾಡ್ಯಾಳ. ಮೂರು ಆರು, ಆರು ಮೂರಾದಿತಲೇ ಪರಾಕ್‌’ ಎಂದು ಕಾರಣಿಕವಾಗಿದೆ.

6600 ನಗ ಅರಳೆ ಹಾಗೂ 4100 ಒಕ್ಕಳ ಜೋಳ ಎಂದು ಕಾರಣಿಕದಲ್ಲಿ ನುಡಿಯಲಾಗಿದೆ. ಮಾಳ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷಾಂತರ ಜನರ ಮಧ್ಯೆ ನಿಂತು ಕಾರಣಿಕ ನುಡಿಯುತ್ತಾರೆ.
ಈ ಬಾರಿ ಉತ್ತಮ ಮಳೆ, ಬೆಳೆಯಾಗಿ ರೈತರು ಸಮೃದ್ಧಿಗೊಳ್ಳುತ್ತಾರೆ. ಹತ್ತಿ ಹಾಗೂ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಸಿಗಲಿದೆ. ಮೊದಲಿಗೆ ಕೃಷಿ ಉತ್ಪನ್ನಗಳ ಬೆಲೆ ಏರಿಕೆ ಕಂಡು ಬಳಿಕ ಇಳಿಮುಖವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
 

Latest Videos
Follow Us:
Download App:
  • android
  • ios