ಐತಿಹಾಸಿಕ ಬಾದಾಮಿಯ ಬನಶಂಕರಿದೇವಿಗೆ ನೇಕಾರರಿಂದ ಸೀರೆಗಳ ವಿಶೇಷ ಅಲಂಕಾರ
ನಾಡಿನ ಶಕ್ತಿಪೀಠಗಳಲ್ಲೊಂದಾದ ಚಾಲುಕ್ಯರ ಅಧಿದೇವತೆ ಬಾದಾಮಿಯ ಬನಶಂಕರಿ ದೇವಿಗೆ ಇಂದು ನೂರಾರು ಸೀರೆಗಳ ಅಲಂಕಾರ ಮಾಡಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಅ.11) : ನಾಡಿನ ಶಕ್ತಿಪೀಠಗಳಲ್ಲೊಂದಾದ ಚಾಲುಕ್ಯರ ಅಧಿದೇವತೆ ಬಾದಾಮಿಯ ಬನಶಂಕರಿ ದೇವಿಗೆ ಇಂದು ನೂರಾರು ಸೀರೆಗಳ ಅಲಂಕಾರ ಮಾಡಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು. ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸುಕ್ಷೇತ್ರ ಬನಶಂಕರಿ ದೇವಿಗೆ ಇಂದು ನೂಲು ಹುಣ್ಣಿಮೆ ನಿಮಿತ್ಯ ವಿಶೇಷ ಸೀರೆಗಳ ಅಲಂಕಾರ ಮಾಡಲಾಗಿತ್ತು. ಬನಶಂಕರಿದೇವಿಗೆ ಅಷ್ಟೇ ಅಲ್ಲದೆ ದೇವಾಲಯದ ಪ್ರಾಂಗಣದಲ್ಲೂ ನೂರಾರು ಸೀರೆಗಳ ಮೂಲಕ ಅಲಂಕರಿಸಲಾಗಿತ್ತು. ಇದರಿಂದ ಐತಿಹಾಸಿಕ ಬಾದಾಮಿಯ ಬನಶಂಕರಿ ದೇಗುಲ ವಿವಿಧ ವಿನ್ಯಾಸ, ವಿವಿಧ ಕಲಾಪ್ರಕಾರದ ಸೀರೆಗಳೊಂದಿಗೆ ಕಣ್ಮನ ಸೆಳೆಯುವಂತಾಗಿತ್ತು. ನೂಲು ಹುಣ್ಣಿಮೆ ಅಂದರೆ ಅದು ನೇಕಾರ ಸಮುದಾಯಕ್ಕೆ ಸೇರಿದ ದೇವಾಂಗ ಕುಲಭಾಂಧವರಿಗೆ ಹಬ್ಬವೇ ಸರಿ. ಕುಲದೇವತೆ ಬನಶಂಕರಿದೇವಿಗೆ ನೂಲು ಹುಣ್ಣಿಮೆ ದಿನ ವಿಶೇಷ ಪೂಜಾ ಕೈಂಕರ್ಯ ಸಹಿತ ಆರಾಧನೆ ಸಲ್ಲಿಸುವುದು ರೂಢಿ. ಹೀಗಾಗಿ ಈ ಬಾರಿ ವಿಶೇಷ ಅಂದರೆ ಬೆಳಗಾವಿ ಜಿಲ್ಲೆಯ ರಾಮದುರ್ಗದಿಂದ ದೇವಿಗಾಗಿ ನೇಯ್ದ ನೂರಾರು ಸೀರೆಗಳನ್ನ ಮೆರವಣಿಗೆ ಮೂಲಕ ತರಲಾಗಿತ್ತು. 601 ಸೀರೆಗಳನ್ನ ನೇಕಾರ ಬಾಂಧವರು ರಾಮದುರ್ಗದಿಂದ ಐತಿಹಾಸಿಕ ಬಾದಾಮಿವರೆಗೆ ತಂದಿದ್ದರು.
ಖತು ಶ್ಯಾಮಜಿ ದೇವಸ್ಥಾನದಲ್ಲಿ ಕಾಲ್ತುಳಿತ, ಮೂವರು ಭಕ್ತರ ಸಾವು ಹಲವರು ಗಾಯ!
ಸೀರೆಗಳಿಂದ ಕಣ್ಮನ ಸೆಳೆದ ದೇಗುಲ & ಬನಶಂಕರಿ ದೇವಿ: ಇನ್ನು ಇಂದು ನೂಲು ಹುಣ್ಣಿಮೆ ನಿಮಿತ್ಯ ಬನಶಂಕರಿದೇವಿಗೆ ತಂದಿದ್ದ 601 ಸೀರೆಗಳ ಪೈಕಿ ಗರ್ಭಗುಡಿಯಲ್ಲಿ ದೇವಿ ಮೂರ್ತಿಗೆ ಅನೇಕ ಸೀರೆಗಳದ ಸಿಂಗಾರ ಮಾಡಲಾಗಿತ್ತು. ಇನ್ನುಳಿದಂತೆ ನೇಕಾರರು ತಂದಿದ್ದ ನೂರಾರು ಸೀರೆಗಳನ್ನ ದೇಗುಲದ ಮುಂಭಾಗದ ಮಂಟಪ ಮತ್ತು ಪ್ರಾಂಗಣ ,ಗೋಪುರ ಸೇರಿದಂತೆ ನಾನಾಕಡೆಗೆ ಸಿಂಗರಿಸುವ ಮೂಲಕ ಇಡೀ ಬಾದಾಮಿಯ ಬನಶಂಕರಿ ದೇಗುಲವನ್ನೇ ಸಿಂಗಾರಗೊಳಿಸಲಾಗಿತ್ತು.
ತಿರುಪತಿ ಯಾತ್ರೆ : ಆ.15ರವರೆಗೆ ಬುಕ್ ಮಾಡಿದವರಿಗೆ ಮಾತ್ರ ತಿಮ್ಮಪ್ಪನ ಭೇಟಿಗೆ ಅವಕಾಶ
ಬಾದಾಮಿಯ ಬನಶಂಕರಿದೇವಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ: ಇನ್ನು ನಾಡಿನಾದ್ಯಂತ ಈಗ ಎಲ್ಲೆಡೆ ಶ್ರಾವಣ ಮಾಸದ ಆಚರಣೆ ಹಿನ್ನೆಲೆಯಲ್ಲಿ ಪ್ರತಿಯೊಂದು ದೇವಾಲಯಗಳಲ್ಲಿ ಭಕ್ತರ ದಂಡು ಇದ್ದು, ಇವುಗಳ ಮಧ್ಯೆ ಇಂದು ನೂಲು ಹುಣ್ಣಿಮೆ ಅದರಲ್ಲೂ ಶುಕ್ರವಾರ ಬನಶಂಕರಿ ದೇವಿಯ ವಾರವೂ ಸಹ ಆಗಿದ್ದರಿಂದ ನಾಡಿನ ವಿವಿಧ ಮೂಲೆ ಮೂಲೆಗಳಿಂದ ಭಕ್ತರ ದಂಡೇ ಬಾದಾಮಿಯ ಬನಶಂಕರಿದೇವಿ ದರ್ಶನಕ್ಕೆ ಹರಿದು ಬಂದಿತ್ತು. ಬೆಳಗಿನಿಂದಲೇ ಭಕ್ತರು ಆಗಮಿಸಿ ಬನಶಂಕರಿ ದೇವಿಗೆ ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳುವ ಮೂಲಕ ದೇವಿ ದರ್ಶನ ಪಡೆದು ಪುನೀತರಾದರು.