Asianet Suvarna News Asianet Suvarna News

Christmas 2022: ಜಗ​ಕೆ ಮನು​ಷ್ಯತ್ವದ ಪಾಠ ಹೇಳಿದ ಯೇಸು​ ಕ್ರಿ​ಸ್ತ

ಕುರಿಕೊಟ್ಟಿಗೆಯಲ್ಲಿ ಸಾಮಾನ್ಯನಾಗಿ ಹುಟ್ಟಿಅಸಾಮಾನ್ಯನಾಗಿ ಬೆಳೆದು ಮಾನವ ಕೋಟಿಗೆ ಬೆಳಕು ತೋರುವ ಮಾರ್ಗದಲ್ಲಿ ತನ್ನನ್ನೇ ಉರಿಸಿಕೊಂಡು ಬಲಿಯಾಗಿ ದೇವಮಾನವನಾದ​ವನು ಯೇಸುಕ್ರಿಸ್ತ. ಡಿ.25 ಯೇಸು​ ಜನ್ಮ​ದಿನ. ಯೇಸುವಿನ ತತ್ವಾದರ್ಶಗಳ ಬೋಧನೆಯ ಬೈಬಲ್‌ ಕ್ರಿಶ್ಚಿಯನ್ನರಿಗೆ ಮಾತ್ರವಲ್ಲದೆ ಒಳಿತನ್ನು ಪ್ರೀತಿಸುವವರೆಲ್ಲರಿಗೂ ಸದ್ಭಾವನಾ ಗ್ರಂಥ. ಕ್ರಿಸ್‌ಮಸ್‌ ಆಚರಣೆಯೂ ಸಹ ಭಾವೈಕ್ಯತೆಯ ಬೆಳಕನ್ನು ಚೆಲ್ಲುವುದೇ ಆಗಿದೆ.

Special Article By Bannuru K Raju Over Lord Jesus Merry Christmas 2022 gvd
Author
First Published Dec 25, 2022, 7:19 AM IST

ಬನ್ನೂರು ಕೆ. ರಾಜು, ಮೈಸೂರು

ನಿಮ್ಮಲ್ಲಿ ಸಾಸಿವೆ ಕಾಳಿನಷ್ಟು
ಶ್ರದ್ಧೆಯಿದ್ದರೆ, ನೀವೊಂದು ಬೆಟ್ಟಕ್ಕೆ
ಈ ಜಾಗದಿಂದ ಆ ಜಾಗಕ್ಕೆ ಚಲಿಸು
ಎಂದು ಹೇಳಿದರೆ ಅದು ಚಲಿಸುತ್ತದೆ

- ಯೇಸುಕ್ರಿಸ್ತ

ಮಾನವ ಕುಲಕ್ಕೆ ಮನುಷ್ಯತ್ವದ ಪಾಠ ಹೇಳಿ ಕತ್ತಲಿಂದ ಬೆಳಕಿನತ್ತ ಅವರನ್ನು ಕರೆದೊಯ್ದು ಜಗತ್ತನ್ನೇ ಜ್ಯೋತಿಸ್ವರೂಪ ಮಾಡಿ ಆ ಬೆಳಕಿನಲ್ಲಿ ಇಡೀ ಮಾನವಕುಲವನ್ನು ಉದ್ಧರಿಸಲು ಅವತರಿಸಿದ ಮಹಾಪುರುಷರು ಜಗತ್ತಿನಲ್ಲಿ ಅನೇಕರಿದ್ದಾ​ರೆ. ಅವರಲ್ಲಿ ಬುದ್ಧ ಮತ್ತು ಯೇಸು ಅತ್ಯಂತ ಪ್ರಮುಖರು. ಒಬ್ಬ ಸಕಲೈಶ್ವರ್ಯದ ಒಡೆಯನಾಗಿ ರಾಜಕುಮಾರನಾಗಿ ಹುಟ್ಟಿದರೂ ಜಗದ ಸುಖಕ್ಕಾಗಿ ತನ್ನ ಸುಖವನ್ನೆಲ್ಲಾ ತ್ಯಾಗಗೈದು ಮಾನವ ಕಲ್ಯಾಣಕ್ಕಾಗಿ ನಿಂತು ದೇವಪುರುಷನಾದವನು. ಮತ್ತೊಬ್ಬ ಕುರಿಕೊಟ್ಟಿಗೆಯಲ್ಲಿ ಸಾಮಾನ್ಯನಾಗಿ ಹುಟ್ಟಿಅಸಾಮಾನ್ಯನಾಗಿ ಬೆಳೆದು ಮಾನವ ಕೋಟಿಗೆ ಬೆಳಕು ತೋರುವ ಮಾರ್ಗದಲ್ಲಿ ತನ್ನನ್ನೇ ಉರಿಸಿಕೊಂಡು ಬಲಿಯಾಗಿ ದೇವಮಾನವನಾದವನು. ಈ ಮಹಾತ್ಮರಿಬ್ಬರೂ ಮನುಷ್ಯತ್ವದಿಂದ ದೈವತ್ವಕ್ಕೇರಿದವರು. 

ಜಗದೇಳಿಗೆಗಾಗಿ ಇವರಿಬ್ಬರೂ ಪಟ್ಟಪಾಡುಗಳು ಅಷ್ಟಿಷ್ಟಲ್ಲ. ಅದರಲ್ಲೂ ಯೇಸು ಅನುಭವಿಸಿದ ಯಾತನೆ ಸಾಮಾನ್ಯವಲ್ಲ. ಇಂಥ ಯಾತನೆಯಲ್ಲೂ ಸತ್ಯಶೋಧಕನಾಗಿ ತನ್ನ ತತ್ವಾದರ್ಶಗಳಿಂದ ವಿಶ್ವಕ್ಕೆ ಮಹಾಬೆಳಕು ನೀಡಿದ ಮಹಾಪುರುಷ ಯೇಸುಕ್ರಿಸ್ತ ವಿಶ್ವವಂದಿತನೇ ಸರಿ! ತನ್ನ ಶಿಲುಬೆಯ ತಾನೆ ಹೊತ್ತನಲ್ಲ ಗುರು ಯೇಸು, ನಿನ್ನ ಕರ್ಮದ ಹೊರೆಯ ಬಿಡದೆ ನೀನೇ ಹೊರು..... ಇದು ದಾರ್ಶನಿಕ ಕವಿ ಡಿ.ವಿ.ಜಿ. ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವ ಕಾವ್ಯನುಡಿಗಳು. ಇದಿಷ್ಟೇ ಸಾಕು ದೇವಪುತ್ರ ಯೇಸುವಿನ ಬ್ರಹ್ಮಾಂಡ ವ್ಯಕ್ತಿತ್ವದ ಮಹಾದರ್ಶನಕ್ಕೆ. ಪರೋಪಕಾರಾರ್ಥಂ ಪುಣ್ಯಾಯ ಪಾಪಾಯ ಪರಪೀಡನಂ ಎಂಬ ಮಾತು ಮಹಾಭಾರತದಲ್ಲಿದೆ. ಅಂದರೆ ನಮ್ಮ ಕೃತ್ಯಗಳಿಂದ ಇನ್ನೊಬ್ಬರಿಗೆ ತೊಂದರೆಯಾಗುವುದು, ಅವರು ಕಣ್ಣೀರಿಡುವಂತಾಗುವುದು, ನಿಟ್ಟುಸಿರು ಬಿಡುವಂತಾಗುವುದು ಪಾಪದ ಕೆಲಸ. 

Kanakadasa Jayanthi 2022: ಜಾತಿ ವಿರುದ್ಧ ಸಮರ ಸಾರಿದ ದಾಸಶ್ರೇಷ್ಠ: ಶಿವನಗೌಡ

ನಮ್ಮಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಕೊನೆಪಕ್ಷ ಇನ್ನೊಬ್ಬರಿಗೆ ಹಿಂಸೆಯಾಗುವ, ಅವರು ಜೀವನಪೂರ್ತಿ ದುಃಖಿಸುವಂತಾಗುವ ಕೆಟ್ಟಕೆಲಸ ಮಾಡುವುದು ಸರಿಯಲ್ಲ. ಸತ್ಯ ಮತ್ತು ಧರ್ಮದ ಮಾರ್ಗದಿಂದ ನಮ್ಮನ್ನು ದೂರ ಮಾಡುವಂಥದ್ದು ಸತ್ಕರ್ಮಗಳಲ್ಲ. ಇದು ಯೇಸುವಿನ ಬದುಕಿಗೊಂದು ಭಾಷ್ಯವೆನ್ನವಹುದು. ನರಕದ ದಾರಿ ಸುಗಮ. ಆದರೆ ಸ್ವರ್ಗದ ದಾರಿ ದುರ್ಗಮ. ದುರ್ಗಮವಾದರೂ ಸರಿಯೇ ಸ್ವರ್ಗದ ದಾರಿಯಲ್ಲಿ ಸಾಗುವುದೇ ಬದುಕಿನ ಗುರಿಯಾಗಬೇಕು. ಅದರಿಂದಲೇ ಬದುಕು ಸಾರ್ಥಕವೆಂಬ ಯೇಸುವಿನ ಬೋಧನೆಗಳು ಅವು ಬರೀ ಉಪದೇಶಗಳಲ್ಲ ಕಾರ್ಗತ್ತಲಲ್ಲಿ ಕಾಣುವ ಬೆಳಕಿನ ಕಿರಣಗಳು.

ಕ್ರಿಸ್‌​ಮಸ್‌ ಆಚ​ರ​ಣೆ ವಿಶೇ​ಷ​ತೆ: ಇಂಥ ಶಾಂತಿದೂತ ದೇವಪುರುಷ ಯೇಸುಕ್ರಿಸ್ತನು ಜೋಸೆಫ್‌ ಮತ್ತು ಮೇರಿಯ ಸುಪುತ್ರನಾಗಿ ಜನಿಸಿದ್ದು ಡಿಸೆಂಬರ್‌ 25ರಂದು. ಇದೇ ದಿನ ಕ್ರಿಸ್ತನ ಜನನವಾಯಿತೆಂಬುದಕ್ಕೆ ನಿಖರವಾಗಿ ಯಾವ ಆಧಾರಗಳೂ ಇಲ್ಲದಿದ್ದರೂ ಕ್ರೈಸ್ತ ಧರ್ಮೀಯರ ಸಾಂಪ್ರದಾಯಿಕ ನಂಬಿಕೆಯಂತೆ ಈ ದಿನ​ವನ್ನು ಕ್ರಿಸ್‌​ಮಸ್‌ ಹಬ್ಬ​ವಾಗಿ ಆಚ​ರಿ​ಸ​ಲಾ​ಗು​ತ್ತ​ದೆ. ಕ್ರಿಸ್‌ಮಸ್‌ಗೆ ಜಾಗತಿಕ ವೈಭವವಿದೆ. ಆದರೆ ಯೇಸುವಿನ ಜನನದ ದಿನ ನಿಖರವಾಗಿ ಗೊತ್ತಿಲ್ಲದ ಕಾರಣ ಕ್ರೈಸ್ತ ಸಮುದಾಯಗಳಲ್ಲೊಂದಾದ ಬ್ರದರಿನ್‌ ಚಚ್‌ರ್‍ನವರು ಮತ್ತು ಬೆತ್ಸಾಯಿದ ಚಚ್‌ರ್‍ನವರು ಅಂದು ಕ್ರಿಸ್‌ಮಸ್‌ ಆಚರಿಸುವುದಿಲ್ಲ. ಬದಲಿಗೆ ಅವರುಗಳು ಜನವರಿ ಒಂದರಂದು ಹೊಸ ವರ್ಷಾಚರಣೆಯನ್ನು ಆಚರಿಸುತ್ತಾರೆ. ಒಟ್ಟಿನಲ್ಲಿ ಕ್ರಿಸ್‌ಮಸ್‌ ಎಂಬುದು ಕ್ರಿಶ್ಚಿಯನ್ನರಿಗೆ ಒಂದು ಪವಿತ್ರ ದಿನ. ಅವರಿಗೆ ಅದೊಂದು ಸಂತಸ ಸಂಭ್ರಮಗಳ ಮಹಾಹಬ್ಬ. ಇದರ ಕೇಂದ್ರ ಬಿಂದು ಕ್ರಿಸ್ತಶಕದ ಹುಟ್ಟಿಗೆ ಕಾರಣವಾಗಿ ಶಕಾರಂಭ ಮಾಡಿದ ಶಕಪುರುಷ ಯೇಸುಕ್ರಿಸ್ತ.

ಸೋಜಿಗದ ವಿಷಯವೆಂದರೆ ಯೇಸುಕ್ರಿಸ್ತ ಹುಟ್ಟಿದ್ದು ಕನ್ಯೆ ಮೇರಿಯಲ್ಲಿ. ಒಂದು ರೀತಿ ಮಹಾಭಾರತದಲ್ಲಿ ಕನ್ಯೆ ಕುಂತೀದೇವಿಯಲ್ಲಿ ಕರ್ಣ ಜನಿಸಿದಂತೆ. ಆಗಷ್ಟೇ ಜೋಸೆಫ್‌ನೊಡನೆ ವಿವಾಹ ನಿಶ್ಚಯವಾಗಿದ್ದ ಮೇರಿ ವಿವಾಹವಾಗಿ ಅವನನ್ನು ಕೂಡುವ ಮುನ್ನವೇ ತನ್ನ ಗರ್ಭದಲ್ಲಿ ಯೇಸುವನ್ನು ಪವಿತ್ರಾತ್ಮನಿಂದ ಹೊತ್ತಿದ್ದಳು. ದೇವವಾಣಿಯಿಂದ ಆ ಮಗುವಿನ ಮಹತ್ವ ಅರಿತ ಜೋಸೆಫನು ಮೇರಿಯ ಕೈಬಿಡದೆ ಮದುವೆಯಾಗಿ ಅವಳಿಗೆ ಹೆರಿಗೆಯಾಗುವ ತನಕವೂ ಬಹಳ ಜೋಪಾನ ಮಾಡಿದ್ದ. ಅದೊಂದು ಶುಭ ದಿನ, ಜನಗಣತಿಗಾಗಿ ಜೋಸೆಫ್‌-ಮೇರಿ ಜೊತೆಯಾಗಿ ಬೆತ್ಲೆ ಹೆಮ್‌ಗೆ ಹೋಗಿದ್ದಾಗ ಅಲ್ಲಿ ಮೇರಿ ಮಾತೆಯಾಗಿ, ಕುರಿಕೊಟ್ಟಿಗೆಯಲ್ಲಿ ಜಗದ ಬೆಳಕಾದ ಯೇಸುಕ್ರಿಸ್ತನಿಗೆ ಜನ್ಮ ನೀಡಿದ್ದಳು. ಆಗ ಒಂದು ಕ್ಷಣ ಇಡೀ ಬೆತ್ಲೆಹೆಮ್‌ ನಗರದಲ್ಲಿ ಮಿಂಚು ಹೊಳೆದಂತಹ ಅನುಭವವಾಗಿತ್ತಂತೆ.

ಶಿಲು​ಬೆಗೇ​ರಿದ ದೇವ​ದೂ​ತ: ಯೇಸು ಮೂಲತಃ ಒಬ್ಬ ಯಹೂದಿ. ಪ್ಯಾಲೆಸ್ಟೈನ್‌ ದೇಶ ಅಂದರೆ ಈಗಿನ ಇಸ್ರೇಲ್‌ ಅವರ ಮೂಲನೆಲೆ. ಯೇಸು ಜನಿಸಿದ ಆ ಕಾಲದಲ್ಲಿ ಪ್ಯಾಲೆಸ್ಟೈನ್‌ ದೇಶದ ಬದುಕು ಸಂಪೂರ್ಣ ಯಹೂದಿ ಸಂಸ್ಕೃತಿಯದ್ದಾಗಿತ್ತು. ಮಾನವ ಕುಲಕ್ಕೆ ಮಾರಕವಾದ ಕಂದಾಚಾರ, ಮೂಢನಂಬಿಕೆಯಂತಹ ಅನಿಷ್ಟಪದ್ಧತಿಗಳನ್ನು ವಿರೋಧಿಸಿ ಸರ್ವರ ಉದ್ಧಾರದ ಸಮಾಜ ನಿರ್ಮಿಸುವತ್ತ ಯೇಸು ನಡೆದ. ಆನೆ ನಡೆದದ್ದೇ ಹಾದಿ ಎಂಬಂತಹ ದಿಟ್ಟಹೆಜ್ಜೆಗಳು ಅವನದು. ಸಕಲರಿಗೂ ಲೇಸನ್ನು ಬಯಸುವ ಮಾನವೀಯತೆಯ ತಳಹದಿಯಲ್ಲಿ ಅವನು ಕ್ರೈಸ್ತ ಧರ್ಮವನ್ನು ಸ್ಥಾಪಿಸಿದ. ಇದೇ ಯೇಸುವಿಗೆ ಮುಳುವಾದದ್ದು. ಒಳ್ಳೆಯದನ್ನು ಮಾಡಲು ಹೋಗಿ ಕೆಟ್ಟವರ ಕೆಂಗಣ್ಣಿಗೆ ಯೇಸು ಗುರಿಯಾದದ್ದಷ್ಟೇ ಅಲ್ಲ ಬಹು ಮುಖ್ಯವಾಗಿ ಯಹೂದಿ ಪುರೋಹಿತಷಾಹಿಗಳ ವಿರೋಧ ಕಟ್ಟಿಕೊಂಡ. 

ಯಹೂದಿ ಧರ್ಮಗುರುಗಳಿಗಂತೂ ಯೇಸು ಬೇಡವೇ ಬೇಡವಾಗಿದ್ದ. ಪರಿಣಾಮ ರಾಜದ್ರೋಹದ ಆಪಾದನೆ ಇವನ ಹೆಗಲೇರಿತ್ತು. ಇದರಿಂದಾಗಿ ನ್ಯಾಯ, ನೀತಿ, ಧರ್ಮ, ಸತ್ಯ, ನಿಷ್ಠೆ, ಪ್ರಾಮಾಣಿಕತೆ, ತ್ಯಾಗಗಳ ಸಂಗಮವೇ ಆಗಿ ಮನುಷ್ಯತ್ವದ ಮೇರು ಪರ್ವವೇ ಆಗಿದ್ದ ಇಂಥ ದೈವಿಕ ಪುರುಷ ಯೇಸುವನ್ನು ಕಠಿಣ ಚಿತ್ರಹಿಂಸೆಗೊಳಪಡಿಸಿ ದೇಶಾಧಿಕಾರಿ ಪಿಲಾತನು ಮರಣದಂಡನೆಯ ಶಿಲುಬೆಗೇರಿಸಿದ. ಯೇಸುವಿನ ಬಲಿದಾನ ಹೀಗಾಗಿತ್ತು. ಅದು ಎಷ್ಟೊಂದು ಘೋರ ದುರಂತವಾಗಿತ್ತೆಂಬುದನ್ನು ಹೇಳಲು ಅಕ್ಷರಗಳೂ ಕಣ್ಣೀರಿಡುವಂಥ ಮಹಾ ದುರಂತವದು. ಆದರೆ, ಯೇಸು ಶಿಲುಬೆಗೇರಿದ ಮೂರನೆಯ ದಿನ ಪುನರುತ್ಥಾನಗೊಂಡು ತನ್ನ ಆಪ್ತೇಷ್ಟರನೇಕರಿಗೆ ದರ್ಶನಕೊಟ್ಟರು. ಆಮೇಲೆ ನಲವತ್ತು ದಿನಗಳ ಕಾಲ ತಮ್ಮ ಶಿಷ್ಯಕೋಟಿಯ ಜೊತೆಯಲ್ಲಿದ್ದು ಅವರ ಸಮ್ಮುಖದಲ್ಲೇ ಒಂದು ದಿನ ಸ್ವರ್ಗದತ್ತ ಪಯಣ ಬೆಳೆಸಿದರು. ಆ ಮಹಾದಿನವೇ ಯೇಸುವಿನ ಸ್ವರ್ಗಾರೋಹಣ ದಿನ. ಯೇಸುವಿನ ಜನನ, ಮರಣ, ಪುನರುತ್ಥಾನ ಹಾಗೂ ಸ್ವರ್ಗಾರೋಹಣ ದಿನಗಳು ಕ್ರಿಶ್ಚಿಯನ್ನರಿಗೆ ಅತ್ಯಂತ ಪವಿತ್ರ ದಿನಗಳಾಗಿವೆ.

ಭಾರ​ತಕ್ಕೂ ಭೇಟಿ ನೀಡಿ​ದ್ದ ಯೇಸು!: ಯೇಸು ಬೆತ್ಲೆಹೇಮ್‌ನಲ್ಲಿ ಜನಿಸಿದರೂ ಅವನ ಊರು ಗಲಿಲೇಯ ಪ್ರಾಂತ್ಯದ ನಜರೇತ್‌ ಎಂಬ ಪುಟ್ಟಗ್ರಾಮ. ಇದು ಅವನ ಮತ್ತು ಅವನ ತಂದೆ ಜೋಸೆಫ್‌ನ ಊರಷ್ಟೇ ಅಲ್ಲ, ಯೇಸುವಿನ ತಾಯಿ ಮೇರಿಯ ತವರೂ ಹೌದು. ತನ್ನ ತಂದೆ-ತಾಯಿಗಳೊಂದಿಗೆ ಯೇಸು ಬೆಳೆದು ಬಾಳಿದ ಮನೆ ಈಗಲೂ ಅಲ್ಲಿದೆ. ಈ ಮನೆಯನ್ನು ಸಂರಕ್ಷಿಸಿ ಅದರ ಮೇಲೆಯೇ ಬಹು ಭವ್ಯವೂ ದಿವ್ಯವೂ ಆದ ಚರ್ಚನ್ನು ಕಟ್ಟಲಾಗಿದೆ. ಈ ನಜರೇತ್‌ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡಿದ ಯೇಸು ತನ್ನ 12ನೇ ವಯಸ್ಸಿನಲ್ಲೇ ಮತಗ್ರಂಥಗಳನ್ನೆಲ್ಲಾ ಅಧ್ಯಯನ ಮಾಡಿ ಅಗಾಧ ಪಾಂಡಿತ್ಯ ಪಡೆದಿದ್ದ. ಅಷ್ಟೇ ಅಲ್ಲ ಜೆರುಸಲೇಮ್‌ ಪಟ್ಟಣದ ತುಂಬಾ ಪ್ರಸಿದ್ಧಿ ಗಳಿಸಿದ್ದ. 13ನೇ ವಯಸ್ಸಿಗೆ ಯಾರಿಗೂ ಕಾಣಿಸದೆ ಎತ್ತಲೋ ಮಾಯವಾಗಿ ಹೊರಟುಹೋಗಿದ್ದ ಯೇಸು ಮತ್ತೆ ಜನರೆದುರು ಕಾಣಿಸಿಕೊಂಡದ್ದು ತನ್ನ 31ನೇ ವಯಸ್ಸಿನಲ್ಲಿ. ಈ ನಡುವೆ ಸುಮಾರು 19 ವರ್ಷಗಳು ಪ್ರಪಂಚ ಪ್ರದಕ್ಷಿಣೆ ಮಾಡಿದ್ದ ಯೇಸು ಜ್ಞಾನಾರ್ಜನೆಯಲ್ಲಿ ತೊಡಗಿ ಜ್ಞಾನದ ಮಹಾವೃಕ್ಷವೇ ಆಗಿದ್ದ. ಆ ಸಮಯದಲ್ಲೇ ಯೇಸು ಭಾರತಕ್ಕೂ ಭೇಟಿ ನೀಡಿದ್ದನೆಂದು ಹೇಳುವುದುಂಟು. ಹಾಗಾಗಿ ಯೇಸು ಹಿಂದೂ ಧರ್ಮ ಮತ್ತು ಬೌದ್ಧಧರ್ಮಗಳು ಸೇರಿದಂತೆ ಜಗತ್ತಿನ ಎಲ್ಲಾ ಧರ್ಮಗಳನ್ನೂ ಅವಲೋಕಿಸಿದ್ದನೆಂದು ಹೇಳಲಾಗುತ್ತದೆ.

ಪುಳಕ ಹುಟ್ಟಿಸಿದ ಪ್ರಗತಿ ಪ್ರತಿಮೆಯ ಯಾತ್ರೆ: ಸಚಿವ ಅಶ್ವತ್ಥ್‌ನಾರಾಯಣ

ಪವಿತ್ರ ನಗರಿ ಜೆರು​ಸ​ಲೇಮ್‌: ಯೇಸುಗೆ ಜೆರುಸಲೇಮ್‌ ಅತ್ಯಂತ ಪ್ರಿಯವಾಗಿತ್ತು. ಹಾಗಾಗಿ ಅದನ್ನು ಅವನು ತನ್ನ ಕರ್ಮಭೂಮಿ ಮಾಡಿಕೊಂಡಿದ್ದ. ಜೆರುಸಲೇಮ್‌ ಎಂಬುದು ಸಾಮಾನ್ಯ ಸ್ಥಳವಲ್ಲ. ಮೂರು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದಿನ ಪುರಾತನ ನಗರವದು. ಯಹೂದಿ ವೀರ ಡೇವಿಡ್‌ ಇದನ್ನು ರಾಜಧಾನಿ ಮಾಡಿಕೊಂಡಿದ್ದ. ಯಹೂದಿಗಳ ಪ್ರಮುಖ ಧಾರ್ಮಿಕ ಸ್ಥಳ ಅಳುವಗೋಡೆ ಇರುವುದು ಇಲ್ಲಿಯೇ. ಇದರ ಸಮೀಪವೇ ಮುಸ್ಲಿಮರ ಪವಿತ್ರ ಮಸೀದಿಯೂ ಇದೆ. ಪ್ರವಾದಿ ಮಹಮದ್‌ ಸ್ವರ್ಗಾರೋಹಣ ಮಾಡಿದ್ದು ಇಲ್ಲಿಂದಲೇ ಎಂಬ ಪ್ರತೀತಿ ಇಲ್ಲಿ ಜನಜನಿತವಾಗಿದೆ. ಕ್ರೈಸ್ತ, ಇಸ್ಲಾಂ, ಯಹೂದ್ಯ ಮತಗಳ ತ್ರಿವೇಣಿ ಸಂಗಮವಿದು. ಎಲ್ಲಕ್ಕಿಂತ ಮಿಗಿಲಾಗಿ ಯೇಸು ಶಿಲುಬೆಗೇರಿದ್ದು ಇದೇ ಜೆರುಸಲೇಮ್‌ನಲ್ಲೇ. ಯೇಸುವಿಗೆ ದೀಕ್ಷೆಕೊಟ್ಟಗುರು ಜಾನ್‌ ಜನಿಸಿದ್ದು ಕೂಡ ಇಲ್ಲಿಯೇ. 

ಡಿ.ವಿ.ಜಿ. ಹೇಳುವಂತೆ ತನ್ನ ಶಿಲುಬೆಯನ್ನು ತಾನೇ ಹೊತ್ತು ನಡೆದ ಕ್ರಿಸ್ತನ ದುಃಖಸಾಗರದ ದಾರಿ ಜೋರ್ಡಾನ್‌ ನದಿ ಕೂಡ ಇಲ್ಲಿಯೇ ಹರಿಯುವುದು. ಅಷ್ಟೇ ಅಲ್ಲ, ಯೇಸುವಿನ ಕಳೇಬರ ಇರುವ ಸಮಾಧಿ ಇರುವುದು ಇದೇ ಪುಣ್ಯಸ್ಥಳದಲ್ಲಿ. ಕ್ರಿಸ್‌ಮಸ್‌ನಲ್ಲಿ ಇದರ ವೈಭವ ವರ್ಣಿಸಲಸದಳ. ಸ್ವರ್ಗವೆಂಬುದು ಇಲ್ಲಿ ಅಕ್ಷರಶಃ ತೆರೆದುಕೊಂಡಿರುತ್ತದೆ. ಕ್ರಿಶ್ಚಿಯನ್ನರಿಗಂತೂ ಇದೊಂದು ಅದ್ಭುತಲೋಕ. ಈ ಲೌಕಿಕ ಲೋಕದಲ್ಲಿ ಯೇಸು ಜೀವಿಸಿದ್ದು ಕೇವಲ 33 ವರ್ಷಗಳು ಮಾತ್ರ. ಆದರೆ ಅವನ ಸಾಧನೆ ಲೋಕವಿರುವ ತನಕವೂ ಜನ​ರಿಗೆ ಮಾರ್ಗ​ದ​ರ್ಶಿಯಾ​ಗಿ​ದೆ. ಯೇಸುವಿನ ತತ್ವಾದರ್ಶಗಳ ಬೋಧನೆಯ ಬೈಬಲ್‌ ಕ್ರಿಶ್ಚಿಯನ್ನರಿಗೆ ಮಾತ್ರವಲ್ಲದೆ ಒಳಿತನ್ನು ಪ್ರೀತಿಸುವವರೆಲ್ಲರಿಗೂ ಸದ್ಭಾವನಾ ಗ್ರಂಥವಾಗಿದೆ. ಕ್ರಿಸ್‌ಮಸ್‌ ಆಚರಣೆಯೂ ಸಹ ಭಾವೈಕ್ಯತೆಯ ಬೆಳಕನ್ನು ಚೆಲ್ಲುವುದೇ ಆಗಿದೆ. ಹಾಗೆಯೇ ಯೇಸುವಿನ ಮರಣ ಮತ್ತು ಪುನರುತ್ಥಾನ ಹಾಗೂ ಸ್ವರ್ಗಾರೋಹಣ ದಿನಗಳು ಕ್ರಿಶ್ಚಿಯನ್ನರಿಗೆ ಅತ್ಯಂತ ಪವಿತ್ರ ಪ್ರಾಮುಖ್ಯ ದಿನಗಳಾಗಿವೆ.

Follow Us:
Download App:
  • android
  • ios