Asianet Suvarna News Asianet Suvarna News

Kanakadasa Jayanthi 2022: ಜಾತಿ ವಿರುದ್ಧ ಸಮರ ಸಾರಿದ ದಾಸಶ್ರೇಷ್ಠ: ಶಿವನಗೌಡ

ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೇ ಸಂಗೀತ ಪ್ರಪಂಚಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಕನಕದಾಸರ ಅಪ್ರತಿಮ ಸಾಹಿತ್ಯ ಸೇವೆಯನ್ನು ಗುರುತಿಸಿ ಅದರ ಸಾರವನ್ನು ಅರಿತು ನಾವು ಬದುಕಬೇಕಾಗಿದೆ.

Special Article by Shivanagouda Police Patila over Kanakadasa Jayanthi gvd
Author
First Published Nov 11, 2022, 8:44 AM IST

ಶಿವನಗೌಡ ಪೊಲೀಸ್‌ ಪಾಟೀಲ, ಕೊಪ್ಪಳ

ಕರ್ನಾಟಕದಲ್ಲಿ 15-16ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರೂ ಒಬ್ಬರು. ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರಾಗಿ ಜನಮನ್ನಣೆ ಗಳಿಸಿದ ಇವರು ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಏಕೈಕ ಶೂದ್ರದಾಸರು. ಇವರು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.

ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಕನಕದಾಸರು ಜನಿಸಿದರು. ಇವರ ಮೂಲ ಹೆಸರು ತಿಮ್ಮಪ್ಪನಾಯಕ. ಇವರು ದಂಡನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತು ವೈರಾಗ್ಯ ಉಂಟಾದ ಬಳಿಕ ಹರಿಭಕ್ತರಾದರಂತೆ. 15-16ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಇವರು ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತಿದ್ದರು. ಕಾಗಿನೆಲೆಯ ಆದಿಕೇಶವ ಎಂಬ ಅಂಕಿತನಾಮದಲ್ಲಿ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು.

ಶ್ರೀಕೃಷ್ಣನ ಅನನ್ಯ ಭಕ್ತ: ಉಡುಪಿಯ ದೇವಸ್ಥಾನದಲ್ಲಿ ಕನಕದಾಸರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡ ತೊಡಗಿದರಂತೆ ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ಎಂದು ಅವರು ಹಾಡಿದಾಗ ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂದುಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನ ಕಾಣಬಹುದು. ಇಲ್ಲಿ ಒಂದು ಕಿಟಕಿಯನ್ನು ನಿರ್ಮಿಸಲಾಗಿದೆ ಅದನ್ನು ‘ಕನಕನ ಕಿಂಡಿ’ಎನ್ನಲಾಗುತ್ತದೆ.

ಪುಳಕ ಹುಟ್ಟಿಸಿದ ಪ್ರಗತಿ ಪ್ರತಿಮೆಯ ಯಾತ್ರೆ: ಸಚಿವ ಅಶ್ವತ್ಥ್‌ನಾರಾಯಣ

ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀ ಸಂಗಮದಂತೆ. ಅವರು ಮೂರು ಮಂದಿಯೂ ಸಮಕಾಲೀನರು, ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿತ್ತು. 120 ವರ್ಷಗಳ ಕಾಲ ಬದುಕಿದ್ದ ವಾದಿರಾಜರು ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ಧಾಷ್ಟ್ರ್ಯವೂ ಕನಕರಿಗಿರಲಿಲ್ಲ.

ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ: ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನಗಳಿಸಿ, ಚಿರಸ್ಮರಣೀಯರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೇ ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಇವರ ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಮೋಹನ ತರಂಗಿಣಿ, ನಳಚರಿತ್ರೆ,ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ.

ಇವರ ಕೃತಿ ಮೋಹನ ತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು, ಇದರಲ್ಲಿ ಸಾಂಗತ್ಯದಲ್ಲಿ ರಚಿತವಾಗಿರುವ 2700 ಪದ್ಯಗಳಿವೆ. ಮೋಹನ ತರಂಗಿಣಿಯಲ್ಲಿ ಕೃಷ್ಣಚರಿತ್ರೆಯನ್ನು ಹೇಳುತ್ತಾ ಕನಕದಾಸರು ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ತಮ್ಮ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಂಡನಾಯಕನಾಗಿ ಕನಕ ಆಗಾಗ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವರ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕದಾಸರು ಅದನ್ನೆಲ್ಲ ಬರಹ ರೂಪಕ್ಕೆ ತಂದರು. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನ ತರಂಗಿಣಿ.

ಸೋಮಸೂರಿಯ ವೀಥಿಯ ಇಕ್ಕೆಗಳಲಿ
ಹೇಮ ನಿರ್ಮಿತ ಸೌಧದೋಳಿ
ರಮಣೀಯತೆವೆತ್ತ ಕಳಸದಂಗಡಿಯಿರ್ದುಂ
ವಾ ಮಹಾ ದ್ವಾರಕಾಪುರದೇ
ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು
ಬೇರಂಗೆ ಕಡವ ಕೊಡುವರು

ಅವರ ಇನ್ನೊಂದು ಕೃತಿ ನಳಚರಿತ್ರೆಯು 9 ಸಂಧಿಗಳಿಂದ ಕೂಡಿದೆ. ಇದರಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ. ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. 13ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ.

ಇನ್ನು ರಾಮಧಾನ್ಯಚರಿತ್ರೆ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರ ಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರ ಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ.

‘ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ
ಎಲವೂ ನೀನೆಲ್ಲಿಹೆಯೋ ನಿನ್ನಯ ಬಳಗವದು’

ಎನ್ನುವ ಮೂಲಕ ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು ಎಂದರೆ ತಪ್ಪಾಗಲಾರದು. ಹರಿಭಕ್ತಿಸಾರ 110 ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನಿ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.

ಜನಪ್ರಿಯ ಕೀರ್ತನೆಗಳು: ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. ‘ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ’ ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- ‘ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ’ ಎಂದು ಸಂತೋಷಪಟ್ಟಿದ್ದಾರೆ. ‘ಎಲ್ಲಿ ನೋಡಿದರಲ್ಲಿ ರಾಮ’ ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ ‘ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು’ ಎಂಬ ಧನ್ಯತಾಭಾವ ವ್ಯಕ್ತಪಡಿಸಿದ್ದಾರೆ.

ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ.

ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ.
ತೀರ್ಥವನು ಪಿಡಿದವರು ತಿರುನಾಮಧಾರಿಗಳೇ
ಜನ್ಮ ಸಾರ್ಥಕವಿರದವರು ಭಾಗವತರಹುದೇ
ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ.
ನೇರ, ಖಚಿತ ಸಂದೇಶದ ಕೀರ್ತನೆಗಳು ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.

ಸರ್ಕಾರವೇಕೆ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದೆ?: ಸಚಿವ ಸುಧಾಕರ್‌

ತಾಯಿ ತಂದೆಯ ಬಿಟ್ಟು ತಪವ ಮಾಡಲೂ ಬಹುದು
ದಾಯಾದಿ ಬಂಧುಗಳ ಬಿಡಲೂ ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು
ಪ್ರಾಣವ ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಬಹುದು
ಜಾಣ ನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣಾ ನಿನ್ನ ಅರೆಘಳಿಗೆ ಬಿಡಲಾಗದು..

ಎಂದ ದಾಸಶ್ರೇಷ್ಠರಾದ ಕನಕದಾಸರ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡಲು ಕರ್ನಾಟಕ ಸರ್ಕಾರವು ನಿರ್ಧರಿಸಿದ್ದು, 2008ರಿಂದ ಕನಕದಾಸ ಜಯಂತಿಯನ್ನು ಆಚರಿಸುತ್ತಾ ಬಂದಿದೆ. ಕನಕದಾಸರ ಅಪ್ರತಿಮ ಸಾಹಿತ್ಯ ಸೇವೆಯನ್ನು ಗುರುತಿಸಿ, ಆ ಸಾಹಿತ್ಯದಲ್ಲಿರುವ ಸಾರವನ್ನು ಅರಿತು ನಾವು ಬದುಕಬೇಕಾಗಿದೆ.

Follow Us:
Download App:
  • android
  • ios