ಮೃತ ವ್ಯಕ್ತಿ ಜೀವಂತ ಆಗುವುದ್ಯಾಕೆ? ದೇಹದಲ್ಲಿರೋ ಧನಂಜಯ ಯಾರು? ರಾಮಚಂದ್ರ ಗುರೂಜಿ ರಿವೀಲ್
ಮೃತಪಟ್ಟನೆಂದು ವೈದ್ಯರು ಘೋಷಿಸದ ಮೇಲೂ ಕೆಲವು ವ್ಯಕ್ತಿಗಳು ಜೀವಂತ ಆಗುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಹಾಗಿದ್ದರೆ ಇದಕ್ಕೆ ಕಾರಣವೇನು? ಡಾ.ರಾಮಚಂದ್ರ ಗುರೂಜಿ ಹೇಳಿದ ವಿವರಣೆ ಕೇಳಿ...
ವೈದ್ಯರು ಸತ್ತನೆಂದು ಘೋಷಿಸಿದ ವ್ಯಕ್ತಿಗಳು ಸ್ಮಶಾನಕ್ಕೆ ಒಯ್ಯುವಾಗ, ಪೋಸ್ಟ್ ಮಾರ್ಟಮ್ ಸಮಯದಲ್ಲಿ, ಅಗ್ನಿಸ್ಪರ್ಶ ಮಾಡುವ ಸಮಯದಲ್ಲಿ ಕೈಕಾಲು ಅಲ್ಲಾಡಿಸಿ, ಬದುಕಿರುವ ವಿಷಯ ತಿಳಿಯುವ ಘಟನೆಗಳು ಆಗ್ಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇಂಥ ಘಟನೆ ನಡೆದಾಗಲೆಲ್ಲಾ ಕುಟುಂಬಸ್ಥರು ಖುಷಿ ಪಡುವ ಜೊತೆಗೆ ಭಯ ಬೀಳುವುದೂ ಇದೆ. ಸತ್ತೇ ಹೋದ ಎಂದು ಘೋಷಿಸಿದ ವೈದ್ಯರ ವಿರುದ್ಧ ಕಿಡಿ ಕಾರುವುದು ಇದೆ. ವೈದ್ಯರ ವಿರುದ್ಧ ಕೇಸು ದಾಖಲಾಗುವುದೂ ಇದೆ. ಆತ ಸತ್ತನೆಂದು ಘೋಷಿಸಿದ ವೈದ್ಯರೇ ಕಕ್ಕಾಬಿಕ್ಕಿಯಾಗುವುದೂ ಇದೆ. ಹಾಗಿದ್ದರೆ ಸತ್ತ ಮನುಷ್ಯ ಮತ್ತೆ ಬದುಕಲು ಹೇಗೆ ಸಾಧ್ಯ? ಅದರಲ್ಲಿಯೂ ಹೆಚ್ಚಾಗಿ ಸ್ಮಶಾನಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ಮಿಸುಕಾಡುವ ಮೂಲಕ ಬದುಕಿರುವ ಸೂಚನೆ ಕೊಡುವುದು ಯಾಕೆ?
ಇವುಗಳ ಬಗ್ಗೆ ಡಾ.ರಾಮಚಂದ್ರ ಗುರೂಜಿ ಅವರು, ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅವರ ಮಾತಿನಲ್ಲಿಯೇ ಹೇಳುವುದಾದರೆ, ಈ ದೇಹದಲ್ಲಿ ಐದು ಮುಖ್ಯ ಪ್ರಾಣಗಳು ಮತ್ತು ಐದು ಉಪ ಪ್ರಾಣಗಳಿವೆ. 5 ಪ್ರಾಣಗಳನ್ನು ಪ್ರಾಣ, ಅಪಾನ, ವ್ಯಾನ, ಸಮಾನ, ಉದಾನ ಎಂದು ಕರೆಯಲಾಗುತ್ತದೆ. ಭಗವಾನ್ ಶಂಕರರು ಈ ಪಂಚಪ್ರಾಣಗಳ ಕುರಿತು ಉಲ್ಲೇಖಿಸಿದ್ದಾರೆ. ನಾಗ, ಕೂರ್ಮ, ದೇವದತ್ತ, ಕೃಕಾಲ ಮತ್ತು ಧನಂಜಯ ಇವು ಉಪ ಪ್ರಾಣಗಳಾಗಿವೆ. ಈ ಉಪಪ್ರಾಣಗಳು ಮುಖ್ಯ ಪ್ರಾಣಗಳಿಂದಲೇ ನಿಯಂತ್ರಿಸಲ್ಪಡುತ್ತವೆ. ವ್ಯಕ್ತಿ ಸತ್ತಾಗ ಮುಖ್ಯ ಪ್ರಾಣಗಳು ದೇಹವನ್ನು ತೊರೆದು ಹೋಗುತ್ತವೆ. ಆ ಸಂದರ್ಭದಲ್ಲಿ ಉಪ ಪ್ರಾಣಗಳು ಅಲ್ಲಿಯೇ ಇರುತ್ತವೆ. ಅಪಘಾತವಾದಾಗ, ಹೃದಯಾಘಾತವಾದಾಗ ಇಲ್ಲವೇ ಕೆಲವೊಂದು ಸಮಯದಲ್ಲಿ ಸಾವನ್ನಪ್ಪಿದಾಗ ಆ ವ್ಯಕ್ತಿ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಆಗ ವೈದ್ಯರು ಪರೀಕ್ಷೆ ಮಾಡಿದಾಗ ಮುಖ್ಯ ಪ್ರಾಣ ದೇಹದಿಂದ ಹೊರಟು ಹೋಗುವುದು ತಿಳಿಯುತ್ತದೆ. ಆಗ ವ್ಯಕ್ತಿ ಸತ್ತನೆಂದು ಘೋಷಿಸುತ್ತಾರೆ.
ಅಪ್ಪು ನಿಜವಾಗಿ ಸತ್ತಿದ್ದು ಹೇಗೆ? ಈಗ ಎಲ್ಲಿದ್ದಾರೆ? ಆತ್ಮದ ಜೊತೆ ಸಂಭಾಷಿಸಿದ ರಾಮಚಂದ್ರ ಗುರೂಜಿ
ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಹಾಗಾಗುವುದಿಲ್ಲ. ಈ ಮುಖ್ಯ ಪ್ರಾಣಗಳು ದೇಹ ಬಿಟ್ಟು ಹೋದಾಗ, ಅವುಗಳ ಹಿಂದೆ ಉಪ ಪ್ರಾಣಗಳೂ ಹೋಗುತ್ತವೆ. ಆದರೆ ಹೃದಯದಲ್ಲಿ ಇರುವ ಧನಂಜಯ ಎನ್ನುವ ಪ್ರಾಣ ಅಷ್ಟು ಸುಲಭದಲ್ಲಿ ಹೋಗುವುದಿಲ್ಲ. ಧನಂಜಯ ಎಂಬ ಉಪವಾಯು ದೇಹದಲ್ಲೆಡೆ ವ್ಯಾಪಿಸಿದೆ. ನಿದ್ರೆ, ಕಫ, ಹೃದಯದಲ್ಲಿ ರಕ್ತ ಪರಿಚಲನೆಯಲ್ಲಿ ಈ ವಾಯುವಿನ ಪಾತ್ರ ಇದೆ. ಎಲ್ಲಕ್ಕಿಂತ ಪ್ರಮುಖವಾಗಿ, ಎಲ್ಲಾ ಪ್ರಾಣಗಳೂ ಸ್ಥೂಲ ದೇಹವನ್ನು ತೊರೆದ ಬಳಿಕವೂ ಧನಂಜಯ ಉಪವಾಯುವು ಸ್ಥೂಲ ದೇಹದಲ್ಲಿಯೇ ಉಳಿಯುತ್ತದೆ ಏಕೆಂದರೆ ದೇಹ ಕೊಳೆಯಲು ಧನಂಜಯ ಉಪವಾಯುವಿನ ಅವಶ್ಯಕತೆ ಇದೆ. ಈತ ಡೋರ್ ಕೀಪರ್ ಇದ್ದಂತೆ. ಅಲ್ಲಿಯೇ ಉಳಿದುಕೊಂಡು ಬಿಡುತ್ತಾನೆ. ಅಂಥ ಸಂದರ್ಭದಲ್ಲಿ ವ್ಯಕ್ತಿ ಸತ್ತಿರುವುದಿಲ್ಲ. ಆದರೆ ಉಳಿದ ಒಂಬತ್ತು ಪ್ರಾಣಗಳು ಹಾರಿ ಹೋಗುವ ಕಾರಣ, ವ್ಯಕ್ತಿ ಮೃತಪಟ್ಟಿರುವುದಾಗಿ ಘೋಷಿಸಲಾಗುತ್ತದೆ. ಆದರೆ ಧನಂಜಯ ದೇಹದಲ್ಲಿಯೇ ಉಳಿದುಕೊಳ್ಳುವ ಕಾರಣ, ಉಳಿದ ಒಂಬತ್ತು ಪ್ರಾಣಗಳು ಮತ್ತೆ ತಿರುಗಿ ದೇಹವನ್ನು ಸೇರುತ್ತವೆ. ಆಗ ವ್ಯಕ್ತಿ ಜೀವಂತವಾಗುತ್ತಾನೆ ಎಂದಿದ್ದಾರೆ ಗುರೂಜಿ.
ಹತ್ತೂ ಪ್ರಾಣಗಳು ಹೋದರಷ್ಟೇ ಮನುಷ್ಯನ ದೇಹ ಸಂಪೂರ್ಣ ತಣ್ಣಗಾಗುತ್ತದೆ. ಆಗ ಆತ ಸತ್ತ ಎಂದು ಅರ್ಥ. ಆದರೆ ಧನಂಜಯ ಇನ್ನೂ ದೇಹದಲ್ಲಿ ಇದ್ದರೆ, ಆ ವ್ಯಕ್ತಿ ಸಂಪೂರ್ಣ ತಣ್ಣಾಗಿರುವುದಿಲ್ಲ, ಇವೆಲ್ಲವೂ ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವಂಥದ್ದು. ಹತ್ತೂ ಪ್ರಾಣಗಳು ಹೋದರೆ, ಕೆಲವೇ ದಿನಗಳಲ್ಲಿ ಆ ಶವ ಕೊಳೆತು ನಾರುತ್ತದೆ. ಕೆಲವು ಯೋಗಿ ಪುರುಷರು ಜೀವಂತ ಸಮಾಧಿಯಾಗುತ್ತಾರೆ. ಆದರೆ ಎಷ್ಟೇ ದಿನ ಅವರ ಶರೀರ ಹಾಗೆಯೇ ಇಟ್ಟರೂ ವಾಸನೆ ಬರುವುದಿಲ್ಲ. ರಾಘವೇಂದ್ರ ಸ್ವಾಮೀಜಿ, ರಾಮಕೃಷ್ಣ ಪರಮಹಂಸರು ಸೇರಿದಂತೆ ಕೆಲವು ಬೌದ್ಧ ಭಿಕ್ಷುಗಳ ದೇಹ ಯಾವುದೇ ಪ್ರಿಸರ್ವೇಟಿವ್ ಇಲ್ಲದೇ ಇಟ್ಟಿದ್ದರೂ ಅವರ ದೇಹದಿಂದ ವಾಸನೆ ಬಂದಿರಲಿಲ್ಲ, ಇದಕ್ಕೆ ಕಾರಣ ಧನಂಜಯ ಅವರ ದೇಹದಲ್ಲಿಯೇ ಇದ್ದುದು ಎಂದು ತಿಳಿಸಿದ್ದಾರೆ ರಾಮಚಂದ್ರ ಗುರೂಜಿ.
ರಾಗಿ ಹಿಟ್ಟು ಕೊಟ್ಟು ನನ್ನನ್ನು ಖರೀದಿಸಿದ್ರು... 'ಥಟ್ ಅಂತ ಹೇಳಿ' ಖ್ಯಾತಿಯ ಸೋಮೇಶ್ವರ್ ಮಾತು ಕೇಳಿ!