ನಾ. ಸೋಮೇಶ್ವರ್, "ಥಟ್ ಅಂತ ಹೇಳಿ" ಖ್ಯಾತಿಯ ರಸಪ್ರಶ್ನೆ ಮಾಸ್ಟರ್, ಕೀರ್ತಿ ಎಂಟರ್‌ಟೈನ್‌ಮೆಂಟ್ ಶೋನಲ್ಲಿ ತಮ್ಮ ಬಾಲ್ಯದ ಹಾಸ್ಯಮಯ ಘಟನೆಯನ್ನು ಹಂಚಿಕೊಂಡಿದ್ದಾರೆ. ಮಕ್ಕಳಂತೆ ತಮಗೂ "ಅಕ್ಕಿಹಿಟ್ಟಿಗೆ ಅಣ್ಣ, ರಾಗಿಹಿಟ್ಟಿಗೆ ನೀನು" ಎಂಬ ತಮಾಷೆಯ ಮಾತುಗಳನ್ನು ಕೇಳಿದ್ದನ್ನು ನೆನಪಿಸಿಕೊಂಡು ಭಾವುಕರಾದರು. 

ಮನೆಯಲ್ಲಿ ಮಕ್ಕಳು ಗಲಾಟೆ ಮಾಡಿದಾಗ ಅಥವಾ ಅಪ್ಪ-ಅಮ್ಮನಿಗೆ ಯಾವುದೋ ಕಾರಣಕ್ಕೆ ಅವರ ಮೇಲೆ ಸಿಟ್ಟು ಬಂದಾಗ ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಮಕ್ಕಳಿಗೆ ಅಪ್ಪ-ಅಮ್ಮ ಹೇಳುವ ಮಾತು ಒಂದೇ. ನಿನ್ನನ್ನು ಎಲ್ಲಿಂದಲೋ ಖರೀದಿ ಮಾಡಿದ್ದು ಎಂತಲೋ, ಯಾರೋ ಕಸದ ತೊಟ್ಟಿಯಲ್ಲಿ ಎಸೆದಿದ್ರು, ನಾವು ಕರ್ಕೊಂಡು ಬಂದ್ವಿ ಎಂದೋ, ಪಕ್ಕದ ಮನೆಯವರು ಸಾಕಲು ಆಗಲ್ಲ ಎಂದು ನಿನ್ನನ್ನು ಕೊಟ್ಟಿದ್ದು ಎಂದೋ, ದೇವಸ್ಥಾನದಲ್ಲಿ ಅಳುತ್ತಾ ಇದ್ದೆ, ಎತ್ತಾಕೊಂಡು ಬಂದ್ವಿ ಎಂದೋ.... ಹೀಗೆ ಹೇಳುವುದು ಉಂಟು. ಹಲವು ಮಕ್ಕಳಿಗೆ ಇಂಥ ಅನುಭವ ಆಗಿರಲಿಕ್ಕೆ ಸಾಕು. ಕೆಲವು ಸಂದರ್ಭಗಳಲ್ಲಿ ಸಿಟ್ಟಿನಿಂದ ಪೋಷಕರು ಈ ಮಾತು ಹೇಳಿದರೆ, ಮತ್ತೆ ಕೆಲವು ತಮಾಷೆ ಸಂದರ್ಭಗಳಲ್ಲಿಯೂ ಹೇಳುವುದು ಉಂಟು. 

ಇದನ್ನೇ ಹಾಸ್ಯದ ರೂಪದಲ್ಲಿ 'ಥಟ್‌ ಅಂತ ಹೇಳಿ' ಖ್ಯಾತಿಯ ನಾ. ಸೋಮೇಶ್ವರ್‍‌ ಅವರೂ ಹೇಳಿದ್ದಾರೆ. ತಮಗೂ ಇಂಥ ಅನುಭವ ಆಗಿದ್ದುಂಟು ಎಂದು ಕೀರ್ತಿ ಎಂಟರ್‍‌ಟೇನ್‌ಮೆಂಟ್‌ ಶೋನಲ್ಲಿ ನಾ. ಸೋಮೇಶ್ವರ ಹೇಳಿದ್ದಾರೆ. ಅಷ್ಟಕ್ಕೂ, ದೂರದರ್ಶನ ಚಂದನದಲ್ಲಿ ಪ್ರಸಾರ ಆಗ್ತಿರೋ ಥಟ್‌ ಅಂತ ಹೇಳಿ ಎಂದಾಕ್ಷಣ ಎಲ್ಲರ ಮುಂದೆ ಬರೋದು ನಾ.ಸೋಮೇಶ್ವರ್‍‌ ಅವರು. ಕಳೆದ 22 ವರ್ಷಗಳಿಂದ ಈ ಕಾರ್ಯಕ್ರಮವನ್ನು ಒಂದೇ ಧಾಟಿಯಲ್ಲಿ, ಒಂದೇ ರೀತಿಯಲ್ಲಿ ನಡೆಸಿಕೊಡುತ್ತಲೇ ಖ್ಯಾತಿ ಗಳಿಸಿದವರು ಇವರು. ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ‘ಥಟ್ ಅಂತ ಹೇಳಿ’ ಕಾರ್ಯಕ್ರಮ ದಾಖಲೆ ಬರೆದಿದೆ. ರಸಪ್ರಶ್ನೆ ಮಾಸ್ಟರ್ ಎಂದೇ ಪ್ರಖ್ಯಾತರಾಗಿರುವ ಲೇಖಕ, ನಾ.ಸೋಮೇಶ್ವರ್‍‌ ಅವರದ್ದು ಹಾಸ್ಯದಲ್ಲಿಯೂ ಎತ್ತಿದ ಕೈ. ಥಟ್‌ ಅಂತ ಹೇಳಿ ಕಾರ್ಯಕ್ರಮವನ್ನು ಎಷ್ಟು ಸೊಗಸಾಗಿ, ಗಂಭೀರವಾಗಿ ನಡೆಸಿಕೊಡುತ್ತಾರೆಯೋ, ಅದಕ್ಕಿಂತಲೂ ಹೆಚ್ಚಾಗಿ ಅವರ ಹಾಸ್ಯಪ್ರಜ್ಞೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಇದೀಗ ಕೀರ್ತಿ ಎಂಟರ್‍‌ಟೇನ್‌ಮೆಂಟ್‌ ಶೋನಲ್ಲಿ ನಾ. ಸೋಮೇಶ್ವರ ಅವರು ಹಾಸ್ಯ ಪ್ರಜ್ಞೆಯನ್ನುಮರೆದಿದ್ದಾರೆ. ಅವರಿಗೆ ಕೇಳಿರುವ ಪ್ರಶ್ನೆಗಳಿಗೆ ಹಾಸ್ಯದ ಮೂಲಕವೇ ಉತ್ತರ ಕೊಟ್ಟಿದ್ದಾರೆ. 

ಈ ಸಂದರ್ಶನ ಹೆಂಡ್ತಿಗೆ ತೋರಿಸ್ಬೇಡಿ ಅಂತಲೇ ಐವರು ಪ್ರೇಯಸಿಯರ ಹೆಸ್ರು ಥಟ್‌ ಅಂತ ಹೇಳಿದ ನಾ. ಸೋಮೇಶ್ವರ್!

ಕೀರ್ತಿ ಅವರು, ಬಹುತೇಕ ಮಕ್ಕಳಿಗೆ ಹೇಳುವಂತೆ ನಿಮಗೂ ಏನಾದ್ರೂ ಹೇಳಿದ್ರಾ ಕೇಳಿದಾಗ, ನನಗೂ ಆ ಅನುಭವ ಆಗಿದೆ. ನಮ್ಮಣ್ಣ ನನಗಿಂತ ಬೆಳ್ಳಗೆ ಇದ್ದಾನೆ. ಅಕ್ಕಿ ಹಿಟ್ಟನ್ನು ಕೊಟ್ಟುಬಿಟ್ಟು ಅವನನ್ನು ಕೊಂಡುಕೊಂಡ್ವಿ, ನಾನು ಸ್ವಲ್ಪ ಕಪ್ಪಗೆ ಇದ್ದೀನಿ ಎಂದು ರಾಗಿ ಹಿಟ್ಟು ಕೊಟ್ಟು ನಿನ್ನನ್ನು ಕೊಂಡುಕೊಂಡ್ವಿ ಅಂತ ಹೇಳ್ತಿದ್ರು ಎಂದು ನೆನಪಿಸಿಕೊಂಡಿದ್ದಾರೆ. ಆಗ ನಾನು ಗುಮ್‌ ಎಂದು ಮುಖ ಮಾಡಿಕೊಳ್ಳುತ್ತಿದ್ದೆ ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ. ನನ್ನ ಕೋಪ, ಅಣ್ಣನ ನಗು ಎರಡನ್ನೂ ನೋಡಿ ಅಮ್ಮ ನಗ್ತಾ ಇದ್ದುದು ನೆನಪಿಸಿಕೊಂಡ್ರೆ ಈಗ ಅನ್ನಿಸ್ತಾ ಇದೆ... ಬದುಕಿನ ನಿಜವಾದ ಸತ್ಯ ಆ ಕ್ಷಣಗಳು ಎಂದು ಭಾವುಕರಾಗಿದ್ದಾರೆ. ಅವು ಬಂಗಾರದ ಕ್ಷಣಗಳು ಎಂದಿದ್ದಾರೆ. ಇದರ ವಿಡಿಯೋ ಅನ್ನು ಕೀರ್ತಿ ಅವರು ಶೇರ್‍‌ ಮಾಡಿಕೊಂಡಿದ್ದಾರೆ.


 ನಾ. ಸೋಮೇಶ್ವರ ಕುರಿತು ಹೇಳುವುದಾದರೆ, 22 ವರ್ಷಗಳಿಂದ ಥಟ್ ಅಂತ ಹೇಳಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇವರನ್ನು ನಡೆದಾಡುವ ಗ್ರಂಥಾಲಯ ಎಂದೇ ಹೇಳಲಾಗುತ್ತಿದೆ. 1986ರಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದ ಇವರು ಕೈಗಾರಿಕಾ ಕ್ಷೇತ್ರದಲ್ಲಿ ವೈದ್ಯಕೀಯ ತಜ್ಞರಾಗಿ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮೇಡಂ ಕ್ಯೂರಿ ಹಾಗೂ ಥಾಮಸ್ ಆಲ್ವಾ ಎಡಿಸನ್ ಅವರ ಬದುಕು ಡಾ ನಾ ಸೋಮೇಶ್ವರ್ ಮೇಲೆ ಅತೀವ ಪ್ರಭಾವ ಬೀರಿತು. 9ನೇ ಕ್ಲಾಸ್‌ನಲ್ಲಿ ಇರುವಾಗಲೇ 14 ನಾಟಕಗಳನ್ನ ಬರೆದವರು ಡಾ ನಾ ಸೋಮೇಶ್ವರ್. ವೈದ್ಯಕೀಯ ಹಾಗೂ ಸಾಹಿತ್ಯ ಲೋಕದ ಅವಿಸ್ಮರಣೀಯ ಸೇವೆಗೆ ಡಾ ನಾ ಸೋಮೇಶ್ವರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.

ಅಪ್ಪು ನಿಜವಾಗಿ ಸತ್ತಿದ್ದು ಹೇಗೆ? ಈಗ ಎಲ್ಲಿದ್ದಾರೆ? ಆತ್ಮದ ಜೊತೆ ಸಂಭಾಷಿಸಿದ ರಾಮಚಂದ್ರ ಗುರೂಜಿ

View post on Instagram