Asianet Suvarna News Asianet Suvarna News

Dharmasthala Laksha Deepotsava: ಧಾರ್ಮಿಕ ಮೌಲ್ಯಗಳಿಂದ ಅಭಿವೃದ್ಧಿ ಸಾಧ್ಯ; ಸ್ಮೃತಿ ಇರಾನಿ

ಧರ್ಮಸ್ಥಳ ಲಕ್ಷದೀಪೋತ್ಸವ - 90ನೇ ಸರ್ವಧರ್ಮ ಸಮ್ಮೇಳನ
ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಗಿ
ವಸುಧೈವ ಕುಟುಂಬಕಂ ಮಂತ್ರ ಜಪಿಸಿದ ಇರಾನಿ

Smriti Irani participates in Dharmasthala Laksha Deepotsava skr
Author
First Published Nov 23, 2022, 4:51 PM IST

ಧರ್ಮಸ್ಥಳ: ದೇಶದ ಉನ್ನತಿಯನ್ನು ಧರ್ಮದ ಮೌಲ್ಯಗಳ ನೆಲೆಗಟ್ಟಿನಲ್ಲಿ ನೋಡಿದಾಗ ಜನಕಲ್ಯಾಣದ ಸಾಧ್ಯತೆಗಳು ಹೆಚ್ಚುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕೇಂದ್ರ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವದ ಅಂಗವಾಗಿ ಅಮೃತವರ್ಷಿಣಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 90ನೇ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದ ಉದ್ಘಾಟಕರಾಗಿ ಅವರು ಮಾತನಾಡಿದರು. ಹಣದ ದೃಷ್ಟಿಕೋನದೊಂದಿಗೂ ಕೂಡ ಅಭಿವೃದ್ಧಿಯನ್ನು ಅಳೆಯಲಾಗುತ್ತದೆ ಮತ್ತು ಆರ್ಥಿಕತೆಯ ಬೆಳವಣಿಗೆಗಳೂ ಹಣದ ಆಧಾರದಲ್ಲಿಯೇ ನಿರ್ಧಾರಿತವಾಗುತ್ತದೆ. ಆದರೆ ಇದೆಲ್ಲದರ ಆಚೆಗೆ ಧಾರ್ಮಿಕ ಮೌಲ್ಯಗಳನ್ನು ಕೇಂದ್ರೀಕರಿಸಿಕೊಂಡಂಥ ದೃಷ್ಟಿಕೋನವು ಅಭಿವೃದ್ಧಿಯನ್ನು ಸಮಾಜಪರವನ್ನಾಗಿಸುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಪ್ರಾರ್ಥನಾ ಗೀತೆಯಾದ ಮತ್ತು ಗಾಂಧೀಜಿಗೂ ಪ್ರಿಯವಾದ ವೈಷ್ಣವ ಜನತೋ ಹಾಡನ್ನು ಪ್ರಸ್ತಾಪಿಸಿದ ಅವರು ಪ್ರಸ್ತುತ ಕಾಲಮಾನದಲ್ಲಿಯೂ ಕಷ್ಟದಲ್ಲಿರುವವರಿಗೆ ಸಹಾಯದ ಹಸ್ತ ಚಾಚುವುದು ಉಪಕಾರದ ಶ್ರೇಷ್ಠ ಅವಕಾಶವಾಗಿರುತ್ತದೆ. ಇಂತಹ ಶ್ರೇಷ್ಠ ಅವಕಾಶಗಳನ್ನು ಪ್ರತಿಯೊಬ್ಬರೂ ಬಳಸಿಕೊಳ್ಳುವ ಆಸಕ್ತಿಯನ್ನು ತೋರಿದಾಗ ಮಾತ್ರ ಸಮಾಜದ ಹಿತ ಸಾಧ್ಯ ಎಂದು ಹೇಳಿದರು. ಭಾರತೀಯ ಏಕತೆಯ ಮೂಲ ಮಂತ್ರವಾದ 'ವಸುಧೈವ ಕುಟುಂಬಕಂ' ಸರ್ವಧರ್ಮಗಳ ಸಹಬಾಳ್ವೆಯ ಸಂಕೇತ. ಕಲಿಯುಗದಲ್ಲಿ ಇಂತಹ ಕ್ರಿಯಾಶೀಲಾತ್ಮಕ ಪ್ರಸ್ತುತಿಯೇ ಧರ್ಮಸ್ಥಳದ 90ನೇ ಸರ್ವಧರ್ಮ ಸಮ್ಮೇಳನ ಎಂದು ಅಭಿವ್ಯಕ್ತಪಡಿಸಿದರು.

ಸರ್ವಧರ್ಮಗಳ ಆಚರಣೆಗಳು ತನ್ನದೇ ಆದ ವೈವಿಧ್ಯತೆಗಳನ್ನು ಹೊಂದಿದ್ದರು ಕೂಡ ಪ್ರತಿಯೊಂದು ಧರ್ಮದ ಮೂಲ ತತ್ವ ಮಾನವಧರ್ಮ. ಇಂತಹ ಧರ್ಮ ಪಾಲನೆಯ ತಳಹದಿಯೇ ವ್ಯಕ್ತಿಯ ಸಂಸ್ಕಾರ ಮತ್ತು ಸಚ್ಛಾರಿತ್ರ್ಯತೆ. ಸುಸಂಸ್ಕಾರದ ಜೊತೆ ಉಪಕಾರ ಮನೋಭಾವ ಒಗ್ಗೂಡಿದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಜನಹಿತ, ಸಮಾಜಹಿತ ಮತ್ತು ರಾಷ್ಟದ ಹಿತಕ್ಕಾಗಿ ವಿವೇಚನಾತ್ಮಕವಾಗಿ ಯೋಚಿಸುವ ವ್ಯಕ್ತಿಗತ ಸಂಕಲ್ಪಶಕ್ತಿಯಿಂದಲೇ ಸ್ವಸ್ಥ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

Dharmasthala Laksha Deepotsava:ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

ಸದ್ಗುಣ ಮತ್ತು ದಾನ ಒಂದಕ್ಕೊಂದು ಪೂರಕ. ಮನಸ್ಸು ಶುದ್ಧವಿದ್ದಾಗ ಮತ್ತು ಸುವಿಚಾರಗಳು ಮನಸ್ಸಿನಲ್ಲಿ ಬೇರೂರಿದಾಗ ಮಾತ್ರ ದಾನ-ಧರ್ಮದ ಪರಿಕಲ್ಪನೆ ಮೂಡುತ್ತದೆ. ವಿದ್ಯಾದಾನ, ಅನ್ನದಾನ ಅಭಯದಾನ ಮತ್ತು ಔಷಧದಾನದಂತಹ ಶ್ರೇಷ್ಠ ದಾನಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಉತ್ತಮ ಸಾಕ್ಷಿಯಾಗಿದೆ ಎಂದು ನುಡಿದರು. 

ವಿದ್ಯೆ, ವಿನಯ ಮತ್ತು ಅನುಶಾಸನವನ್ನು ಕಲಿಸುತ್ತದೆ. ಈ ಎರಡು ಅಂಶಗಳ ಸದ್ರೂಪಿಯಾಗಿ ಧರ್ಮಸ್ಥಳದ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಲಾಭವನ್ನು ಕೇಂದ್ರೀಕರಿಸದೇ ಸಾತ್ವಿಕ ಜೀವನಕ್ಕೆ ಮುನ್ನುಡಿಯನ್ನು ರೂಪಿಸುವುದೇ ನಿಜವಾದ ವಿದ್ಯಾದಾನವಾಗಿದೆ ಎಂದು ಹೇಳಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನದ ಇತಿಹಾಸದ ಕುರಿತು ವಿವರಿಸಿದರು. ಸಮಾಜ ಮತ್ತು ಭಕ್ತರ ಸೇವೆಯೇ ಲಕ್ಷದೀಪೋತ್ಸವದ ಆಶಯ ಎಂದು ನುಡಿದರು.

Dharmasthala Laksha Deepotsava: ಜನಮನ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು

ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಿವಮೊಗ್ಗದ ಬಹುಶ್ರುತ ವಿಧ್ವಾಂಸರು ಮತ್ತು ಸುಪ್ರಸಿದ್ಧ ನ್ಯಾಯವಾದಿಗಳಾದ ಎಂ.ಆರ್ ಸತ್ಯನಾರಾಯಣ ಮತ್ತು ಸಮ್ಮೇಳನದ ಉಪನ್ಯಾಸಕರಾಗಿ ಆಗಮಿಸಿದ್ದ ಕ್ರೈಸ್ತ ಧರ್ಮ ಗುರುಗಳಾದ ಫಾದರ್ ಮಾರ್ಸೆಲ್ ಪಿಂಟೋ, ವಿಜಯಪುರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಹಾಸಿಂಪೀರ ಇ ವಾಲೀಕಾರ, ಮೂಡಬಿದ್ರೆಯ ಶ್ರೇಷ್ಠ ವಾಗ್ಮಿಗಳಾದ ಮುನಿರಾಜ ರೆಂಜಾಳ ಮತ್ತು ಡಾ.ಹೇಮಾವತಿ ವಿ ಹೆಗ್ಗಡೆ ಹಾಗೂ ಸುರೇಂದ್ರಕುಮಾರ ಹೆಗ್ಗಡೆ ಉಪಸ್ಥಿತರಿದ್ದರು.

ವರದಿ: ಭಾರತಿ ಹೆಗಡೆ, ಚಿತ್ರಕೃಪೆ: ಶಶಿಧರ್ , ಎಸ್‌ಡಿಎಂ ಕಾಲೇಜು ಉಜಿರೆ

Follow Us:
Download App:
  • android
  • ios