Asianet Suvarna News Asianet Suvarna News

Dharmasthala Laksha Deepotsava: ಜನಮನ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು

ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಳದ ಲಕ್ಷದೀಪೋತ್ಸವದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ವೈಭವ ಹೇಗಿತ್ತು ಎಂಬುದನ್ನು ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ವರದಿ ಮಾಡಿದ್ದಾರೆ. 

Dharmasthala Laksha Deepotsava Day 3 cultural programmes mesmerised the gathering skr
Author
First Published Nov 23, 2022, 12:34 PM IST

ಕ್ರೀಷ್ಮಾ ಆರ್ನೋಜಿ/ಕಾರ್ತಿಕ ಹೆಗಡೆ/ಐಶ್ವರ್ಯ ಕೋಣನ/ವಿವೇಕ್ ಸಿ ಪಿ/ಶ್ರವಣ್ ಕುಮಾರ್, ಎಸ್ಡಿಎಂ ಕಾಲೇಜು, ಉಜಿರೆ
ಚಿತ್ರಗಳು: ಭಾರತಿ ಹೆಗಡೆ/ಗ್ಲೆನ್ ಮೋನಿಸ್/ಆಶಿಶ್ ಜಿ ಯಾದವ್

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಮೂರನೇ ದಿನದ ಲಕ್ಷದೀಪೋತ್ಸವದ ಪ್ರಯುಕ್ತ ಲಲಿತಾಕಲಾಗೋಷ್ಠಿ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅನೇಕ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಸೂರೆಗೊಂಡವು. 

ಭಾವ-ಯೋಗ-ಗಾನ ಮಾಧುರ್ಯ
ಅಲ್ಲಿ ನೃತ್ಯದ ಸೊಗಡಿತ್ತು. ಭಕ್ತಿಯ ಸೆಳಕಿತ್ತು. ಯೋಗದರ್ಶನವಿತ್ತು. ಇದರೊಂದಿಗೆ ಗಾನಮಾಧುರ್ಯದ ಸ್ವಾರಸ್ಯವೂ ಇತ್ತು. ಅಲ್ಲಿದ್ದವರೊಳಗೆ ಸ್ಫೂರ್ತಿಯ ಬೆಳಕನ್ನು ಹರಡಿತ್ತು..
ಉಡುಪಿಯ ಭಾರ್ಗವಿ ಆರ್ಟ್ಸ್ ಆ್ಯಂಡ್ ಡಾನ್ಸ್ ಅಕಾಡೆಮಿಯ ತಂಡವು ಲಕ್ಷದೀಪೋತ್ಸವದ ಪ್ರಯುಕ್ತ ಅಮೃತವರ್ಷಿಣಿ ವೇದಿಕೆಯಲ್ಲಿ ನಡೆಸಿಕೊಟ್ಟ ಲಲಿತ ಕಲಾಗೋ಼ಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ‘ಭಾವ-ಯೋಗ-ಗಾನ’ದ ವಿಶೇಷ ಝಲಕ್ ಇದು.
ನೃತ್ಯದ ಜೊತೆ ಆಧ್ಯಾತ್ಮ, ಯೋಗ, ಗಾನ ಒಂದೇ ವೇದಿಕೆಯಲ್ಲಿ ಮೇಳೈಸಿ ಅಲ್ಲಿದ್ದ ಹಲವು ಕಲಾ ಆರಾಧಕರನ್ನು ಸೆಳೆಯಿತು. ನೃತ್ಯಕ್ಕೆ ಸಂಬಂಧಿಸಿದಂತೆ ಯಕ್ಷಗಾನ, ಕಥಕ್ಕಳಿ ಪ್ರಕಾರಗಳ ಅಭಿವ್ಯಕ್ತಿ ಇತ್ತು. ಯೋಗದ ವಿವಿಧ ಭಂಗಿಗಳ ಅನಾವರಣವಿತ್ತು. ಭಕ್ತಿಭಾವಗಳ ಕಾವ್ಯಾತ್ಮಕ ಸಾಲುಗಳೊಂದಿಗಿನ ಅಭಿನಯ ವೈಶಿಷ್ಟ್ಯತೆ ರಂಜಿಸಿತು.

ಇಂದು ಪುಟ್ಟಪರ್ತಿ ಸಾಯಿಬಾಬಾ ಜಯಂತಿ; ಅವರ ಕೆಲ ಪ್ರಸಿದ್ಧ ಕಿವಿಮಾತುಗಳು ಇಲ್ಲಿವೆ..

ಯಕ್ಷಗಾನ, ಕತಕಳಿ, ಕಾಳಿಂಗ ಮರ್ದನ, ಶಿವ ತಾಂಡವ, ಕುಂಭ ನೃತ್ಯ, ನಟರಾಜ ನಮನ, ಹೀಗೆ ವಿವಿಧ ರೀತಿಯ ನೃತ್ಯ ಪ್ರಸ್ತುತಿ ನಾಟ್ಯದ ವಿವಿಧ ಆಯಾಮಗಳನ್ನು ಪರಿಚಯಿಸಿತು. ಸತತ 90 ನಿಮಿಷಗಳ ಕಾಲ ನಡೆದ ನೃತ್ಯವು ರೋಮಾಂಚನಕಾರಿಯಾಗಿತ್ತು.
ಆ್ಯಂಟಿ ಗ್ರಾವಿಟಿ ನೃತ್ಯವು ಬಹಳ ಸೋಗಸಾಗಿ ಮೂಡಿಬಂದಿತ್ತು. ಭೂಮಿಯ ಗುರುತ್ವಾಕರ್ಷಣೆ ಇಲ್ಲದಂತೆ ವೇದಿಕೆ ಮೇಲೆ ವಿವಿಧ ಭಂಗಿಗಳನ್ನು ಪ್ರದರ್ಶಿಸಿದ್ದು ಮನಮೋಹಕವಾಗಿತ್ತು .ಕೃಷ್ಣ ಕಾಳಿಂಗ ಸರ್ಪವನ್ನು ವಧೆ ಮಾಡಿದ ದೃಶ್ಯವಂತೂ ಅಮೋಘವಾಗಿತ್ತು.
ಕೈಯಲ್ಲಿ ದೀಪ ಹಿಡಿದುಕೊಂಡು ತಲೆಯ ಮೇಲೆ ಕುಂಭಹೊತ್ತು, ಕುಂಭಗಳ ಮೇಲೆನಿಂತು ವಿವಿಧ ರೀತಿಯ ಭಂಗಿಗಳನ್ನು ಪ್ರದರ್ಶಿಸಲಾಯಿತು. ವೇದಿಕೆ ಮೇಲೆ ಚಿನ್ಮಯಿ ಭಟ್ ಹಾಡಿದ ‘ಸೋಜುಗಾದ ಸೂಜಿ ಮಲ್ಲಿಗೆ’ ಗೀತೆಯು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿತು.

‘ನಾಗಸ್ವರವಾದನ’ದ ಸೇವೆ
ಸೇಲಂನ ಮುನಿರತ್ನ ಹಾಗೂ ಚಿತ್ತೂರಿನ ಬಿ.ಎಂ ಶಂಕರಪ್ಪ ತಂಡದವರಿಂದ ‘ನಾಗಸ್ವರ ವಾದನ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಲಾವಿದರು ದೂರದ ಊರಿನಿಂದ ದೇವಸ್ಥಾನಕ್ಕೆ ಬಂದು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಪ್ರತಿವರ್ಷ ಲಕ್ಷದೀಪೋತ್ಸವಕ್ಕೆ ಕಲಾಸೇವೆಯನ್ನು ಸಮರ್ಪಿಸುತ್ತಾರೆ. ಹಲವಾರು ಕಡೆ ‘ನಾಗಸ್ವರ ವಾದನ’ ನುಡಿಸುವ ಕಲಾವಿದರಿಗೆ ಇದೊಂದು ದೊಡ್ಡ ಅವಕಾಶವೆಂಬ ಹೆಮ್ಮೆ ಇದೆ.
ಸತತ ಒಂದು ಘಂಟೆಗಳ ಕಾಲ ನಡೆದ ಕಾರ‍್ಯಕ್ರಮದಲ್ಲಿ ಸೇಲಂನ ತಂಡದಿಂದ ಮುನಿರತ್ನ ಜೊತೆ ಶಂಕರ್, ತಿರುವೆಂಕಟ (ನಾಗಸ್ವರ), ಮಾದಲಿಂಗಮ್ ಹಾಗೂ ಮಾದೇಶ (ತವಿಲ್) ನಂತರ ಚಿತ್ತೂರಿನ ತಂಡದಿಂದ ಬಿ.ಎಂ ಶಂಕರಪ್ಪ ಜೊತೆ ಸುಬ್ರಮಣ್ಯಮ್ (ತವಿಲ್), ಹೀರಪ್ಪ, ಸೋಮ್ನೇಶ್,ಮಂಜುನಾಥ (ನಾಗಸ್ವರ), ಸುಬ್ರಮಣ್ಯಮ್ ಹಾಗೂ ಪರಾಂದಮ್ (ಸ್ಯಾಕ್ಸೋಫೋನ್) ಸಾಥ್ ನೀಡಿದರು.
ಧರ್ಮಸ್ಥಳ ದೇವಸ್ಥಾನದ ನಾದಸ್ವರ ವಾದಕ ವಿದ್ವಾನ್ ಡಿ.ಅಣ್ಣು ದೇವಾಡಿಗ ಹಾಗೂ ಭಕ್ತಾಭಿಮಾನಿಗಳು ಭಾಗಿಯಾಗಿದ್ದರು. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ‘ನಾಗಸ್ವರ ವಾದನ’ ಪ್ರದರ್ಶಿಸಿದ ಎಲ್ಲಾ ಕಲಾವಿದರಿಗೆ ಹಾರ ಹಾಕಿ ಗೌರವಿಸಿದರು. ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುವೀರ್ ಜೈನ್ ವಂದಿಸಿದರು.

ಅಯ್ಯಪ್ಪ ಭಕ್ತರಿಗೆ ವಿಮಾನದಲ್ಲಿ ಇರುಮುಡಿ ಕಟ್ಟು ಒಯ್ಯಲು ಅಸ್ತು

ಮನಸೆಳೆದ ಬಾಲ ರಾಮಾಯಣ
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಮೂರನೇ ದಿನದಂದು ಅಮೃತ ವರ್ಷಿಣಿ ಮಂಟಪದಲ್ಲಿ ಲಲಿತ ಕಲಾ ಗೋಷ್ಠಿ ಕಾರ್ಯಕ್ರಮದಲ್ಲಿ ನಡೆದ ಬಾಲ ರಾಮಾಯಣ ನೆರೆದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ಸ್ವಾತಿ ತಿರುನಾಳ್ ರಾಮೋವರ್ಮ ರಚಿಸಿರುವ ಕೃತಿಯ ಒಂದು ಭಾಗ 'ಭಾವಯಾಮಿ ರಘುರಾಮಮ್' ಆಗಿದ್ದು ಇದನ್ನು ನೃತ್ಯ ರೂಪಕ ರೂಪದಲ್ಲಿ ತೋರಿಸುವಲ್ಲಿ ವಿದ್ವಾನ್ ಉನ್ನತ್ ಹೆಚ್ ಆರ್ ಅವರ ನಾಟ್ಯಕಲಾವಿಲಾಸ ತಂಡ ಯಶಸ್ವಿಯಾಯಿತು.
ಆರು ವರ್ಷದ ಮಕ್ಕಳಿಂದ ಹಿಡಿದು ಎಪ್ಪತ್ತು ವರ್ಷದ ಹಿರಿಯರ ತನಕ ಇದರಲ್ಲಿ ಅಭಿನಯಿಸಿರುವುದು ವಿಶೇಷತೆ.

Guru Margi 2022: ಸಿಎಂ ಬೊಮ್ಮಾಯಿಗಿಲ್ಲ ಗುರುಬಲ, ಮೋದಿಗಿದೆ ಚಕ್ರವರ್ತಿ ಯೋಗ!

ಮನಸೆಳೆದ ಶಿವಶಕ್ತಿ ನೃತ್ಯ ರೂಪಕ
ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಳದ ಲಕ್ಷದೀಪೋತ್ಸವದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಲಕ್ಷದೀಪೋತ್ಸವದ ವಸ್ತುಪ್ರದರ್ಶನ ಮಂಟಪದಲ್ಲಿ ಬೆಂಗಳೂರಿನ ಮಹಾವೀರ ಲಲಿತಾ ಕಲಾ ಆಕಾಡೆಮಿ ನಾಗರಬಾವಿಯ ಕಲಾವಿದೆಯರು ನವರಸಗಳನ್ನು ನಾಟ್ಯ ಭಾವಗಳಲ್ಲಿ ಅಭಿನಯಿಸುವ ಮೂಲಕ ಕಲಾಭಿಮಾನಿಗಳ ಮನ ತಣಿಸಿದರು.
ಮೂರನೇ ದಿನ ಬೆಂಗಳೂರಿನ ವಿದುಷಿ ತನುಜಾ ಜೈನ್ ಮತ್ತು ಇವರ ತಂಡ ಭಕ್ತಿ ಆಧಾರಿತ ನೃತ್ಯ ರೂಪಕ 'ಶಿವಶಕ್ತಿ 'ಯನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು. ಸಾಂಪ್ರದಾಯಿಕ ಪುಷ್ಪಾಂಜಲಿಯ ಮೂಲಕ ಆರಂಭಿಸಿ, ವಿಘ್ನೇಶ್ವರನನ್ನು ಸ್ತುತಿಸಿ ನಾಟ್ಯರಾಜ ಶಿವನನ್ನು ಪ್ರಾರ್ಥಿಸಿ, ಗುರುಗಳಿಗೆ, ಸಭಿಕರಿಗೆ ವಂದಿಸುವುದರೊಂದಿಗೆ ನೃತ್ಯ ಆರಂಭಿಸಿದರು. ನಾದಯೋಗ ಪ್ರಿಯನೆಂದು ಶಿವನನ್ನು ವರ್ಣಿಸುವ ನಟೇಶ ಕೌಸ್ತುಭ, ಹಂಸಧ್ವನಿ ರಾಗ, ಏಕತಾಳದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಶೀಘ್ರ ಗತಿಯ ತಿಲ್ಲಾಣದೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು. ಕಲಾ ತಂಡದ ಸಂಗೀತ ಗುರು ವಿನೂತ ಸುರೇಶ್‌ರವರ ಮಾಹಿತಿಯುತ ನಿರೂಪಣೆ ರೂಪಕಕ್ಕೆ ಮೆರುಗು ನೀಡಿತ್ತು.
 

Follow Us:
Download App:
  • android
  • ios