ಇಲ್ಲಿ ಶಿವಲಿಂಗಕ್ಕೆ ಬೆಣ್ಣೆ ಹಚ್ಚಿದ್ರೆ ಕ್ಷಣಾರ್ಧದಲ್ಲಿ ತುಪ್ಪ ಆಗುತ್ತೆ, ನೀವು ಮಾಡಬಹುದು!
ಶಿವಗಂಗೆ ಎಂಬುದು ಚಾರಣಕ್ಕೊಂದು ಕಾರಣ, ಭಕ್ತಿಗೊಂದು ಹಾದಿ, ದೇವಾಲಯಗಳ ದಿಬ್ಬಣ, ಸೂರ್ಯೋದಯವಿಲ್ಲಿ ಸಂಕ್ರಮಣ...
ನೀವು ಸಾಹಸಿಗರೂ ಆಗಿದ್ದು, ದೈವಭಕ್ತರೂ ಹೌದಾದಲ್ಲಿ ಈ ವೀಕೆಂಡ್ ಎಂಜಾಯ್ ಮಾಡಲು ಶಿವಗಂಗೆಯತ್ತ ಹೊರಡಿ. ದಕ್ಷಿಣ ಕಾಶಿ ಎಂದೇ ಹೆಸರಾದ ಶಿವಗಂಗೆ ಬೆಂಗಳೂರಿನಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿದ್ದು, ಬೆಂಗಳೂರಿಗರ ವೀಕೆಂಡೊಂದನ್ನು ಸ್ಮರಣೀಯವಾಗಿಸಬಲ್ಲದು.
ನಂಬಿದವರನೆಂದೂ ಬಿಡದ ಶೃಂಗೇರಿ ಶಾರದಾಂಬೆ; ತಿಳಿಯಬನ್ನಿ ಮಹಾತ್ಮೆಯ!
ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಿಂದ 6 ಕಿ.ಮೀ ದೂರದಲ್ಲಿ ಶಿವಗಂಗೆ ಬೆಟ್ಟ ಕಾಣಿಸುತ್ತದೆ. ಪಶ್ಚಿಮದಿಂದ ನೋಡಿದರೆ ಇಡೀ ಬೆಟ್ಟವೇ ಶಿವಲಿಂಗದ ಆಕಾರದಲ್ಲಿ ಕಾಣಿಸುತ್ತದೆ. ಪೂರ್ವದಿಂದ ನೋಡಿದರೆ ಹೋರಿಯಂತೆಯೂ, ಉತ್ತರದಿಂದ ಸರ್ಪದಂತೆಯೂ ಹಾಗೂ ದಕ್ಷಿಣದಿಂದ ಗಣೇಶನಂತೆಯೂ ಕಾಣಿಸುತ್ತದೆ. ಈ ಬೆಟ್ಟದ ಮೇಲೆ ಗಂಗಾಧರೇಶ್ವರ ಹಾಗೂ ಹೊನ್ನಮ್ಮದೇವಿ ದೇವಾಲಯಗಳಿವೆ.
ದಕ್ಷಿಣದ ಗಂಗೆ
ಈ ಬೆಟ್ಟದ ಮೇಲೆ ನೀರಿನ ಮೂಲಗಳಿದ್ದು, ಪುರಾಣಗಳ ಪ್ರಕಾರ ಈ ನೀರು ಗಂಗೆಯ ಸ್ವರೂಪ. ಅದೇ ಕಾರಣಕ್ಕೆ ಈ ಸ್ಥಳಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ. ಗಂಗೆಯೂ ಇದ್ದು, ಹಲವು ಪುಟ್ಟ ಪುಟ್ಟ ದೇವಾಲಯಗಳೂ ಇರುವುದರಿಂದ ಈ ಸ್ಥಳಕ್ಕೆ ದಕ್ಷಿಣಕಾಶಿ ಎಂಬ ಉಪಮೆಯೂ ಸೇರಿಕೊಂಡಿದೆ. ಇಲ್ಲಿನ ಗಂಗಾಧರೇಶ್ವರ ದೇವಾಲಯದ ಶಿವಲಿಂಗಕ್ಕೆ ಒಂದು ವಿಶೇಷ ಶಕ್ತಿ ಇದೆ. ಅದೇನೆಂದರೆ ನೀವು ಆ ಶಿವಲಿಂಗಕ್ಕೆ ಬೆಣ್ಣೆ ಹಚ್ಚಿದ್ರೆ ಅದು ಕ್ಷಣಾರ್ಧದಲ್ಲಿ ತುಪ್ಪ ಆಗಿ ಬದಲಾಗುತ್ತದೆ.
ಏಕಶಿಲೆಯ ನಂದಿ
ಶಿವಗಂಗೆ ಬೆಟ್ಟದ ತುದಿಯಲ್ಲಿ ಏಕಶಿಲೆಯಿಂದ ನಿರ್ಮಿಸಲಾದ ಬೃಹತ್ ನಂದಿ ವಿಗ್ರಹವಿದೆ. ಇದರಿಂದ ಮುಂದೆ ಸಾಗಿದರೆ ಪಾತಾಳಗಂಗೆ ದೇವಾಲಯ ಸಿಗುತ್ತದೆ. ಇಲ್ಲಿ ದೇವಾಲಯದ ಕೆಳಗೆ ಜಲ ಹರಿಯುತ್ತದೆ. ಇದಲ್ಲದೆ ಒಳಕಲ್ ತೀರ್ಥ ಕೂಡಾ ಜನರನ್ನು ಆಕರ್ಷಿಸುವ ಕೇಂದ್ರ. ಇಲ್ಲಿ ಸಣ್ಣದೊಂದು ಬಿಲದಂಥ ರಚನೆಯಲ್ಲಿ ಕೈ ಹಾಕಬೇಕು. ಯಾರ ಕೈಗೆ ನೀರು ತಾಕುತ್ತದೋ ಅವರು ಪುಣ್ಯ ಮಾಡಿದ್ದಾರೆ ಹಾಗೂ ನೀರು ತಾಕದವರು ಪಾಪಾತ್ಮರು ಎಂಬ ನಂಬಿಕೆ ಇದೆ. ಆದರೆ, ನೀವು ಸರಿಯಾಗಿ ಗಮನಿಸಿ ಆಳಕ್ಕೆ ಕೈ ತಾಕಿಸಿದರೆ ಪುಣ್ಯಾತ್ಮರ ಪಟ್ಟಿಗೆ ಸೇರಬಹುದು. ಇಲ್ಲಿನ ಮತ್ತೊಂದು ವಿಶೇಷವೆಂದರೆ ಈ ಸ್ಥಳ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಖಜಾನೆಯಾಗಿ ಬಳಕೆಯಾಗಿತ್ತು.
ಲೈಂಗಿಕತೆ-ಋತುಸ್ರಾವ-ಮಾತೃಯೋನಿ ಸ್ವರೂಪಿ ದೇವಿಗಿಲ್ಲಿ ಪೂಜೆ
ಚಾರಣ
ಈ ಸ್ಥಳದ ಗುಡ್ಡಗಾಡು ವೈಶಿಷ್ಟ್ಯವು ಸಾಕಷ್ಟು ಚಾರಣಿಗರನ್ನು ಸೆಳೆಯುತ್ತದೆ. ಇಲ್ಲಿ ರಾಕ್ ಕ್ಲೈಂಬಿಂಗ್‌ಗೆ ಕೂಡಾ ಅವಕಾಶವಿದ್ದು, ಇದರಿಂದ ಚಾರಣಿಗರ ಉತ್ಸಾಹ ದುಪ್ಪಟ್ಟಾಗಲಿದೆ. ಬೆಟ್ಟದ ಬುಡದಿಂದ ಸುಮಾರು 2 ಕಿಲೋಮೀಟರ್‌ನಷ್ಟು ಮೇಲಕ್ಕೆ ಚಾರಣ ಮಾಡಲು ಅವಕಾಶವಿದ್ದು, ಶೇ.80ರಷ್ಟು ಚಾರಣ ಸುಲಭವಾಗಿದ್ದರೆ, ಉಳಿದ 20 ಭಾಗ ಸ್ವಲ್ಪ ಸವಾಲಿನದಾಗಿದೆ. ಇಲ್ಲಿ ಚಾರಣಿಗರು ಎದುರಿಸುವ ಮತ್ತೊಂದು ಸವಾಲು ಮಂಗಗಳದ್ದು. ಅವು ನಿಮ್ಮಲ್ಲಿ ತಿನ್ನಲು ಏನಾದರೂ ಸಿಗಬಹುದೇ ಎಂಬ ಆಸೆಯಿಂದ ಹಿಂಬಾಲಿಸುವ ಜೊತೆಗೆ ದಾಳಿಯೂ ಮಾಡುತ್ತವೆ. ಎಲ್ಲವನ್ನು ಎದುರಿಸಿ ಬೆಟ್ಟ ಏರಿ ಸುತ್ತ ತಿರುಗಿದರೆ, ಇಂಥದೊಂದು ನೋಟಕ್ಕಾಗಿ ಬೆಟ್ಟ ಏರಲು ಎನರ್ಜಿ ಹಾಕಿದ್ದು ಖಂಡಿತಾ ವ್ಯರ್ಥವಲ್ಲ ಎನಿಸುತ್ತದೆ.
ಹತ್ತಿರದಲ್ಲಿ ಇನ್ನೇನಿದೆ?
ಇಲ್ಲೇ ಹತ್ತಿರದಲ್ಲಿ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯವಿದೆ. ತನ್ನ ವಾಸ್ತುಕಲೆಯಿಂದ ಪ್ರಸಿದ್ಧವಾಗಿರುವ ಈ ಹಳೆಯ ದೇವಾಲಯವು ಕೊರಟಗೆರೆಯ ಪ್ರಮುಖ ದೇವಾಲಯವಾಗಿದೆ.
ಇದಲ್ಲದೆ, ಶಿವಗಂಗೆಯಿಂದ 30 ಕಿಲೋಮೀಟರ್ ದೂರದಲ್ಲಿ ಸಿದ್ಧರ ಬೆಟ್ಟವಿದೆ. ಈ ಸ್ಥಳದಲ್ಲಿ 9000 ಶಿವನ ಭಕ್ತರು ಶಿವಾರಾಧನೆಯಲ್ಲಿ ತೊಡಗಿ ಮೋಕ್ಷ ಪಡೆದರು ಎಂಬ ಕತೆಯಿದೆ. ಇದು ಕೂಡಾ ಗುಹೆಗಳು ಹಾಗೂ ಕಲ್ಲಿನ ಬೆಟ್ಟದಿಂದಾಗಿ ಚಾರಣಿಗರಿಗೆ ಪ್ರಿಯವಾದ ಸ್ಥಳ. ಔಷಧೀಯ ಸಸ್ಯಗಳಿಂದ ತುಂಬಿರುವ ಸಿದ್ಧರಬೆಟ್ಟಕ್ಕೆ ಪಕ್ಷಿವೀಕ್ಷಣೆಗಾಗಿಯೂ ಜನ ಬರುತ್ತಾರೆ.
ಇದೇ ಹಾದಿಯಲ್ಲಿ ಮತ್ತೊಂದು ಭೇಟಿಯೋಗ್ಯ ಸ್ಥಳವೆಂದರೆ ದೇವರಾನದುರ್ಗ. ಈ ಗುಡ್ಡದ ಮೇಲೆ ಯೋಗನರಸಿಂಹ ಹಾಗೂ ಭೋಗನರಸಿಂಹ ದೇವಾಲಯಗಳಿವೆ.
101 ವರ್ಷಗಳ ಹಿಂದೆ ಸಮಾಧಿಯಾದ ಶಿರಡಿ ಸಾಯಿ ಬಾಬಾರಿಗೆ ನಮಿಸುತ್ತಾ
ಸ್ಥಳ: ಬೆಂಗಳೂರಿನಿಂದ ತುಮಕೂರು ರಸ್ತೆ ಮಾರ್ಗದಲ್ಲಿ ನೆಲಮಂಗಲಕ್ಕೆ ಹೋಗಿ, ಅಲ್ಲಿಂದ ಹಾಸನ ರೋಡ್‌ಗೆ ತಿರುಗಿದರೆ ಸೋಲೂರ ಬಳಿಕ ಸಿಗುವುದೇ ಶಿವಗಂಗೆ.
ದೂರ: ಬೆಂಗಳೂರಿನಿಂದ 60 ಕಿಲೋಮೀಟರ್‌ಗಳು
ಚಾರಣ: ಬೆಟ್ಟದ ಬುಡದಿಂದ 2 ಕಿಲೋಮೀಟರ್‌ಗಳು ಚಾರಣಕ್ಕೆ ಉತ್ತಮ ಸಮಯ: ಅಕ್ಟೋಬರ್‌ನಿಂದ ಮಾರ್ಚ್