Ugadi 2022: ಬದುಕಿನ ಪಾಠ ಹೇಳುವ ಬೇವು ಬೆಲ್ಲ.. ಈ ಕಾರಣಕ್ಕೆ ಸೇವಿಸಿ
ಯುಗಾದಿ ಹಬ್ಬದ ದಿನ ಬೇವು ಬೆಲ್ಲ ಸೇವಿಸುವುದು ವಾಡಿಕೆಯಾಗಿದೆ. ಇದನ್ನು ಆರು ಪದಾರ್ಥಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಇವು ನಮ್ಮ ಬದುಕಿನ ಆರು ಭಾವನೆಗಳ ಪ್ರತೀಕವಾಗಿದೆ ಎಂಬುದು ನಿಮಗೆ ಗೊತ್ತೇ?
ಸಂಕ್ರಾಂತಿ ಎಂದರೆ ಎಳ್ಳು ಬೆಲ್ಲ(jaggery) ಸೇವಿಸುವ ಹಾಗೆ ಯುಗಾದಿ ಎಂದರೆ ಬೇವು(neem) ಬೆಲ್ಲ ಸೇವಿಸುವ ಆಚರಣೆ ರೂಢಿಯಲ್ಲಿದೆ. ಯುಗಾದಿ ಹಬ್ಬದಂದು ಬೇವು ಬೆಲ್ಲ ಸೇವಿಸುವ ಆಚರಣೆ ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ. ಬೇವು ಬೆಲ್ಲ ಎಂದರೆ ಸಿಹಿ ಕಹಿಗಳೆರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬುದಕ್ಕೆ ರೂಪಕ ಎಂಬ ಸಾಮಾನ್ಯ ಮಾತು ಎಲ್ಲರಿಗೂ ತಿಳಿದಿದೆ. ಆದರೆ, ಈ ಬೇವು ಬೆಲ್ಲ ತಯಾರಿಸಲು ಆರು ಆಹಾರ ಪದಾರ್ಥಗಳನ್ನು ಬಳಸಲಾಗುತ್ತದೆ. ಅವೆಲ್ಲವೂ ನಮ್ಮ ಜೀವನದ ಆರು ಭಾವನೆಗಳನ್ನು ಪ್ರತಿನಿಧಿಸುತ್ತವೆ ಎಂಬ ವಿಷಯ ನಿಮಗೆ ಗೊತ್ತೇ?
ಹೌದು, ಯುಗಾದಿ ಎಂದರೆ ಹೊಸ ವರ್ಷವನ್ನು ಸ್ವಾಗತಿಸುವ ಹಬ್ಬ. ಹೊಸ ವರ್ಷವು ಸುಖ, ಸಂತೋಷ, ಸಮೃದ್ಧಿ(prosperity)ಯನ್ನು ತರಲೆಂದು ಆಶಿಸುವ ಹಬ್ಬ. ಇಂಥ ಯುಗಾದಿಯ ದಿನ ಬೇವು ಬೆಲ್ಲ ಏಕೆ ಸೇವಿಸಬೇಕು, ಬೇವು ಬೆಲ್ಲ ತಯಾರಿಸುವ ವಿಧಾನವೇನು? ಈ ಬೇವು ಬೆಲ್ಲದ ಪ್ರಾಮುಖ್ಯತೆ ಏನು ಎಲ್ಲವನ್ನೂ ವಿವರವಾಗಿ ನೋಡೋಣ.
ಬೇವು ಬೆಲ್ಲ ತಯಾರಿ
ಬೇವು, ಬೆಲ್ಲ, ಹಸಿ ಮಾವಿನಕಾಯಿ(raw mango), ಉಪ್ಪು, ಮೆಣಸಿನ ಕಾಳು(pepper) ಹಾಗೂ ಹುಣಸೆ ಹುಳಿ ರಸ(tamarind juice) ಸೇರಿಸಿ ಪೇಸ್ಟ್ ತಯಾರಿಸಲಾಗುತ್ತದೆ. ಈ ಪದಾರ್ಥಗಳೇ ಏಕೆ? ಇವುಗಳ ಬಳಕೆಯ ಮಹತ್ವವೇನು?
ಈ ಆರು ಪದಾರ್ಥಗಳು ಮಾನವ ಜೀವನದ ಪ್ರಮುಖ ಆರು ಭಾವನೆಗಳನ್ನು ಸೂಚಿಸುತ್ತವೆ. ಮಾನವನ ನೆಮ್ಮದಿಯ ಜೀವನಕ್ಕೆ ಬೇಕಾದ ಮಾರ್ಗದರ್ಶನ ಮಾಡುತ್ತದೆ. ನೀವೇ ಯೋಚಿಸಿ ಈ ಆರೂ ಪದಾರ್ಥಗಳೂ ಆರು ವಿವಿಧ ರುಚಿಯನ್ನು ಹೊಂದಿವೆ. ಒಂದೊಂದು ರುಚಿಯೂ ಜೀವನದ ಒಂದೊಂದು ರೀತಿಯ ಏರಿಳಿತಗಳನ್ನು ಸೂಚಿಸುತ್ತದೆ. ಇದರಲ್ಲಿ ಯಾವೊಂದೇ ರುಚಿಯನ್ನೂ ಅತಿಯಾಗಿ ಸೇವಿಸುವುದು ಯಾರಿಂದಲೂ ಸಾಧ್ಯವಿಲ್ಲ. ಕೇವಲ ಸಿಹಿಯೊಂದನ್ನೇ ಸೇವಿಸುತ್ತೇವೆಂದರೆ ಮುಖ ಕಟ್ಟುತ್ತದೆ. ಕಹಿಯೊಂದನ್ನೇ ತಿನ್ನುವುದು ಸಾಧ್ಯವೇ ಇಲ್ಲ. ಇನ್ನು ಹುಳಿಯಾಗಲೀ, ಖಾರವಾಗಲೀ, ಒಗರು, ಉಪ್ಪು ಯಾವುದೇ ಇರಲಿ- ಒಂದನ್ನೇ ಸೇವಿಸಿದರೆ ವಾಂತಿಯಾಗುತ್ತದಷ್ಟೇ. ಆದರೆ ಈ ಎಲ್ಲ ರುಚಿಗಳೂ ಹದವಾಗಿ ಮಿಳಿತವಾದಾಗ ನಾಲಿಗೆ ಚಪ್ಪರಿಸುವಂಥ ರುಚಿ ಸಿಗುತ್ತದೆ. ಹೀಗೆ ಜೀವನದಲ್ಲಿ ಕೂಡಾ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಮಿಳಿತವಾಗಿದ್ದಾಗಷ್ಟೇ ಜೀವನ ಸೊಗಸು ಎಂಬ ಪಾಠ ಹೇಳುತ್ತವೆ.
ಬಂದೇ ಬಿಡ್ತು ಯುಗಾದಿ, ಆಚರಣೆ ಹೇಗೆ?
ಈಗ ಯಾವ ಆಹಾರ ಪದಾರ್ಥ ಯಾವುದನ್ನು ಸೂಚಿಸುತ್ತದೆ ನೋಡೋಣ.
ಬೇವು: ಬೇವಿನ ರುಚಿ ಕಹಿ. ಅದು ನಮ್ಮ ಬದುಕಿನಲ್ಲಿ ಎದುರಾಗುವ ಕಹಿಯ ಕ್ಷಣಗಳನ್ನು ಸೂಚಿಸುತ್ತದೆ. ಜೀವನ ಸದಾ ಸಂತೋಷದಿಂದಲೇ ತುಂಬಿರಲು ಸಾಧ್ಯವಿಲ್ಲ. ಕೊಂಚ ಕಹಿಯೂ ಇರುತ್ತದೆ. ಅದನ್ನು ಸ್ವೀಕರಿಸುವ ಮನಸ್ಥಿತಿ ಇದ್ದಾಗ ಅದೇನು ಅಂಥ ಕಷ್ಟವೆನಿಸುವುದಿಲ್ಲ.
ಬೆಲ್ಲ: ಬೆಲ್ಲವು ಸಿಹಿಯಾಗಿದೆ. ಅದು ಜೀವನದ ಎಲ್ಲ ಸಂತೋಷದ ಕ್ಷಣಗಳನ್ನು ಸೂಚಿಸುತ್ತದೆ. ನಮ್ಮೆಲ್ಲ ನಗುವಿಗೆ ಕಾರಣವಾಗುವ ಕ್ಷಣಗಳು, ಸುಮಧುರ ಅನುಭವಗಳು ಎಲ್ಲವನ್ನೂ ಬೆಲ್ಲ ಸಂಕೇತಿಸುತ್ತದೆ.
ಮೆಣಸು: ಮೆಣಸು ಕಾರ, ನಮ್ಮ ಕೋಪದಂತೆ. ಹೌದು, ಕೋಪವನ್ನು ಸಂಪೂರ್ಣವಾಗಿ ಗೆಲ್ಲಲು ಯಾರಿಗೂ ಸಾಧ್ಯವಿಲ್ಲ. ಇತಿಮಿತಿಯಲ್ಲಿದ್ದಾಗ ಕೋಪ ಒಳ್ಳೆಯದೇ. ಎಲ್ಲಿ ತೋರಿಸಬೇಕೋ ಅಲ್ಲಿಯೇ ತೋರಿಸುವ ಪ್ರಬುದ್ಧತೆ ಇರಬೇಕಷ್ಟೇ.
Ugadi 2022 ಯಾವಾಗ? ಶುಭಮುಹೂರ್ತ ಮತ್ತು ಪ್ರಾಮುಖ್ಯತೆ ಏನು?
ಉಪ್ಪು: ಉಪ್ಪು ನಮ್ಮೊಳಗಿನ ಭಯವನ್ನು ಸೂಚಿಸುತ್ತದೆ. ಭಯ ಬಹಳಷ್ಟು ಬಾರಿ ಒಳ್ಳೆಯದೇ. ಅದು ನಮ್ಮನ್ನು ತಪ್ಪುಗಳನ್ನು ಮಾಡದಂತೆ ತಡೆಯುತ್ತದೆ. ಹಾಗಂತ ಭಯ ಅತಿಯಾದರೆ ಅದರಿಂದಲೂ ಸಮಸ್ಯೆಯಾಗುತ್ತದೆ. ಚಿಟಿಕೆ ಉಪ್ಪಿನಂತೆ ಭಯವೂ ಕೊಂಚವೇ ಇರಬೇಕು.
ಹುಣಸೇಹಣ್ಣು: ಹುಣಸೇ ಹಣ್ಣಿನ ರುಚಿ ಹುಳಿ. ನಮಗೆ ಸಿಗದೆ ಇರುವುದನ್ನು ಚೀ, ಅದು ಹುಳಿ ಎಂದು ಬಿಡಬೇಕೆನ್ನುವ ನರಿಯ ಕತೆ ನಮಗೆ ಗೊತ್ತಿದೆ. ಹುಳಿಯು ಅಸಮಾಧಾನವನ್ನು ಪ್ರತಿನಿಧಿಸುತ್ತದೆ. ಕೆಲವೊಂದು ವಿಷಯದಲ್ಲಿ ಅಸಮಾಧಾನವಿದ್ದಾಗಲೇ ನಾವು ಹೆಚ್ಚಿನದನ್ನು ಸಾಧಿಸಲು ಸಾಧ್ಯವಾಗುತ್ತದೆ.
ಮಾವು: ಮಾವಿನ ರುಚಿ ಅಚ್ಚರಿ ಪಡುವಷ್ಟು ಅಗಾಧ. ಹಾಗಾಗಿ ಮಾವು ಅಚ್ಚರಿಯನ್ನು ಸೂಚಿಸುತ್ತದೆ. ಜೀವನದಲ್ಲಿ ಆಗಾಗ ಅಚ್ಚರಿ ಮೂಡಿಸುವ ಸಂಗತಿಗಳು ಎದುರಾಗುತ್ತಲೇ ಇರಬೇಕು. ಆಗಲೇ ಅದು ಚೆನ್ನಾಗಿರಲು ಸಾಧ್ಯ.
ಹೀಗೆ ಬೇವು ಬೆಲ್ಲವು ಬದುಕಿನ ಪಾಠ ಹೇಳುತ್ತದೆ. ಎಲ್ಲವೂ ಇತಿಮಿತಿಯಲ್ಲಿದ್ದರೆ ಜೀವನ ಸೊಗಸು ಎಂದು ತಿಳಿಸುತ್ತದೆ.