ಬಂದೇ ಬಿಡ್ತು ಯುಗಾದಿ, ಆಚರಣೆ ಹೇಗೆ?
ಯುಗ ಯುಗಾದಿ ಕಳೆದು ಯುಗಾದಿ ಮರಳು ಬರುತಿದೆ.. ಹಿಂದೂ ವರ್ಷಾರಂಭದ ಈ ದಿನವನ್ನು ಹೇಗೆ ಆಚರಿಸಬೇಕು ತಿಳಿದಿದ್ದೀರಾ?
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ..
ಯುಗಾದಿ(Ugadi) ಎಂದರೆ ಯುಗದ ಆದಿ. ಹೊಸ ಸಂವತ್ಸರ(new year)ವೊಂದರ ಆರಂಭ. ಬ್ರಹ್ಮನು ಈ ಜಗತ್ತನ್ನು ಸೃಷ್ಟಿಸಿದ ದಿನ. ಏಪ್ರಿಲ್ 2ರಂದು ಶುಭಕೃತ ನಾಮ ಸಂವತ್ಸರ ಆರಂಭವಾಗುತ್ತಿದೆ. ಹೆಸರಿನಲ್ಲಿರುವ ಶುಭ ಜಗತ್ತಿಗೆಲ್ಲ ಶುಭವನ್ನೇ ತರಲಿ, ಹೊಸ ವರುಷಕೆ ಹೊಸ ಹರುಷವ ತರಲಿ ಎಂದು ಹಾರೈಸುತ್ತಾ ಯುಗಾದಿ ಹಬ್ಬವನ್ನು ಹೇಗೆ ಆಚರಣೆ ಮಾಡುತ್ತಾರೆ ನೋಡೋಣ.
- ಯುಗಾದಿ ಹಬ್ಬಕ್ಕೂ ಮೊದಲೇ ಮನೆಯನ್ನು ಸಂಪೂರ್ಣ ಸ್ವಚ್ಚಗೊಳಿಸಿ. ಬಲೆ ಧೂಳು ಹೊಡೆದು, ಬೇಡದ ವಸ್ತುಗಳನ್ನು ಮನೆಯಿಂದ ಹೊರ ದಾಟಿಸಿ.
- ಹಬ್ಬದ ದಿನ ಸೂರ್ಯೋದಯಕ್ಕೂ ಮುನ್ನ ಎದ್ದು ತಲೆಗೆ ಹರಳೆಣ್ಣೆ ಹಾಕಿಕೊಂಡು ಸ್ನಾನ ಮಾಡುವುದು ಉತ್ತಮವೆನಿಸಿದೆ. ಕೆಲವರು ಮೈ ಕೈಗೂ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ. ಇದು ಕೂಡಾ ಉತ್ತಮವೇ. ಏಕೆಂದರೆ, ಸೂರ್ಯನ ತಾಪಮಾನ ಹೆಚ್ಚಿರುವ ಈ ದಿನಗಳಲ್ಲಿ ದೇಹವನ್ನು ತಂಪಾಗಿಸುತ್ತದೆ ಹರಳೆಣ್ಣೆ. ಎಣ್ಣೆ ಹಚ್ಚಿಕೊಳ್ಳುವಾಗ ಸಪ್ತ ಚಿರಂಜೀವಿಗಳನ್ನು ಸ್ಮರಿಸಿಕೊಳ್ಳಬೇಕು.
ಆರೋಗ್ಯಕರ ಸಂಬಂಧಕ್ಕೆ ಈ ರಾಶಿಯವರೇ ಬೆಸ್ಟ್
- ಸ್ನಾನದ ಬಳಿಕ ವರ್ಷದ ಮೊದಲ ದಿನವಾದ್ದರಿಂದ ಜನರು ಹೊಸ ಬಟ್ಟೆ(new cloths)ಗಳನ್ನು ಧರಿಸುತ್ತಾರೆ. ಈ ದಿನ ಹೊಸ ಬಟ್ಟೆ ಧರಿಸಿದರೆ ವರ್ಷವಿಡೀ ಹೊಸ ಬಟ್ಟೆಗಳು ಸಿಗುತ್ತವೆ ಎಂಬ ನಂಬಿಕೆ ಇದೆ. ಜೊತೆಗೆ, ಹಬ್ಬದ ಸಂಭ್ರಮ ಮೈಗೂಡುತ್ತದೆ.
- ನಂತರ ಮನೆಯ ಮುಂಬಾಗಿಲು, ದೇವರ ಕೋಣೆಯ ಆವರಣವನ್ನು ಮಾವಿನ ಎಲೆಗಳ ತಳಿರು ತೋರಣಗಳಿಂದ ಅಲಂಕರಿಸಲಾಗುತ್ತದೆ. ಬಾಗಿಲ ಹೊರಗೆ ಚೆನ್ನಾಗಿರುವ ದೊಡ್ಡ ರಂಗೋಲಿಯನ್ನು ಹಾಕಬೇಕು. ಇದಾದ ಬಳಿಕ ಪೂಜೆಯನ್ನು ನಡೆಸಬೇಕು.
- ದೇವರಿಗೆ ಮೊದಲು ಅಭ್ಯಂಗ ಸ್ನಾನ, ಎಲ್ಲ ದೇವರ ಪ್ರತಿಮೆಗಳಿಗೆ ಅಭ್ಯಂಗ ಸ್ನಾನ ಮಾಡಿಸಲಾಗುತ್ತದೆ. ಈ ದಿನ ವಿಶೇಷವಾಗಿ ಬೇವು, ಮಾವು, ಹುಣಸೆ ಹೂಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ನಂತರ ಅಭಿಷೇಕ, ಅಲಂಕಾರ, ನೈವೇದ್ಯ, ಆರತಿ ಎಲ್ಲವನ್ನೂ ಕ್ರಮವಾಗಿ ಮಾಡಿ ಪೂಜೆ ಮುಗಿಸಲಾಗುತ್ತದೆ.
- ದೇವರ ಪೂಜೆಯಾದ ಕೂಡಲೇ ಪಂಚಾಂಗ(panchang) ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಸಬೇಕು. ಈ ವರ್ಷದ ಫಲಾಫಲಗಳನ್ನು ಪಂಚಾಂಗ ಓದುವ ಮೂಲಕ ತಿಳಿದುಕೊಳ್ಳಬೇಕು.
- ಇಷ್ಟೆಲ್ಲ ಆದ ನಂತರ ನೈವೇದ್ಯ ಮಾಡಿದ ಬೇವು ಬೆಲ್ಲವನ್ನು ಎಲ್ಲರಿಗೂ ಹಂಚಿ ಸೇವಿಸಬೇಕು. ಬೇವು ಬೆಲ್ಲದ ಸೇವನೆ ಎಂದರೆ ಜೀವನದಲ್ಲಿ ಕಹಿ ಮತ್ತು ಸಿಹಿಗಳೆರಡನ್ನೂ ಸಮಾನವಾಗಿ ಸ್ವೀಕರಿಸುತ್ತೇವೆ ಎಂಬ ತಾತ್ವಿಕ ದೃಷ್ಟಿಯಲ್ಲಿ ಸೇವಿಸುವುದಾಗಿದೆ.
- ಇದಾದ ಬಳಿಕ ಮನೆಯ ಹಿರಿಯ ಮಹಿಳೆ ಕಿರಿಯರೆಲ್ಲರಿಗೂ ಕುಂಕುಮಾರತಿ ಎತ್ತುವ ಪದ್ಧತಿ ರೂಢಿಯಲ್ಲಿದೆ. ಯುಗಾದಿ ದಿನದಂದು ಕರಗಿಸಿದ ತುಪ್ಪವನ್ನು ಒಂದು ಬೌಲ್ ನಲ್ಲಿ ಎಲ್ಲರೂ ಹಾಕಿ ಮುಖ ನೋಡಿಕೊಳ್ಳುವ ಅಭ್ಯಾಸವೂ ಇದೆ. ಮನೆ ಮಂದಿಯೆಲ್ಲ ಈ ದಿನ ದೇವಸ್ಥಾನಕ್ಕೆ ಹೋಗಿ ವರ್ಷದ ಒಳಿತಿಗೆ ಬೇಡಬೇಕು.
ಯುಗಾದಿ ವರ್ಷ ಭವಿಷ್ಯ: ಯಾವ ರಾಶಿಗೆ ಹೇಗಿರಲಿದೆ?
- ಇದಾದ ಬಳಿಕ ವಿಶೇಷ ಹಬ್ಬದ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಮನೆಯವರೆಲ್ಲ ಸೇವಿಸಬೇಕು.
- ಯಾವುದೇ ಹೊಸ ಯೋಜನೆ ಪ್ರಾರಂಭಿಸುವುದಿದ್ದರೂ, ಒಳ್ಳೆಯ ಕಾರ್ಯಗಳಿದ್ದರೂ ಅದನ್ನು ಯುಗಾದಿ ಹಬ್ಬದ ಶುಭ ದಿನದಂದು ಆರಂಭಿಸುವುದರಿಂದ ಎಲ್ಲ ಒಳಿತಾಗುತ್ತದೆ, ಯೋಜನೆ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ನಿಮ್ಮ ಯಾವುದೇ ಮಹತ್ತರ ಕಾರ್ಯಗಳಿದ್ದರೂ ಅದನ್ನು ಯುಗಾದಿಯಂದೇ ಆರಂಭಿಸಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.