Asianet Suvarna News Asianet Suvarna News

Dasara 2022 : ಇಂದು ಶ್ರೀ ಶಾರದಾಂಬೆ ಮಹಾರಥೋತ್ಸವ

  • ಇಂದು ಶ್ರೀ ಶಾರದಾಂಬೆ ಮಹಾರಥೋತ್ಸವ
  • ಶರನ್ನವರಾತ್ರಿ ಅಂಗವಾಗಿ ಒಂಭತ್ತು ದಿನಗಳ ಕಾಲ ವಿವಿಧ ಅಲಂಕಾರಗಳಲ್ಲಿ ಕಂಗೊಳಿಸಿದ ಶ್ರೀಶಾರದೆ
  • ದೇವಿ ದರ್ಶನ ಪಡೆದು ಕೃತಾರ್ಥರಾದ ಭಕ್ತಗಣ
Shri Sharadambe Maharathotsav today at Shringeri rav
Author
First Published Oct 6, 2022, 10:57 AM IST

ಶೃಂಗೇರಿ (ಅ.6) : ಶ್ರೀ ಶಾರದೆಗೆ 9 ದಿನಗಳ ಕಾಲ ವಿವಿಧ ಅಲಂಕಾರಗಳ ನಂತರ ಗುರುವಾರ ಶಾರದಾಂಬಾ ಮಹಾರಥೋತ್ಸವ. ಏಕಾದಶಿ ಈ ರಥೋತ್ಸವ ಶೃಂಗೇರಿಯಲ್ಲಿ ನಡೆಯುವ ರಥೋತ್ಸವಗಳಲ್ಲಿ ದೊಡ್ಡ ರಥೋತ್ಸವ.

ಶೃಂಗೇರಿ, ಹೊರನಾಡಿನಲ್ಲಿ ನವರಾತ್ರಿ ಸಂಭ್ರಮ

ದೇವಾಲಯಗಳ ನಗರಿ ಶೃಂಗೇರಿಯಲ್ಲಿ ರಥೋತ್ಸವಗಳ ಸುಗ್ಗಿ. ಶಾರದೆಗೆ ಸ್ವರ್ಣರಥೋತ್ಸವ, ಶ್ರೀ ಶಾರದಾಂಬಾ ರಥೋತ್ಸವ, ಶ್ರೀ ವಿದ್ಯಾಶಂಕರ ರಥೋತ್ಸವ, ಶ್ರೀ ಮಲಹಾನಿಕರೇಶ್ವರ ರಥೋತ್ಸವ, ಶ್ರೀ ಹರಾವರಿ ದುರ್ಗಾಂಬಾ ರಥೋತ್ಸವ ಹೀಗೆ ವರ್ಷದಲ್ಲಿ ಹಲವು ರಥೋತ್ಸವಗಳು ಜರುಗುತ್ತವೆ. ಅವುಗಳಲ್ಲಿ ಶೃಂಗೇರಿ ಪಟ್ಟಣದ ರಾಜಬೀದಿಯಲ್ಲಿ ನಡೆಯುವ ನವರಾತ್ರಿಯ ಈ ಮಹಾರಥೋತ್ಸವ ಅತ್ಯಂತ ದೊಡ್ಡ ರಥೋತ್ಸವ. ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ, ನವರಾತ್ರಿ ಹಗಲು ದರ್ಬಾರ್‌ ಈ ಮಹಾರಥೋತ್ಸವದಂದೇ ನಡೆಯುವುದು ಮೊತ್ತೊಂದು ವಿಶೇಷ.

ಕಳೆದೆರಡು ವರ್ಷಗಳಿಂದ ಕೋವಿಡ್‌ ಲಾಕ್‌ಡೌನ್‌ನಿಂದಾಗಿ ವೈಭವದ ನವರಾತ್ರಿ, ರಾಜಬೀದಿಯಲ್ಲಿ ಮಹಾರಥೋತ್ಸವ ಸೇರಿದಂತೆ ಸಾಂಸ್ಕೃತಿಕ ಉತ್ಸವಗಳೇ ಇರಲಿಲ್ಲ. ಭಕ್ತರಿಲ್ಲದೇ ಬಿಕೋ ಎನ್ನುತ್ತಿದ್ದ ಶ್ರೀ ಮಠದ ಆವರಣವು ಕಳೆದ 9 ದಿನಗಳಿಂದ ಭಾರೀ ಭಕ್ತಗಣದಿಂದ ಗಿಜಿಗಿಡುತ್ತಿದೆ. ಎಲ್ಲೆಲ್ಲೂ ಜನಸಾಗರ. ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ ಮುಂಗಟ್ಟುಗಳು, ಗಾಂಧಿ ಮೈದಾನದಲ್ಲಿನ ಅಂಗಡಿ ಮುಂಗಟ್ಟುಗಳು, ದಸರೆಯ ಸರ್ಕಸ್‌ ಹೀಗೆ ಜನರನ್ನು ಆಕರ್ಷಿಸಿ ಈ ಭಾರಿಯ ನವರಾತ್ರಿ ಕಳೆಗಟ್ಟಿದೆ.

ಪೀಠದ ಅಧಿದೇವತೆ ಶಾರದೆಗೆ ಪ್ರತಿದಿನ ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ಪ್ರತಿದಿನದ ಸಂಜೆಯ ರಾಜಬೀದಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು ಬಲು ವಿಜೃಂಭಣೆಯಿಂದ ನಡೆಯಿತು. ನವರಾತ್ರಿಯ ಆರಂಭದಿಂದ 6 ದಿನಗಳವರೆಗೂ ನವರಾತ್ರಿ ಕಾರ್ಯಕ್ರಮದಿಂದ ದೂರಉಳಿದಿದ್ದ ಮಳೆರಾಯ 7ನೆಯ ದಿನದಿಂದ ಅಡ್ಡಿಪಡಿಸುತ್ತಿದ್ದರೂ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಹೋಗಿ ಮಳೆಯನ್ನು ಲೆಕ್ಕಿಸದೇ ಭಕ್ತರು ಶರನ್ನವರಾತ್ರಿ ಉತ್ಸವದಲ್ಲಿ ಪಾಲ್ಗೊಳುತ್ತಿದ್ದರು.

ಮಂಗಳವಾರ ಶಾರದೆಗೆ ಸಿಂಹವಾಹನಾಲಂಕಾರ ಮಾಡಲಾಗಿತ್ತು. ಚಾಮುಂಡಿಯ ಅಲಂಕಾರದಲ್ಲಿ ಶಾರದ ಭಕ್ಕರನ್ನು ಅನುಗ್ರಹಿಸಿದಳು. ನವರಾತ್ರಿ ಅಂಗವಾಗಿ ಕಳೆದು ಐದು ದಿನಗಳಿಂದ ನಡೆಯುತ್ತಿದ್ದ ಶತಚಂಡಿ ಯಾುಗವು ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು. ಆಯುಧ ಪೂಜೆ, ಮಠದ ಆನೆಗಳಿಗೆ, ಅಶ್ವಗಳಿಗೆ ಪೂಜೆ ನಡೆಯಿತು. ನವರಾತ್ರಿ ಅಂಗವಾಗಿ ನಡೆಯುತ್ತಿದ್ದ ರಾತ್ರಿ ದರ್ಬಾರ್‌ ಸಂಪನ್ನಗೊಂಡಿತು. 9 ದಿನಗಳಿಂದ ಶ್ರೀ ಮಠದ ಆವರಣದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಮಹೋತ್ಸವದಲ್ಲಿ ಬೆಂಗಳೂರಿನ ವಿದ್ವಾನ್‌ ಶ್ರೀ ವಿನಯ್‌ ಶರ್ವಾ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಿತು. ಬೀದಿ ಉತ್ಸವದಲ್ಲಿ ಮರ್ಕಲ್‌ ಗ್ರಾಮಸ್ಥರೊಂದಿಗೆ ವಿವಿಧ ತಂಡಗಳು ಪಾಲ್ಗೊಂಡಿದ್ದವು.

ನವರಾತ್ರಿ ಕೊನೆಯ ದಿನ ಬುಧವಾರ ಗಜಲಕ್ಷ್ಮೇ ಅಲಂಕಾರ ಮಾಡಲಾಗಿತ್ತು. ವಿಜಯದಶಮಿ ದಿನವಾಗಿದ್ದರಿಂದ ವಿಜಯದಶಮಿ, ವಿಜಯೋತ್ಸವ, ಶಮಿಪೂಜೆ ನಡೆಯಿತು. ಮಧ್ಯಾಹ್ನ ಶ್ರೀ ಮಠದಿಂದ ಭವ್ಯ ಮೆರವಣಿಗೆಯಲ್ಲಿ ಹೊರಟ ಅಮ್ಮನವರ ಉತ್ಸವ ಪಟ್ಟಣದ ಕಾಳಿಕಾಂಬಾ ದೇವಾಲಯಕ್ಕೆ ತಲುಪಿತು. ಅಲ್ಲಿ ಬನ್ನಿಪೂಜೆ ನೆರವೇರಿತು. ಬನ್ನಿಪತ್ರೆಯಿಂದ ಕಾಳಿಕಾಂಬೆಗೆ ಹಾಗೂ ಉತ್ಸವ ಮೂರ್ತಿಗೆ ವಿಶೇಷ ಪೂಜೆ ನೆರವೇರಿತು.

ಬೀದಿ ಉತ್ಸವದಲ್ಲಿ ಕೆರೆಕಟ್ಟೆಪಂಚಾಯಿತಿ ವ್ಯಾಪ್ತಿಯ ಭಕ್ತರೊಂದಿಗೆ ವಿವಿಧ ಸಂಘಸಂಸ್ಥೆಗಳು ಪಾಲ್ಗೊಂಡಿದ್ದವು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಜ್ಞಾನೋದಯ ಸ್ಕೂಲ್‌ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದರೊಂದಿಗೆ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡಿತು.

Navratri 2022: ಇಂದಿನಿಂದ ರಾಜ್ಯದೆಲ್ಲೆಡೆ ನವರಾತ್ರಿ ಸಂಭ್ರಮ: ಕೊಲ್ಲೂರು, ಶೃಂಗೇರಿಗಳಲ್ಲಿ ಶರನ್ನವರಾತ್ರಿ

ಮಹಾರಥೋತ್ಸವ, ಅಡ್ಡಪಲ್ಲಕ್ಕಿ:

ಗುರುವಾರ ಬೆಳಗ್ಗೆ ಪಟ್ಟಣದ ರಾಜಬೀದಿಯಲ್ಲಿ ವೈಭವದ ಶ್ರೀ ಶಾರದಾಂಬಾ ಮಹಾರಥೋತ್ಸವ ಹಾಗೂ ಜಗದ್ಗುರುಗಳ ಅಡ್ಡಪಲ್ವಕ್ಕಿ ಉತ್ಸವ ನಡೆಯುತ್ತದೆ. ನವರಾತ್ರಿ ಕೊನೆಯ ಧಾರ್ಮಿಕ ಕಾರ್ಯಕ್ರಮ ಆಗಿರುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳುತ್ತಾರೆ. ನೂರಾರು ವಿಪ್ರೋತ್ತಮರ ವೇದಘೋಷಗಳೊಂದಿಗೆ ನಡೆಯುವ ಈ ಮಹಾರಥೋತ್ಸವದಲ್ಲಿ ಶ್ರೀ ಮಠದ ಲಾಂಛನಗಳೊಂದಿಗೆ ಛತ್ರಿಚಾಮರ, ವಾದ್ಯಮೇಳ, ಶ್ರೀ ಮಠದ ಗಜ, ಅಶ್ವಗಳು, ತಟ್ಟಿರಾಯ, ವಿವಿಧ ಸ್ಥಬ್ದಚಿತ್ರಗಳು, ಸಾಂಸ್ಕೃತಿಕ ಕಲಾ ತಂಡಗಳು ವಿಶೇಷ ಮೆರಗನ್ನು ನೀಡಲಿವೆ. ಮಹಾರಥೋತ್ಸವದ ನಂತರ ಶ್ರೀ ಶಾರದಾಂಬಾ ದೇವಾಲಯದಲ್ಲಿ ಅಡ್ಡಪ್ರದಕ್ಷಿಣೆ ನಡೆಯುತ್ತದೆ. ಬಲಿಮೂರ್ತಿಯನ್ನು ಹೊತ್ತು ಪ್ರದಕ್ಷಿಣೆ ಮಾಡಲಾಗುತ್ತದೆ. ಅನಂತರ ನವರಾತ್ರಿಯ ಹಗಲು ದರ್ಬಾರು ನಡೆಯುತ್ತದೆ.

Follow Us:
Download App:
  • android
  • ios