Asianet Suvarna News Asianet Suvarna News

ಚಿತ್ರದುರ್ಗದಲ್ಲಿ ಶರಣ‌ ಸಂಸ್ಕೃತಿ ಉತ್ಸವ: ರಾಜವಂಶಸ್ಥರಿಂದ ಪ್ರಭಾರ ಪೀಠಾಧ್ಯಕ್ಷರಿಗೆ ಭಕ್ತಿ ಸಮರ್ಪಣೆ

ಮೊದಲ ಬಾರಿಗೆ ಮುರುಘಾ ಶ್ರೀಗಳಿಲ್ಲದೇ ನಡೆದ ಶರಣ‌ ಸಂಸ್ಕೃತಿ ಉತ್ಸವ ಕಾರ್ಯಕ್ರಮ

Sharana Culture Festival Held Chitradurga grg
Author
First Published Oct 5, 2022, 8:32 PM IST

ವರದಿ: ಕಿರಣ್. ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಅ.05): ಮಧ್ಯ ಕರ್ನಾಟಕದ ಜನರ ಪಾಲಿಗೆ ಮಿನಿ ದಸರಾ ಎಂದೇ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ ಪ್ರಖ್ಯಾತಿ ಪಡೆದಿದೆ. ಆದ್ರೆ ಈ ಬಾರಿ ಪೋಕ್ಸೋ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿ ಇರೋದ್ರಿಂದ ಮಠದಲ್ಲಿ ಎಲ್ಲಾ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತಿವೆ. ಇಂದು(ಬುಧವಾರ) ಕೋಟೆಗೆ ತೆರಳಿ ರಾಜವಂಶಸ್ಥರಿಂದ ಪ್ರಭಾರ ಪೀಠಾಧ್ಯಕ್ಷರು ಭಕ್ತಿ ಸಮರ್ಪಣೆ ಸ್ವೀಕರಿಸಿದರು. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಹೀಗೆ ಮುರುಘಾ ಮಠದಿಂದ ಬೈಕ್ ರ್ಯಾಲಿ ಮೂಲಕ ಕೋಟೆಗೆ ಆಗಮಿಸ್ತಿರೋ ಭಕ್ತ ಸಮೂಹ. ಮತ್ತೊಂದೆಡೆ ಕಲ್ಲಿನ ಕೋಟೆಯನ್ನು ಏರುತ್ತಿರುವ ಮಠಾಧೀಶರ ದಂಡು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಬಳಿ.  ಹೌದು, ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಎಷ್ಟು ಕಳೆಗಟ್ಟಿದೆಯೋ ಅದೇ ರೀತಿ ಮಧ್ಯ ಕರ್ನಾಟಕ ಜನರ ಪಾಲಿಗೆ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಮಿನಿ ದಸರಾ ಇದ್ದಂತೆ. ಪ್ರತೀ ವರ್ಷ ಸುಮಾರು 9 ದಿನಗಳ ಕಾಲ ನಡೆಯುತ್ತಿದ್ದ ಕಾರ್ಯಕ್ರಮ ಈ ಬಾರಿ ಕೇವಲ ಮೂರು ದಿನಗಳ ಕಾಲ ಸರಳವಾಗಿ ನಡೆಯುತ್ತಿದೆ. ಅದಕ್ಕೆ ಕಾರಣ ಪೋಕ್ಸೋ ಪ್ರಕರಣದಡಿ ಮುರುಘಾ ಶ್ರೀಗಳು ನ್ಯಾಯಾಂಗ ಬಂಧನದಲ್ಲಿ ಇರೋದು ಎಂದ್ರೆ ತಪ್ಪಾಗಲಿಕ್ಕಿಲ್ಲ. ಪ್ರತೀ ವರ್ಷ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿಯೇ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದ್ರೆ ಈ ಬಾರಿ ಪ್ರಭಾರ ಪೀಠಾಧ್ಯಕ್ಷರಾದ ಹೆಬ್ಬಾಳ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿಗಳು ಅದರ ನೇತೃತ್ವ ವಹಿಸಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇಂದು ಮುರುಘಾ ಮಠದಲ್ಲಿ ನಡೆದ ಸಮಾಹಿಕ ಕಲ್ಯಾಣ ಮಹೋತ್ಸವದಲ್ಲಿ ಕೇವಲ ಒಂದು ಜೋಡಿ ಭಾಗಹಿಸಿದ್ದು ವಿಶೇಷವಾಗಿತ್ತು. ಹಾಗೂ ಕೋಟೆಯಲ್ಲಿ ನಡೆದ ರಾಜವೀರ ಮದಕರಿ ನಾಯಕರ ರಾಜವಂಶಸ್ಥರಿಂದ ಮುರುಘಾ ಮಠದ ಪ್ರಭಾರ‌ ಶ್ರೀಗಳು ಭಕ್ತಿ ಸಮರ್ಪಣೆ ಸ್ವೀಕರಿಸಿದರು.

ಉಡುಪಿ: ಕಡಿಯಾಳಿ ಮಹಿಷ ಮರ್ದಿನಿ ಸನ್ನಿಧಾನದಲ್ಲಿ ಶಮಿ ವೃಕ್ಷ ಪೂಜೆ

ಇನ್ನೂ ಕೋಟೆಯಲ್ಲಿ ನಡೆದ ಭಕ್ತಿ ಸಮರ್ಪಣೆ ಕಾರ್ಯಕ್ರಮದಲ್ಲಿ ಹಲವು ಮಠಾಧೀಶರು ಹಾಗು ಅನೇಕ ಸಮುದಾಯದ ಮುಖಂಡರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ಪ್ರತೀ ವರ್ಷದಂತೆ ಸಾಂಪ್ರದಾಯಿಕವಾಗಿ ರಾಜ ವಂಶಸ್ಥರು ತಮ್ಮ ಗುರುಗಳಿಗೆ ಭಕ್ತಿ ಸಮರ್ಪಣೆ ಸಲ್ಲಿಸಿದರು. ಈ ದೇಶದಲ್ಲಿ ಯಾರಾದ್ರು ರಾಜ ವಂಶಸ್ಥರು ಗುರು ಪರಂಪರೆಗೆ ಗೌರವವಾಗಿ ಭಕ್ತಿ ಸಮರ್ಪಣೆ ಸಲ್ಲಿಸ್ತಾರೆ ಅಂದ್ರೆ ಅದು ನಮ್ಮ ಮದಕರಿ ನಾಯಕ ವಂಶಸ್ಥರು ಮಾತ್ರ. ಭಕ್ತರನ್ನು ರಾಜರನ್ನಾಗಿ ಮಾಡಿಸಿದ ಮಠ ಯಾವುದಾದ್ರು ಇದ್ರೆ ಅದು ಮುರುಘಾ ಮಠ. ಇಂತಹ ಪರಿಸ್ಥಿತಿಯಲ್ಲಿಯೂ ಈ ಸಂಭ್ರಮ ನಡೆದುಕೊಂಡು ಹೋಗ್ತಿದೆ ಎಂದ್ರೆ ಅದಕ್ಕೆ ಕಾರಣ ನಮ್ಮ‌ರಾಜ ವಂಶಸ್ಥರು ಎಂದು ಶರಣ ಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷ ಎಸ್. ಲಿಂಗಮೂರ್ತಿ ಗುಣಗಾನ ಮಾಡಿದರು.

ಒಟ್ಟಾರೆಯಾಗಿ ಇತ್ತ ಮುರುಘಾ ಶ್ರೀಗಳು ನ್ಯಾಯಾಂಗ ಬಂಧನದಲ್ಲಿ ಇದ್ರೆ, ಮತ್ತೊಂದೆಡೆ ಮುರುಘಾ ಮಠದಲ್ಲಿ ಸರಳವಾಗಿ ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಮುರುಘಾ ಶ್ರೀಗಳ ಅನುಪಸ್ಥಿತಿ ಮಠದಲ್ಲಿ ಕಾಡ್ತಿದೆ ಎಂದು ಕೆಲ ಭಕ್ತರು ಮಾತಮಾಡಿದ್ದು ವಿಪರ್ಯಾಸವೆನಿಸಿತ್ತು. 
 

Follow Us:
Download App:
  • android
  • ios