ಆಧ್ಯಾತ್ಮಿಕವಾಗಿ ಅದ್ವೈತದ ವಾದಗಳೇನೇ ಇರಲಿ, ಸಮಾನ ಮನೋಭಾವ, ಸಮಾನ ದೃಷ್ಟಿಕೋನ ಹಾಗೂ ನಾವೆಲ್ಲರೂ ಒಂದೇ ಎಂಬ ಭಾವನೆ ಒಂದು ಸದೃಢ ರಾಷ್ಟ್ರದ ನಿರ್ಮಾಣಕ್ಕೆ ಅತ್ಯಗತ್ಯವಾದ ಸಲಕರಣೆಗಳು. ಅದಿಲ್ಲದೆ ಹೋದಲ್ಲಿ ಯಾವ ರಾಷ್ಟ್ರವೂ ತಲೆಎತ್ತಿ ನಿಲ್ಲಲಾರದು.

ಭಾರತ ಕಂಡ ಮಹಾನ್‌ ದಾರ್ಶನಿಕ ಹಾಗೂ ವೇದಗಳ ತತ್ವಗಳನ್ನು ಭರತ ಭೂಮಿಯಲ್ಲಿ ಪ್ರಚುರಪಡಿಸಿದ ಮಹಾ ಮೇಧಾವಿ ಶ್ರೀ ಜಗದ್ಗುರು ಶಂಕರಾಚಾರ್ಯರು. ಕ್ರಿ.ಶ.788ರಲ್ಲಿ ಕೇರಳದ ಕಾಲಟಿ ಎಂಬಲ್ಲಿ ಜನಿಸಿದ ಶಂಕರರು ಬಾಲ್ಯದಿಂದಲೂ ಆಧ್ಯಾತ್ಮದತ್ತ ಮನಸ್ಸು ಮಾಡಿದ್ದರು. ಪ್ರತಿಭಾವಂತರಾಗಿದ್ದ ಶಂಕರರು ಕೌಟುಂಬಿಕ ಜೀವನ ತೊರೆದು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಗುರಿ ಹುಡುಕಿ ಹೊರಟರು. ನರ್ಮದೆಯ ತೀರದಲ್ಲಿನ ಓಂಕಾರನಾಥ ಎಂಬ ಊರಿಗೆ ಬಂದ ಬಾಲಕ ಶಂಕರನಿಗೆ ಅಲ್ಲಿನ ಗುಹೆಯಲ್ಲಿ ಧ್ಯಾನದಲ್ಲಿ ನಿರತರಾಗಿದ್ದ ಶ್ರೀ ಗೋವಿಂದ ಭಗವತ್ಪಾದರು ಕಂಡರು.

ಗೋವಿಂದಪಾದರು ಬೇರೆ ಯಾರೂ ಅಲ್ಲ, ವ್ಯಾಕರಣ ಶಾಸ್ತ್ರ ಬರೆದ ಯೋಗಿಗಳು. ಪದ್ಮಾಸನದಲ್ಲಿ ಕುಳಿತು ಸಮಾಧಿ ಸ್ಥಿತಿಯಲ್ಲಿರುವ ಗೋವಿಂದಪಾದರ ಕಂಡು ಶಂಕರನಿಗೆ ರೋಮಾಂಚನವಾಯಿತು. ಇವರೇ ನನ್ನ ಪಾಲಿನ ಗುರುಗಳು ಎಂದು ನಿರ್ಧರಿಸಿದ ಬಾಲ ಶಂಕರ ವಿನಮ್ರವಾಗಿ ಗುರುವರ್ಯರೇ ನನ್ನನ್ನು ನಿಮ್ಮ ಶಿಷ್ಯನಾಗಿ ಸ್ವೀಕರಿಸಿ ಎಂದು ಭಕ್ತಿಯಿಂದ ಗೋವಿಂದಪಾದರಲ್ಲಿ ವಿನಂತಿಸಿದ. ಅದಾಗಲೇ ಕಾವಿ ಬಟ್ಟೆಉಟ್ಟು ಕಂಗೊಳಿಸುತ್ತಿದ್ದ ಬಾಲಕ ಶಂಕರನ ಕಂಡ ಗೋವಿಂದಪಾದರಿಗೆ ಆನಂದವಾಯಿತು. ಇಂಥ ಬಾಲಕನಲ್ಲದೆ ಇನ್ಯಾರು ನನಗೆ ಶಿಷ್ಯನಾಗಲು ಸಾಧ್ಯ ಎಂದು ಮನಸ್ಸಿನಲ್ಲಿಯೇ ನಿರ್ಧರಿಸಿದ ನಂತರ ಬಾಲಕ ಶಂಕರನನ್ನು ತಮ್ಮ ಶಿಷ್ಯನಾಗಿ ಪಡೆದರು.

ಒಂದೆಡೆ ರಂಜಾನ್ ಪ್ರಾರ್ಥನೆ, ಇನ್ನೊಂದೆಡೆ ಬಸವಣ್ಣನ ಸ್ಮರಣೆ, ಭಾವೈಕ್ಯತೆಗೆ ಸಾಕ್ಷಿಯಾದ ಕರ್ನಾಟಕ

8ನೇ ವಯಸ್ಸಿಗೇ ಸನ್ಯಾಸ

ಅದೊಂದು ದಿನ ಗೋವಿಂದಪಾದರು ಒಳ್ಳೆಯ ಸಮಯ ನೋಡಿ ಶಂಕರರಿಗೆ ಶಾಸೊತ್ರೕಕ್ತವಾಗಿ ಸನ್ಯಾಸ ದೀಕ್ಷೆಯ ನೀಡಿ, ಬಾಲಕ ಶಂಕರನಿಗೆ ಶಂಕರಾಚಾರ್ಯ ಎಂದು ನಾಮಕರಣ ಮಾಡಿದರು. ಅಂದಿನಿಂದ ಶಂಕರರು ಶಂಕರಾಚಾರ್ಯರಾದರು. ಸುಮಾರು ಎಂಟನೇ ವಯಸ್ಸಿಗೆ ಸನ್ಯಾಸಾಶ್ರಮ ಸ್ವೀಕರಿಸಿದ ಶಂಕರರು ನಿರಂತರ ವೇದಾಧ್ಯಯನ ಮತ್ತು ಶಾಸ್ತ್ರಾಭ್ಯಾಸಗಳಿಂದ ಅಲ್ಪಾವಧಿಯಲ್ಲೇ ಅದ್ಭುತ ವಿದ್ವತ್‌ ಸಾಧಿಸಿದ್ದರು.

12-13ನೇ ವಯಸ್ಸಿನಲ್ಲೇ ಗುರುಗಳ ಮೇಲಿನ ಪ್ರೀತಿಗಾಗಿ ವಿವೇಕ ಚೂಡಾಮಣಿ ಎಂಬ ಬೃಹತ್‌ ಗ್ರಂಥ ರಚಿಸಿದರು. ಅವೈದಿಕ ಮತಗಳ ಧೂರ್ತತೆಯಿಂದ ನಲುಗಿದ್ದ ವೈದಿಕ ಸಾಮ್ರಾಜ್ಯವನ್ನು ಮತ್ತೆ ಪುನರುತ್ಥಾನಗೊಳಿಸಲು ಗುರುಗಳ ಆದೇಶದಂತೆ ಶಂಕರರು ತಮ್ಮ ಶಿಷ್ಯವೃಂದ ಕಟ್ಟಿದೇಶಪರ್ಯಟನೆಗೆ ಮುಂದಾದರು. ನಿಜವಾಗಿಯೂ ಅದೊಂದು ಅದ್ಭುತ ಮತ್ತು ವಿಶಾಲವಾದ ಪರಿಕಲ್ಪನೆ ಇಟ್ಟು ಹೊರಟ ಜೈತ್ರಯಾತ್ರೆ ಎನ್ನಬಹುದು.

ಚಾಂಡಾಲನಿಂದ ಮಾನವತ್ವದ ಪಾಠ

ಮೊದಲು ಉತ್ತರದ ಕಾಶಿಗೆ ಹೊರಟ ಶಂಕರರು ಅಲ್ಲಿನ ಗಂಗಾನದಿಯಲ್ಲಿ ಸ್ನಾನ ಮಾಡಲು ತಮ್ಮ ಶಿಷ್ಯರೊಡನೆ ಹೋಗುತ್ತಿದ್ದಾಗ ಎದುರುಗಡೆ ಒಬ್ಬ ಚಾಂಡಾಲ ನಾಲ್ಕು ನಾಯಿಗಳನ್ನು ಹಿಡಿದು ಅವರ ಮುಂದೆ ಬರುತ್ತಿದ್ದನು. ತುಂಬಾ ಕೊಳಕು ದೇಹ ಮತ್ತು ಅಷ್ಟೇ ಕೊಳಕು ಬಟ್ಟೆಧರಿಸಿದ್ದ ಚಾಂಡಾಲನ ನೋಡಿದ ಶಂಕರರು, ಚಾಂಡಾಲ ನೀನು ನಿನ್ನ ನಾಯಿಗಳೊಂದಿಗೆ ಪಕ್ಕಕ್ಕೆ ಸರಿ ಎಂದು ಏರು ಧ್ವನಿಯಲ್ಲಿ ಹೇಳಿದರು. ಆಗ ಚಾಂಡಾಲನು ಆಚಾರ್ಯರೇ, ನೀವು ಯಾರನ್ನು ಪಕ್ಕಕ್ಕೆ ಹೋಗು ಎಂದು ಹೇಳುತ್ತಿರುವಿರಿ. ಆತ್ಮವನ್ನೇ? ಅಥವಾ ದೇಹವನ್ನೇ ಎಂದು ಶಂಕರರನ್ನು ಪ್ರಶ್ನಿಸಿದ.

ತಪ್ಪು ಸಮಯದಲ್ಲಿ ಈ ಕಾರ್ಯಗಳ ಮಾಡಿದರೆ ಭಾರೀ ನಷ್ಟ!

ನಂತರ ಚಾಂಡಾಲ ತನ್ನ ಮಾತನ್ನು ಮುಂದುವರಿಸುತ್ತಾ, ಎಲ್ಲರ ಶರೀರದಲ್ಲಿ ಇರುವ ಆತ್ಮ ಒಂದೇ. ಈ ದೇಹವು ನಿತ್ಯವಲ್ಲ, ನನ್ನ ಹಾಗೂ ನಿಮ್ಮ ದೇಹದಲ್ಲಿ ಯಾವ ವ್ಯತ್ಯಾಸವಿದೆ? ನೀವು ಎಲ್ಲವನ್ನೂ ತಿಳಿದಿರುವ ಜ್ಞಾನಿಗಳು ವ್ಯತ್ಯಾಸವನ್ನು ಹೇಗೆ ಕಾಣುವಿರಿ? ನೋಡಿ ಸೂರ್ಯನು ಗಂಗಾನದಿಯಲ್ಲೂ ಕಾಣುವನು, ಕೊಳಚೆ ನೀರಿನಲ್ಲೂ ಕಾಣುವನು. ಇದರಿಂದ ಸೂರ್ಯನಿಗೆ ಯಾವ ದೋಷವೂ ಆಗುವುದಿಲ್ಲವಲ್ಲ ಎಂದು ಚಾಂಡಾಲ ಶಂಕರರಿಗೆ ಮಾನವತ್ವದ ಪಾಠ ಹೇಳಿದನು.

ಚಾಂಡಾಲನ ಮಾತುಗಳನ್ನು ಕೇಳಿದ ಶಂಕರಾಚಾರ್ಯರಿಗೆ ಆ ಕ್ಷಣವೇ ಸತ್ಯದ ಅರಿವಾಯಿತು. ಚಾಂಡಾಲನನ್ನು ಪಕ್ಕಕ್ಕೆ ಹೋಗು ಎಂದು ಹೇಳಿ ತಾವು ಮಾಡಿದ ತಪ್ಪಿನ ಅರಿವು ಆಯಿತು. ಶಂಕರಾಚಾರ್ಯರು ಎಲ್ಲ ಜೀವಿಗಳಲ್ಲಿಯೂ ಸಮಾನ ಚೈತನ್ಯವಿದೆ ಎಂದು ತಿಳಿದಿದ್ದರು. ಅವರಿಗೆ ಅದು ಚಾಂಡಾಲನಿಂದ ಅನುಭವವಾಯಿತು. ತಕ್ಷಣ ಆತನ ಪಾದಗಳಿಗೆ ನಮಸ್ಕರಿಸಿದರು.

ನಂತರ ಶಂಕರಾಚಾರ್ಯರು ಚಾಂಡಾಲನಿಗೆ ‘ನೀನು ನನ್ನ ತಪ್ಪು ತಿಳಿವಳಿಕೆಯ ಹೋಗಲಾಡಿಸಿದೆ. ಹಾಗಾಗಿ ನೀನೇ ನನ್ನ ಗುರು. ಇಂದು ನಾನು ಕಲಿತ ವಿದ್ಯೆಯ ಅನುಭವವಾಯಿತು’ ಎಂದು ಹೇಳಿದರು. ಯಾರು ತಿಳಿವಳಿಕೆ ಹೇಳುತ್ತಾರೋ, ಯಾರು ಅಜ್ಞಾನ ಹೋಗಲಾಡಿಸುತ್ತಾರೋ ಅವರೇ ನಿಜವಾದ ಗುರುಗಳು ಎಂಬುದು ಶಂಕರಾಚಾರ್ಯರು ಕಂಡ ಸತ್ಯ. ಒಬ್ಬ ವ್ಯಕ್ತಿಗೆ ರೂಪ, ವಯಸ್ಸು ಹಾಗೂ ವೇಷಭೂಷಣ ಮುಖ್ಯವಲ್ಲ. ಅವನ ಅನುಭವ, ಜ್ಞಾನ ಮತ್ತು ಅವನಲ್ಲಿನ ಒಳ್ಳೆಯ ಆಲೋಚನೆಗಳು ಸಹ ಮುಖ್ಯ ಎಂಬುದು ಶಂಕರಾಚಾರ್ಯರ ನಿಲುವಾಗಿತ್ತು. ಅದನ್ನು ಅವರು ಚಾಂಡಾಲನಲ್ಲಿ ಕಂಡರು.

ಶಂಕರಾಚಾರ್ಯರ ದೇಶ ಪರ್ಯಟನೆ

ಶಂಕರಾಚಾರ್ಯರು ದಕ್ಷಿಣದಿಂದ ಉತ್ತರದವರೆಗೂ ಹಾಗೂ ಪೂರ್ವದಿಂದ ಪಶ್ಚಿಮದವರೆಗೂ ಎಲ್ಲೆಡೆ ಸಂಚರಿಸಿ ವೇದಗಳ ಸತ್ಯ, ಅವುಗಳ ಸಾರ್ವಕಾಲಿಕ ಶ್ರೇಷ್ಠತೆಗಳನ್ನು ಜನರಿಗೆ ತಿಳಿಸಿ ಅವರಲ್ಲಿ ಜಾಗೃತಿಗೆ ಮುಂದಾದರು. ಶಂಕರರ ಉಪದೇಶಗಳನ್ನು ಕೇಳಲು ಕಿಕ್ಕಿರಿದು ಜನಸಮೂಹ ಸೇರುತ್ತಿದ್ದದ್ದು ವಿಶೇಷವಾಗಿತ್ತು. ಕಾರಣ ಅವರ ಮಾತುಗಳಲ್ಲಿ ಜೀವನ ಸಾಗಿಸುವುದಕ್ಕೆ ಬೇಕಾದ ಸಂದೇಶಗಳಿರುತ್ತಿದ್ದವು. ಹೀಗಾಗಿ ಶಂಕರರ ಅನುಯಾಯಿಗಳು ದಿನೇ ದಿನೇ ಹೆಚ್ಚುತ್ತಾ ಹೋದರು.

ಹೀಗೆ ದೇಶ ಪರ್ಯಟನೆ ಮಾಡುತ್ತಾ ಶಂಕರಾಚಾರ್ಯರು ಪ್ರಯಾಗ, ಹರಿದ್ವಾರ, ಹೃಷಿಕೇಶ, ದೇವಪ್ರಯಾಗ, ವಿಷ್ಣು ಪ್ರಯಾಗಗಳ ಮೂಲಕ ಬದರಿ ಕ್ಷೇತ್ರಕ್ಕೆ ಬಂದರು. ಅಲ್ಲಿ ಪ್ರಸಿದ್ಧವಾದ ಬದರಿನಾರಾಯಣನ ದೇವಸ್ಥಾನವಿದೆ. ಶಂಕರಾಚಾರ್ಯರು ಅಲ್ಲಿಗೆ ಬಂದಾಗ ದೇವಸ್ಥಾನದಲ್ಲಿ ದೇವರ ವಿಗ್ರಹವೇ ಇರಲಿಲ್ಲ. ಹೊರದೇಶದ ಶತ್ರುಗಳಿಗೆ ಹೆದರಿ ಅಲ್ಲಿನ ಜನರು ನಾರಾಯಣನ ವಿಗ್ರಹವನ್ನು ಹತ್ತಿರದಲ್ಲೇ ಇದ್ದ ಅಲಕನಂದಾ ನದಿಯಲ್ಲಿ ಹಾಕಿಬಿಟ್ಟಿದ್ದರು. ಈ ವಿಚಾರವನ್ನು ಅಲ್ಲಿನ ಜನರಿಂದ ತಿಳಿದ ಶಂಕರಾಚಾರ್ಯರು ನದಿಯಲ್ಲಿದ್ದ ವಿಗ್ರಹ ಹುಡುಕಿ ತಂದು ಪುನಃ ನಾರಾಯಣನ ನಿರಂತರ ಪೂಜೆಗೆ ವ್ಯವಸ್ಥೆ ಮಾಡಿದರು. ಅಂದಿನಿಂದ ಇಂದಿನವರೆಗೂ ಜನರು ಅದೇ ವಿಗ್ರಹವನ್ನು ಭಕ್ತಿಯಿಂದ ಪೂಜಿಸುತ್ತಿದ್ದಾರೆ. ಅದರಿಂದ ಇಂದಿಗೂ ಅಲ್ಲಿಗೆ ಹೋಗುವ ಪ್ರತಿಯೊಬ್ಬ ಭಕ್ತನೂ ಶಂಕರಾಚಾರ್ಯರನ್ನು ನೆನೆಯುತ್ತಾರೆ.

Chanakya Niti:ಚಾಣಕ್ಯ ಹೇಳಿದ ಈ ನಾಲ್ಕು ವಿಷಯ ಪಾಲಿಸಿದರೆ ಎಂದೂ ಹಣದ ಕೊರತೆ ಇರದು!

ರಾಷ್ಟ್ರೀಯತೆಯ ಜನಕ ಶಂಕರ

ಶಂಕರಾಚಾರ್ಯರು ದೇಶವನ್ನು ಸುತ್ತಿದ ಪರಿ ನೋಡಿದರೇ ಅದೊಂದು ದೇಶ ಬೆಸೆಯುವ ಬಂಧವೇನೋ ಅನ್ನಿಸುವುದು ನಿಜ. ಇದಕ್ಕೆ ಅವರು ಸ್ಥಾಪಿಸಿದ ನಾಲ್ಕು ದಿಕ್ಕುಗಳಲ್ಲಿನ ನಾಲ್ಕು ಪೀಠಗಳೇ ಸಾಕ್ಷಿ. ದೇಶದ ಎಲ್ಲಾ ಭಾಗಗಳು ಒಂದೇ ಸೂತ್ರದೊಳಗೆ ಬರಲೆಂಬ ಭಾವನೆಯಿಂದಲೇ ಈ ನಾಲ್ಕು ಪೀಠಗಳು ಸ್ಥಾಪಿತವಾಗಿದ್ದವೆಂದು ಅವರ ಭಕ್ತರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆಧ್ಯಾತ್ಮಿಕವಾಗಿ ಅದ್ವೈತದ ವಾದಗಳೇನೇ ಇರಲಿ, ಸಮಾನ ಮನೋಭಾವ, ಸಮಾನ ದೃಷ್ಟಿಕೋನ ಹಾಗೂ ನಾವೆಲ್ಲರೂ ಒಂದೇ ಎಂಬ ಭಾವನೆ ಒಂದು ಸದೃಢ ರಾಷ್ಟ್ರದ ನಿರ್ಮಾಣಕ್ಕೆ ಅತ್ಯಗತ್ಯವಾದ ಸಲಕರಣೆಗಳು. ಅದಿಲ್ಲದೆ ಹೋದಲ್ಲಿ ಯಾವ ರಾಷ್ಟ್ರವೂ ತಲೆಎತ್ತಿ ನಿಲ್ಲಲಾರದು. ಹೀಗೆ ಭಾರತದ ಆಂತರ್ಯದಲ್ಲಿ ಏಕತೆಯ ಅಂತಃಸತ್ವ ತುಂಬಿದ ಶ್ರೀ ಶಂಕರಾಚಾರ್ಯರು ರಾಷ್ಟ್ರೀಯತೆಯ ಜನಕರಲ್ಲೊಬ್ಬರು.

ಇಂದು ದೇಶ, ರಾಜ್ಯ, ಭಾಷೆ, ಧರ್ಮ ಇವುಗಳ ನೆಪದಲ್ಲಿ ನಮ್ಮಲ್ಲಿ ಸಾಕಷ್ಟುಭಿನ್ನಾಭಿಪ್ರಾಯಗಳಿರಬಹುದು ಮತ್ತು ಇವೆ. ಆದರೆ ಅವೆಲ್ಲವನ್ನೂ ಮೀರಿದ ಒಂದು ಮಾನಸಿಕವಾದ ಅದ್ವೈತ ಭಾವ ನಮ್ಮಲ್ಲಿದೆ. ದೇಶದ ಅಖಂಡತೆಗೆ ಏನಾದರೂ ಸ್ವಲ್ಪ ಧಕ್ಕೆ ಉಂಟಾದರೆ ನಮ್ಮ ಮುನಿಸುಗಳನ್ನು ಪಕ್ಕಕ್ಕಿಟ್ಟು ಎಲ್ಲರೂ ಒಟ್ಟಾಗಿ ಸೇರಿ ಹೋರಾಡುತ್ತೇವಲ್ಲ, ಆಗೆಲ್ಲಾ ಆ ಸುಪ್ತ ಐಕ್ಯತೆಯ ಭಾವ ನಮ್ಮಲ್ಲಿ ಜಾಗೃತವಾಗಿರುತ್ತೆ. ಅಂತಹ ಜಾಗೃತಿ ನಮ್ಮಲ್ಲಿ ಬಿತ್ತಿದವರು ಜಗದ್ಗುರು ಶಂಕರಾಚಾರ್ಯರು. ಇಂದು ಇಂತಹ ಮಹಾ ಸಂತ, ದಾರ್ಶನಿಕ ಶ್ರೀ ಶಂಕರಾಚಾರ್ಯರ ಜಯಂತಿ. ಈ ಸಂದರ್ಭದಲ್ಲಿ ದೇಶದ ಐಕ್ಯತೆ ಹಾಗೂ ಭಾರತದ ಆಧ್ಯಾತ್ಮಿಕ ಪುನರುತ್ಥಾನಕ್ಕಾಗಿ ಅಹರ್ನಿಶಿ ಶ್ರಮಿಸಿದ ಶಂಕರರಿಗೆ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸೋಣ.

-ಮಾರುತೀಶ್‌ ಅಗ್ರಾರ, ತುಮಕೂರು