ಆಡೋ ವಯಸ್ಸಿಗೆ ಅಧ್ಯಾತ್ಮದತ್ತ ಒಲವು: ಪೋಷಕರೊಂದಿಗೆ ಸನ್ಯಾಸತ್ವ ಸ್ವೀಕರಿಸಲಿರುವ 9 ವರ್ಷದ ಪೋರ
ಬಹುತೇಕ ಪೋಷಕರು ತಮ್ಮ ಮಗುವಿನ ಬಾಲ್ಯದ ಫೋಟೋ ಶೂಟ್ ಮಾಡಿಸಿ ಆ ನೆನಪನ್ನು ನಾಜುಕಾಗಿ ಎತ್ತಿಡುತ್ತ ಮಕ್ಕಳ ಏಳ್ಗೆಯ ಬಗ್ಗೆ ನೂರು ಕನಸು ಕಾಣಲು ಮುಂದಾದರೆ ಡೊಂಬಿವಿಲಿಯ ಜಿಗರ್ ಶಾ ಮತ್ತು ಕಿರಣ್ ಷಾ ಅವರು ತಮ್ಮ ಮಗುವನ್ನು ಅಧ್ಮಾತ್ಮ ಲೋಕದಲ್ಲಿ ಉನ್ನತಿಗೇರಿಸಲು ಮೈಲಿಗಲ್ಲು ಸೃಷ್ಟಿಸಿದ್ದಾರೆ.
ಮುಂಬೈ: ಮುಂಬೈನ ಡೊಂಬಿವಿಲಿಯಲ್ಲಿರುವ ಜೈನ ಸಮುದಾಯವೊಂದು ಲೌಕಿಕ ಜೀವನವನ್ನು ತೊರೆದು ಆಧ್ಯಾತ್ಮಿಕ ಸಾಧನೆ ಮಾಡಿ ಮೋಕ್ಷ ಪಡೆಯುವುದಕ್ಕಾಗಿ ಸನ್ಯಾಸ ದೀಕ್ಷೆ ಪಡೆಯಲು ಮುಂದಾಗಿದೆ. ಇದಕ್ಕಾಗಿ ಅದ್ದೂರಿ ಸಿದ್ಧತೆಯನ್ನು ಜೈನ ಸಮುದಾಯವು ನಡೆಸಿದೆ. ಒಂದೇ ಕುಟುಂಬದ ಮೂವರು ಸೇರಿದಂತೆ ಐವರು ಜಂಟಿಯಾಗಿ ಜೈನ ಸನ್ಯಾಸಿಯಾಗಿ ದೀಕ್ಷೆ ಪಡೆಯಲಿದ್ದಾರೆ. ಈ ಲೌಕಿಕ ಜಗತ್ತನ್ನೂ ತೊರೆಯಲು ಸಿದ್ಧವಾಗಿರುವ ಡೊಂಬಿವಿಲಿಯ ಕುಟುಂಬದಲ್ಲಿ 9 ವರ್ಷದ ಮಗುವೂ ಕೂಡ ಸೇರಿದೆ.
ಬಹುತೇಕ ಪೋಷಕರು ತಮ್ಮ ಮಗುವಿನ ಬಾಲ್ಯದ ಫೋಟೋ ಶೂಟ್ ಮಾಡಿಸಿ ಆ ನೆನಪನ್ನು ನಾಜುಕಾಗಿ ಎತ್ತಿಡುತ್ತ ಮಕ್ಕಳ ಏಳ್ಗೆಯ ಬಗ್ಗೆ ನೂರು ಕನಸು ಕಾಣಲು ಮುಂದಾದರೆ ಡೊಂಬಿವಿಲಿಯ ಜಿಗರ್ ಶಾ ಮತ್ತು ಕಿರಣ್ ಷಾ ಅವರು ತಮ್ಮ ಮಗುವನ್ನು ಆಧ್ಮಾತ್ಮ ಲೋಕದಲ್ಲಿ ಉನ್ನತಿಗೇರಿಸಲು ಮೈಲಿಗಲ್ಲು ಸೃಷ್ಟಿಸಿದ್ದಾರೆ. ತಮ್ಮ 9 ವರ್ಷದ ಮಗ ಸಂಯಮ್‌ನನ್ನು ಹೆಸರಿಗೆ ತಕ್ಕಂತೆ ಸಂಯಮದಿಂದ ಇರುವ ಸನ್ಯಾಸಿ ಮಾಡಲು ನಿರ್ಧರಿಸಿದ್ದಾರೆ. ಸಂಯಮ್‌ನ್ನು ತೀರ್ಥ ಕ್ಷೇತ್ರಗಳಿಗೆ ಕರೆದೊಯ್ದು ದಿನವೂ ಆತ ದೇವರ ಧ್ಯಾನದಲ್ಲಿ ತೊಡಗುವಂತೆ ಬೆಳೆಯುತ್ತಾ ಬೆಳೆಯುತ್ತಾ ಉಪವಾಸ ಮಾಡುವಂತೆ ಬೆಳೆಸಿ ಕೇವಲ 8ನೇ ವರ್ಷಕ್ಕೆ ಆತ ಸ್ವಯಂ ನಿರ್ಲಿಪ್ತನಾಗುವಂತೆ ಮಾಡಿದ್ದು ಆತನ ಆಧ್ಯಾತ್ಮದ ಪ್ರಯಣಕ್ಕೆ ಪೋಷಕರು ದೊಡ್ಡ ಹೆಜ್ಜೆ ಹಾಕಿ ಕೊಟ್ಟಿದ್ದಾರೆ.
Sallekhana: ನಿರಾಹಾರಿಗಳಾಗಿ ಸಾವು ಬರಮಾಡಿಕೊಳ್ಳುವ ಜೈನ ಸಂತರು… ಏನಿದು ಸಂಪ್ರದಾಯ?
2020ರಲ್ಲಿ ಲಾಕ್‌ಡೌನ್ ಸಮಯದಲ್ಲಿ ಜೈನ ಸನ್ಯಾಸಿ ಜಗತ್ಶೇಖರ ವಿಜಯ ಮಹಾರಾಜ್ ಅವರು ನೀಡುತ್ತಿದ್ದ ಧರ್ಮೋಪದೇಶಕ್ಕೆ ಈ ಕುಟುಂಬ ಹಾಜರಾಗುತ್ತಿತ್ತು. ಕಾಲಾನಂತರದಲ್ಲಿ ಸಂಯಮ್ ಕೂಡ ಆಚಾರ್ಯರು ನಡೆಸಿದ ಧಾರ್ಮಿಕ ಆಚರಣೆಗಳಲ್ಲಿ ತುಸು ಹೆಚ್ಚೇ ಎಂಬಷ್ಟು ಆಸಕ್ತಿಯಿಂದ ತೊಡಗಿಸಿಕೊಂಡಿದ್ದ, ಇದು ಬಾಲಕ ದೀಕ್ಷೆ ಪಡೆಯುವ ಬಯಕೆಯನ್ನು ಹೊಂದಿದ್ದಾನೆ ಎಂಬ ಸುಳಿವನ್ನು ಪೋಷಕರಿಗೆ ನೀಡಿತ್ತು.
ಈ ಬಗ್ಗೆ ಮಾತನಾಡಿದ ಸಂಯಮ್‌ನ ತಂದೆ ಜಿಗರ್ ಷಾ, ನಾನು ಮತ್ತು ಪತ್ನಿ ಕಿರಣ್ ಮದುವೆಯಾಗಿ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದರೂ, ನಾವು ಯಾವಾಗಲೂ ಸಂಯಂನನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಒಂದು ವೇಳೆ ಭವಿಷ್ಯದಲ್ಲಿ ಸಂಯಂ ಸನ್ಯಾಸಿಯಾಗಲೂ ಬಯಸಿದರೆ ಆತನ ಆಧ್ಯಾತ್ಮಿಕ ಹಾದಿಗೆ ನಾವು ಅಡ್ಡಿ ಆಗುವುದಿಲ್ಲ ಎಂದು ನಿರ್ಧರಿಸಿದೆವು.
ನಮ್ಮ ಊಹೆಯಂತೆಯೇ ಸಯಂ, ಸನ್ಯಾಸಿಯ ಧರ್ಮೋಪದೇಶಕ್ಕೆ ಹಾಜರಾದ ನಂತರ ದೀಕ್ಷೆ ಪಡೆಯುವ ಆಸೆ ವ್ಯಕ್ತಪಡಿಸಿದ ಅದಕ್ಕೆ ಪೋಷಕರು ಕೂಡ ಒಪ್ಪಿದ್ದು, ಮಗುವಿನ ದೀಕ್ಷೆಯ ನಂತರ ತಾವು ಕೂಡ ಈ ಜಗತ್ತನ್ನು ತ್ಯಜಿಸಲು ನಿರ್ಧರಿಸಿದರು. ಆದರೆ ಮಗುವಿನ ಬೇಡಿಕೆಯಂತೆ ಈಗ ಇಡೀ ಕುಟುಂಬವೇ ಒಂದೇ ದಿನ ಜೈನ ದೀಕ್ಷೆ ಪಡೆಯಲು ಮುಂದಾಗಿದ್ದಾರೆ.
ಸಲ್ಲೇಖನ ಮೂಲಕ ಇಬ್ಬರು ಮುನಿಗಳು ದೇಹತ್ಯಾಗ
ಆರಂಭದಲ್ಲಿ ನಾನು ಸಂಯಂ ಜೈನ ದೀಕ್ಷೆ ಪಡೆಯುವುದಕ್ಕೆ ಒಪ್ಪಲಿಲ್ಲ, ಆತ ಇನ್ನೂ ಚಿಕ್ಕವ ಎಂದು ಭಾವಿಸಿದ್ದೆವು. ಆದರೆ ಮಹಾರಾಜ್ ಸಾಹೇಬರು ನಮಗೆ ಉತ್ತಮ ಮಾರ್ಗದರ್ಶನ ನೀಡಿದರು ಮತ್ತು ಕಠಿಣವಾದ ಹೆಜ್ಜೆ ಇಡಲು ನಮಗೆ ಸ್ಫೂರ್ತಿ ನೀಡಿದರು. ಇತ್ತ ನಾನು ಕೆಲಸವನ್ನು ಮಾಡುತ್ತಿದ್ದು ಸಾಲ ಮರುಪಾವತಿ ಮಾಡುವ ಜವಾಬ್ದಾರಿ ಇತ್ತು. ಅದೆಲ್ಲವನ್ನು ನಾನು ಮಹಾರಾಜ ಸಾಹೇಬರ ಮಾರ್ಗದರ್ಶನದಂತೆ ಮಾಡಿ ಮುಗಿಸಿದೆ ಹಾಗೂ ಈಗ ನನ್ನ ಕುಟುಂಬದೊಂದಿಗೆ ನನ್ನ ಮಗ ಸಂಯಮ್‌ನ ಹಾದಿಯನ್ನೇ ಹಿಡಿಯುತ್ತಿದ್ದೇನೆ ಎಂದು ಶಾ ಹೇಳಿದರು.
ಈ ಹಿನ್ನೆಲೆಯಲ್ಲಿ ಏಪ್ರಿಲ್ 15 ರಂದು ಭುವನಭಾನು ಸಮುದಾಯದ ವಿಜಯರಾಜೇಂದ್ರ ಸೂರಿಶ್ವರ್ಜಿಯವರಿಂದ ಕುಟುಂಬವು ದೀಕ್ಷೆ ಪಡೆಯಲಿದೆ. ಸಂಪೂರ್ಣ ಲೌಕಿಕ ಜಗತ್ತಿನಿಂದ ಹೊರ ಬರುವ ಈ ಕುಟುಂಬ ಸಂಯಮ್ ಮತ್ತು ಜಿಗರ್ ಅವರು ಪೂಜ್ಯ ಅಜಿತ ಶೇಖರ್ ಸುರೀಶ್ವರ್ಜಿಯವರ ಶಿಷ್ಯರಾದ ಕೃಪಾಶೇಖರ್ವಿಜಯ್ಜಿ ಮಹಾರಾಜ್ ಅವರ ಶಿಷ್ಯರಾಗಿ ಆಧ್ಮಾತ್ಮದಲ್ಲಿ ಸಾಧನೆ ಮಾಡಲಿದ್ದಾರೆ. ಆದರೆ ಇವರ ಸಂಯಮ್ ಅವರ ತಾಯಿ ಕಿರಣ್ ಷಾ ಅವರು ಸನ್ಯಾಸಿನಿ ಹಿತಾಗ್ನ್ಯಾದ್ ರಾಶ್ರಿಯವರ ಶಿಷ್ಯರಾಗುತ್ತಾರೆ. ಇವರ ಜೊತೆಗೆ ಡೊಂಬಿವಲಿಯ 30 ವರ್ಷದ ಸ್ವೀಟಿ ಶಾ ಮತ್ತು ಕಚ್‌ನ 18 ವರ್ಷದ ಕ್ರಿಶಾ ಮೆಹ್ತಾ ಕೂಡ ಅದೇ ದಿನ ಲೌಕಿಕ ಬದುಕನ್ನು ತ್ಯಜಿಸಿ ಆಧ್ಯಾತ್ಮದ ಕಠಿಣ ಹಾದಿಯಲ್ಲಿ ನಡೆಯಲಿದ್ದಾರೆ.
ಡೊಂಬಿವಲಿಯ ಪಾಂಡುರಂಗವಾಡಿಯಲ್ಲಿರುವ ಶ್ರೇಯಸ್ಕರ್ ಪಾರ್ಶ್ವಭಕ್ತಿ ಜೈನ ಸಂಘವು ಈ ಐವರ ದೀಕ್ಷಾ ಸಮಾರಂಭವನ್ನು ಆಯೋಜಿಸಲಿದ್ದು, ಐತಿಹಾಸಿಕ ದೀಕ್ಷಾ ಸಮಾರಂಭವನ್ನು ಆಚರಿಸಲು ಈಗಾಗಲೇ ಭವ್ಯವಾದ ಸಿದ್ಧತೆಗಳು ನಡೆಯುತ್ತಿವೆ. ಇತರ ಅನೇಕ ಜೈನ ಸಂಘಗಳು ಈ ಕುಟುಂಬಕ್ಕೆ ಸಮಾರಂಭವನ್ನು ಆಯೋಜಿಸಲು ಬಯಸಿದ್ದವು ಆದರೆ ನಾವು ಡೊಂಬಿವಲಿಯಲ್ಲಿ ದೀಕ್ಷೆಯನ್ನು ನಡೆಸಲು ಅಚಲವಾಗಿದ್ದೇವೆ. ಡೊಂಬಿವಲಿಯಲ್ಲಿ ಮೊದಲ ಬಾರಿಗೆ ಐದು ಜನರು ದೀಕ್ಷೆ ಸ್ವೀಕರಿಸುವುದರಿಂದ ಇದು ಐತಿಹಾಸಿಕ ದಿನವಾಗಲಿದೆ ಮತ್ತು ಇಡೀ ಕುಟುಂಬವು ಈ ಹಾದಿಯಲ್ಲಿ ಸಾಗಲಿದೆ, ಇದು ಡೊಂಬಿವಲಿಗೆ ವಿಶೇಷವಾಗಿರಲಿದೆ ಎಂದು ಸಂಘದ ಅಧ್ಯಕ್ಷ ಜಯೇಶ್ ಮೆಹ್ತಾ ಹೇಳಿದ್ದಾರೆ.