ಕೇರಳ ದೇಗುಲದ ಜಾತ್ರೆಯಲ್ಲಿ ರೋಬೋಟ್‌ ಆನೆಯ ಬಳಕೆ: ದೇಶದಲ್ಲೇ ಮೊದಲು ವಿದ್ಯುಚ್ಛಾಲಿತ ಆನೆ ಮೆರವಣಿಗೆ

ಕೇರಳ ಪೂರಂ ಉತ್ಸವಕ್ಕೆ ರೊಬೋಟಿಕ್‌ ಆನೆ ಬಳಕೆ ಮಾಡಲಾಗುತ್ತಿದೆ. ಈ ವಿದ್ಯುತ್‌ಚಾಲಿತ ಆನೆಯನ್ನು ಇಂದು ಉತ್ಸವಕ್ಕೆ ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದ್ದು, ಇದು ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದರೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

robot elephant to serve in kerala temple ash

ತ್ರಿಶ್ಶೂರು (ಫೆಬ್ರವರಿ 26, 2023): ಕೇರಳದ ವಿವಿಧ ದೇಗುಲಗಳಲ್ಲಿ ಈಗ ಪೂರಂ ಉತ್ಸವದ ಸೀಸನ್‌. ಈ ಸಂಭ್ರಮಾಚರಣೆಯಲ್ಲಿ ಅಲಂಕೃತ ಆನೆಯ ಮೆರವಣಿಗೆಯೇ ಪ್ರಧಾನ ಆಕರ್ಷಣೆ. ಇದಕ್ಕಾಗಿ ಸೆರೆ ಹಿಡಿಯಲ್ಪಟ್ಟಆನೆಗಳನ್ನು ಬಳಸಿಕೊಳ್ಳುವುದು, ಅದಕ್ಕೆ ಪ್ರಾಣಿ ಪ್ರಿಯರು ವಿರೋಧ ವ್ಯಕ್ತಪಡಿಸುವುದು ಮಾಮೂಲಿ. ಆದರೆ ಇದೇ ಮೊದಲ ಬಾರಿಗೆ ತ್ರಿಶ್ಶೂರು ಜಿಲ್ಲೆಯ ಇರಿಂಜಲಕ್ಕುಡ ಗ್ರಾಮದ ದೇಗುಲವೊಂದರಲ್ಲಿ ಪ್ರಾಣಿ ಹಿಂಸೆ ತಪ್ಪಿಸಲು ರೊಬೋಟಿಕ್‌ ಆನೆಯನ್ನು ಉತ್ಸವಕ್ಕೆ ಬಳಸಲಾಗುತ್ತಿದೆ. ಇದು ಪರ- ವಿರೋಧ ಅಭಿಪ್ರಾಯಕ್ಕೆ ಕಾರಣವಾಗಿದೆ.

ಧಾರ್ಮಿಕ ಉತ್ಸವ, ಸಂಪ್ರದಾಯ ಹೆಸರಿನಲ್ಲಿ ಆನೆಗಳನ್ನು (Elephant) ಸೆರೆ ಹಿಡಿದು ಹಿಂಸಿಸಲಾಗುತ್ತಿದೆ. ಅದಕ್ಕೆ ಒಗ್ಗದ ಆಹಾರ (Food) ನೀಡಲಾಗುತ್ತದೆ. ಚಿಕಿತ್ಸೆಯನ್ನು (Treatment) ಕೊಡಿಸುವುದಿಲ್ಲ ಎಂದು ಪ್ರಾಣಿ ದಯಾ ಸಂಸ್ಥೆ ‘ಪೆಟಾ’ (PETA) ಮೊದಲಿನಿಂದಲೂ ದೂರುತ್ತಲೇ ಬಂದಿದೆ. ಆ ಸಂಸ್ಥೆಯ ಪ್ರಾಯೋಜಕತ್ವ ಪಡೆದು, ಚಾಲಕ್ಕುಡಿ (Chalakudy) ಮೂಲದ ನಾಲ್ವರು ಯುವಕರು ರೊಬೋಟಿಕ್‌ ಆನೆಯನ್ನು (Robotic Elephant) ಅಭಿವೃದ್ಧಿಪಡಿಸಿದ್ದಾರೆ. 11 ಅಡಿ ಎತ್ತರದ ಈ ಆನೆ ವಿದ್ಯುಚ್ಛಕ್ತಿಯಿಂದ ಕೆಲಸ ಮಾಡುತ್ತದೆ. 800 ಕೆಜಿ ತೂಗುವ ಈ ರೋಬೋಟಿಕ್ ಆನೆಯನ್ನು ರಬ್ಬರ್ ಕೋಟಿಂಗ್ ಜೊತೆಗೆ  ಕಬ್ಬಿಣದ ಪ್ರೇಮ್ ಅಳವಡಿಸಿ ತಯಾರಿಸಲಾಗಿದೆ. ಕಿವಿ, ಬಾಲ, ತಲೆಯನ್ನು ಅಲ್ಲಾಡಿಸುತ್ತದೆ. ಅದರ ಸೊಂಟವನ್ನೂ ನಿಯಂತ್ರಿಸಬಹುದಾಗಿದೆ. ಈ ಆನೆಯನ್ನು ಇರಿಂಜಲಕ್ಕುಡ (Irinjalakuda) ಗ್ರಾಮದಲ್ಲಿ ಭಾನುವಾರ ನಡೆಯುವ ಪೂರಂ ಉತ್ಸವಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಇದನ್ನು ಓದಿ: ಕೇರಳದಲ್ಲಿ ದೇವರಿಗೆ ಸೇವೆ ಸಲ್ಲಿಸಲಿದೆ ನಟ್ ಬೋಲ್ಟ್ ಇರುವ ಆನೆ

ಆದರೆ ಇದಕ್ಕೆ ಧಾರ್ಮಿಕಾಸಕ್ತರ ವಿರೋಧ ವ್ಯಕ್ತವಾಗಿದೆ. ಕೇರಳದ ಶ್ರೀಮಂತ ಪರಂಪರೆಯನ್ನು ಹಾಳುಗೆಡವುವ ಯತ್ನವೇ ರೊಬೋಟಿಕ್‌ ಆನೆ. ಇಂತಹ ಕ್ರಮಗಳಿಗೆ ಉತ್ತೇಜನ ನೀಡಿದರೆ ಮುಂದೊಂದು ದಿನ ದೇಗುಲದ ಅರ್ಚಕರ ಸ್ಥಾನವನ್ನೂ ರೊಬೋಟ್‌ಗಳೇ ತುಂಬಬಹುದು ಎಂದು ಕಿಡಿಕಾರಿದ್ದಾರೆ.

ಆದರೆ ಆನೆಗಳನ್ನು ಸೆರೆ ಹಿಡಿದು, ಉತ್ಸವಕ್ಕೆ ಬಳಸಬೇಕು ಎಂದು ಪುರಾಣ ಗ್ರಂಥಗಳಲ್ಲಿ ಎಲ್ಲೂ ಹೇಳಿಲ್ಲ. ಅದಕ್ಕಾಗಿಯೇ ರೊಬೋಟಿಕ್‌ ಆನೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೇಗುಲ ತಿಳಿಸಿದೆ.

ಇದನ್ನೂ ಓದಿ: ಚಾಮರಾಜನಗರ: ಆನೆಯ ರಕ್ಷಿಸಿದ ಬಂಡೀಪುರ ಸಿಬ್ಬಂದಿಗೆ ಮೋದಿ ಶಹಬ್ಬಾಸ್‌

ಐದು ಲಕ್ಷ ರೂಪಾಯಿ ಮೊತ್ತದಲ್ಲಿ ಈ ರೋಬೋ ಆನೆಯನ್ನು ತಯಾರಿಸಲಾಗಿದೆ. ಅಲ್ಲದೇ ದೇಗುಲದಲ್ಲಿ ಮೆರವಣಿಗೆ ನಡೆಸುವ ವೇಳೆ ಈ ಆನೆಯ ಮೇಲೆ ಕನಿಷ್ಠ 4 ಜನ ಕುಳಿತುಕೊಳ್ಳಬಹುದಾಗಿದೆ.  ಈ ದೇಗುಲದ ಆಡಳಿತ ಮಂಡಳಿ ಸಿಬ್ಬಂದಿ ಮಾತನಾಡಿ,  ಜೀವಂತ ಆನೆಗಳ ಮೆರವಣಿಗೆ ನಡೆಸುವುದು ಅವುಗಳ ಸಾಕಾಣೆ ವೆಚ್ಚ, ಸೇರಿದಂತೆ ಹಲವು ಆತಂಕಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದೇವೆ. ಇದರ ಜೊತೆಗೆ ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಇದು ಮುಂದೆ ಇತರ ದೇಗುಲಗಳು ಕೂಡ ಅಳವಡಿಸಿಕೊಳ್ಳಬೇಕಾದ ಒಂದು ಉತ್ತಮ ಯೋಜನೆ ಎಂದು ಅವರು ಹೇಳಿದರು.  

ಅಂದಹಾಗೆ ಈ ಆನೆಗೆ ಇರಿಂಜಡಪಿಲ್ಲಿ ರಾಮನ್ (Irinjadappilli Raman) ಎಂದು ಹೆಸರಿಡಲಾಗಿದೆ. ಫೆಬ್ರವರಿ 26 ರಂದು ಈ ಆನೆಯನ್ನು ದೇಗುಲಕ್ಕೆ ಔಪಾಚಾರಿಕವಾಗಿ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಶಿವಮೊಗ್ಗ: ಸಕ್ರೆಬೈಲಿನಿಂದ ಮತ್ತೆ 3 ಆನೆಗಳು ಶಿಫ್ಟ್?

Latest Videos
Follow Us:
Download App:
  • android
  • ios