ಚಾಮರಾಜನಗರ: ಆನೆಯ ರಕ್ಷಿಸಿದ ಬಂಡೀಪುರ ಸಿಬ್ಬಂದಿಗೆ ಮೋದಿ ಶಹಬ್ಬಾಸ್
ವಿದ್ಯುತ್ ಶಾಕ್‌ನಿಂದ ಆನೆ ಚೇತರಿಸಿಕೊಂಡು ಬಚಾವ್ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ ಪ್ರಧಾನಿ ಮೋದಿ.
ಗುಂಡ್ಲುಪೇಟೆ (ಚಾ.ನಗರ)(ಫೆ.19): ವಿದ್ಯುತ್ ಸ್ಪರ್ಶಿಸಿ ಸಾವು-ನೋವಿನ ನಡುವೆ ನರಳುತ್ತಿದ್ದ ಕಾಡಾನೆಯೊಂದನ್ನು ಬಂಡೀಪುರದ ಅರಣ್ಯ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿ ಬದುಕುಳಿಸಿದ ಕಾರ್ಯ ಇದೀಗ ಪ್ರಧಾನಿ ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿದೆ. ಬಂಡೀಪುರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಟ್ವೀಟ್ ಮಾಡಿದ್ದರು. ಅರಣ್ಯ ಸಚಿವರ ಈ ಟ್ವೀಟ್ ಅನ್ನು ಶನಿವಾರ ಬೆಳಗ್ಗೆ ಪ್ರಧಾನಿ ಮೋದಿ ಅವರು ಮರು ಟ್ವೀಟ್ ಮಾಡಿ, ವಿದ್ಯುತ್ ಶಾಕ್‌ನಿಂದ ಆನೆ ಚೇತರಿಸಿಕೊಂಡು ಬಚಾವ್ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಹಾಗೂ ಕೇಂದ್ರ ಅರಣ್ಯ ಸಚಿವರ ಟ್ವೀಟ್ ಸಂಬಂಧ ಕನ್ನಡಪ್ರಭದ ಜತೆಗೆ ಮಾತನಾಡಿದ ಎಸಿಎಫ್ ಜಿ.ರವೀಂದ್ರ, ಪ್ರಧಾನಿ ತಳಮಟ್ಟದ ಅರಣ್ಯ ಸಿಬ್ಬಂದಿ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಸಂತಸ ತಂದಿದೆ ಎಂದರು.
ಕುಮಾರಣ್ಣ ಸರ್ಕಾರ ರಚನೆಗೆ ಬೆಂಬಲ ಸೂಚಿಸಬೇಕು: ನಿಖಿಲ್ ಕುಮಾರಸ್ವಾಮಿ
ಅರಣ್ಯ ಸಿಬ್ಬಂದಿ ಜೊತೆಗೆ ಬಂಡೀಪುರ ಸಿ.ಎಫ್.ರಮೇಶ್ ಕುಮಾರ್ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಲಹೆ, ಸೂಚನೆಗಳೊಂದಿಗೆ ಆನೆ ಬದುಕಿಸಲೇಬೇಕು ಎಂದು ಸವಾಲು ಸ್ವೀಕರಿಸಿದಂತೆ ಕೆಲಸ ಮಾಡಿದ್ದರಿಂದ ಯಶ ಸಿಕ್ಕಿದೆ. ವಿದ್ಯುತ್ ಅವಘಡದಿಂದ ಈವರೆಗೆ 60ಕ್ಕೂ ಹೆಚ್ಚು ಆನೆಗಳು ಸಾವಿಗೀಡಾಗಿವೆ. ಆದರೆ, ವಿದ್ಯುತ್ ತಗುಲಿಯೂ ಆನೆ ಬದುಕುಳಿದದ್ದು ಬಹಳ ವಿರಳ ಎಂದರು.
ಫೆ.15ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಅರಣ್ಯ ವಲಯದಂಚಿನ ತಾಲೂಕಿನ ಬರಗಿ ಬಳಿ ರೈತರ ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಸುಮಾರು 25 ವರ್ಷದ ಹೆಣ್ಣಾನೆ ಅಸ್ವಸ್ಥಗೊಂಡಿತ್ತು. ಸಾವು-ನೋವಿನ ನಡುವೆ ಹೋರಾಟ ನಡೆಸುತ್ತಿದ್ದ ಆನೆಗೆ ಬಂಡೀಪುರ ಅರಣ್ಯ ಇಲಾಖೆ ಪಶು ವೈದ್ಯ ಡಾ.ವಾಸೀಂ ಮಿರ್ಜಾ ಸತತ 4 ತಾಸು ಚಿಕಿತ್ಸೆ ಕೊಟ್ಟಬಳಿಕ ಚೇತರಿಸಿಕೊಂಡಿದೆ. ಆನೆಗೆ ಚಿಕಿತ್ಸೆ ನೀಡಲು ಅದನ್ನು ಎದ್ದುನಿಲ್ಲಿಸಲು ಅರಣ್ಯ ಸಿಬ್ಬಂದಿ ಸಾಕಷ್ಟು ಪರಿಶ್ರಮಪಟ್ಟಿದ್ದು, ಅದು ಮೆಚ್ಚುಗೆಗೆ ಪಾತ್ರವಾಗಿತ್ತು.