Death Anniversary: ವಿಶ್ವಕ್ಕೇ ದಾಸೋಹ ಪರಂಪರೆ ಸಾರಿದ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ

ಜಾತಿ-ಭೇದ ಕಾಣದೆ, ಧರ್ಮಗಳ ಹಂಗಿಲ್ಲದೆ ಎಲ್ಲರಲ್ಲೂ ಒಂದಾದ ಶಿವಕುಮಾರ ಶ್ರೀಗಳ (Shivakumara Shri) ಗುರುಮನೆಯಲ್ಲಿ ತಾರತಮ್ಯ ಕಂಡವರಿಲ್ಲ. ಮೇಲು-ಕೀಳು ಎಂಬ ಭಾವನೆಯಲ್ಲಿ ನೊಂದವರಿಲ್ಲ.

Remembering the Walking God Shivakumara Swamiji on his Death Anniversary hls

ಇಂದಿಗೆ (ಜ.21) ಮೂರು ವರ್ಷಗಳು ಕಳೆದು ಹೋದವು ನಾಡಿನ ಗುರುಪರಂಪರೆಯ ಶ್ರೇಷ್ಠ ಸಂತ, ಶತಾಯುಷಿ, ಕರ್ನಾಟಕ ರತ್ನ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ (Shivakumara Swamiji) ಅವರ ಇಹದ ಜೀವನ ಪಯಣ ಮುಗಿದು. ಶ್ರೀಗಳ ನಿರ್ಗಮನ ಬಳಿಕ ಸಾಮಾಜಿಕ ವಲಯದಲ್ಲಿ ಸೃಷ್ಟಿಯಾದ ನಿರ್ವಾತವೊಂದು ಮಾತ್ರ ದಿನ ಕಳೆದಂತೆ ಗಾಢವಾಗುತ್ತಲೇ ಇದೆ. ಇಂದಿನ ಮಹಾಮಾರಿ ಕೊರೋನಾ ಸಂಕಷ್ಟದ ಹೊತ್ತಿನಲ್ಲಿ ಶ್ರೀಗಳ ಸ್ಪಂದನೆ ಹೇಗಿರುತ್ತಿತ್ತು ಎಂದೂ ನೆನೆದರೆ ಮನ ಮೌನವಾಗುತ್ತದೆ. ಮನುಷ್ಯನಿಗೆ ಜನ್ಮ ಜಾತಕವಾಗಿಯೇ ಸಾವು ಬರೆದಿರುತ್ತದೆ. ಆದರೆ ದೇವರಿಗೆ..! ಈಗಲೂ ಉತ್ತರ ಸಿಗದ ಪ್ರಶ್ನೆ.

ತ್ರಿವಿಧ ದಾಸೋಹದ ಯೋಗಿ

ಶ್ರೀಗಳ ಪುಣ್ಯಸ್ಮರಣೆ (Death Anniversary) ಸಲುವಾಗಿ ರಾಜ್ಯ ಸರ್ಕಾರವು ದಾಸೋಹ ದಿನ ಆಚರಿಸಲು ನಿರ್ಧರಿಸಿದೆ. ದಾಸೋಹ ಅಂದರೇನು? ಕನ್ನಡ ನಿಘಂಟಿನಲ್ಲಿ ಹೇಳುವಂತೆ ಜಂಗಮರಿಗೆ ಮಾಡುವ ಆರೋಗಣೆ (ಭೋಜನ). ಸಾಮಾನ್ಯರ ತಿಳಿವಳಿಕೆಯಂತೆ ಕೇವಲ ಅನ್ನ ಸಂತರ್ಪಣೆಯೇ ಎಂಬ ತರ್ಕ ಒಂದೆಡೆಯಾದರೆ, ಎಂಟು ದಶಕಗಳ ಸನ್ಯಾಸ ಜೀವನದಲ್ಲಿ ಶ್ರೀಗಳು ನಡೆಸಿದ ‘ತ್ರಿದಾಸೋಹ’ದ ಸಂದೇಶವೂ ಇದರಲ್ಲಿ ಅಡಗಿದೆ. ಅನ್ನ, ಅಕ್ಷರ, ಆಶ್ರಯ ಎಂಬ ತ್ರಿವಿಧ ದಾಸೋಹ ಮೂಲಕ ಸಮಾಜವನ್ನು ಪೊರೆದವರು ಶ್ರೀಗಳು. ‘ಶಾಸ್ತ್ರ ಘನವೆಂಬನೆ? ಕರ್ಮವ ಭಜಿಸುತ್ತಿದೆ! ವೇದ ಘನವೆಂಬನೆ? ಪ್ರಾಣಿವಧೆಯ ಹೇಳುತ್ತಿದೆ! ಶ್ರುತಿ ಘನವೆಂಬನೆ? ಮುಂದಿಟ್ಟರಸುತ್ತಿದೆ! ಅಲ್ಲೆಲ್ಲಿಯೂ ನೀವಿಲ್ಲದ ಕಾರಣ, ತ್ರಿವಿಧ ದಾಸೋಹದಲ್ಲಲ್ಲದೆ ಕಾಣಬಾರದು ಕೂಡಲಸಂಗಮದೇವನ! ಬಸವಣ್ಣನ ಈ ವಚನದಂತೆ ಗುರುಗಳು ತ್ರಿವಿಧ ದಾಸೋಹದಲ್ಲಿ ತಾವು ಆರಾಧಿಸಿದ, ಅನುಸರಿಸಿದ ಬಸವಣ್ಣನನ್ನು ಕಂಡರು. ಶ್ರೀಗಳು ಕೂಡ ಎಂದಿಗೂ ಜನರಿಗೆ ಜ್ಯೋತಿಷ್ಯ ಹೇಳಲಿಲ್ಲ, ಮೂಢನಂಬಿಕೆಗಳಿಗೆ ಜೋತುಬೀಳಲಿಲ್ಲ. ಶಾಸ್ತ್ರವೇ ಪ್ರಧಾನ ಎನ್ನಲಿಲ್ಲ.

ಎಲ್ಲವೂ ಶಿವಲೀಲೆ! ಶಿವಣ್ಣರಾಗಿದ್ದವರು ಸಿದ್ದಗಂಗಾ ಶ್ರೀಗಳಾಗಿದ್ದೇ ಪವಾಡ

ನಾಗರಿಕ ಸಮಾಜದಲ್ಲಿ ಅಂಧಾಕಾರ ತೊಲಗಿಸಿ ಅರಿವಿನ ಬೆಳಕು ಕಾಣಿಸಲು ವಿದ್ಯೆಯೂ ಮುಖ್ಯ, ಹಾಗೆ ಜನ ಸುಶಿಕ್ಷತರಾಗಬೇಕಾದರೆ ಅವರ ಹಸಿವು ನೀಗುವುದು ಹಾಗೂ ಕಲಿಕೆಗೆ ಅಭದ್ರತೆ ಇಲ್ಲದ ನೆಲೆ ಕಾಣಿಸುವುದು ಅಷ್ಟೇ ಮುಖ್ಯ ಎನ್ನುವುದು ಅವರ ಅಚಲ ನಿಲುವಾಗಿತ್ತು. ಇದಕ್ಕಾಗಿ ಶ್ರೀಗಳು ಆಯ್ದುಕೊಂಡ ಮಾರ್ಗವೇ ತ್ರಿವಿಧ ದಾಸೋಹ! ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಅವರು ಸನ್ಯಾಸತ್ವ ಸ್ವೀಕರಿಸುವ ಮುನ್ನವೇ ಅನ್ನ, ಅಕ್ಷರ ದಾಸೋಹ ಸೇವೆ ಶುರುವಾಗಿತ್ತು. ಆದರೆ ಆ ದಾಸೋಹ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವಂತೆ ವಿಸ್ತರಿಸಿದ ಅವಿಸ್ಮರಣೀಯ ಸಾಧನೆ ಶ್ರೀಗಳದ್ದು.

ಸಮಾಜದ ನೋವಿಗೆ ಮಿಡಿದ ಶ್ರೀಗಳು

ಶ್ರೀಗಳು ಯುವ ಸನ್ಯಾಸತ್ವ ಸ್ವೀಕರಿಸಿದಾಗ ಆಗಷ್ಟೇ ವಿದೇಶೀಯರ ದಾಸ್ಯದಿಂದ ಮುಕ್ತವಾಗಿದ್ದ ದೇಶದಲ್ಲಿ ಹಸಿವು, ಅನಕ್ಷರತೆ ಹಾಗೂ ಅಸುರಕ್ಷತೆ ಸಮಸ್ಯೆಗಳು ಕಾಡುತ್ತಿದ್ದವು. ಸಮಾಜದ ನೋವಿಗೆ ಮಿಡಿದ ಶ್ರೀಗಳು, ಎದೆಗುಂದದೆ ದೀನ ದುರ್ಬಲರ, ರೈತಾಪಿ ವರ್ಗದ ಹಿತಕ್ಕಾಗಿ ಬದುಕನ್ನೇ ಅರ್ಪಿಸಿದರು. ಇವತ್ತು ‘ಪ್ರಭಾವಿ’ ಮಠ ಎನ್ನುವಂತೆ ಆ ದಿನ ಇರಲಿಲ್ಲ. ಹೆಜ್ಜೆ ಹೆಜ್ಜೆಗೂ ಸಂಕಷ್ಟಗಳು ಎದುರಾದರೂ ಅವರೆಂದೂ ‘ಅಕ್ಷರ ಕಾಂತ್ರಿ’ಯಿಂದ ವಿಮುಖರಾಗಲಿಲ್ಲ. ಸಾಮಾಜಿಕ ಕಳಕಳಿ ಬದಲಿಸಲಿಲ್ಲ. ಜೋಳಿಗೆ ಹಿಡಿದು ಹೊರಟ ಗುರುಗಳು, ಹಳ್ಳಿಗಳಲ್ಲಿ ಸುತ್ತಾಡಿದರೂ ಬಡತನದ ಬೇಗೆಯಲ್ಲಿ ಬೆಂದು ಹೋಗುತ್ತಿದ್ದ ಕುಸುಮಗಳನ್ನು ಹೆಕ್ಕಿ ತಂದರು.

ಅವುಗಳಿಗೆ ಮಠದಲ್ಲಿ ನೀರೆರೆದು ಅರಳಿಸಿದರು. ಅವು ಸಮಾಜಕ್ಕೆ ಕಂಪು ಬೀರುವಂತೆ ಮಾಡಿದರು. ರಾಷ್ಟ್ರಕವಿ ಶಿವರುದ್ರಪ್ಪ ಅವರು ‘ಭಿಕ್ಷೆ ಹೊರಟಿದೆ ಜಂಗಮದ ಜೋಳಿಗೆ ಲಕ್ಷ ಜನಗಳ ಪೊರೆಯಲು’ ಎಂದರು. ಇತ್ತ ಶ್ರೀಗಳು, ‘ಒಂದು ತುತ್ತು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ ಎನ್ನುವ ಮೂಲಕ ಮಣ್ಣಿನ ಮಕ್ಕಳ ಬೆವರಿನ ಹನಿಗಳ ಮಹತ್ವವನ್ನು ವಿದ್ಯಾವಂತ ಮನಸ್ಸುಗಳಿಗೆ ಅರ್ಥ ಮಾಡಿಸಿದರು. ಯಾವತ್ತೂ ಸ್ವಹಿತಾಸಕ್ತಿ ಬಯಸದ ಪ್ರಾಂಜಲ ಮನಸ್ಸಿನವರು.

ಸದಾ ಭಕ್ತರಿದ್ದಲ್ಲೇ ಗುರುಗಳು

ಪ್ರತಿ ವರ್ಷ ಏಪ್ರಿಲ್‌ ಮೊದಲ ಭಾನುವಾರ ಸಿದ್ಧಗಂಗೆಯಲ್ಲಿ ಸಡಗರ. ನಾಡಿನ ಮೂಲೆ ಮೂಲೆಯಿಂದ ಹರಿದು ಬಂದು ಆ ‘ಗಂಗೆ’ಯಲ್ಲಿ ಭಕ್ತ ಸಮೂಹ ಸೇರುತ್ತಿತ್ತು. ಶ್ರೀಗಳ ಜನ್ಮದಿನದ ನಿಮಿತ್ತ ಗುರುವಂದನಾ ಕಾರ್ಯಕ್ರಮ. ಅದು ಹಳೆ ವಿದ್ಯಾರ್ಥಿಗಳ ಸಂಗಮವು ಸಹ ಆಗಿತ್ತು. ಆ ಸಮಾರಂಭಕ್ಕೆ ರಾಷ್ಟ್ರಪತಿಗಳು ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸುತ್ತಿದ್ದರು. ವೇದಿಕೆ ಕಾರ್ಯಕ್ರಮ ಮುಗಿದ ಅರೆಕ್ಷಣದಲ್ಲೇ ಕೊಪ್ಪಲಿನಲ್ಲಿ ಶ್ರೀಗಳು ಪ್ರತ್ಯಕ್ಷವಾಗುತ್ತಿದ್ದರು. ಶಿಷ್ಯರ ಹಸಿವು ನೀಗಿದ ಬಳಿಕವೇ ಶಿವಪೂಜೆಗೆ ತೆರಳುತ್ತಿದ್ದರು.

ಶತಮಾನದ ಸಂತ ಸಿದ್ಧಗಂಗಾ ಶ್ರೀಗಳ ನೆನಪು- ಮೆಲುಕು

ಲಿಂಗ ಪೂಜೆ ಇಲ್ಲದೆ ಗುಟುಕು ನೀರು ಸಹ ಸೇವಿಸುತ್ತಿರಲಿಲ್ಲ. ಒಂದೆರೆಡು ಕೊಪ್ಪಲುಗಳಲ್ಲ (ಭೋಜನಾಲಯಗಳು), ಮಠದ ಆವರಣದ ಏಳೆಂಟು ಕಡೆಗಳಲ್ಲಿ ಅನ್ನ ದಾಸೋಹ ನಡೆಯುತ್ತಿತ್ತು. ಪ್ರತಿ ಕೊಪ್ಪಲಿಗೂ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ನಂತರವೇ ಅವರಿಗೆ ಸಮಾಧಾನ. ಕೆಲ ನಿಮಿಷಗಳ ಹಿಂದೆ ಗಣ್ಯರ ಜೊತೆ ನಿಂತಿದ್ದ ಗುರುಗಳು, ಆ ದೊಡ್ಡಸ್ತಿಕೆ ವಲಯದಲ್ಲಿ ಹೆಚ್ಚು ಹೊತ್ತು ನಿಲ್ಲದೆ ಭಕ್ತರೆಡೆ ಧಾವಿಸುತ್ತಿದ್ದ ಪರಿ ಕಂಡರೆ ಅವರ ಹೃದಯ ಮಿಡಿತವೂ ಗೊತ್ತಾಗುತ್ತಿತ್ತು.

ಸಾಂಕೇತಿಕವಾಗಿ ಇದೊಂದು ಕಾರ್ಯಕ್ರಮ ಮಾತ್ರ ಪ್ರಸ್ತಾಪಿಸಿದ್ದೇನೆ. ಮಠದ ಜಾತ್ರೆ, ತಮ್ಮ ಗುರುಗಳಾದ ಉದ್ಧಾನ ಶಿವಯೋಗಿಗಳ ಪುಣ್ಯಸ್ಮರಣೆ ಮಾತ್ರವಲ್ಲ ಪ್ರತಿದಿನ ಮಠಕ್ಕೆ ಬರುವ ಭಕ್ತರನ್ನು ಕಂಡರೆ ಪ್ರಸಾದ ಆಯಿತೇ ಎಂದೇ ಕುಶುಲೋಪರಿ ಆರಂಭಿಸುತ್ತಿದ್ದರು ಗುರುಗಳು. ಇನ್ನು ತಮ್ಮ ಆಶ್ರಯದಲ್ಲಿದ್ದ ಮಕ್ಕಳ ಕಾಳಜಿ ಬಗ್ಗೆ ಹೇಳಬೇಕಿಲ್ಲ. ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ? ಹಾಗೆ ಸಾವಿರಾರು ಮಕ್ಕಳ ಪಾಲಿಗೆ ಗುರುಗಳು ತಾಯಿ ಆಗಿಯೂ, ತಂದೆ ಆಗಿಯೂ ಬದುಕಿಗೆ ದಾರಿ ತೋರಿದ ಅರಿವಿನ ಗುರುವೂ ಆಗಿದ್ದರು. ತಮ್ಮ ನಡೆ-ನುಡಿ ಮೂಲಕ ತ್ರಿವಿಧ ದಾಸೋಹಕ್ಕೆ ‘ಸಮಾನತೆ, ಸಹಬಾಳ್ವೆ ಹಾಗೂ ಸಮರ್ಪಣೆ’ ಎಂಬ ಹೊಸ ಪರಿಕಲ್ಪನೆಯನ್ನು ಶ್ರೀಗಳು ನೀಡಿದರು.

ಜಾತಿ-ಭೇದ ಕಾಣದೆ, ಧರ್ಮಗಳ ಹಂಗಿಲ್ಲದೆ ಎಲ್ಲರಲ್ಲೂ ಒಂದಾದ ಶಿವಕುಮಾರ ಶ್ರೀಗಳ ಗುರುಮನೆಯಲ್ಲಿ ತಾರತಮ್ಯ ಕಂಡವರಿಲ್ಲ. ಮೇಲು-ಕೀಳು ಎಂಬ ಭಾವನೆಯಲ್ಲಿ ನೊಂದವರಿಲ್ಲ. ಸಾಮಾಜಿಕ ಸೇವೆಗೆ ಜೀವನ ಮುಡುಪಾಗಿಟ್ಟರು. ದೀನರಿಗೆ ವಾತ್ಸಲ್ಯದ ಅಮೃತಾಧಾರೆಯೆರೆದರು. ಗುರುಗಳ ಸಂದೇಶ ಅರಿಯೋಣ, ಅನುಸರಿಸೋಣ.

- ಗಿರೀಶ್‌ ಮಾದೇನಹಳ್ಳಿ, ಬೆಂಗಳೂರು

Latest Videos
Follow Us:
Download App:
  • android
  • ios