ಶನಿ ಜಯಂತಿಯಂದು ಹೀಗೆ ಮಾಡಿ ಶನಿ ದೋಷದಿಂದ ಮುಕ್ತಿ ಹೊಂದಿ
ಶನಿ ದೇವರನ್ನು ನ್ಯಾಯದ ದೇವರು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಶನಿಯು ವ್ಯಕ್ತಿಯ ಕರ್ಮಕ್ಕೆ ಅನುಸಾರ ಫಲಾಫಲಗಳನ್ನು ಕೊಡುತ್ತಾನೆ. ಶನಿದೇವರ ಅವಕೃಪೆಯಿಂದ ನಷ್ಟ, ಕೃಪೆ ಇದ್ದರೆ ಅದೃಷ್ಟ ಬರುತ್ತದೆ. ಅದೇ ರೀತಿ ಕೆಟ್ಟ ದೃಷ್ಟಿ ಬಿದ್ದರೆ ಜೀವನದಲ್ಲಿ ಸಮಸ್ಯೆಗಳು ಎದುರಾಗಲಿವೆ. ಶನಿವಾರವನ್ನು ಶನಿದೇವರ ವಾರ ಎಂದೇ ಹೇಳಲಾಗುತ್ತದೆ. ಶನಿಜಯಂತಿಯಂದು ನೀವೇನು ಮಾಡಬೇಕು ಎಂಬ ಬಗ್ಗೆ ನೋಡೋಣ ಬನ್ನಿ…
ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಶನಿ ದೇವನ ಜನನವಾದ ಕಾರಣ ಆ ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಜೂನ್ 10ರ ಗುರುವಾರ ಅಮಾವಾಸ್ಯೆ ತಿಥಿ ಬಂದಿರುತ್ತದೆ. ಅಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ.
ಶನಿಯು ಸೂರ್ಯ ದೇವ ಮತ್ತು ಛಾಯಾದೇವಿಯ ಪುತ್ರ. ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಶನಿಯನ್ನು ಆರಾಧನೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಶನಿ ದೇವನ ಪೂಜೆ ಮಾಡುವುದರಿಂದ ವಿಶೇಷ ಫಲಪ್ರಾಪ್ತಿ ಆಗುವುದಲ್ಲದೆ, ಶನಿ ದೋಷ ನಿವಾರಣೆಯಾಗುತ್ತದೆ.
"
ಶನಿ ಜಯಂತಿಯಂದು ಶನಿಯನ್ನು ಆರಾಧಿಸುವುದರಿಂದ ಶನಿದೋಷವಿರುವ ವ್ಯಕ್ತಿಗಳಿಗೆ ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಬಹುದಾಗಿದೆ. ಹಾಗಾಗಿ ಶನಿಯನ್ನು ಕರ್ಮಕ್ಕೆ ತಕ್ಕ ಫಲವನ್ನು ನೀಡುವಾತ ಎಂದು ಕರೆಯುತ್ತಾರೆ. ಹಾಗಾಗಿ ಶನಿ ಜಯಂತಿಯಂದು ಈ ಉಪಾಯಗಳನ್ನು ಮಾಡುವುದರಿಂದ ಶನಿದೋಷ ನಿವಾರಣೆಯಾಗುತ್ತದೆ.
ಇದನ್ನು ಓದಿ: ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವೇ? ಹಾಗಿದ್ದರೆ ಈ ಮೂರು ಅಭ್ಯಾಸಗಳ ಬಿಡಿ..
ಶನಿದೇವನ ಆರಾಧನೆ
ಶನಿ ಜಯಂತಿಯಂದು ಶನಿ ದೋಷ ನಿವಾರಣೆ ಮಾಡಿಕೊಳ್ಳಲು ಪ್ರಾತಃ ಕಾಲದಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಶುಚಿರ್ಭೂತರಾಗಬೇಕು. ನಂತರ ವಿಧಿ-ವಿಧಾನಗಳಿಂದ ಶನಿ ದೇವನ ಪೂಜೆಯನ್ನು ಮಾಡಬೇಕು. ಶನಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಬೇಕು.
ಶನಿ ಚಾಲೀಸಾವನ್ನು ಪಠಿಸಬೇಕು
ಶನಿ ಜಯಂತಿಯ ದಿನ ಶನಿ ಚಾಲೀಸಾವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ಶನಿದೋಷವಿದ್ದರೆ ಅಥವಾ ಶನಿಯ ಕೆಟ್ಟ ದೃಷ್ಟಿ ಬಿದ್ದಿದ್ದರೆ ಪರಿಹಾರವಾಗುತ್ತದೆ. ಅಲ್ಲದೆ, ಶನಿದೇವನ ಕೃಪೆ ಸದಾ ಇರಲಿದ್ದು, ಜೀವನದಲ್ಲಿ ಶುಭ ಫಲ ಪ್ರಾಪ್ತಿಯಾಗುತ್ತದೆ.
ಇದನ್ನು ಓದಿ: ಒಂದೇ ಮಾಸದಲ್ಲಿ ಎರಡು ಗ್ರಹಣ.. ವಿಶ್ವಕ್ಕೆ ಒಳಿತಲ್ಲ, ಭಾರತಕ್ಕೆ?
ಶಿವ ಮತ್ತು ಹನುಮಂತನನ್ನು ಆರಾಧಿಸಿ
ಶನಿಜಯಂತಿಯಂದು ಪರಮೇಶ್ವರ ಹಾಗೂ ಹನುಮಂತನನ್ನು ಆರಾಧಿಸಿದರೆ ಹೆಚ್ಚು ಒಳ್ಳೆಯದು. ಅಂದು ಈ ದೇವರುಗಳ ಪೂಜೆಯನ್ನು ಮಾಡಿದಲ್ಲಿ ವಿಶೇಷ ಕೃಪೆಯಾಗುತ್ತದೆ. ಹೀಗೆ ಆರಾಧನೆ ಮಾಡುವುದರಿಂದ ಶನಿಯ ಕೆಟ್ಟ ದೃಷ್ಟಿ ಬೀರುವುದು ತಪ್ಪಲಿದೆ. ಅಂಥವರಿಗೆ ಶನಿ ಎಂದೂ ಸಮಸ್ಯೆಯನ್ನುಂಟು ಮಾಡುವುದಿಲ್ಲ. ಅಲ್ಲದೆ, ಸದಾ ತನ್ನ ಕೃಪೆ ಬೀರುತ್ತಾನೆ.
ಎಣ್ಣೆಯಲ್ಲಿ ಮುಖ ನೋಡಿ, ಆ ಪಾತ್ರೆಯ ದಾನ ಮಾಡಿ
ಶನಿಯ ಅವಕೃಪೆಯಿಂದ ಪಾರಾಗಲು ಅನೇಕ ವಿಧಾನಗಳಿವೆ. ಈ ಸಂದರ್ಭದಲ್ಲಿ ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಮುಖ ನೋಡಬೇಕು. ನಂತರ ಎಣ್ಣೆ ಸಹಿತ ಪಾತ್ರೆಯನ್ನು ಶನಿ ದೇವಸ್ಥಾನದಲ್ಲಿರುವ ಅರ್ಚಕರಿಗೆ ಅಥವಾ ಅಗತ್ಯವಿರುವವರಿಗೆ ದಾನವಾಗಿ ನೀಡಬೇಕು. ಹೀಗೆ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.
ಇವುಗಳನ್ನು ದಾನ ಮಾಡಿ
ದಾನ, ಧರ್ಮಗಳಿಂದ ವಿಶೇಷ ಕೃಪೆಗಳು ಪ್ರಾಪ್ತಿಯಾಗುತ್ತವೆ. ಅದರಲ್ಲೂ ವಿಶೇಷವಾಗಿ ಶನಿ ಜಯಂತಿಯಂದು ದಾನ ಮಾಡುವುದರಿಂದ ಇನ್ನಷ್ಟು ಶುಭ ಫಲವನ್ನು ಪಡೆಯಬಹುದಾಗಿದೆ. ಅಂದರೆ, ದುಪ್ಪಟ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ಹೀಗೆ ಮಾಡುವುದರಿಂದ ಶನಿ ಪ್ರಸನ್ನವಾಗುತ್ತಾನೆ. ಶನಿ ಜಯಂತಿಯಂದು ಎಣ್ಣೆ, ಎಳ್ಳು, ಲೋಹ, ಕಪ್ಪು ವಸ್ತ್ರಗಳನ್ನು ದಾನವಾಗಿ ನೀಡಬೇಕು.
ಶನಿದೋಷಕ್ಕೆ ಪರಿಹಾರ
ಶನಿವಾರದಂದು ಶನಿದೇವನಿಗೆ ನೀಲಿ ಬಣ್ಣದ ಶಂಖಪುಷ್ಪವನ್ನು ಅರ್ಪಿಸಬೇಕು. ಅಲ್ಲದೆ, ಶನಿವಾರದ ದಿನ ಕಪ್ಪು ಬಣ್ಣದ ಬತ್ತಿಯಲ್ಲಿ ಎಳ್ಳೆಣ್ಣೆ ದೀಪವನ್ನು ಹಚ್ಚಬೇಕು. ಇನ್ನು ಪ್ರತಿನಿತ್ಯ ಶನಿ ಸ್ತೋತ್ರವನ್ನು ಪಠಿಸಿದರೆ ಉತ್ತಮ.
ಇದನ್ನು ಓದಿ: ಈ ನಾಲ್ಕು ರಾಶಿಯವರು ತುಂಬಾ ಸೆಲ್ಫಿಶ್, ನಿಮ್ಮ ಜೊತೆಗಿದ್ದಾರಾ ಅಂಥವರು?
ಈ ಮಂತ್ರವನ್ನು ಜಪಿಸಿ
ಶನಿ ದೇವರ ಕೃಪೆಗೆ ಪಾತ್ರರಾಗಬೇಕೆಂದರೆ ಕೆಲವು ಮಂತ್ರಗಳನ್ನು ಜಪಿಸಬಹುದಾಗಿದೆ. ಹೀಗೆ ಮಾಡುವುದರಿಂದ ಶನಿ ದೇವರು ಪ್ರಸನ್ನರಾಗುವುದಲ್ಲದೆ, ಒಳಿತನ್ನು ಉಂಟು ಮಾಡಲಿದ್ದಾನೆ. ನಿಮ್ಮ ಒಳಿತಿಗೆ ಜಪಿಸಬೇಕಾದ ಮಂತ್ರ ಇಂತಿದೆ… “ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ | ಛಾಯಾ ಮಾರ್ತಾಂಡಾ ಸಂಭೂತಂ ತಂ ನಮಾಮಿ ಶನೈಶ್ಚರಂ” ಎಂಬ ಮಂತ್ರವನ್ನು ಜಪಿಸುವುದರಿಂದ ಶನಿ ದೇವರ ಆಶೀರ್ವಾದ ಪ್ರಾಪ್ತವಾಗುತ್ತದೆ.