ಸಾಲಿಗ್ರಾಮ ಪೂಜೆಯಿಂದ ನಿಮ್ಮ ಇಷ್ಟಾರ್ಥ ಸಿದ್ಧಿ ಖಚಿತ!
ನಿಮ್ಮ ಹಿರಿಯರು ಮನೆಯಲ್ಲಿ ದೇವರ ಕೋಣೆಯಲ್ಲಿ ಸಂಪುಟದಲ್ಲಿ ಸಾಲಿಗ್ರಾಮ ಶಿಲೆಯನ್ನಿಟ್ಟು ಪೂಜೆ ಮಾಡುವುದನ್ನು ನೀವು ನೋಡಿರಬಹುದು. ಸಾಲಿಗ್ರಾಮ ಶಿಲೆ ಅತ್ಯಂತ ಮಹತ್ವದ್ದು, ಪೂಜನೀಯವಾದ್ದು. ಇದನ್ನು ಪೂಜಿಸಿದರೆ ದೇವರ ಕೃಪೆ ಶತಸ್ಸಿದ್ಧ.
ಚಂದ್ರಹಾಸನ ಕತೆ ನಿಮಗೆ ಗೊತ್ತೇ? ಅನಾಥನಾದ ರಾಜಕುಮಾರ ಚಂದ್ರಹಾಸನಿಗೆ ಬೀದಿಯಲ್ಲಿ ದುಂಡಗಿನ ಒಂದು ಕಲ್ಲು ಸಿಕ್ಕಿತು. ಅದನ್ನು ಆಟಕ್ಕಾಗಿ ಬಳಸುತ್ತಿದ್ದ. ಮುಂದೆ ದೊಡ್ಡವನಾದ ನಂತರ ಅದರ ಮಹತ್ವ ಅರ್ಥವಾಗಿ ಪೂಜೆ ಮಾಡಿದ. ಚಿಕ್ಕಂದಿನಿಂದಲೂ ಆತ ಪೂಜೆ ಮಾಡುತ್ತಿದ್ದ ಆ ಸಾಲಿಗ್ರಾಮ, ಅವನ ಕೊಲೆಗಾಗಿ ದುಷ್ಟಬುದ್ಧಿಯಿಂದ ಎಷ್ಟೇ ಸಂಚುಗಳು ನಡೆದರೂ ಅವನನ್ನು ವಜ್ರ ಕವಚದಂತೆ ಕಾಪಾಡಿತು. ಸಾಲಿಗ್ರಾಮದ ಮಹಿಮೆ ಅದು.
ಸಾಲಿಗ್ರಾಮ ಹೇಗೆ ಸೃಷ್ಟಯಾಯಿತು, ಅದು ಹೇಗೆ ಪವಿತ್ರ ಎಂಬ ಬಗ್ಗೆ ಪುರಾಣ ಕತೆಯಿದೆ. ಒಮ್ಮೆ ಶಿವ ಮತ್ತು ರಾಕ್ಷಸ ಜಲಂಧರರ ನಡುವೆ ಯುದ್ಧ ಪ್ರಾರಂಭವಾಯಿತು. ಆಗ ಶಿವನು ವಿಷ್ಣುವಿನ ಹತ್ತಿರ ಸಹಾಯ ಕೇಳಿದನು. ಜಲಂಧರನ ಪತ್ನಿ ವೃಂದಾಳ ಪಾತಿವ್ರತ್ಯದ ಪರಿಣಾಮ ಜಲಂಧರ ಅಜೇಯನಾಗಿದ್ದ. ಇದನ್ನು ಮುರಿಯದೆ ಜಲಂಧರನನ್ನು ಸೋಲಿಸಲು ಸಾಧ್ಯವಿರಲಿಲ್ಲ. ವಿಷ್ಣು ವೃಂದಾಳ ಪತಿ ಜಲಂಧರನ ರೂಪವನ್ನು ತಾಳಿ ವೃಂದಾಳ ಪಾವಿತ್ರ್ಯವನ್ನು ಕೆಡಿಸಿದ. ನಂತರ ಶಿವನು ಜಲಂಧರನನ್ನು ಸೋಲಿಸಿದನು. ಆಗ ವೃಂದಾ ವಿಷ್ಣುವಿಗೆ ಕಲ್ಲು ಹುಲ್ಲು ಮರವಾಗಿ ಹೋಗು ಎಂದು ಶಾಪ ನೀಡಿದಳು. ಅವಳ ಶಾಪದಿಂದ ವಿಷ್ಣು ದೇವನು ಸಾಲಿಗ್ರಾಮದ ಕಲ್ಲು, ದರ್ಬೆ ಮತ್ತು ಅಶ್ವತ್ಥ ಮರವಾಗಿ ಹುಟ್ಟಿದ. ಈ ಮೂರನ್ನೂ ಪವಿತ್ರವೆಂದು ಪೂಜಿಸಲಾಗುತ್ತದೆ. ಅಂದಿನಿಂದ ಸಾಲಿಗ್ರಾಮದ ಕಲ್ಲನ್ನು ವಿಷ್ಣುವಿನ ರೂಪ ಎಂದು ಪರಿಗಣಿಸಲಾಯಿತು.
ಗಾಢವಾದ ಕಪ್ಪು ಬಣ್ಣ ಹಾಗೂ ನುಣುಪಾದ ಕಲ್ಲಿನ ರೂಪದಲ್ಲಿ ಸಾಲಿಗ್ರಾಮ ಇರುತ್ತದೆ. ದೈವೀಶಕ್ತಿಯನ್ನು ಹೊಂದಿರುವ ಸಾಲಿಗ್ರಾಮವನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಸಕಾರಾತ್ಮಕ ಶಕ್ತಿಯು ಮನೆಯೊಳಗೆ ಆಗಮಿಸುವುದು. ವೈಷ್ಣವರು ಹಾಗೂ ವಿಷ್ಣು ಭಕ್ತರು ಸಾಲಿಗ್ರಾಮವನ್ನು ಮನೆಯಲ್ಲಿಟ್ಟು ಪೂಜಿಸುತ್ತಾರೆ. ಸಾಲಿಗ್ರಾಮಕ್ಕೆ ತುಳಸಿ ಎಲೆಯನ್ನು ಅರ್ಪಿಸಿದರೆ ವಿಷ್ಣು ದೇವನು ಸಂತೃಪ್ತನಾಗುವನು. ತುಳಸಿ ಎಲೆಯನ್ನು ಇಟ್ಟು ಪೂಜಿಸುವವರ ಮನೆಯಲ್ಲಿ ನೆಮ್ಮದಿ, ಸಂತೋಷ ನೆಲೆಸಿರುತ್ತದೆ. ಅವರಿಗೆ ಎಂದಿಗೂ ಬಡತನ, ಹಣದ ಸಮಸ್ಯೆ, ಅಸಮಾಧಾನ, ಭಯ, ಭ್ರಮೆ ಯಾವುದೂ ಉಂಟಾಗದು. ಜೊತೆಗೆ ಮನೆಯೊಳಗೆ ಯಾವುದೇ ಋಣಾತ್ಮಕ ಶಕ್ತಿ ಮತ್ತು ರೋಗವನ್ನು ತರುವ ಕೀಟಗಳು ಪ್ರವೇಶಿಸುವುದಿಲ್ಲ.
ಸಾಲಿಗ್ರಾಮ ಕಲ್ಲು ಅಪರೂಪ ಹಾಗೂ ಅಲಭ್ಯ. ಅದು ನೇಪಾಳದ ಗಂಡಕಿ ನದಿಯಲ್ಲಿ ಮಾತ್ರ ಸಿಗುತ್ತದೆ. ವಿಷ್ಣು ಪೂಜೆಯ ದಿನಗಳಾದ ರಾಮನವಮಿ, ಕೃಷ್ಣಾಷ್ಟಮಿ, ನರಸಿಂಹ ಜಯಂತಿ, ವಾಮನ ಜಯಂತಿ, ಅಕ್ಷಯ ತೃತೀಯ ಮುಂತಾದ ದಿನಗಳಂದು ಸಾಲಿಗ್ರಾಮದ ಪೂಜೆ ಮಾಡುವುದು ಅತ್ಯಂತ ಶುಭ. ಪ್ರತಿದಿನವೂ ಮಾಡುವುದು ಶ್ರೇಯಸ್ಕರ. ವಿಶೇಷ ದಿನಗಳಂದು ಸಾಮಾನ್ಯವಾಗಿ ಸಾಲಿಗ್ರಾಮಕ್ಕೆ ಗಂಗಾ ಅಥವಾ ಪವಿತ್ರ ನೀರಿನ ಅಭಿಷೇಕ ಮಾಡುವರು. ಜೊತೆಗೆ ಐದು ಶುಭ ಪದಾರ್ಥಗಳಾದ ತುಪ್ಪ, ಸಕ್ಕರೆ, ಜೇನುತುಪ್ಪ, ಮೊಸರು ಮತ್ತು ಹಾಲನ್ನು ಸೇರಿಸಿ ಪಂಚಾಮೃತವನ್ನು ತಯಾರಿಸುವರು. ಅದನ್ನು ಸಾಲಿಗ್ರಾಮಕ್ಕೆ ಅಭಿಷೇಕ ಮಾಡಿ ಪೂಜೆ ಮಾಡುತ್ತಾರೆ.
ಜೂನ್ ತಿಂಗಳು ಈ ನಾಲ್ಕು ರಾಶಿಗಳಿಗೆ ತುಂಬಾ ಶುಭ!
ಭಗವಾನ್ ವಿಷ್ಣುವಿನ ಕೈಯಲ್ಲಿ ಸುದರ್ಶನ ಚಕ್ರ ಇರುವಂತೆ, ಸಾಲಿಗ್ರಾಮದ ಮೇಲೆ ಚಕ್ರಗಳ ಗುರುತು ಇರುವುದನ್ನು ಕಾಣಬಹುದು. ಆ ಚಕ್ರಗಳು ವಿಭಿನ್ನ ಸಂಖ್ಯೆಗಳಿಂದಲೂ ಕೂಡಿರುತ್ತವೆ. ವಿಷ್ಣುವಿನ ರೂಪವನ್ನು ಪ್ರತಿಬಿಂಬಿಸುವ ಈ ಕಲ್ಲು ಶಂಖ, ಗದೆ, ರಂಧ್ರ, ದೊಡ್ಡ ಮತ್ತು ಸಣ್ಣ ಗಾತ್ರ, ಸುರುಳಿ ಗಾತ್ರ, ಅಂಡಾಕಾರಗಳ ಆಕೃತಿಯಲ್ಲಿ ಹಾಗೂ ಕೆಂಪು, ಹಳದಿ, ಬಹುತೇಕವಾಗಿ ಕಪ್ಪು ಬಣ್ಣಗಳಲ್ಲಿ ಕಂಡು ಬರುತ್ತದೆ. ಮನೆಯಲ್ಲಿ ಲಕ್ಷ್ಮಿ, ಸರಸ್ವತಿ, ಗಣೇಶ ಸೇರಿದಂತೆ ಇತರ ಯಾವುದೇ ದೇವತೆಗಳು ಇದ್ದರೂ ಸಹ ಇಟ್ಟು ಪೂಜಿಸಬಹುದು.
ನೀವು ಫ್ಲರ್ಟ್ ಹೌದೋ ಅಲ್ಲವೋ ಅಂತ ನಿಮ್ಮ ರಾಶಿಯೇ ಹೇಳುತ್ತೆ!
ಸಾಲಿಗ್ರಾಮದ ನಿತ್ಯ ಪೂಜೆಯಿಂದ ಹಿಂದಿನ ಜನ್ಮದಲ್ಲಿ ಹಾಗೂ ಈ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳೆಲ್ಲವೂ ತೊಳೆದುಹೋಗುತ್ತವೆ. ವ್ಯಕ್ತಿಯು ಉತ್ತಮ ಆರೋಗ್ಯ ಹಾಗೂ ಉತ್ತಮ ಆಧ್ಯಾತ್ಮಿಕ ಚಿಂತನೆಗಳನ್ನು ಮನಗೊಳ್ಳುವನು. ಇದನ್ನು ಪೂಜಿಸುವಾಗ ವಿಷ್ಣು ದೇವರ ಸಹಸ್ರನಾಮ, ಅಷ್ಟೋತ್ತರ, ವಿಶೇಷ ಮಂತ್ರ, ಶ್ಲೋಕ ಅಥವಾ ಹಾಡನ್ನು ಹೇಳಬೇಕು. ಶುದ್ಧವಾದ ಎಣ್ಣೆಯಲ್ಲಿ ದೀಪವನ್ನು ಬೆಳಗುವುದರ ಮೂಲಕ ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಬೇಕು.
ಸಾಲಿಗ್ರಾಮದ ಪೂಜೆಯನ್ನು ಮಾಡುವವರ ಹತ್ತಿರ ಯಮದೂತನು ಬರುವುದಿಲ್ಲ. ಸಾಲಿಗ್ರಾಮವನ್ನು ಪೂಜೆ ಮಾಡುವವರು ಮೋಕ್ಷದ ನಂತರ ವೈಕುಂಠ ಧಾಮ ಅಂದರೆ ವಿಷ್ಣುವಿನ ಪವಿತ್ರ ಸ್ಥಳಕ್ಕೆ ಹೋಗುವರು. ಹಾಗಾಗಿ ಸಾಲಿಗ್ರಾಮವನ್ನು ಮುಕ್ತಿನಾಥ ಸಾಲಿಗ್ರಾಮ ಎಂದು ಸಹ ಕರೆಯುತ್ತಾರೆ.
ಕೃಷ್ಣನ ಕುರಿತ ಈ ಆಸಕ್ತಿಕರ ವಿಚಾರಗಳು ಬಹಳ ಜನರಿಗೆ ತಿಳಿದಿಲ್ಲ!