ಕೃಷ್ಣ- ತನ್ನ ಕಾಲದ ಹೀರೋ, ಮಾನಿನಿಯರ ಸಖ, ಎಲ್ಲರೂ ಬಯಸುವ ಸ್ನೇಹಿತ, ತಾಯಂದಿರು ಬಯಸುವ ತುಂಟ ಮಗು, ಪವಾಡಗಳ ಪರಮಪುರುಷ, ಎಲ್ಲರನ್ನೂ ಸಮ್ಮೋಹನಗೊಳಿಸಬಲ್ಲ ವಿಶೇಷ ಕಳೆಯ ಮೋಹನ. ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣನ ಬಗ್ಗೆ ಬಹುತೇಕರಿಗೆ ಗೊತ್ತಿರುವುದು ಆತ ಬೆಣ್ಣೆಕಳ್ಳನೆಂದೂ, ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಗೀತೆಯನ್ನು ಬೋಧಿಸಿದನೆಂದು. ಆದರೆ ಕೃಷ್ಣನ ವಿಶೇಷ ವ್ಯಕ್ತಿತ್ವ ಅಷ್ಟಕ್ಕೇ ಸೀಮಿತವಲ್ಲ. ಆತನ ಬಗ್ಗೆ ಹೇಳಿದಷ್ಟೂ ಮುಗಿಯದ ಸಂಗತಿಗಳಿವೆ. ಅಚ್ಚರಿ ಹುಟ್ಟಿಸುವ ವಿಚಾರಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ. 

- 108 ಹೆಸರುಗಳು
ಎಲ್ಲರಿಗೂ ನಾಮಕರಣದ ಸಂದರ್ಭದಲ್ಲಿ ಐದು ಹೆಸರುಗಳನ್ನಿಡುತ್ತಾರೆ. ಆದರೆ, ಕೃಷ್ಣನಿಗಿದ್ದದ್ದು 108 ಹೆಸರುಗಳು- ಗೋಪಾಲ, ಗೋವಿಂದ, ದೇವಕೀನಂದನ, ಮೋಹನ, ಶ್ಯಾಮ, ಘನಶ್ಯಾಮ, ಹರಿ, ಗಿರಿಧರ, ಬಾಂಕೆ ಬಿಹಾರಿ ಮುಂತಾದವೆಲ್ಲವೂ ಕೃಷ್ಣನದೇ ಹೆಸರುಗಳು. 

ಖರ್ಚುವೆಚ್ಚ ತಗ್ಗಿಸಿದ ವಿವಾಹದ ಹೊಸ ಟ್ರೆಂಡ್, ಮಧ್ಯಮ ವರ್ಗಕ್ಕಿದು ವರ!

- 16,108 ಪತ್ನಿಯರು
ಕೃಷ್ಣನಿಗೆ ಹೆಸರು 108 ಆದರೆ, ಪತ್ನಿಯರು ಬರೋಬ್ಬರಿ 16,108. ಇದರಲ್ಲಿ ಎಂಟು ಮಂದಿ ಆತನ ಪ್ರಮುಖ ಪತ್ನಿಯರು- ಅವರನ್ನು ಅಷ್ಟಭಾರ್ಯ ಎನ್ನಲಾಗುತ್ತದೆ. ಅವರೆಂದರೆ ರುಕ್ಮಿಣಿ, ಸತ್ಯಭಾಮಾ, ಜಾಂಬವತಿ, ನಗ್ನಾಜಿತಿ, ಕಲಿಂದಿ, ಮಿತ್ರಾವಿಂದ, ಭದ್ರ, ಲಕ್ಷ್ಮಣ. ಇವರು ಪ್ರತಿಯೊಬ್ಬರಿಂದಲೂ ಕೃಷ್ಣನಿಗೆ ತಲಾ 10 ಮಕ್ಕಳು ಜನಿಸಿದ್ದರು. ಇನ್ನು ರಾಕ್ಷಸ ನರಕಾಸುರನು ತನ್ನ ಅರಮನೆಯಲ್ಲಿ 16,100 ಮಹಿಳೆಯರನ್ನು ಅಪಹರಿಸಿ ಬಂಧಿಸಿಟ್ಟಿದ್ದ. ಇವರನ್ನು ಶೀಲದ ಬಗ್ಗೆ ಶಂಕಿಸಿ ಕುಟುಂಬ ಸದಸ್ಯರು ಮರಳಿ ಮನೆಗೆ ಸೇರಿಸಲು ಸಿದ್ಧರಿರಲಿಲ್ಲ. ಆ ಸಂದರ್ಭದಲ್ಲಿ ಕೃಷ್ಣನು ಇವರ ಗೌರವ ಕಾಪಾಡುವ ಸಲುವಾಗಿ ಎಲ್ಲರನ್ನೂ ವಿವಾಹವಾದ, ಆದರೆ, ಇವರಾರೊಂದಿಗೂ ಕೃಷ್ಣನಿಗೆ ಯಾವುದೇ ಸಂಬಂಧವಿರಲಿಲ್ಲ. 

- ಗಾಂಧಾರಿಯ ಶಾಪದಿಂದ ಸಾವು
ಕುರುಕ್ಷೇತ್ರ ಯುದ್ಧದಲ್ಲಿ ಎಲ್ಲ 100 ಮಕ್ಕಳನ್ನು ಕಳೆದುಕೊಂಡವಳು ಗಾಂಧಾರಿ. ಕೃಷ್ಣ ತನ್ನ ಸಂತಾಪ ಸೂಚಿಸಲು ಗಾಂಧಾರಿಯ ಬಳಿ ಹೋದಾಗ ದುಃಖದಲ್ಲಿ ಮುಳುಗೇಳುತ್ತಿದ್ದ ಗಾಂಧಾರಿ, ಮುಂದಿನ 36 ವರ್ಷಗಳಲ್ಲಿ ಕೃಷ್ಣ ಹಾಗೂ ಯದುವಂಶದ ಆಡಳಿತ ಸಂಪೂರ್ಣ ನಾಶವಾಗಲಿ ಎಂದು ಶಾಪ ನೀಡುತ್ತಾಳೆ. ಅದಾಗಲೇ ಯಾದವರು ನೈತಿಕತೆಯ ಹಾದಿ ಬಿಟ್ಟು ಹೋಗುತ್ತಿದ್ದಾರೆ ಎಂಬುದನ್ನು ಗಮನಿಸಿದ್ದ ಕೃಷ್ಣ ತತಾಸ್ತು ಎನ್ನುತ್ತಾನೆ. 

- ಕೃಷ್ಣನ ಚರ್ಮ ನೀಲಿಯಲ್ಲ, ಕಪ್ಪುವರ್ಣದ್ದು
ಕೃಷ್ಣ ನೀಲ ಮೇಘ ಶ್ಯಾಮ ಎಂಬ ಹೆಸರನ್ನು ಪಡೆದವನು. ಆತನ ಎಲ್ಲ ಚಿತ್ರಗಳಲ್ಲೂ ನೀಲಿ ಬಣ್ಣದಲ್ಲೇ ಇರುತ್ತಾನೆ. ಹಾಗಾಗಿ, ಕೃಷ್ಣನ ಬಣ್ಣ ನೀಲಿ ಎಂದು ಬಹಳ ಜನ ಭಾವಿಸಿದ್ದಾರೆ. ಆದರೆ ಆತ ಕಪ್ಪುವರ್ಣ ಹೊಂದಿದ್ದ. ಆಧ್ಯಾತ್ಮ ಸಾಧಕರ ಪ್ರಕಾರ, ಆತನ ದಿವ್ಯಪ್ರಭೆಗೆ ನೀಲಪ್ರಕಾಶವಿತ್ತು. ಹಾಗಾಗಿ, ಆತನನ್ನು ನೀಲಿಯಾಗಿ ಚಿತ್ರಿಸಲಾಗುತ್ತದೆ. 

-ಗುರುವಿನ ಮಗನಿಗೆ ಮರುಹುಟ್ಟು
ಸಾಂದೀಪಿನಿ ಮುನಿಯ ಬಳಿ ಕೃಷ್ಣ ಬಲರಾಮರು ವಿದ್ಯಾಭ್ಯಾಸ ಮುಗಿಸಿದ ಬಳಿಕ ಗುರುದಕ್ಷಿಣೆಯಾಗಿ ಏನು ಬೇಕೆಂದು ಕೇಳುತ್ತಾರೆ. ಆಗ ಮುನಿಯು, ತಮ್ಮ ಮಗ ಪ್ರಭಾಸದ ಬಳಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು, ಆತನನ್ನು ಬದುಕಿಸಿಕೊಡುವಂತೆ ಕೇಳುತ್ತಾರೆ. ಸ್ಥಳಕ್ಕೆ ಹೋಗುವ ಸಹೋದರರು, ತಮ್ಮ ಗುರುವಿನ ಪುತ್ರನನ್ನು ರಾಕ್ಷಸನೊಬ್ಬ ಪಾಂಚಜನ್ಯದೊಳಗೆ ಬಂಧಿಸಿಟ್ಟಿದ್ದನ್ನು ಮನಗಾಣುತ್ತಾರೆ. ನಂತರ ಯಮನ ಸಹಾಯದಿಂದ ಗುರುವಿನ ಪುತ್ರನನ್ನು ಬದುಕಿಸಿ, ಗುರುವಿನ ಬಳಿ ಕೊಂಡೊಯ್ಯುತ್ತಾರೆ. 

ನೀವು ಅವರಿಗಿಂತ ಬೆಟರ್ ಆಗಬೇಕಾ? ಇದು ಮೈಂಡ್ ಗೇಮ್!

- ಪಾಂಚಜನ್ಯ
ಪಾಂಚಜನ್ಯವನ್ನು ಕೃಷ್ಣ ಊದಿದನೆಂದರೆ ಅದು ಪಾಂಡವರಿಗೆ ಕೌರವರ ವಿರುದ್ಧ ಯುದ್ಧ ಮಾಡಲು ನೀಡಿದ ಕರೆಸಂದೇಶವಾಗಿತ್ತು. ಕುರುಕ್ಷೇತ್ರ ಯುದ್ಧಾರಂಭದಲ್ಲಿ ಹಾಗೂ ಯುದ್ಧ ಮುಗಿದ ಬಳಿಕ ಧರ್ಮಸ್ಥಾಪನೆಯಾಗಿದ್ದನ್ನು ಜಾಹೀರುಗೊಳಿಸಲು ಕೃಷ್ಣ ಪಾಂಚಜನ್ಯ ಊದುತ್ತಾನೆ. 

- ಕೃಷ್ಣ ಪಾಂಡವರು ನೆಂಟರು
ಪಾಂಡವರ ತಾಯಿ ಕುಂತಿಯು ವಸುದೇವನ ಸಹೋದರಿ. ವಸುದೇವನು ಕೃಷ್ಣನ ತಂದೆ. ಆ ಮೂಲಕ ಕೃಷ್ಣನು ಪಾಂಡವರ ಕಸಿನ್. 

- ಏಕಲವ್ಯನೂ ಕೃಷ್ಣನ ಕಸಿನ್
ಏಕಲವ್ಯನ ತಂದೆ ದೇವ್‌ಶರವು ಕೂಡಾ ಕೃಷ್ಣನ ತಂದೆ ವಸುದೇವನ ಸಹೋದರ. ಆದರೆ ಆತನನ್ನು ಬೇಟೆಗಾರರ ರಾಜ ಮಗನಾಗಿ ದತ್ತು ಪಡೆದು ಸಾಕಿರುತ್ತಾನೆ. ದ್ರೋಣಾಚಾರ್ಯರು ಏಕಲವ್ಯನ ಬೆರಳನ್ನು ಕಸಿದ ಬಳಿಕ, ಕೃಷ್ಣನು ಏಕಲವ್ಯನಿಗೆ ಮರುಜನ್ಮದಲ್ಲಿ ದ್ರೋಣರನ್ನು ಕೊಲ್ಲುವ ವರ ನೀಡುತ್ತಾನೆ. ತನ್ನ ಮುಂದಿನ ಜನ್ಮದಲ್ಲಿ ದೃಷ್ಟದ್ಯುಮ್ನನಾಗಿ ಹುಟ್ಟುವ ಏಕಲವ್ಯ ದ್ರೋಣಾಚಾರ್ಯರನ್ನು ಕೊಲ್ಲುತ್ತಾನೆ. 

- ಕೃಷ್ಣನ ಸಾವು
ಗಾಂಧಾರಿಯ ಶಾಪದ ಬಗ್ಗೆ ಮುಂಚೆಯೇ ಹೇಳಲಾಗಿದೆ. ಜೊತೆಗೆ ದೂರ್ವಾಸರೂ ಕೃಷ್ಣನಿಗೆ ಸಾವು ಕಾಲಿನಿಂದ ಬರಲೆಂದು ಶಾಪ ನೀಡಿದ್ದರು. ಹಾಗಾಗಿ ಕೃಷ್ಣ ಮರವೊಂದರ ಕೆಳಗೆ ಯೋಗ ಸಮಾಧಿಯಲ್ಲಿದ್ದಾಗ ಪ್ರಾಣಿ ಬೇಟೆಯಾಡಲು ಜರಾ ಎಂಬಾತ ಬಿಟ್ಟ ಬಾಣ ಕೃಷ್ಣನ ಪಾದಕ್ಕೆ ತಾಕುತ್ತದೆ. ತನ್ನ ತಪ್ಪಿನ ಅರಿವಾಗಿ ಜರಾ ಕೃಷ್ಣನಲ್ಲಿ ಕ್ಷಮೆ ಯಾಚಿಸುತ್ತಾನೆ. ಆಗ ಕೃಷ್ಣನು, ತಾನು ತ್ರೇತಾಯುಗದಲ್ಲಿ ರಾಮನಾಗಿದ್ದು, ಸುಗ್ರೀವನ ಸಹೋದರ ವಾಲಿಗೆ ಬೆನ್ನಿನಿಂದ ಬಾಣ ಬಿಟ್ಟು ಮೋಸ ಮಾಡಿದ್ದೆ. ಆ ಕರ್ಮದ ಫಲವಾಗಿ ಪುನರ್ಜನ್ಮದಲ್ಲಿ ಜರಾ ಆಗಿ ಹುಟ್ಟಿದ ವಾಲಿಯಿಂದ ಕೃಷ್ಣನ ಸಾವಾಗುತ್ತಿದೆ ಎಂದು ತಿಳಿಸುತ್ತಾನೆ.