ಗುರುಗ್ರಹ ಹಾಗೂ ಬುಧಗ್ರಹಗಳು ಜಾತಕನಿಗೆ ಶುಭಕಾರಕಗಳೇ. ಆದರೆ ಜಾತಕದ ಒಂದೇ ಮನೆಯಲ್ಲಿದ್ದರೆ ಜಾತಕನಿಗೆ ಕಷ್ಟ ತಪ್ಪಿದ್ದಲ್ಲ. ಅದೇಕೆ?
ದೇವಗುರು (Guru) ಬೃಹಸ್ಪತಿ (Bruhaspathi) ದೇವಲೋಕದಲ್ಲಿ ದೊಡ್ಡ ಆಶ್ರಮ ನಡೆಸುತ್ತಿರುತ್ತಾನೆ. ಆತನ ಹೆಂಡತಿ ತಾರಾ (Thara). ಬೃಹಸ್ಪತಿಗೆ ದೇವಾನುದೇವತೆಗಳು (Gods) ಸೇರಿದಂತೆ ಸಾವಿರಾರು ಶಿಷ್ಯರು. ಅವರಲ್ಲಿ ಒಬ್ಬನು ಚಂದ್ರ (Chandra). ಚಂದ್ರನೋ ಬೆಳ್ಳಗೆ ಹೊಳೆಯುತ್ತಿದ್ದ ಅತ್ಯಂತ ಸ್ಫುರದ್ರೂಪಿ ಯುವಕನಾಗಿದ್ದ. ಆಶ್ರಮದ ಹೆಣ್ಣುಮಕ್ಕಳೆಲ್ಲಾ ಅವನ ಕಡೆ ಆಕರ್ಷಿತರಾಗಿದ್ದರು. ರೂಪವಂತ ಮಾತ್ರವಲ್ಲದೇ ಬುದ್ಧಿವಂತ ಸಹ ಆಗಿದ್ದ. ಹಾಗಾಗಿ ಗುರುಗಳ ಒಲವನ್ನೂ ಸಹ ಗಳಿಸಿದ್ದ. ಮಹರ್ಷಿ ಬೃಹಸ್ಪತ್ಯಾಚಾರ್ಯರ ಹೆಂಡತಿಯಾದ ತಾರಾ ಕೂಡ ಎಲ್ಲ ಹೆಣ್ಣುಮಕ್ಕಳಂತೆ ಚಂದ್ರನಿಂದ ಆಕರ್ಷಿತಳಾಗಿದ್ದಳು. ತನ್ನ ಹಾವಭಾವಗಳಿಂದ ಆಕೆ ಚಂದ್ರನನ್ನು ಆಕರ್ಷಿಸಿದಳು. ಚಂದ್ರನು ಕೂಡ ವಿವೇಚನೆ ತೊರೆದು ಗುರುಪತ್ನಿಯ ಮೇಲೆಯೇ ಮೋಹಗೊಂಡ. ಅವರಿಬ್ಬರೂ ಆಶ್ರಮ ತೊರೆದು ಪ್ರತ್ಯೇಕವಾಗಿ ಸಂಸಾರ ಹೂಡಿದರು.
ವಿಷಯ ಅರಿತ ಮಹರ್ಷಿ ಬೃಹಸ್ಪತಿ ಆಚಾರ್ಯರು ಚಂದ್ರನ ಅರಮನೆಗೆ ಬಂದು ತಾರಾಳನ್ನು ತಮ್ಮೊಂದಿಗೆ ಬರುವಂತೆ ಕರೆದರು. ಆದರೆ ತಾರಾ ಅವರೊಡನೆ ಹೊರಡಲು ಒಪ್ಪಲಿಲ್ಲ. ಅವರ ಸಿಟ್ಟು ಚಂದ್ರನೆಡೆ ತಿರುಗಿತು. "ಪರಮ ಪಾಪಿ, ಗುರುಪತ್ನಿಯನ್ನೇ ಮೋಹಿಸುತ್ತೀಯಾ? ಗುರುಪತ್ನಿ ಎಂದರೆ ತಾಯಿಗೆ ಸಮಾನ ಎಂದು ಗೊತ್ತಿಲ್ಲವೇ?" ಎಂದರು. ಚಂದ್ರ ವಿಚಲಿತನಾಗದೇ, "ಗುರುಗಳೇ..ಒಲಿದು ಬಂದ ಹೆಣ್ಣನ್ನು ತಿರಸ್ಕರಿಸಬಾರದು ಎಂದು ನೀವೇ ಹೇಳಿದ್ದರಲ್ಲ. ಹಾಗಾಗಿ ಇವಳನ್ನು ಕರೆತಂದೆ. ಆಕೆಯೇ ತನ್ನ ಮನದಿಚ್ಛೆಯಂತೆ ನನ್ನ ಜೊತೆ ಬಂದಿದ್ದಾಳೆ" ಎಂದ.
Shani Dev: ಮಹಿಳೆಯರು ಶನಿ ದೇವರನ್ನು ಪೂಜಿಸಬಹುದೇ?
ಯಾರೆಷ್ಟು ಹೇಳಿದರೂ ತಾರಾ ತನ್ನ ಪತಿಯೊಡನೆ ಹೋಗಲು ಒಪ್ಪಲಿಲ್ಲ. ಬೃಹಸ್ಪತಾಚಾರ್ಯರು ದೂರನ್ನು ಬ್ರಹ್ಮನವರೆಗೂ ಕೊಂಡೊಯ್ದರು. ಬ್ರಹ್ಮ ಎಲ್ಲವನ್ನೂ ಆಲಿಸಿ ತಾರಾಳಿಗೆ ಬುದ್ದಿ ಮಾತು ಹೇಳಿ ಆಚಾರ್ಯರ ಜೊತೆ ಕಳಿಸಿದ. ತಾರಾ ಕೂಡ ಬ್ರಹ್ಮನ ಮಾತನ್ನು ಮೀರದೇ ಗಂಡನ ಮನೆಗೆ ಬಂದವಳು ಏನೂ ಆಗಿಯೇ ಇಲ್ಲವೆನ್ನುವಂತೆ ಸಂಸಾರ ನಡೆಸತೊಡಗಿದಳು. ಅಷ್ಟರಲ್ಲಿ ತಾರಾ ಗರ್ಭಿಣಿ ಎಂದು ಗೊತ್ತಾಯಿತು. ಆದರೆ ಮಗುವಿನ ತಂದೆ ಯಾರು? ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗಿ ಮಹರ್ಷಿಗಳಿಗೆ ಕಾಡಿತು.
ಮತ್ತೆ ಬ್ರಹ್ಮನ ಬಳಿ ತಮ್ಮ ಅನುಮಾನ ಹೊತ್ತುಕೊಂಡು ಓಡಿದರು. ಆದರೆ ಬ್ರಹ್ಮ ಕೈ ಚೆಲ್ಲಿ ಈ ಪ್ರಶ್ನೆಗೆ ತಾರಾಳೊಬ್ಬಳೇ ಉತ್ತರಿಸಲು ಸಾಧ್ಯ ಎಂದುಬಿಟ್ಟ. ಆಚಾರ್ಯರು ತಾರೆಯಲ್ಲೇ ಕೇಳಿದರು. “ನಾನು ಚಂದ್ರನೊಡನೆ ಹೋಗುವ ಮೊದಲೇ ನಿಮ್ಮಿಂದ ನನ್ನಲ್ಲಿ ಗರ್ಭಾಂಕುರವಾಗಿತ್ತು. ಚಂದ್ರಲೋಕದಲ್ಲಿ ಶೀತಗಾಳಿ ಇದ್ದುದರಿಂದ ಗರ್ಭದ ಬೆಳವಣಿಗೆ ತಡೆಹಿಡಿಯಲ್ಪಟ್ಟು ಈಗ ಮುಂದುವರಿದಿದೆ” ಅಂದುಬಿಟ್ಟಳು.
Ramayana Facts: ಬ್ರಹ್ಮಚಾರಿ ಹನುಮನಿಗೂ ಮಗನಿದ್ದಾನೆ ಗೊತ್ತಾ?
ತಿಂಗಳುಗಳು ಕಳೆದು, ತಾರೆ ಸುಂದರವಾದ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಈ ಮಗುವನ್ನು ಬೃಹಸ್ಪತಿಯು ‘ಬುಧ’ ಎಂದು ಕರೆಯುತ್ತಾರೆ. ಮಗನಿಗೆ ಶಿಕ್ಷಣ ನೀಡುತ್ತಾರೆ.
ಆದರೆ ಚಂದ್ರನಿಗೆ ಈ ಮಗು ತನ್ನದೇ ಎಂದು ತಿಳಿದುಬಿಡುತ್ತದೆ. ಅವನು ತನ್ನ ಕುಡಿಯನ್ನು ಕಾಣುವ ಬಯಕೆಯಿಂದ ಬೃಹಸ್ಪತಿಯ ಆಶ್ರಮಕ್ಕೆ ಬರುತ್ತಾನೆ. ಆಗ ಚಂದ್ರ ಮತ್ತು ಬೃಹಸ್ಪತಿಯ ನಡುವೆ ವಾಗ್ವಾದ ನಡೆಯಿತು. ಮಗು ಬುಧನು ಅದಾಗಲೇ ದೈವಪ್ರೇರಣೆಯಿಂದ ಹಿರಿಯರೊಡನೆ ಚರ್ಚೆ ನಡೆಸುವಷ್ಟು ಜ್ಞಾನವಂತನಾಗಿದ್ದ.
ಬುಧ ತಾಯಿಯ ಬಳಿ ಬಂದು, “ಅಮ್ಮಾ, ಮಗನಿಗೆ ತನ್ನ ತಂದೆ ಯಾರೆಂದು ತಿಳಿಯುವ ಹಕ್ಕು ಇರುತ್ತದೆ, ತಾಯಿಯಾಗಿ ನಿನ್ನ ಕರ್ತವ್ಯವನ್ನು ನಡೆಸು. ನನ್ನ ತಂದೆ ಯಾರೆಂದು ತಿಳಿಸು” ಅನ್ನುತ್ತಾನೆ.
ತಾರೆಯು “ಚಂದ್ರನೇ ನಿನ್ನ ತಂದೆ” ಎಂದು ಸತ್ಯವನ್ನೇ ಹೇಳುತ್ತಾಳೆ. ಚಂದ್ರನು ಸಂತೋಷದಿಂದ ಮಗನನ್ನು ಕರೆದುಕೊಂಡು ಹೊರಟುಹೋಗುತ್ತಾನೆ. ಮುಂದೆ ಈ ಬುಧನೇ ಭೂಮಿಯಲ್ಲಿ ಚಂದ್ರವಂಶದ ಹುಟ್ಟಿಗೆ ಕಾರಣನಾಗುತ್ತಾನೆ.
ಆದರೆ ಇದೆಲ್ಲದರಿಂದ ಗುರುವಿಗೆ ತೀರಾ ಅವಮಾನವಾಗುತ್ತದೆ. ಅವರು ಬುಧನನ್ನೂ ಚಂದ್ರನನ್ನೂ ಶಾಶ್ವತವಾಗಿ ದ್ವೇಷಿಸತೊಡಗುತ್ತಾರೆ.
ಹೀಗಾಗಿಯೇ ಗುರು ಹಾಗೂ ಬುಧ ಗ್ರಹಗಳು ವೈರಿಗಳು ಎಂದು ಖ್ಯಾತವಾಗಿದೆ. ಇಬ್ಬರೂ ಒಂದೇ ಮನೆಯಲ್ಲಿ ಬಂದರೆ ಆ ಜಾತಕನಿಗೆ ಕಷ್ಟವನ್ನೇ ಉಂಟುಮಾಡುತ್ತಾರೆ ಎನ್ನಲಾಗುತ್ತದೆ.
Love Horoscope 2022: ಹೊಸ ವರ್ಷದಲ್ಲಿ ಹಸನಾಗಲಿರುವ ಲವ್ ಲೈಫ್, ನಿಮ್ಮ ರಾಶಿಗೇನಿದೆ ನೋಡಿ
