ರಾಮ ನವಮಿಯ ದಿನ ಭಗವಾನ್ ಶ್ರೀರಾಮನನ್ನು ಪೂಜಿಸಲಾಗುತ್ತದೆ. ಇದರೊಂದಿಗೆ ಉಪವಾಸವನ್ನು ಆಚರಿಸಲಾಗುತ್ತದೆ. ಈ ಬಾರಿಯ ರಾಮನವಮಿಯ ದಿನ ವಿಶೇಷ ಯೋಗವೊಂದು ಘಟಿಸುತ್ತಿದೆ. 

ರಾಮ(Sri Ram) ನಮಗೆ ಕೇವಲ ದೇವರಲ್ಲ, ಆತ ಆದರ್ಶ. ಪುರುಷನೊಬ್ಬ ಏಕಪತ್ನೀವ್ರತಸ್ಥನಾಗಿರಬೇಕೆಂಬುದಕ್ಕೆ ಮೇಲ್ಪಂಕ್ತಿ ಹಾಕಿದವನು. ರಾಜ್ಯಾಡಳಿತ ಹೇಗಿರಬೇಕೆಂದರೆ ರಾಮ ರಾಜ್ಯದಂತೆ ಮಾಡಬೇಕೆಂಬ ಕನಸು ಕೊಟ್ಟವನು. ಸಹೋದರರನ್ನು ಪ್ರೀತಿಯಲ್ಲಿ ಕಾಣುವ ಬಗೆ ತಿಳಿಸಿದವನು. ಭಕ್ತಿಯಿಟ್ಟ ಶಬರಿಯ ಎಂಜಲನ್ನೂ ಸಂತೋಷದಿಂದ ತಿಂದು, ಪ್ರೀತಿಸುವವರನ್ನು ಹೇಗೆ ನೋಡಬೇಕೆಂದು ತಿಳಿಸಿದವನು. ತಂದೆಯ ಮಾತು ನಡೆಸಿಕೊಡಲು ವನವಾಸವನ್ನೂ ಸಂತೋಷದಲ್ಲಿ ಒಪ್ಪಿ ಅಪ್ಪಿದವನು. ಮಗನಿದ್ದರೆ ಹೀಗಿರಬೇಕು, ಅಣ್ಣನಿದ್ದರೆ ಇಂತಿರಬೇಕು, ಇಂಥ ಪತಿ ಬೇಕು, ಇಂಥ ರಾಜ ಬೇಕು- ಎಲ್ಲಕ್ಕೂ ರಾಮನೊಬ್ಬನ ಉದಾಹರಣೆ ಸಾಕು. 

ಇಂಥ ರಾಮನ ಜನ್ಮದಿನವೇ ರಾಮನವಮಿ(Ram Navami). ಎಲ್ಲರಿಗೂ ಎಲ್ಲ ವಿಷಯಗಳಿಗೂ ಆದರ್ಶಪ್ರಾಯನಾಗಿರುವ ರಾಮನೆಂದರೆ ಹಿಂದೂಗಳಿಗೆ ಅಚ್ಚು ಮೆಚ್ಚು. ಹಾಗಾಗಿಯೇ ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ರಾಮನವಮಿಯೂ ಒಂದು. ವಿಷ್ಣುವಿನ ಏಳನೇ ಅವತಾರವಾಗಿರುವ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ದಶರಥ ಸುತನಾಗಿ ಜನಿಸಿದನು. ರಾಮನವಮಿ ಎಂದರೇ ನಮಗೆಲ್ಲ ಬಹಳ ಸಂತೋಷದ, ವಿಶೇಷವಾದ, ಪುಣ್ಯ ದಿನ. ಅಂಥದರಲ್ಲಿ ಈ ದಿನ ಇನ್ನಷ್ಟು ಯೋಗಗಳು(yogas) ಜೊತೆಗೆ ಸೇರಿ ಬರುತ್ತಾ, ಈ ವರ್ಷದ ರಾಮನವಮಿಯನ್ನು ಮತ್ತಷ್ಟು ವಿಶೇಷವಾಗಿಸಿವೆ. 

Ram Navami 2022: ಈ ಕೆಲಸಗಳನ್ನು ಮಾಡಿದ್ರೆ ನಿಮ್ಮಾಸೆ ಈಡೇರುವುದು!

ತ್ರಿವೇಣಿ ಯೋಗ ಸಂಯೋಜನೆ
ಹೌದು, ಈ ವರ್ಷ ರಾಮ ನವಮಿಯಂದು ಅನೇಕ ಮಂಗಳಕರ ಯೋಗಗಳು ಕೂಡುತ್ತಿವೆ. ಜ್ಯೋತಿಷಿಗಳ ಪ್ರಕಾರ, ರಾಮ ನವಮಿಯ ದಿನದಂದು ರವಿ ಪುಷ್ಯ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗದ ತ್ರಿವೇಣಿ ಸಂಯೋಜನೆಯು ರೂಪುಗೊಳ್ಳುತ್ತಿದೆ. ಈ ಮೂರು ಯೋಗಗಳಿಂದಾಗಿ ಈ ದಿನದ ಮಹತ್ವ ಹೆಚ್ಚಿದೆ. 

ಪುಷ್ಯ ನಕ್ಷತ್ರವು ಏಪ್ರಿಲ್ 10, ಭಾನುವಾರದಂದು ಸೂರ್ಯೋದಯದೊಂದಿಗೆ ಪ್ರಾರಂಭವಾಗುತ್ತದೆ, ಅದು ಮರುದಿನ ಸೂರ್ಯೋದಯದವರೆಗೆ ಇರುತ್ತದೆ. ಈ ಯೋಗವಿದ್ದಾಗ ಹೊಸ ಮನೆ ಕೊಳ್ಳುವುದು, ನಿವೇಶನ ಖರೀದಿ, ಕಾರು ಮತ್ತಿತರೆ ವಾಹನಗಳ ಖರೀದಿ, ಆಭರಣಗಳನ್ನು ಖರೀದಿಸುವುದರಿಂದ ಶುಭವಾಗಲಿದೆ. ಇವಿಷ್ಟೇ ಅಲ್ಲದೆ, ಮದುವೆ ಮತ್ತಿತರೆ ಶುಭ ಸಮಾರಂಭಗಳಿಗೆ ಈ ತ್ರಿವೇಣಿ ಯೋಗ ಜೊತೆಗೆ ರಾಮನವಮಿಯ ವಿಶೇಷ ದಿನ ಅತ್ಯಂತ ಅನುಕೂಲಕರವಾಗಿದೆ. ಇದರಿಂದ ದೇವಾನುದೇವತೆಗಳ ಆಶೀರ್ವಾದ ಚೆನ್ನಾಗಿ ದೊರೆಯಲಿದೆ. 

ರಾಮ ನವಮಿ 2022 ಶುಭ ಮುಹೂರ್ತ(muhurth)
ಚೈತ್ರ ಶುಕ್ಲ ಪಕ್ಷದ ನವಮಿ ತಿಥಿಯು ಏಪ್ರಿಲ್ 10 ರ ಭಾನುವಾರದಂದು ಬೆಳಿಗ್ಗೆ 1.22 ಕ್ಕೆ ಪ್ರಾರಂಭವಾಗುತ್ತಿದೆ. ಇದು ಸೋಮವಾರ, ಏಪ್ರಿಲ್ 11 ರಂದು ಬೆಳಿಗ್ಗೆ 3:16 ಕ್ಕೆ ಕೊನೆಗೊಳ್ಳುತ್ತದೆ. ರಾಮಜನ್ಮೋತ್ಸವದ ಶುಭ ಸಮಯವು ಏಪ್ರಿಲ್ 10 ರಂದು ಬೆಳಿಗ್ಗೆ 11:06 ರಿಂದ ಮಧ್ಯಾಹ್ನ 01.39 ರವರೆಗೆ ಇರುತ್ತದೆ. ಹಗಲಿನಲ್ಲಿ, ಭಗವಾನ್ ಶ್ರೀರಾಮನ ಆರಾಧನೆಯ ಮುಹೂರ್ತವು ಮಧ್ಯಾಹ್ನ 12:04 ರಿಂದ 12.53 ರವರೆಗೆ ಇರುತ್ತದೆ.

Ramnavami 2022: ಯಾವಾಗ? ಆಚರಣೆಯ ವಿಧಿವಿಧಾನಗಳೇನು?

ರಾಮ ನವಮಿಯ ಮಹತ್ವ
ನವಮಿಯ ದಿನದಂದು ಭಗವಾನ್ ವಿಷ್ಣುವು ಶ್ರೀರಾಮನಾಗಿ ಅವತರಿಸಿದನು. ಭಗವಾನ್ ರಾಮನ ಈ ಅವತಾರವು ಭೂಮಿಯಿಂದ ರಾಕ್ಷಸರನ್ನು ಮತ್ತು ರಾಕ್ಷಸ ಪ್ರವೃತ್ತಿಯನ್ನು ನಾಶ ಮಾಡಲು ಎಂದು ನಂಬಲಾಗಿದೆ. ಅದಕ್ಕಾಗಿಯೇ ಅವನು ಭೂಮಿಯ ಮಹಾನ್ ರಾಕ್ಷಸನಾದ ರಾವಣನನ್ನು ಸಂಹಾರ ಮಾಡಿದನು. ಈ ದಿನ ಕೇವಲ ರಾಮನನ್ನು ಮಾತ್ರವಲ್ಲ, ಸೀತಾದೇವಿ, ಹನುಮಂತ(Bajrangbali) ಮತ್ತು ರಾಮನ ಸಹೋದರ ಲಕ್ಷ್ಮಣನನ್ನು ಸಹ ಪೂಜಿಸಲಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.