ಏಪ್ರಿಲ್ 10ರಂದು ರಾಮನವಮಿ. ಚೈತ್ರ ನವರಾತ್ರಿಯ ಒಂಬತ್ತನೇ ದಿನ ರಾಮನವಮಿ ಆಚರಣೆ ಮಾಡಲಾಗುತ್ತದೆ. ರಾಮ ಹುಟ್ಟಿದ ಈ ದಿನ ಏನೆಲ್ಲ ಮಾಡುವುದರಿಂದ ರಾಮನ ಕೃಪೆಗೆ ಪಾತ್ರವಾಗಿ ಆತನ ಆಶೀರ್ವಾದ ಬಲ ಪಡೆಯಬಹುದು ಗೊತ್ತೇ?

ಚೈತ್ರ ನವರಾತ್ರಿಯ 9ನೇ ದಿನ ಶ್ರೀ ರಾಮ ಈ ಜಗತ್ತಿಗೆ ಅವತರಿಸಿದ್ದು. ಚೈತ್ರ ನವರಾತ್ರಿಯ ಕಡೆಯ ದಿನವಾದ ಇಂದು ಭಾರತದೆಲ್ಲೆಡೆ ಭಕ್ತರು ರಾಮ ಸ್ಮರಣೆಯಲ್ಲಿ ಮುಳುಗುತ್ತಾರೆ. ಈ ಬಾರಿ ಏಪ್ರಿಲ್ 10ರಂದು ರಾಮನವಮಿ ಬರುತ್ತಿದ್ದು, ಪುಶ್ಯ ನಕ್ಷತ್ರದ ಈ ದಿನ ಬಹಳ ಪವಿತ್ರವಾಗಿದೆ. 

ರಾಮನವಮಿಯು ಸೂರ್ಯ ದೇವನ ಪ್ರಾರ್ಥನೆಯೊಂದಿಗೆ ಆರಂಭವಾಗುತ್ತದೆ. ಏಕೆಂದರೆ, ಶ್ರೀ ರಾಮನು ಸೂರ್ಯವಂಶಸ್ಥನಾಗಿದ್ದು, ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆಯಿಂದ ದಿನ ಆರಂಭಿಸಬೇಕು. ಅಯೋಧ್ಯೆಯ ರಾಜನಾಗಿ 11,000 ವರ್ಷಗಳ ಕಾಲ ಅದ್ಬುತ ಆಡಳಿತ ನೀಡಿದ ರಾಮನು ಮರ್ಯಾದಾ ಪುರುಷೋತ್ತಮ ಎನಿಸಿಕೊಂಡಿದ್ದವನು.

ವಿಷ್ಣುವಿನ ಏಳನೇ ಅವತಾರವಾದ ರಾಮನು ಧರ್ಮ ಸಂಸ್ಥಾಪನೆಗಾಗಿ ಈ ಭೂಮಿಯಲ್ಲಿ ಜನಿಸಿದ ದಿನವಿದು. ಇದೊಂದು ವಿಶೇಷ ದಿನವಾಗಿರುವುದರಿಂದ ಈ ದಿನ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ರಾಮನ ವಿಶೇಷ ಕೃಪೆಗೆ ಪಾತ್ರರಾಗಬಹುದಾಗಿದೆ. ನಮ್ಮೆಲ್ಲ ಆಸೆ ಆಕಾಂಕ್ಷೆಗಳನ್ನು ರಾಮನ ಆಶೀರ್ವಾದ ಬಲದಲ್ಲಿ ಪಡೆಯಬಹುದಾಗಿದೆ. 

ಹೋಮ ಹವನ
ರಾಮನವಮಿಯ ದಿನ ಬಹಳಷ್ಟು ಕಡೆ ಹೋಮ ಹವನಗಳನ್ನು ನಡೆಸಲಾಗುತ್ತದೆ. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಸ್ವಚ್ಛ ಬಟ್ಟೆಗಳನ್ನು ಧರಿಸಬೇಕು. ರಾಮ ಹಾಗೂ ಸೀತೆಯನ್ನು ಪೂಜಿಸಿದ ಬಳಿಕ ಹವನ ನಡೆಸಬೇಕು. ರಾಮನವಮಿಯ ದಿನ ಹವನ ನಡಸುವುದರಿಂದ ಸಂತೋಷದ ವೈವಾಹಿಕ ಜೀವನ ಲಭ್ಯವಾಗುತ್ತದೆ. ಏಪ್ರಿಲ್ 10ರ ಬೆಳಗ್ಗೆ 1.24ಕ್ಕೆ ನವಮಿ ಆರಂಭವಾಗಿ, 11ನೇ ತಾರೀಖಿನ ಬೆಳಗ್ಗೆ 3.15ರವರೆಗೆ ಇರುತ್ತದೆ. ಈ ವರ್ಷ ರಾಮನವಮಿಯ ದಿನ ಧೃತಿ ಯೋಗ ಹಾಗೂ ಸುಕರ್ಮ ಯೋಗವೂ ಇರಲಿದೆ. ಸುಕರ್ಮ ಯೋಗವು ಏಪ್ರಿಲ್ 11ರ ಮಧ್ಯಾಹ್ನ 12.04ರವರೆಗೆ ಇರಲಿದೆ. ಇದರ ಬಳಿಕ ಧೃತಿ ಯೋಗ ಆರಂಭವಾಗಲಿದೆ. ಈ ಯೋಗಗಳಿರುವಾಗ ಆರಂಭಿಸುವ ಕೆಲಸಗಳು ಯಶಸ್ಸನ್ನು ತರುತ್ತವೆ. 

ಬುಧ ಗೋಚಾರ 2022: ಕಟಕ, ಕನ್ಯಾ ಸೇರಿ ಈ ರಾಶಿಗಳಿಗೆ ಖುಲಾಯಿಸಲಿದೆ ಅದೃಷ್ಟ!

ರಾಮಚರಿತೆ(Ramcharit)
ರಾಮನವಮಿಯ ದಿನ ರಾಮಚರಿತೆ ಕೇಳುವುದರಿಂದ ಅಂದರೆ ರಾಮಾಯಣದ ಕತೆ ಶ್ರವಣ ಮಾಡುವುದರಿಂದ ರಾಮನ ಶುಭಾಶೀರ್ವಾದ ಸಿಗಲಿದೆ. ಇದರೊಂದಿಗೆ ರಾಮ ನಾಮ ಜಪ, ರಾಮ ಭಜನೆ, ಕೀರ್ತನೆಗಳಲ್ಲಿ ದಿನವನ್ನು ಕಳೆಯುವುದರಿಂದಲೂ ರಾಮನ ಮನಸ್ಸು ಗೆಲ್ಲಬಹುದಾಗಿದೆ. ಜೊತೆಗೆ ರಾಮ ರಕ್ಷಾ ಸ್ತ್ರೋತ್ರ ಹೇಳುವುದು, ಹನುಮಾನ್ ಚಾಲೀಸಾ ಹೇಳುವುದು ಕೂಡಾ ಒಳ್ಳೆಯ ಕೆಲಸವಾಗಿದೆ. 

ರಾಮನನ್ನು ತೂಗುವುದು
ರಾಮನವಮಿಯ ದಿನ ಹುಟ್ಟಿದ ಪುಟ್ಟ ರಾಮನನ್ನು ತೊಟ್ಟಿಲಲ್ಲಿಟ್ಟು ತೂಗುವುದರಿಂದ ಮಕ್ಕಳಿಲ್ಲದ ದಂಪತಿಗೆ ಮಗುವಾಗುತ್ತದೆ. ಆ ದಿನ ಪೂಜೆ ಸಂದರ್ಭದಲ್ಲಿ ತೊಟ್ಟಿಲನ್ನು ಚೆನ್ನಾಗಿ ಅಲಂಕರಿಸಿ ಪುಟ್ಟ ರಾಮನ ವಿಗ್ರಹವನ್ನು ಅದರಲ್ಲಿಟ್ಟು ತೂಗಬೇಕು. ಈ ಸಂದರ್ಭದಲ್ಲಿ ಭಕ್ತಿಯಿಂದ ಲಾಲಿ ಹಾಡುಗಳನ್ನು ಹೇಳಬೇಕು. 

Navratri 2022: ಇಂದಿದೆ ವಿಶೇಷ ಸಂಯೋಗ, ಈ ದೇವಿಯ ಪೂಜೆ ಮಾಡಿದ್ರೆ ಶಾಂತವಾಗ್ತಾನೆ ಶನಿ!

ಉಪವಾಸ(fast)
ರಾಮ ಧ್ಯಾನದಲ್ಲಿ ನಿರತರಾಗಿ ಉಪವಾಸ ಆಚರಣೆ ಮಾಡುವುದರಿಂದಲೂ ಸಂತೋಷ, ಸಮೃದ್ಧಿ ದೊರೆಯುವುದು. ಸಕಲ ಪಾಪಗಳು ಕರಗುವವು ಎನ್ನಲಾಗುತ್ತದೆ. ಈ ದಿನ ಸಂಪೂರ್ಣ ಉಪವಾಸ ಮಾಡಲಾಗದ ವೃದ್ಧರು, ಮಕ್ಕಳು ಹಣ್ಣು ಹಂಪಲುಗಳನ್ನು ಸೇವಿಸಿಕೊಂಡಿರಬಹುದು. 

ದಾನ ಕಾರ್ಯಗಳು(charity)
ಈ ದಿನ ಮಾಡುವ ದಾನ ಕಾರ್ಯಗಳು ವಿಶೇಷವಾಗಿ ವಿಷ್ಣುವಿನ ಕೃಪೆಯನ್ನು ತಂದುಕೊಡಲಿವೆ. ರಾಮನವಮಿಯ ದಿನ ದಾರಿಹೋಕರಿಗೆ ಪಾನಕ, ಕೋಸಂಬರಿ ವಿತರಿಸುವುದು, ವಸ್ತ್ರ, ಆಹಾರ ದಾನ ಮಾಡುವುದು ಸಮೃದ್ಧಿಯನ್ನು ತಂದುಕೊಡಲಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.