ಪ್ರಯಾಗ್‌ರಾಜ್ ಕುಂಭಮೇಳ 50 ಕೋಟಿ ಭಕ್ತರನ್ನು ಸೆಳೆದಿದೆ. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಶೀಘ್ರದಲ್ಲೇ ಪುಣ್ಯಸ್ನಾನಕ್ಕೆ ಭೇಟಿ ನೀಡಲಿದ್ದಾರೆ. ಖರ್ಗೆಯವರ ಟೀಕೆಗಳ ಹಿನ್ನೆಲೆಯಲ್ಲಿ ಈ ಭೇಟಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಇದನ್ನು ವೋಟ್ ಬ್ಯಾಂಕ್ ರಾಜಕೀಯ ಎಂದು ಟೀಕಿಸಿದೆ. ಡಿ.ಕೆ. ಶಿವಕುಮಾರ್ ಈಗಾಗಲೇ ಸ್ನಾನ ಮಾಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳ ಹಿಂದೆಂದೂ ಕಾಣಿಸದಷ್ಟು ಭಕ್ತರನ್ನು ಈ ಬಾರಿ ಕಂಡಿದೆ. ಇದಾಗಲೇ 50 ಕೋಟಿಯಷ್ಟು ಜನರು ಪುಣ್ಯಸ್ನಾನ ಮಾಡಿದ್ದಾರೆ. ಶಿವರಾತ್ರಿ ಸಮೀಪದಲ್ಲಿಯೇ ಇದ್ದು, ಅಲ್ಲಿಯವೇಳೆಗೆ ಸುಮಾರು 70 ಕೋಟಿಯಷ್ಟು ಜನರು ಭೇಟಿಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಾಗಲೇ ಜಾತಿ, ಧರ್ಮ, ಭಾಷೆ, ದೇಶ ಎಲ್ಲ ಎಲ್ಲೆಯನ್ನು ಮೀರಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಇಲ್ಲಿ ಮಿಂದರೆ ಪಾಪವೆಲ್ಲಾ ನಾಶವಾಗತ್ತಾ, ಬಡತನ ಹೋಗುತ್ತಾ ಎಂದೆಲ್ಲಾ ಅತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಟೀಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಇತ್ತ ಕಾಂಗ್ರೆಸ್ಸಿಗರು ಸೇರಿದಂತೆ ಬಿಜೆಪಿಯೇತರ ನಾಯಕರೂ ಪುಣ್ಯಸ್ನಾನ ಮಾಡಿ ಕೃತಾರ್ಥರಾಗಿದ್ದಾರೆ. ಕರ್ನಾಟಕದಿಂದಲೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಕುಟುಂಬದ ಸಹಿತ ಹೋಗಿ ಇದಾಗಲೇ ಸ್ನಾನ ಮಾಡಿ ಬಂದಿದ್ದಾರೆ.
ಇದೀಗ ಬಂದಿರುವ ತಾಜಾ ಸುದ್ದಿ ಏನೆಂದರೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಶೀಘ್ರದಲ್ಲಿಯೇ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಲಿದ್ದು, ಪುಣ್ಯಸ್ನಾನ ಮಾಡಿಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಅಧ್ಯಕ್ಷ ಅಜಯ್ ರೈ ಅವರು ಸುದ್ದಿ ಸಂಸ್ಥೆ IANS ಜೊತೆ ಮಾತನಾಡುತ್ತಾ, ರಾಹುಲ್ ಗಾಂಧಿ ಮಹಾ ಕುಂಭಕ್ಕೆ ಭೇಟಿ ನೀಡಲಿರುವುದಾಗಿ ದೃಢಪಡಿಸಿದ್ದಾರೆ. "ಕಾಂಗ್ರೆಸ್ ನಾಯಕರು ಈ ಹಿಂದೆಯೂ ಕುಂಭಕ್ಕೆ ಹೋಗಿದ್ದರು. ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಅವರಿಗಿಂತ ಹಿಂದಿನ ಅನೇಕ ನಾಯಕರು ಕೂಡ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಈಗ ನಾವೆಲ್ಲರೂ ಕುಂಭಕ್ಕೆ ಹೋಗಿ ಪವಿತ್ರ ಸ್ನಾನ ಮಾಡಿ ಹರ್ ಹರ್ ಮಹಾದೇವ ಜಪಿಸುತ್ತೇವೆ. ನಾವು ಖಂಡಿತವಾಗಿಯೂ ಮಹಾ ಕುಂಭಕ್ಕೆ ಹೋಗುತ್ತೇವೆ" ಎಂದು ಅಜಯ್ ರೈ ಹೇಳಿದ್ದಾರೆ. ಇದೇ 19 ಅಥವಾ 20ರಂದು ಇವರಿಬ್ಬರೂ ಹೋಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಅಷ್ಟಕ್ಕೂ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಮಹಾಕುಂಭಕ್ಕೆ ಹೋಗುವುದು ಹೊಸ ವಿಷಯವೇನಲ್ಲ. ಆದರೆ ಈ ಬಾರಿ ಇದು ರಾಜಕೀಯ ತಿರುವು ಪಡೆದುಕೊಂಡಿದೆ. ಸಾಲದು ಎನ್ನುವುದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು, ಮಾಡಿದ ಭಾಷಣದಿಂದಾಗಿ ಈಗ ಮಹಾಕುಂಭಕ್ಕೆ ಬಿಜೆಪಿಯೇತರರು ಹೋಗಲು ನಾಚಿಕೆ ಪಡುವಂಥ ಸನ್ನಿವೇಶ ಸೃಷ್ಟಿಯಾಗಿರುವ ಕಾರಣದಿಂದ ಈ ಬಾರಿ ಇದು ದೊಡ್ಡ ವಿಷಯವಾಗಿ ಪರಿಣಮಿಸಿದೆಯಷ್ಟೇ. ಪುಣ್ಯಸ್ನಾನದ ವಿರುದ್ಧ ಕಾಂಗ್ರೆಸ್ಸಿಗರು ಟೀಕೆ ಮಾಡುತ್ತಿರುವ ಬೆನ್ನಲ್ಲೇ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಭೇಟಿ ನೀಡುತ್ತಿರುವುದಕ್ಕೆ ಬಿಜೆಪಿ ವ್ಯಂಗ್ಯವಾಡುತ್ತಿದೆ. ವೋಟ್ ಬ್ಯಾಂಕ್ ರಾಜಕೀಯದಿಂದಾಗಿ ಸಂಗಮಕ್ಕೆ ಹೋಗುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ.
ಬಿಜೆಪಿ ಶಾಸಕ ರಾಮ್ ಕದಮ್ ಈ ಬಗ್ಗೆ ಹೇಳಿದ್ದು, "ನಂಬಿಕೆ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಕುಂಭ ಸ್ನಾನ ಮಾಡುವ ಹಕ್ಕಿದೆ. ಆದರೆ ರಾಹುಲ್ ಗಾಂಧಿಯವರ ಹೇಳಿಕೆಗಳು ಸನಾತನ ವಿರೋಧಿ. ಅಂತಹ ಪರಿಸ್ಥಿತಿಯಲ್ಲಿ, ಅವರ ಹೃದಯದಲ್ಲಿ ನಂಬಿಕೆ ಇದೆಯೇ? ಅವರು ನಂಬಿಕೆ ಇಟ್ಟರೆ, ಅವರು ಖಂಡಿತವಾಗಿಯೂ ಮಹಾ ಕುಂಭಕ್ಕೆ ಹೋಗಿ ಸಂಗಮ ಸ್ನಾನ ಮಾಡಬೇಕು" ಎಂದಿದ್ದಾರೆ. ಆದರೆ ಇದು ನಾಟಕ ಮತ್ತು ಬೂಟಾಟಿಕೆ ಮಾತ್ರ. ಹಿಂದೂಗಳ ಮತಗಳನ್ನು ಪಡೆಯಬಹುದು ಎಂಬ ಕಾರಣಕ್ಕಾಗಿ ಮಹಾಕುಂಭಕ್ಕೆ ಹೋಗುವಂತೆ ಕಾಣಿಸುತ್ತಿದೆ. ಸಂತರು ಮತ್ತು ಸನಾತನದ ಬಗ್ಗೆ ಅವರ ಹಿಂದಿನ ಹೇಳಿಕೆಗಳನ್ನು ನೋಡಿದರೆ, ಅವರು ಭಕ್ತಿಯಿಂದ ಹೋಗುತ್ತಿದ್ದಾರೆಂದು ತೋರುವುದಿಲ್ಲ. ಅವರು ನಾಟಕ ಮಾಡಲು ಅಲ್ಲಿಗೆ ಹೋಗುತ್ತಿರುವಂತೆ ಕಾಣುತ್ತಿದೆ ಎಂದಿದ್ದಾರೆ.
ಕುಂಭಮೇಳದಲ್ಲಿ ಕಾಲ್ತುಳಿತಕ್ಕೊಳಗಾದವರು ಯಾರೂ ಸತ್ತಿಲ್ಲ... ಅವರಿಗೆ... ಬಾಬಾ ಬಾಗೇಶ್ವರ್ ಸ್ಫೋಟಕ ಹೇಳಿಕೆ
